ತನ್ನ ತಂದೆ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಶಾಸಕ ಜೀಶನ್ ಸಿದ್ದೀಕಿ ಪೊಲೀಸರಿಗೆ ಹೇಳಿಕೆಯನ್ನು ನೀಡಿದ್ದಾರೆ. ಹೇಳಿಕೆಯಲ್ಲಿ ಕೆಲವು ಬಿಲ್ಡರ್‌ಗಳು ಮತ್ತು ರಾಜಕಾರಣಿಗಳ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಬಾಂದ್ರಾದಲ್ಲಿನ ಕೊಳೆಗೇರಿ ಅಭಿವೃದ್ಧಿ ಯೋಜನೆಗಳ ಸಮಸ್ಯೆಗಳನ್ನು ಪರಿಗಣಿಸುವಂತೆ ತಂದೆ ಒತ್ತಾಯಿಸುತ್ತಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಒಬ್ಬ ಡೆವಲಪರ್ ನನ್ನ ತಂದೆಯ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಪುನರಾಭಿವೃದ್ಧಿ ಯೋಜನೆಗಳಿಗಾಗಿ ಅನೇಕ ಡೆವಲಪರ್‌ಗಳು ನನ್ನ ತಂದೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಜೀಶನ್ ಸಿದ್ದೀಕಿ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಎನ್‌ಸಿಪಿ ಸೇರಿದ ಬಾಬಾ ಸಿದ್ದಿಕಿ
2024ರ ಅಕ್ಟೋಬರ್ 12ರಂದು ಮಾಜಿ ರಾಜ್ಯ ಸಚಿವ ಬಾಬಾ ಸಿದ್ದೀಕಿ ಹತ್ಯೆಯಾಗಿದೆ. ಮುಂಬೈನ ಬಾಂದ್ರಾ ಪೂರ್ವ ಪ್ರದೇಶದಲ್ಲಿ ಮತ ಜೀಶನ್ ಕಚೇರಿಯ ಹೊರಗೆ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಹೇಳಿಕೆಯನ್ನು ನೀಡಿರುವ ಜೀಶನ್, “ಮುಂಬೈನ ಬಾಂದ್ರಾ ಪ್ರದೇಶದ ಕೊಳೆಗೇರಿ ನಿವಾಸಿಗಳ ಹಕ್ಕುಗಳಿಗಾಗಿ ತಾನು ಮತ್ತು ತನ್ನ ತಂದೆ ನಿರಂತರವಾಗಿ ಹೋರಾಡುತ್ತಿದ್ದೇವೆ. ಪುನರಾಭಿವೃದ್ಧಿ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ನನ್ನ ತಂದೆಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ” ಎಂದು ಹೇಳಿದ್ದಾರೆ.
“ನನ್ನ ತಂದೆಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದ ಅನೇಕ ಡೆವಲಪರ್‌ಗಳು ಇದ್ದಾರೆ. ನನ್ನ ತಂದೆಗೆ ಅವರ ದೈನಂದಿನ ಕೆಲಸದ ಬಗ್ಗೆ ಡೈರಿ ಬರೆಯುವ ಅಭ್ಯಾಸವಿತ್ತು. ಕೊಲೆಯಾದ ದಿನ ಸಂಜೆ 5.30ರಿಂದ 6ರ ಸುಮಾರಿಗೆ ಮೋಹಿತ್ ಕಾಂಬೋಜ್ (ಬಿಜೆಪಿ ಕಾರ್ಯಕರ್ತ) ನನ್ನ ತಂದೆಯನ್ನು ವಾಟ್ಸಾಪ್‌ನಲ್ಲಿ ಸಂಪರ್ಕಿಸಿದ್ದರು ಎಂದು ನನಗೆ ತಿಳಿದುಬಂದಿದೆ. ಮುಂದ್ರಾ ಬಿಲ್ಡರ್ಸ್‌ನ ಬಾಂದ್ರಾದಲ್ಲಿನ ಯೋಜನೆಗೆ ಸಂಬಂಧಿಸಿದಂತೆ ಮೋಹಿತ್ ನನ್ನ ತಂದೆಯನ್ನು ಭೇಟಿಯಾಗಲು ಬಯಸಿದ್ದರು” ಎಂದು ಜೀಶನ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಾಬಾ ಸಿದ್ದೀಕಿ ಸತ್ತಿದ್ದಾರೆಂದು ದೃಢಪಡಿಸಿಕೊಳ್ಳಲು ಆಸ್ಪತ್ರೆ ಬಳಿಯೇ 30 ನಿಮಿಷ ಕಾದುಕುಳಿತಿದ್ದ ಶೂಟರ್
“ಎಸ್‌ಆರ್‌ಎ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಕೆಲವರೊಂದಿಗೆ ಸಭೆ ನಡೆದಿದ್ದು ಸಭೆಯ ಸಮಯದಲ್ಲಿ ಬಿಲ್ಡರ್ ಒಬ್ಬರು ನನ್ನ ತಂದೆಯ ಬಗ್ಗೆ ನಿಂದನೀಯ ಪದಗಳನ್ನು ಬಳಸಿದ್ದಾರೆ. ನನ್ನ ತಂದೆಯ ಕೊಲೆಯ ತನಿಖೆಯಲ್ಲಿ ಮೇಲೆ ತಿಳಿಸಲಾದ ಎಲ್ಲಾ ವಿಷಯಗಳನ್ನು ವಿವರವಾಗಿ ತನಿಖೆ ಮಾಡಬೇಕೆಂದು ನಾನು ವಿನಂತಿಸುತ್ತೇನೆ” ಮಾಜಿ ಶಾಸಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಶೇಷ ಎಂಸಿಒಸಿಎ ನ್ಯಾಯಾಲಯಕ್ಕೆ 4,500ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಬಂಧಿತ 26 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಶುಭಂ ಲೋಂಕರ್, ಯಾಸಿನ್ ಅಖ್ತರ್ ಮತ್ತು ಅನ್ಮೋಲ್ ಬಿಷ್ಣೋಯ್ ಎಂಬ ಮೂವರು ವ್ಯಕ್ತಿಗಳನ್ನು ವಾಟೆಂಡ್ ಆರೋಪಿಗಳೆಂದು ಉಲ್ಲೇಖಿಸಲಾಗಿದೆ. ಬಂಧಿತ ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
