ಕೋಲ್ಕತ್ತಾದಲ್ಲಿ ಈ ವಾರದ ಆರಂಭದಲ್ಲಿ ನಡೆದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಮ್ ಅನಾರ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ಢಾಕಾ ಪೊಲೀಸರ ತಂಡ (ಢಾಕಾ ಮೆಟ್ರೋಪಾಲಿಟನ್ ಪೊಲೀಸ್ ಡಿಟೆಕ್ಟಿವ್ ಬ್ರಾಂಚ್) ಭಾರತಕ್ಕೆ ಭೇಟಿ ನೀಡಲಿದೆ.
ಭಾರತೀಯ ಪೊಲೀಸರ ನಾಲ್ಕು ಸದಸ್ಯರ ತಂಡವು ಪ್ರಸ್ತುತ ಕೊಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ. ಕೋಲ್ಕತ್ತಾದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಮೇ 12ರಂದು ಢಾಕಾದಿಂದ ಹೊರಟ ಅನ್ವರುಲ್ ಅಜೀಮ್ ಬಳಿಕ ನಾಪತ್ತೆಯಾಗಿದ್ದರು.
ಇದನ್ನು ಓದಿದ್ದೀರಾ? ಬಾಂಗ್ಲಾದೇಶದ ಸಂಸದನ ಹತ್ಯೆಗೆ 5 ಕೋಟಿ ರೂ. ಸುಪಾರಿ: ಪ್ರಕರಣ ಭೇದಿಸಿದ ಪೊಲೀಸರು
ಅನ್ವರುಲ್ ಅಜೀಮ್ ಬಾಂಗ್ಲಾದೇಶದ ಜೆನೈದಾ-4 ವಿಭಾಗದಿಂದ ಮೂರು ಬಾರಿ ಸಂಸದರಾಗಿರುವ ಅವಾಮಿ ಲೀಗ್‌ನ ಕಲಿಗಂಜ್ ಉಪ-ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿದ್ದಾರೆ.
ಉತ್ತರ ಕೋಲ್ಕತ್ತಾದ ಬಾರಾನಗರದ ನಿವಾಸಿ ಮತ್ತು ಬಾಂಗ್ಲಾದೇಶದ ರಾಜಕಾರಣಿಯ ಪರಿಚಯಸ್ಥ ಗೋಪಾಲ್ ಬಿಸ್ವಾಸ್ ಮೇ 18ರಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿದ ನಂತರ ಅನ್ವರುಲ್ ಅಜೀಮ್ ಹುಡುಕಾಟ ಆರಂಭಿಸಲಾಗಿತ್ತು.
ಇದನ್ನು ಓದಿದ್ದೀರಾ? 8 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದನ ತುಂಡು ತುಂಡಾದ ದೇಹ ಕೋಲ್ಕತ್ತಾದಲ್ಲಿ ಪತ್ತೆ
ಕೋಲ್ಕತ್ತಾ ಪೊಲೀಸರ ಪ್ರಕಾರ, ಬಾಂಗ್ಲಾದೇಶಿ ಸಂಸದರ ಕತ್ತು ಹಿಸುಕಿ ಕೊಲೆ ಮಾಡಿದ ನಂತರ ಅವರ ದೇಹವನ್ನು ತುಂಡುಗಳಾಗಿ ಕತ್ತರಿಸಿ ವಿವಿಧ ಪ್ರದೇಶಗಳಲ್ಲಿ ಎಸೆಯಲಾಗಿದೆ ಎಂಬುವುದು ಸಾಂದರ್ಭಿಕ ಸಾಕ್ಷ್ಯಗಳಿಂದ ತಿಳಿದುಬಂದಿದೆ. ಆದರೆ ದೇಹ ಅಥವಾ ದೇಹದ ಭಾಗಗಳ ಕುರುಹುಗಳು ಇನ್ನೂ ಪತ್ತೆಯಾಗಿಲ್ಲ.
ಅನಾರ್ ಕ್ರೂರ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಾಂಗ್ಲಾದೇಶದ ನ್ಯಾಯಾಲಯವು ಶುಕ್ರವಾರ ಮೂವರು ಶಂಕಿತರನ್ನು ಎಂಟು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಪಶ್ಚಿಮ ಬಂಗಾಳ ಪೊಲೀಸರು ಈ ಕೊಲೆಯಲ್ಲಿ ನಂಟು ಹೊಂದಿದ್ದ ಬಾಂಗ್ಲಾದೇಶಿಯನ್ನು ಮುಂಬೈನಲ್ಲಿ ಬಂಧಿಸಿದ್ದಾರೆ.