ಶ್ರೀನಗರ ಮತ್ತು ಚಂಡೀಗಢ ಸೇರಿದಂತೆ ಭಾರತದ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿನ ಕನಿಷ್ಠ 24 ವಿಮಾನ ನಿಲ್ದಾಣಗಳನ್ನು ಮೇ 15ರವರೆಗೆ ಮುಚ್ಚಲಾಗಿದೆ ಎಂದು ವರದಿಯಾಗಿದೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದಾದ ಬಳಿಕ ಭಾರತ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ.
ಈ ಬೆನ್ನಲ್ಲೇ ಮೇ 10ರವರೆಗೆ ನಾಗರಿಕ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿತ್ತು. ಇದೀಗ ಶುಕ್ರವಾರ ವಿಮಾನಯಾನ ಸಂಸ್ಥೆಗಳು ಮೇ 15ರವರೆಗೆ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ತಮ್ಮ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿವೆ.
ಇದನ್ನು ಓದಿದ್ದೀರಾ? ದೇಶಾದ್ಯಂತ 24 ವಿಮಾನ ನಿಲ್ದಾಣಗಳು ತಾತ್ಕಾಲಿಕ ಬಂದ್
ಚಂಡೀಗಢ, ಶ್ರೀನಗರ, ಅಮೃತಸರ, ಲುಧಿಯಾನ, ಭುಂತರ್, ಕಿಶೆಂಗಢ, ಪಟಿಯಾಲ, ಶಿಮ್ಲಾ, ಧರ್ಮಶಾಲಾ, ಮತ್ತು ಬಟಿಂಡಾ, ಜೈಸಲ್ಮೇರ್, ಜೋಧ್‌ಪುರ, ಲೇಹ್, ಬಿಕಾನೇರ್, ಪಠಾಣ್‌ಕೋಟ್, ಜಮ್ಮು, ಜಾಮ್‌ನಗರ ಮತ್ತು ಭುಜ್ ಸೇರಿದಂತೆ ಇತರ ವಿಮಾನ ನಿಲ್ದಾಣಗಳು ಬಂದ್ ಆಗಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಏರ್ ಇಂಡಿಯಾ ಪೋಸ್ಟ್ ಮಾಡಿದ್ದು, “ಭಾರತದ ಹಲವು ವಿಮಾನ ನಿಲ್ದಾಣಗಳನ್ನು ಮುಚ್ಚುವ ಬಗ್ಗೆ ವಿಮಾನಯಾನ ಅಧಿಕಾರಿಗಳ ಅಧಿಸೂಚನೆ ನೀಡಿದೆ. ಇದಾದ ನಂತರ ಜಮ್ಮು, ಶ್ರೀನಗರ, ಲೇಹ್, ಜೋಧ್‌ಪುರ, ಅಮೃತಸರ, ಚಂಡೀಗಢ, ಭುಜ್, ಜಾಮ್‌ನಗರ ಮತ್ತು ರಾಜ್‌ಕೋಟ್‌ಗಳಿಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ಏರ್ ಇಂಡಿಯಾ ವಿಮಾನಗಳನ್ನು ಮೇ 15ರವರೆಗೆ ರದ್ದುಗೊಳಿಸಲಾಗಿದೆ” ಎಂದು ತಿಳಿಸಿದೆ.
ಇನ್ನು ಮಾನ್ಯ ಟಿಕೆಟ್‌ಗಳನ್ನು ಹೊಂದಿರುವ ಗ್ರಾಹಕರಿಗೆ ಪೂರ್ಣ ಮರುಪಾವತಿಯನ್ನು ನೀಡಲಾಗುವುದು ಎಂದು ಏರ್ ಇಂಡಿಯಾ ಹೇಳಿದೆ. ಎಲ್ಲಾ ವಿಮಾನಗಳು ಮೇ 15ರವರೆಗೆ ರದ್ದು ಮಾಡಲಾಗುತ್ತದೆ ಎಂದು ಇಂಡಿಗೋ ತಿಳಿಸಿದೆ.’
