OBC ಮೀಸಲಾತಿಗೆ ಮತಾಂತರದ ಬೇಲಿ: ಸುಪ್ರೀಂ ಹೊಸ ಆದೇಶದಲ್ಲಿ ಸಾಂವಿಧಾನಿಕ ವಿರೋಧಾಭಾಸ!

Date:

ಧರ್ಮ ಬದಲಾದರೆ ಸಾಮಾಜಿಕ ಹಿಂದುಳಿದಿರುವಿಕೆಯೂ ಅಳಿಸಿಹೋಗುತ್ತದೆಯೇ? ಮಂಡಲ್ ಆಯೋಗದ 11 ಮಾನದಂಡಗಳಲ್ಲಿ ಧರ್ಮಕ್ಕೆ ಸ್ಥಾನವಿಲ್ಲದಿದ್ದರೂ, ಮತಾಂತರವನ್ನು ಮೀಸಲಾತಿಯ ಅರ್ಹತೆಗೆ ಜೋಡಿಸಿರುವುದೇಕೆ? ಇಂದಿರಾ ಸಾಹ್ನಿ ತೀರ್ಪಿಗೆ ವಿರೋಧಾಭಾಸವಾಗಿದೆ ಸುಪ್ರೀಂ ಕೋರ್ಟ್‌ನ ಹೊಸ ತೀಪು!

- Advertisement -

1992ರಲ್ಲಿ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಒಬಿಸಿ ಮೀಸಲಾತಿಯ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿತ್ತು. ವ್ಯಕ್ತಿಯ ಧಾರ್ಮಿಕ ಗುರುತಿಗಿಂತ ಆತ/ಆಕೆ ಎದುರಿಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಗುರುತಿಸುವುದೇ ಮೀಸಲಾತಿಯ ಮೂಲ ಉದ್ದೇಶ ಎಂಬ ತತ್ವಕ್ಕೆ ಮಹತ್ವ ನೀಡಿತ್ತು. ಆದರೆ, 34 ವರ್ಷಗಳ ನಂತರ, ಅಕ್ಟೋಬರ್ 15ರಂದು ಸುಪ್ರೀಂ ಕೋರ್ಟ್ ನೀಡಿರುವ ಹೊಸ ತೀರ್ಪು ಒಬಿಸಿ ಮೀಸಲಾತಿ ಮತ್ತು ಧಾರ್ಮಿಕ ಮತಾಂತರದ ನಡುವೆ ಹೊಸ ಕಾನೂನಾತ್ಮಕ ಗಡಿಯನ್ನು ನಿರ್ಮಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಕೈಲೊಂದು ಕ್ಯಾಮೆರಾ, ಜೀವಂತ ಬದುಕಿಗೆ ಮುಖಾಮುಖಿ

ಸಿನೆಮಾದ ಶಕ್ತಿ ಅದರ ಹಿಂದೆ ನಿಂತಿರುವ ತಂತ್ರಜ್ಞರ ಸಂಖ್ಯೆಯಲ್ಲಾಗಲಿ, ದುಬಾರಿ ಉಪಕರಣಗಳಲ್ಲಾಗಲಿ ಇಲ್ಲ. ಕನಿಷ್ಠ ಉಪಕರಣಗಳು ಮತ್ತು ಸಣ್ಣ ತಂಡದೊಂದಿಗೆ ಕೆಲಸ ಮಾಡುವುದು ಕೇವಲ ಆರ್ಥಿಕ ಅನಿವಾರ್ಯತೆಯಲ್ಲ; ಸಾಂಪ್ರದಾಯಿಕ ಸಿನೆಮಾ ವ್ಯವಸ್ಥೆಯ ಮಿತಿಗಳನ್ನು...

ತಮಿಳುನಾಡು ಸರ್ಕಾರ vs ಸಮೀರ್ ಅಹಮದ್ ನಡುವಿನ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಚಂದ್ರಶೇಖರ್ ಅವರ ದ್ವಿಸದಸ್ಯ ಪೀಠವು, “ಹಿಂದು ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ವ್ಯಕ್ತಿಯು ತನ್ನ ಹಿಂದಿನ ಜಾತಿಯ ಹಿಂದುಳಿದಿರುವಿಕೆಯ ಆಧಾರದಲ್ಲಿ ಮುಸ್ಲಿಂ ಹಿಂದುಳಿದ ವರ್ಗದ ಮೀಸಲಾತಿಯನ್ನು ಸ್ವಯಂಚಾಲಿತವಾಗಿ ಪಡೆಯಲು ಸಾಧ್ಯವಿಲ್ಲ” ಎಂದು ತೀರ್ಪು ನೀಡಿದೆ.

ಈ ತೀರ್ಪು ಪ್ರಕಟವಾದ ಬಳಿಕ, ದೇಶದ ಸಾಮಾಜಿಕ ನ್ಯಾಯದ ವ್ಯವಸ್ಥೆಯಲ್ಲಿ, “ಧರ್ಮ ಬದಲಾಯಿಸಿದ ತಕ್ಷಣ ಅವರ ಸಾಮಾಜಿಕ ಹಿಂದುಳಿದಿರುವಿಕೆಯೂ ಕೊನೆಗೊಳ್ಳುತ್ತದೆಯೇ? ಶತಮಾನಗಳಿಂದ ಅನುಭವಿಸಿದ ಜಾತಿ ತಾರತಮ್ಯ, ಬಡತನ, ಶೈಕ್ಷಣಿಕ ವಂಚನೆ ಹಾಗೂ ಸಾಮಾಜಿಕ ಅಪಮಾನಗಳು ಮತಾಂತರದಿಂದಲೇ ಅಳಿಸಿಹೋಗುತ್ತವೆಯೇ?” ಎಂಬ ಮೂಲಭೂತ ಪ್ರಶ್ನೆಯನ್ನು ಮುನ್ನೆಲೆ ತಂದಿದೆ.

ಸಮೀರ್ ಅಹಮದ್ ಪ್ರಕರಣದಲ್ಲಿ ನಡೆದಿದ್ದೇನು?

ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಹಿಂದು ಕುಟುಂಬದಲ್ಲಿ ಜನಿಸಿದ ಪರಮಶಿವರ ಎಂಬವರು 2015ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಸಮೀರ್ ಅಹಮದ್ ಎಂದು ಹೆಸರು ಬದಲಿಸಿಕೊಂಡಿದ್ದರು. ಬಳಿಕ ತಮ್ಮನ್ನು ಮುಸ್ಲಿಂ ಲಬ್ಬೈ ಸಮುದಾಯಕ್ಕೆ ಸೇರಿದವರೆಂದು ಗುರುತಿಸಿಕೊಂಡು ಹಿಂದುಳಿದ ವರ್ಗದ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ಆದರೆ, ಸ್ಥಳೀಯ ಕಂದಾಯ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದರು. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಮಾತ್ರಕ್ಕೆ ‘ಲಬ್ಬೈ’ ಎಂಬ ನಿರ್ದಿಷ್ಟ ಹಿಂದುಳಿದ ಸಮುದಾಯದ ಸದಸ್ಯತ್ವ ದೊರೆಯುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು.

ಇದೇ ಸಮಯದಲ್ಲಿ, 2024ರ ಮಾರ್ಚ್ 9ರಂದು ತಮಿಳುನಾಡು ಸರ್ಕಾರವು, “ಹಿಂದು ಸಮಾಜದ ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು, ಅಧಿಸೂಚನೆಯಿಂದ ಹೊರಗಿಡಲಾದ ಸಮುದಾಯಗಳು ಹಾಗೂ ಪರಿಶಿಷ್ಟ ಜಾತಿಗಳಿಂದ ಇಸ್ಲಾಂಗೆ ಮತಾಂತರಗೊಂಡವರಿಗೆ ನಿರ್ದಿಷ್ಟ ಷರತ್ತುಗಳಡಿ ಮುಸ್ಲಿಂ ಹಿಂದುಳಿದ ವರ್ಗದ ಪ್ರಮಾಣಪತ್ರ ಪಡೆಯಲು ಅವಕಾಶವಿದೆ” ಎಂದು ಆದೇಶವನ್ನೂ ಹೊರಡಿಸಿತ್ತು.

ಆದರೆ, ಸರ್ಕಾರದ ಈ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಅಕ್ಟೋಬರ್ 15ರಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ ಕೂಡ ಹೈಕೋರ್ಟ್‌ನ ತೀರ್ಪನ್ನೇ ಎತ್ತಿಹಿಡಿಯಿತು.

“ಮೀಸಲಾತಿ ಎನ್ನುವುದು ವ್ಯಕ್ತಿಯೊಬ್ಬರು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ತಮ್ಮೊಂದಿಗೆ ಕೊಂಡೊಯ್ಯಬಹುದಾದ ವೈಯಕ್ತಿಕ ಸೌಲಭ್ಯವಲ್ಲ. ಅದು ಅಧಿಸೂಚಿತ ನಿರ್ದಿಷ್ಟ ಹಿಂದುಳಿದ ಸಮುದಾಯದ ಸದಸ್ಯತ್ವಕ್ಕೆ ಸಂಬಂಧಿಸಿದ ಸಾಂವಿಧಾನಿಕ ವ್ಯವಸ್ಥೆ” ಎಂದು ಕೋರ್ಟ್‌ ಹೇಳಿದೆ.

ಆದರೆ, ನ್ಯಾಯಾಲಯದ ಈ ನಿಲುವು 35 ವರ್ಷಗಳ ಹಿಂದಿನ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸ್ವತಃ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನೊಂದಿಗೆ ವಿರೋಧಾಭಾಸವನ್ನು ಹೊಂದಿದೆ.

ಇಂದಿರಾ ಸಾಹ್ನಿ ತೀರ್ಪಿನ ಧಾರ್ಮಿಕ ತಟಸ್ಥತೆಯ ತತ್ವವೇನು?

1990ರಲ್ಲಿ ವಿ.ಪಿ. ಸಿಂಗ್ ಸರ್ಕಾರ ಮಂಡಲ್ ಆಯೋಗದ ಶಿಫಾರಸುಗಳಂತೆ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಒಬಿಸಿಗಳಿಗೆ 27%ರಷ್ಟು ಮೀಸಲಾತಿ ಜಾರಿಗೊಳಿಸಲು ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಇಂದಿರಾ ಸಾಹ್ನಿ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ‘ಇಂದಿರಾ ಸಾಹ್ನಿ vs ಭಾರತ ಒಕ್ಕೂಟ’ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಪೀಠವು ‘ಒಬಿಸಿ ಮೀಸಲಾತಿಯನ್ನು ಎತ್ತಿಹಿಡಿದು’ 1992ರ ನವೆಂಬರ್ 16ರಂದು ಐತಿಹಾಸಿಕ ತೀರ್ಪು ನೀಡಿತು.

“ಸಾಮಾಜಿಕ ಹಿಂದುಳಿದಿರುವಿಕೆಯನ್ನು ಗುರುತಿಸಲು ಜಾತಿಯು ಪ್ರಮುಖ ಸೂಚಕವಾಗಬಹುದು” ಎಂದು ಕೋರ್ಟ್‌ ಹೇಳಿತು. ಹಿಂದುಯೇತರ ಧಾರ್ಮಿಕ ಸಮುದಾಯಗಳಲ್ಲಿಯೂ ಸಾಮಾಜಿಕ ಹಿಂದುಳಿದಿರುವಿಕೆ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಮನ್ನಣೆ ನೀಡಿತು. ಮಾತ್ರವಲ್ಲದೆ, ಕೆನೆಪದರದವರನ್ನು (ಕ್ರೀಮಿ ಲೇಯರ್) ಮೀಸಲಾತಿಯಿಂದ ಹೊರಗಿಡುವ ತತ್ವಕ್ಕೂ ಮಾನ್ಯತೆ ನೀಡಿತು.

ನ್ಯಾಯಮೂರ್ತಿ ಕೆ. ರಾಮಸ್ವಾಮಿ ಅವರು “ಸಾಂಪ್ರದಾಯಿಕ ವೃತ್ತಿ, ವಾಸಸ್ಥಳ, ಶಿಕ್ಷಣದ ಕೊರತೆ, ಬಡತನ ಮೊದಲಾದ ಅಂಶಗಳ ಮೂಲಕ ಮುಸ್ಲಿಂ, ಕ್ರೈಸ್ತ ಹಾಗೂ ಇತರ ಧಾರ್ಮಿಕ ಸಮುದಾಯಗಳ ಹಿಂದುಳಿದಿರುವಿಕೆಯನ್ನು ಗುರುತಿಸಬಹುದು” ಎಂದು ಪ್ರತಿಪಾದಿಸಿದ್ದರು.

ನ್ಯಾಯಮೂರ್ತಿ ಟಿ.ಕೆ. ಥಾಮನ್ ಅವರ ಅಭಿಪ್ರಾಯವು ಇನ್ನಷ್ಟು ಗಮನಾರ್ಹವಾಗಿತ್ತು. “ಧರ್ಮ ಬದಲಾಯಿಸಿದ ಕಾರಣಕ್ಕೆ ಮಾತ್ರ ಸಾಮಾಜಿಕವಾಗಿ ಹಿಂದುಳಿದ ವ್ಯಕ್ತಿಗೆ ಮೀಸಲಾತಿಯ ರಕ್ಷಣೆಯನ್ನು ನಿರಾಕರಿಸುವುದು ಜಾತ್ಯತೀತತೆಯ ಆಶಯಕ್ಕೆ ಧಕ್ಕೆ ತರಬಹುದು” ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು.

ಒಬಿಸಿ ವರ್ಗೀಕರಣದ 11 ಮಾನದಂಡಗಳಲ್ಲಿ ಧರ್ಮ ಎಲ್ಲಿದೆ?

1979ರಲ್ಲಿ ರಚನೆಯಾದ ಮಂಡಲ್ ಆಯೋಗವು 1980ರಲ್ಲಿ ಸಲ್ಲಿಸಿದ ವರದಿಯಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಲು 11 ಸೂಚಕಗಳನ್ನು ರೂಪಿಸಿತ್ತು. ಅವುಗಳಲ್ಲಿ ನಾಲ್ಕು ಸಾಮಾಜಿಕ, ಮೂರು ಶೈಕ್ಷಣಿಕ ಹಾಗೂ ನಾಲ್ಕು ಆರ್ಥಿಕ ಮಾನದಂಡಗಳಾಗಿದ್ದವು.

ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಹಿಂದುಳಿಯುವಿಕೆ ಗುರುತಿಸುವ ಸೂಚಕಗಳು;

  1. ಸಾಮಾಜಿಕವಾಗಿ ಹಿಂದುಳಿದವರೆಂದು ಪರಿಗಣಿಸುವ ಜಾತಿಗಳು ಅಥವಾ ವರ್ಗಗಳು.
  2. ಜೀವನೋಪಾಯಕ್ಕಾಗಿ ಮುಖ್ಯವಾಗಿ ದೈಹಿಕ ಶ್ರಮವನ್ನು ಅವಲಂಬಿಸಿರುವ ಸಮುದಾಯಗಳು.
  3. ರಾಜ್ಯದ ಸರಾಸರಿಗಿಂತ ಹೆಚ್ಚಿನ ಪ್ರಮಾಣದಲ್ಲಿ 17 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ವಿವಾಹವಾಗುವವರಿರುವ ಸಮುದಾಯಗಳು. (ಗ್ರಾಮೀಣ ಮತ್ತು ನಗರ ಪ್ರದೇಶಗಳ ಪುರುಷರು ಮತ್ತು ಮಹಿಳೆಯರಿಗೆ ಆಯೋಗವು ಪ್ರತ್ಯೇಕ ವಯಸ್ಸು ಮತ್ತು ಪ್ರಮಾಣ ನಿಗದಿಪಡಿಸಿತ್ತು).
  4. ಮಹಿಳೆಯರ ದುಡಿಮೆಯ ಭಾಗವಹಿಸುವಿಕೆ ರಾಜ್ಯದ ಸರಾಸರಿಗಿಂತ ಕನಿಷ್ಠ 25%ರಷ್ಟು ಹೆಚ್ಚಿರುವ ಸಮುದಾಯಗಳು.
  5. 5ರಿಂದ 15 ವರ್ಷದೊಳಗಿನ ಶಾಲೆಗೆ ಎಂದಿಗೂ ಹೋಗದ ಮಕ್ಕಳ ಪ್ರಮಾಣ ರಾಜ್ಯದ ಸರಾಸರಿಗಿಂತ ಕನಿಷ್ಠ 25%ರಷ್ಟು ಹೆಚ್ಚಿರುವುದು.
  6. ಅದೇ ವಯೋಮಾನದ ಮಕ್ಕಳ ಶಾಲೆ ಬಿಡುವ ಪ್ರಮಾಣ ರಾಜ್ಯದ ಸರಾಸರಿಗಿಂತ ಕನಿಷ್ಠ 25%ರಷ್ಟು ಹೆಚ್ಚಿರುವುದು.
  7. ಮೆಟ್ರಿಕ್ಯುಲೇಷನ್ (ಎಸ್‌ಎಸ್‌ಎಲ್‌ಸಿ) ಉತ್ತೀರ್ಣರಾದವರ ಪ್ರಮಾಣ ರಾಜ್ಯದ ಸರಾಸರಿಗಿಂತ ಕನಿಷ್ಠ 25%ರಷ್ಟು ಕಡಿಮೆಯಿರುವುದು.
  8. ಕುಟುಂಬಗಳ ಸರಾಸರಿ ಆಸ್ತಿ ಮೌಲ್ಯ ರಾಜ್ಯದ ಸರಾಸರಿಗಿಂತ ಕನಿಷ್ಠ 25%ರಷ್ಟು ಕಡಿಮೆಯಿರುವುದು.
  9. ಕಚ್ಚಾ ಮನೆಗಳಲ್ಲಿ ವಾಸಿಸುವ ಕುಟುಂಬಗಳ ಪ್ರಮಾಣ ರಾಜ್ಯದ ಸರಾಸರಿಗಿಂತ ಕನಿಷ್ಠ 25%ರಷ್ಟು ಹೆಚ್ಚಿರುವುದು.
  10. 50%ಕ್ಕಿಂತ ಹೆಚ್ಚು ಕುಟುಂಬಗಳು ಅರ್ಧ ಕಿಲೋಮೀಟರ್‌ಗಿಂತ ದೂರದಿಂದ ಕುಡಿಯುವ ನೀರನ್ನು ತರಬೇಕಾಗಿರುವುದು.
  11. ದೈನಂದಿನ ಬಳಕೆ ಅಥವಾ ಉಪಭೋಗದ ಅಗತ್ಯಗಳಿಗಾಗಿ ಸಾಲ ಪಡೆದ ಕುಟುಂಬಗಳ ಪ್ರಮಾಣ ರಾಜ್ಯದ ಸರಾಸರಿಗಿಂತ ಕನಿಷ್ಠ 25%ರಷ್ಟು ಹೆಚ್ಚಿರುವುದು

ಈ ಸೂಚಕಗಳಿಗೆ ಸಾಮಾಜಿಕವಾಗಿ ತಲಾ ಮೂರು, ಶೈಕ್ಷಣಿಕವಾಗಿ ತಲಾ ಎರಡು ಮತ್ತು ಆರ್ಥಿಕವಾಗಿ ತಲಾ ಒಂದು ಅಂಕ ನಿಗದಿಪಡಿಸಲಾಗಿತ್ತು. ಒಟ್ಟು 22 ಅಂಕಗಳಲ್ಲಿ ಕನಿಷ್ಠ 11 ಅಂಕ ಗಳಿಸಿದ ಸಮುದಾಯಗಳನ್ನು ಹಿಂದುಳಿದವರೆಂದು ಗುರುತಿಸುವ ವಿಧಾನ ಅನುಸರಿಸಲಾಗಿತ್ತು.

ಗಮನಾರ್ಹ ಸಂಗತಿಯೆಂದರೆ, ಈ 11 ಮಾನದಂಡಗಳಲ್ಲಿ ವ್ಯಕ್ತಿಯ ಧರ್ಮವನ್ನು ಹಿಂದುಳಿದಿರುವಿಕೆಯ ಸ್ವತಂತ್ರ ಮಾನದಂಡವನ್ನಾಗಿ ಪರಿಗಣಿಸಿರಲಿಲ್ಲ.

ಮತಾಂತರಗೊಂಡವರ ಹಿಂದುಳಿದಿರುವಿಕೆಯನ್ನೂ ಗುರುತಿಸಿತ್ತು ಮಂಡಲ್ ಆಯೋಗ!

ಹಿಂದುಯೇತರ ಹಿಂದುಳಿದ ವರ್ಗಗಳನ್ನು ಗುರುತಿಸುವಾಗ ಮಂಡಲ್ ಆಯೋಗವು ಎರಡು ವರ್ಗಗಳನ್ನು ಪರಿಗಣಿಸಿತ್ತು. ಅಸ್ಪೃಶ್ಯತೆ ಅನುಭವಿಸುತ್ತಿದ್ದ ಸಮುದಾಯಗಳಿಂದ ಇತರ ಧರ್ಮಗಳಿಗೆ ಮತಾಂತರಗೊಂಡವರು ಮತ್ತು ಹಿಂದು ಸಮಾಜದಲ್ಲಿನ ಸಮಾನ ವೃತ್ತಿ ಸಮುದಾಯಗಳು ಒಬಿಸಿ ಪಟ್ಟಿಯಲ್ಲಿರುವಂತಹ ಹಿಂದುಯೇತರ ಸಾಂಪ್ರದಾಯಿಕ ವೃತ್ತಿ ಸಮುದಾಯಗಳು.

ವರದಿಯು ಧೋಬಿ, ತೇಲಿ, ನಾಯೀ, ಕುಂಬಾರ, ಲೋಹಾರ್, ದರ್ಜಿ ಮೊದಲಾದ ಸಮುದಾಯಗಳನ್ನು ಉದಾಹರಣೆಯಾಗಿ ಪರಿಗಣಿಸಿತ್ತು. ಅಂದರೆ, ಧರ್ಮ ಬದಲಾದರೂ ಸಾಮಾಜಿಕ ಶ್ರೇಣೀಕರಣ ಮತ್ತು ವೃತ್ತಿ ಆಧಾರಿತ ಹಿಂದುಳಿದಿರುವಿಕೆ ಮುಂದುವರಿಯಬಹುದು ಎಂಬ ವಾಸ್ತವವನ್ನು ಮಂಡಲ್ ಆಯೋಗ ಗುರುತಿಸಿತ್ತು.

ಈ ಲೇಖನ ಓದಿದ್ದೀರಾ?: ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ ಸರ್ಕಾರಗಳು!

ಹೀಗಿರುವಾಗ ಮತಾಂತರಗೊಂಡ ಕಾರಣಕ್ಕಾಗಿ, ಅವರ ಹಿಂದಿನ ಸಾಮಾಜಿಕ ಹಿಂದುಳಿದಿರುವಿಕೆಯೂ ಅಂತ್ಯಗೊಂಡು, ಅವರು ಮುಂದುವರೆದಿದ್ದಾರೆ ಎಂದು ಪರಿಗಣಿಸಲು ಸಾಧ್ಯವಿಲ್ಲ.

ಮೀಸಲಾತಿ ಪ್ರಮಾಣಪತ್ರದಲ್ಲಿಯೂ ಧರ್ಮ ಮುಖ್ಯವಲ್ಲ!

ಕೇಂದ್ರ ಸರ್ಕಾರದ ಕೆಲವು ಪ್ರಮಾಣಿತ ಒಬಿಸಿ ಪ್ರಮಾಣಪತ್ರ ನಮೂನೆಗಳಲ್ಲಿ ಅರ್ಜಿದಾರರ ಹೆಸರು, ವಾಸಸ್ಥಳ, ಅಧಿಸೂಚಿತ ಸಮುದಾಯ ಮತ್ತು ಕೆನೆಪದರದ ಅರ್ಹತೆಗೆ ಮಹತ್ವ ನೀಡಲಾಗುತ್ತದೆ. ಆದರೆ, ಧರ್ಮವನ್ನು ದಾಖಲಿಸಲು ಪ್ರತ್ಯೇಕ ಕಾಲಂಅನ್ನು ಸೇರಿಸಿಲ್ಲ. ಅಂತೆಯೇ, ರಾಜ್ಯಗಳ ಎಲ್ಲ ಅರ್ಜಿ ನಮೂನೆಗಳಲ್ಲಿಯೂ ಧರ್ಮದ ವಿವರ ಕೇಳುವುದಿಲ್ಲ. ಅಂದರೆ, ಒಬಿಸಿ ಪ್ರಮಾಣಪತ್ರದ ಮೂಲ ಉದ್ದೇಶ ವ್ಯಕ್ತಿಯ ಧಾರ್ಮಿಕ ನಂಬಿಕೆಯನ್ನು ಪ್ರಮಾಣೀಕರಿಸುವುದಲ್ಲ; ಅಧಿಸೂಚಿತ ಹಿಂದುಳಿದ ಸಮುದಾಯದ ಸದಸ್ಯತ್ವವನ್ನು ದೃಢೀಕರಿಸುವುದೇ ಆಗಿದೆ.

ಮತಾಂತರಗೊಂಡ ವ್ಯಕ್ತಿಯ ಸಾಮಾಜಿಕ ಹಿಂದುಳಿದಿರುವಿಕೆ ಮುಂದುವರಿದಿದ್ದರೆ ಅದನ್ನು ಸರ್ಕಾರಗಳು ಗುರುತಿಸಬೇಕಾಗುತ್ತದೆ.

ಧರ್ಮ ಬದಲಾದರೆ ಜಾತಿ ತಾರತಮ್ಯ ಕೊನೆಗೊಳ್ಳುವುದೇ?

ಭಾರತೀಯ ಮುಸ್ಲಿಂ ಸಮಾಜದಲ್ಲಿರುವ ಅಶ್ರಫ್, ಅಜ್ಲಫ್ ಮತ್ತು ಅರ್ಜಲ್ ಎಂಬ ಸಾಮಾಜಿಕ ಶ್ರೇಣೀಕರಣಗಳು ಹಾಗೂ ಕ್ರೈಸ್ತ ಸಮುದಾಯಗಳಲ್ಲಿಯೂ ಮುಂದುವರಿದಿರುವ ಜಾತಿ ತಾರತಮ್ಯಗಳು ಸಾಮಾಜಿಕ ವಾಸ್ತವವನ್ನು ತೋರಿಸುತ್ತವೆ.

ಧಾರ್ಮಿಕ ಮತಾಂತರದಿಂದ ವ್ಯಕ್ತಿಯ ನಂಬಿಕೆ ಬದಲಾಗಬಹುದು. ಆದರೆ, ಕುಟುಂಬದ ಆರ್ಥಿಕ ದುಸ್ಥಿತಿ, ಸಾಂಪ್ರದಾಯಿಕ ವೃತ್ತಿ, ಶೈಕ್ಷಣಿಕ ವಂಚನೆ ಹಾಗೂ ಸಾಮಾಜಿಕ ಅಪಮಾನದ ಇತಿಹಾಸ ತಕ್ಷಣವೇ ಅಳಿಸಿಹೋಗುವುದಿಲ್ಲ.

ಹೊಸ ತೀರ್ಪು ಸಹ ಭಾರತೀಯ ಮುಸ್ಲಿಂ ಸಮಾಜದಲ್ಲಿನ ಸಾಮಾಜಿಕ ಶ್ರೇಣೀಕರಣದ ಅಸ್ತಿತ್ವವನ್ನು ಗುರುತಿಸಿದೆ. ಆದರೆ ಅಂತಹ ಹಿಂದುಳಿದಿರುವಿಕೆ ಮತ್ತು ನಿರ್ದಿಷ್ಟ ಅಧಿಸೂಚಿತ ಸಮುದಾಯದ ಸದಸ್ಯತ್ವ ಎರಡೂ ಒಂದೇ ಅಲ್ಲ ಎಂಬ ಕಾನೂನಾತ್ಮಕ ವ್ಯತ್ಯಾಸವನ್ನು ಪ್ರತಿಪಾದಿಸಿದೆ.

ಇಲ್ಲಿಯೇ ಮುಖ್ಯ ವಿರೋಧಾಭಾಸವಿದೆ. ವ್ಯಕ್ತಿಯೊಬ್ಬರು ಮತಾಂತರಗೊಂಡ ನಂತರವೂ ಸಾಮಾಜಿಕವಾಗಿ ಹಿಂದುಳಿದವರಾಗಿಯೇ ಉಳಿದಿದ್ದರೂ, ಹಿಂದಿನ ಜಾತಿಯ ಆಧಾರದಲ್ಲಿ ಮೀಸಲಾತಿ ಪಡೆಯಲು ಸಾಧ್ಯವಾಗದೆ, ಹೊಸ ಧರ್ಮದ ನಿರ್ದಿಷ್ಟ ಹಿಂದುಳಿದ ಸಮುದಾಯದ ಸದಸ್ಯತ್ವವನ್ನೂ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಅವರ ಸ್ಥಿತಿ ಏನು? ಸಾಮಾಜಿಕ ನ್ಯಾಯ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಹಿಂದುಳಿದ ವ್ಯಕ್ತಿಯನ್ನು ಕಾನೂನಾತ್ಮಕವಾಗಿ ಮೀಸಲಾತಿಯಿಂದ ವಂಚಿತನಾಗುವಂತೆ ಮಾಡಬಹುದೇ?

1992ರ ಇಂದಿರಾ ಸಾಹ್ನಿ ತೀರ್ಪು ಮತಾಂತರದ ನಂತರ ಪ್ರತಿಯೊಂದು ಮೀಸಲಾತಿ ಹಕ್ಕು ಸ್ವಯಂಚಾಲಿತವಾಗಿ ಮುಂದುವರಿಯುತ್ತದೆ ಎಂದು ನೇರವಾಗಿ ಹೇಳದೇ ಇದ್ದರೂ, ತೀರ್ಪಿನ ಧಾರ್ಮಿಕ ತಟಸ್ಥತೆಯು ಧರ್ಮ ಬದಲಾದರೂ, ಮೀಸಲಾತಿ ಮುಂದುವರೆಯಲು ಅವಕಾಶ ನೀಡಿತ್ತು. ಆದರೆ, ಅಕ್ಟೋಬರ್ 15ರ ತೀರ್ಪು, ಧರ್ಮ ಬದಲಾದರೆ, ಅವರಿಗೆ ಮೀಸಲಾತಿಯೇ ದೊರೆಯುವುದಿಲ್ಲ ಎಂದು ನೇರವಾಗಿ ಹೇಳಿದೆ.

ಸಂವಿಧಾನದ 25ನೇ ವಿಧಿಯು ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ. 15(4) ಮತ್ತು 16(4)ನೇ ವಿಧಿಗಳು ಸಾಮಾಜಿಕ ನ್ಯಾಯಕ್ಕೆ ಅವಕಾಶ ಕಲ್ಪಿಸುತ್ತವೆ. ಧರ್ಮ ಬದಲಾಗಬಹುದು. ಆದರೆ, ಸಾಮಾಜಿಕ ಅಸಮಾನತೆ ಮತಾಂತರಗೊಂಡ ಕ್ಷಣದಲ್ಲೇ ಕೊನೆಗೊಳ್ಳುವುದಿಲ್ಲ. ಅದನ್ನು ಗುರುತಿಸಿ ನಿವಾರಿಸುವುದೇ ಸಾಮಾಜಿಕ ನ್ಯಾಯದ ಸಾಂವಿಧಾನಿಕ ವ್ಯವಸ್ಥೆಯ ಮೂಲ ಉದ್ದೇಶವಾಗಬೇಕು. ಆದನ್ನು ಸರ್ಕಾರಗಳು ಮತ್ತು ನ್ಯಾಯಾಲಯಗಳು ಎಚ್ಚರಿಕೆಯಿಂದ ನೋಡಬೇಕು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ಯಾರಾ ಏಷ್ಯನ್ ಗೇಮ್ಸ್ 2026: ಒಂದೇ ದಿನ ಎರಡು ಚಿನ್ನದ ಪದಕ ಗೆದ್ದು ಬೀಗಿದ ಶೀತಲ್ ದೇವಿ

ಏಷ್ಯನ್ ಪ್ಯಾರಾ ಗೇಮ್ಸ್ 2026 ರಲ್ಲಿ ಭಾರತದ ಹೆಮ್ಮೆಯ ಪ್ಯಾರಾ ಆರ್ಚರಿ...

‘ಟಿಪ್ಪು ನಿಜ ಕನಸು’ಗಳಿಂದ ‘ಗಾಂಧೀ ಹತ್ಯೆಯ ಸತ್ಯ’ದವರೆಗೆ: ಇತಿಹಾಸ ತಿರುಚುವಿಕೆಯ ಸುತ್ತ ಮತ್ತೆ ವಿವಾದ

ನಾಟಕಕಾರ, ಬರಹಗಾರ ಅಡ್ಡಂಡ ಕಾರ್ಯಪ್ಪ ಹಿಂದಿನಿಂದಲೂ ಒಂದಲ್ಲೊಂದು ಕಾರಣಕ್ಕೆ ಸಾರ್ವಜನಿಕ ಚರ್ಚೆಯ...

ಮೈಸೂರು ದಸರಾ: ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕನಿಗೆ ಗಂಭೀರ ಗಾಯ, ಐಸಿಯುನಲ್ಲಿ ಚಿಕಿತ್ಸೆ

ಮೈಸೂರಿನ ದಸರಾ ಜಂಬೂಸವಾರಿ ಮೆರವಣಿಗೆಯ ವೇಳೆ ಪೊಲೀಸರು ನಡೆಸಿದ ಲಘು ಲಾಠಿ...

ಪಕ್ಷಾಂತರ ಪರ್ವ: ಮೋದಿ ಸರ್ಕಾರದ ಅಧಿಕಾರದ ಆಸೆಗೆ ಪ್ರಜಾಸತ್ತಾತ್ಮಕ ಮೌಲ್ಯಗಳ ಬಲಿ

ಭಾರತದಲ್ಲಿ 2022 ಮತ್ತು 2026ರ ನಡುವಿನ ಅವಧಿಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಬಹುದೊಡ್ಡ...