ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ ಸರ್ಕಾರಗಳು!

Date:

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್ ಹಾಗೂ ಪೋರ್ಚುಗಲ್‌ವರೆಗೆ ಲಕ್ಷಾಂತರ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳೆಂದು ಗುರುತಿಸಿಕೊಂಡಿರುವ ಯೂರೋಪಿನ ದೇಶಗಳಲ್ಲೇ ಸಾಮಾನ್ಯ ಜನರಿಗೆ ಬದುಕು ನಡೆಸುವುದು ಈಗ ದುಸ್ತರವಾಗಿ ಕಾಣುತ್ತಿದೆ!

- Advertisement -

ಒಂದು ಕಾಲದಲ್ಲಿ ಉತ್ತಮ ಜೀವನಮಟ್ಟ, ಸಾಮಾಜಿಕ ಭದ್ರತೆ, ಸಾರ್ವತ್ರಿಕ ಆರೋಗ್ಯ ಸೇವೆ, ಉಚಿತ ಅಥವಾ ಕಡಿಮೆ ವೆಚ್ಚದ ಶಿಕ್ಷಣ ಹಾಗೂ ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಜಗತ್ತಿಗೆ ಮಾದರಿಯಾಗಿದ್ದ ಯೂರೋಪಿನ ಅನೇಕ ದೇಶಗಳು ಈಗ ಆರ್ಥಿಕ ಮತ್ತು ಸಾಮಾಜಿಕ ಅಶಾಂತಿಯ ಸುಳಿಯಲ್ಲಿ ಸಿಲುಕಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ...

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಇಂಟರ್ನೆಟ್‌ನಿಂದ AIವರೆಗೆ.. ದಶಕಗಳ ಹಿಂದೆಯೇ ಜಗತ್ತಿನ ಭವಿಷ್ಯ ಕಂಡಿದ್ದ...

ತಂತ್ರಜ್ಞಾನ ನಮ್ಮ ಕೈಸೇರುವ, ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗುವ ದಶಕಗಳ ಹಿಂದೆಯೇ, ಅಂದಿನ ಕಾಲದ ಕಲಾವಿದರು ತಮ್ಮ ಗೀತೆಗಳ ಸಾಲುಗಳ ಮೂಲಕ ಮುಂದಿನ ಜಗತ್ತು ಹೀಗೇ ಇದ್ದೀತೆಂದು ಖಚಿತವಾಗಿ ಹೇಳಿದ್ದರು. ಮಾನವಕುಲವು ಮುಂದೆ...

ಜನರ ಆದಾಯಕ್ಕೆ ಹೋಲಿಸಿದರೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಮನೆಬಾಡಿಗೆ, ವಿದ್ಯುತ್, ಇಂಧನ ಹಾಗೂ ಸಾರಿಗೆ ವೆಚ್ಚಗಳು ಕುಟುಂಬಗಳ ಮಾಸಿಕ ಬಜೆಟ್‌ ಮೇಲೆ ಭಾರೀ ಹೊರೆ ಹಾಕುತ್ತಿವೆ. ಹಣದುಬ್ಬರದ ಜೊತೆಗೆ ಸಾರ್ವಜನಿಕ ಸೇವೆಗಳ ಗುಣಮಟ್ಟ ಕುಸಿಯುತ್ತಿರುವ ಆರೋಪಗಳು ಜನರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿವೆ.

ಈ ಅಸಮಾಧಾನ ಇದೀಗ ಸಂಘಟಿತ ಪ್ರತಿಭಟನೆಗಳಾಗಿ ಮಾರ್ಪಟ್ಟಿದೆ. ಅಕ್ಟೋಬರ್ 17ರಂದು ಫ್ರಾನ್ಸ್, ಇಟಲಿ, ಬೆಲ್ಜಿಯಂ ಹಾಗೂ ಪೋರ್ಚುಗಲ್‌ನಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿವೆ. ಈ ಎಲ್ಲ ರಾಷ್ಟ್ರಗಳ ಜನರ ಬೇಡಿಕೆಗಳೂ ಬಹುತೇಕ ಒಂದೇ ಆಗಿವೆ: ಗೌರವಯುತ ಬದುಕಿಗೆ ಬೇಕಾದ ಆದಾಯ, ಕೈಗೆಟುಕುವ ವಸತಿ ಮತ್ತು ಉತ್ತಮ ಸಾರ್ವಜನಿಕ ಸೇವೆಗಳು.

ಫ್ರಾನ್ಸ್: ಮ್ಯಾಕ್ರಾನ್ ಸರ್ಕಾರಕ್ಕೆ ತೀವ್ರ ಸವಾಲು

ಯೂರೋಪಿನಲ್ಲಿ ಪ್ರಸ್ತುತ ಜನಾಕ್ರೋಶದ ಕೇಂದ್ರವಾಗಿ ಫ್ರಾನ್ಸ್ ಹೊರಹೊಮ್ಮಿದೆ. ರಾಜಧಾನಿ ಪ್ಯಾರಿಸ್ ಸೇರಿದಂತೆ ಹಲವು ನಗರಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ನೇತೃತ್ವದ ಆಡಳಿತಕ್ಕೆ ಗಂಭೀರ ಸವಾಲಾಗಿ ಪರಿಣಮಿಸಿವೆ.

ಅಕ್ಟೋಬರ್ 17ರಂದು ದೇಶಾದ್ಯಂತ ನಡೆದ ಪ್ರತಿಭಟನೆಗಳಲ್ಲಿ 5.5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ ಎಂದು ಫ್ರಾನ್ಸ್‌ನ ಆಂತರಿಕ ಸಚಿವಾಲಯದ ಅಂಕಿಅಂಶಗಳು ಹೇಳುತ್ತಿವೆ. ವಿದ್ಯಾರ್ಥಿಗಳು, ಕಾರ್ಮಿಕ ಸಂಘಟನೆಗಳು ಹಾಗೂ ಜೀವನವೆಚ್ಚ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ವಿವಿಧ ವರ್ಗಗಳ ಜನರು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ. ಕೆಲವು ಕಡೆ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದು, ಪೊಲೀಸರೊಂದಿಗೆ ಘರ್ಷಣೆಗಳೂ ಸಂಭವಿಸಿವೆ. ಈವರೆಗೆ ಸುಮಾರು 2,500ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

2025 09 10t095131z 1625885139 rc

ಫ್ರಾನ್ಸ್‌ನ ಆರ್ಥಿಕ ಸಮಸ್ಯೆಗಳು ಕೇವಲ ಇತ್ತೀಚಿನ ಇಂಧನ ಬೆಲೆ ಏರಿಕೆಗೆ ಸೀಮಿತವಾಗಿಲ್ಲ. ಕಳೆದ ಹಲವು ವರ್ಷಗಳಿಂದ ವೇತನ ಮತ್ತು ಜೀವನವೆಚ್ಚದ ನಡುವಿನ ಅಂತರ ವಿಸ್ತರಿಸುತ್ತಿದೆ. 2017ರಿಂದ ಫ್ರಾನ್ಸ್‌ನಲ್ಲಿ ಒಟ್ಟಾರೆ ಗ್ರಾಹಕ ಬೆಲೆಗಳು 23.4%ರಷ್ಟು ಏರಿದ್ದರೆ, ಮಧ್ಯಮ ಮಟ್ಟದ ವೇತನ ಏರಿಕೆ 22.8%ರಷ್ಟಿದೆ. ಈ ಅಂತರದಿಂದಾಗಿ, ಕಡಿಮೆ ಆದಾಯದ ಕುಟುಂಬಗಳು, ಗ್ರಾಮೀಣ ಜನರು ಹಾಗೂ ವೃದ್ಧರು ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದಾರೆ.

ಇದೇ ವೇಳೆ, ಫ್ರಾನ್ಸ್‌ನ ಸಾರ್ವಜನಿಕ ಸಾಲವೂ ಸರ್ಕಾರದ ಮುಂದೆ ದೊಡ್ಡ ಸಮಸ್ಯೆಯಾಗಿದೆ. ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ದೇಶದ ಸಾರ್ವಜನಿಕ ಸಾಲವು ಒಟ್ಟು ದೇಶೀಯ ಉತ್ಪನ್ನದ ಸುಮಾರು 119%ರಷ್ಟು ತಲುಪಿದೆ. ಆರ್ಥಿಕ ಬೆಳವಣಿಗೆಯ ದುರ್ಬಲತೆ ಮತ್ತು ಸಾಲದ ಮೇಲಿನ ಬಡ್ಡಿ ವೆಚ್ಚ ಏರಿಕೆ ಸರ್ಕಾರದ ಹಣಕಾಸಿನ ಆಯ್ಕೆಗಳನ್ನು ಸೀಮಿತಗೊಳಿಸುತ್ತಿವೆ.

ಒಂದು ಕಡೆ ಜನರು ಹೆಚ್ಚಿನ ವೇತನ ಮತ್ತು ಕಲ್ಯಾಣ ಸೌಲಭ್ಯಗಳಿಗಾಗಿ ಒತ್ತಾಯಿಸುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರಕ್ಕೆ ಬಜೆಟ್ ಕೊರತೆಯನ್ನು ನಿಯಂತ್ರಿಸುವ ಸವಾಲು ಎದುರಾಗಿದೆ.

ಪ್ರಮುಖ ಸಂಗತಿ ಎಂದರೆ, 2018ರಲ್ಲಿ ಇಂಧನ ತೆರಿಗೆ ಮತ್ತು ಜೀವನವೆಚ್ಚ ಏರಿಕೆಯನ್ನು ವಿರೋಧಿಸಿ ನಡೆದಿದ್ದ ‘ಯೆಲ್ಲೋ ವೆಸ್ಟ್’ ಚಳವಳಿ ಫ್ರಾನ್ಸ್‌ನ ರಾಜಕೀಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿತ್ತು. ಇದೀಗ, ಅದೇ ಚಳವಳಿ ಮತ್ತೆ ಚುರುಕುಗೊಳ್ಳುತ್ತಿರುವುದು ಮ್ಯಾಕ್ರಾನ್ ಆಡಳಿತಕ್ಕೆ ಮತ್ತೊಂದು ಸವಾಲಾಗಿದೆ.

ಇಟಲಿ: ದುಬಾರಿ ಇಂಧನ, ರೈತರ ಸಂಕಷ್ಟ ಮತ್ತು ಯುವಜನರ ಆಕ್ರೋಶ

ಭಾರತದ ಪ್ರಧಾನಿ ಮೋದಿ ಅವರಿಂದ ಚಾಕೋಲೆಟ್‌ ಉಡುಗೊರೆ ಪಡೆದಿದ್ದ ಸ್ನೇಹಿತೆ ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಇಟಲಿಯಲ್ಲಿಯೂ ಆರ್ಥಿಕ ಅಸಮಾಧಾನ ತೀವ್ರಗೊಂಡಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ಕೃಷಿ ಉತ್ಪಾದನಾ ವೆಚ್ಚ, ಕಡಿಮೆ ವೇತನ ಹಾಗೂ ಸಾರ್ವಜನಿಕ ಸೇವೆಗಳ ಸಮಸ್ಯೆಗಳು ಪ್ರತಿಭಟನೆಗಳಿಗೆ ಕಾರಣವಾಗಿವೆ.

ಮಿಲಾನ್, ಟ್ಯೂರಿನ್ ಹಾಗೂ ಬೊಲೊನ್ಯಾ ನಗರಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಮಿಲಾನ್‌ನ ಕೆಲವು ಭಾಗಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದ್ದು, ಅಂಗಡಿಗಳ ಮೇಲೆ ದಾಳಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದ ಘಟನೆಗಳೂ ವರದಿಯಾಗಿವೆ.

iraty

ಇಟಲಿಯ ಕೃಷಿಕರಿಗೆ ದುಬಾರಿ ಡೀಸೆಲ್ ಮತ್ತೊಂದು ಸಂಕಷ್ಟವಾಗಿದೆ. ಕೃಷಿ ಯಂತ್ರೋಪಕರಣಗಳ ನಿರ್ವಹಣೆ, ಸಾಗಣೆ ಹಾಗೂ ಉತ್ಪಾದನಾ ವೆಚ್ಚಗಳು ಹೆಚ್ಚಾಗಿರುವುದರಿಂದ ರೈತರ ಆದಾಯದ ಮೇಲೆ ಒತ್ತಡ ಉಂಟಾಗಿದೆ. ದಕ್ಷಿಣ ಇಟಲಿಯಲ್ಲಿ ಈ ಸಮಸ್ಯೆಗಳ ವಿರುದ್ಧ ರೈತರು ಕೂಡ ಬೀದಿಗಿಳಿದಿದ್ದಾರೆ.

ಪ್ರತಿಭಟನೆಗಳ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹೆಸರಿನಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ಕಠಿಣ ಕ್ರಮಗಳು ಮತ್ತು 2025ರಲ್ಲಿ ಜಾರಿಗೆ ಬಂದ ಭದ್ರತಾ ಕಾನೂನು ಸೇರಿದಂತೆ ವಿವಿಧ ಕ್ರಮಗಳು ನಾಗರಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿವೆ. ಪ್ರತಿಭಟನೆಯ ಹಕ್ಕಿನ ಮೇಲೆ ಪರಿಣಾಮ ಬೀರುತ್ತಿವೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಬೆಲ್ಜಿಯಂ: ಶಿಕ್ಷಣ ವೆಚ್ಚ, ಬಜೆಟ್ ಕಡಿತದ ವಿರುದ್ಧ ಆಕ್ರೋಶ

ಯೂರೋಪಿಯನ್ ಒಕ್ಕೂಟದ ಪ್ರಮುಖ ಸಂಸ್ಥೆಗಳು ನೆಲೆಗೊಂಡಿರುವ ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್‌ನಲ್ಲಿಯೂ ಜನಾಕ್ರೋಶ ತೀವ್ರಗೊಂಡಿದೆ. ಜೀವನವೆಚ್ಚ ಏರಿಕೆ, ಶಿಕ್ಷಣ ಶುಲ್ಕ, ಸರ್ಕಾರದ ವೆಚ್ಚ ಕಡಿತ ಹಾಗೂ ಸಾರ್ವಜನಿಕ ಸೇವೆಗಳ ಸಮಸ್ಯೆಗಳು ಪ್ರತಿಭಟನೆಗಳಿಗೆ ಕಾರಣವಾಗಿವೆ. ವಿದ್ಯಾರ್ಥಿ ಪ್ರತಿಭಟನೆಗಳ ಜೊತೆಗೆ ಜನಸಾಮಾನ್ಯರ ಆರ್ಥಿಕ ಅಸಮಾಧಾನವೂ ಹೆಚ್ಚಾಗಿದೆ.

ಅಕ್ಟೋಬರ್ 17ರಂದು ಬ್ರಸೆಲ್ಸ್ ಮತ್ತು ಲಿಯೇಜ್ ನಗರಗಳಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಬಳಸಿದ್ದಾರೆ. ಕೆಲವೆಡೆ ಘರ್ಷಣೆ ಮತ್ತು ಆಸ್ತಿಪಾಸ್ತಿಗೆ ಹಾನಿಯಾದ ಘಟನೆಗಳು ನಡೆದಿವೆ.

belgium

ಪ್ರತಿಭಟನೆಯ ಹಕ್ಕನ್ನು ಗೌರವಿಸುವುದು ಮತ್ತು ಹಿಂಸಾಚಾರವನ್ನು ನಿಯಂತ್ರಿಸುವುದು — ಈ ಎರಡರ ನಡುವೆ ಸಮತೋಲನ ಸಾಧಿಸಲು ಅಲ್ಲಿನ ಸರ್ಕಾರ ಹೆಣಗಾಡುತ್ತಿದೆ.

ಪೋರ್ಚುಗಲ್: ಮನೆಬಾಡಿಗೆಯೇ ದೊಡ್ಡ ಶಾಪ

ಪೋರ್ಚುಗಲ್‌ನಲ್ಲಿ ಜೀವನವೆಚ್ಚದ ಸಮಸ್ಯೆಯ ಜೊತೆಗೆ ವಸತಿ ಬಿಕ್ಕಟ್ಟು ಅತ್ಯಂತ ಗಂಭೀರವಾಗುತ್ತಿದೆ. ರಾಜಧಾನಿ ಲಿಸ್ಬನ್‌ನಲ್ಲಿ ಅಕ್ಟೋಬರ್ 17ರಂದು ಸಾವಿರಾರು ಜನರು ಪ್ರತಿಭಟನೆ ನಡೆಸಿ, ವೇತನ ಮತ್ತು ಪಿಂಚಣಿ ಹೆಚ್ಚಳ, ಕೈಗೆಟುಕುವ ವಸತಿ ವ್ಯವಸ್ಥೆ ಹಾಗೂ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಆಗ್ರಹಿಸಿದ್ದಾರೆ.

2017ರಿಂದ ಪೋರ್ಚುಗಲ್‌ನಲ್ಲಿ ಮನೆಗಳ ಬೆಲೆ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. ಹೊಸ ಬಾಡಿಗೆ ಒಪ್ಪಂದಗಳ ದರಗಳೂ ಭಾರೀ ಪ್ರಮಾಣದಲ್ಲಿ ಏರಿರುತ್ತಿವೆ. ಇದರಿಂದ ಕಡಿಮೆ ವೇತನ ಪಡೆಯುವ ಕಾರ್ಮಿಕರು ಮಾತ್ರವಲ್ಲದೆ ಮಧ್ಯಮವರ್ಗದ ಯುವಜನರು ಮತ್ತು ಹೊಸದಾಗಿ ಉದ್ಯೋಗಕ್ಕೆ ಸೇರುತ್ತಿರುವವರಿಗೂ ಸ್ವಂತ ಮನೆ ಖರೀದಿಸುವುದು ಅಥವಾ ನಗರಗಳಲ್ಲಿ ಬಾಡಿಗೆಗೆ ವಾಸಿಸುವುದು ಕಷ್ಟವಾಗಿದೆ.

portugal

ಸರ್ಕಾರಗಳು ಆರ್ಥಿಕ ಅಭಿವೃದ್ಧಿಯ ಅಂಕಿಅಂಶಗಳ ಬಗ್ಗೆ ಮಾತನಾಡುತ್ತಿದ್ದರೂ, ಆ ಅಭಿವೃದ್ಧಿಯ ಲಾಭ ಸಾಮಾನ್ಯ ಜನರ ಜೀವನಮಟ್ಟದಲ್ಲಿ ಕಾಣಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಸ್ಪೇನ್: ಯುವಜನತೆ ಮತ್ತು ವಸತಿ ಬಿಕ್ಕಟ್ಟಿನ ಪ್ರಶ್ನೆ

ಸ್ಪೇನ್‌ನಲ್ಲಿಯೂ ದುಬಾರಿ ಮನೆಬಾಡಿಗೆ, ವಸತಿ ಕೊರತೆ ಹಾಗೂ ಉದ್ಯೋಗ ಭದ್ರತೆಯ ಸಮಸ್ಯೆಗಳು ಜನರ ಅಸಮಾಧಾನಕ್ಕೆ ಕಾರಣವಾಗಿವೆ.

ಮ್ಯಾಡ್ರಿಡ್ ಸೇರಿದಂತೆ ಪ್ರಮುಖ ನಗರಗಳಲ್ಲಿ ವಸತಿ ಸಮಸ್ಯೆಯ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಶಿಕ್ಷಕರು ವೇತನ ಮತ್ತು ಕೆಲಸದ ಪರಿಸ್ಥಿತಿಗಳ ಕುರಿತು ಧ್ವನಿ ಎತ್ತಿದ್ದಾರೆ. ಯುವಜನತೆ ಶಿಕ್ಷಣ ಮುಗಿಸಿದ ನಂತರವೂ ಸ್ವತಂತ್ರವಾಗಿ ಜೀವನ ಆರಂಭಿಸಲು ಸಾಧ್ಯವಾಗದಿರುವ ಸಮಸ್ಯೆಯನ್ನು ಮುಂದಿಡುತ್ತಿದ್ದಾರೆ.

image 5 9

ಇದು ಸ್ಪೇನ್‌ಗೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ. ಯೂರೋಪಿನ ಅನೇಕ ನಗರಗಳಲ್ಲಿ ಮನೆಗಳು ಹೂಡಿಕೆ ಆಸ್ತಿಗಳಾಗಿ ಮಾರ್ಪಡುತ್ತಿರುವ ಹಿನ್ನೆಲೆಯಲ್ಲಿ ಕೈಗೆಟುಕುವ ವಸತಿ ವ್ಯವಸ್ಥೆ ನಿರ್ಮಿಸುವುದು ಸರ್ಕಾರಗಳ ಮುಂದೆ ದೊಡ್ಡ ಸವಾಲಾಗಿದೆ.

ಯೂರೋಪಿನ ಆರ್ಥಿಕ ಬಿಕ್ಕಟ್ಟಿಗೆ ಮೂಲ ಕಾರಣಗಳೇನು?

ಯೂರೋಪಿನ ವಿವಿಧ ದೇಶಗಳ ಪ್ರತಿಭಟನೆಗಳಿಗೆ ಸ್ಥಳೀಯ ಕಾರಣಗಳು ವಿಭಿನ್ನವಾಗಿದ್ದರೂ, ಅವುಗಳ ಹಿಂದೆ ಕೆಲವು ಸಾಮಾನ್ಯ ಆರ್ಥಿಕ ಸಮಸ್ಯೆಗಳಿವೆ.

1. ಹೆಚ್ಚುತ್ತಿರುವ ಹಣದುಬ್ಬರ: ಯೂರೋಪಿಯನ್ ಒಕ್ಕೂಟದ ಅಧಿಕೃತ ಅಂಕಿಅಂಶ ಸಂಸ್ಥೆಯಾದ ಯೂರೋಸ್ಟಾಟ್ ಪ್ರಕಾರ, 2026ರ ಸೆಪ್ಟೆಂಬರ್‌ನಲ್ಲಿ ಯೂರೋ ವಲಯದ ವಾರ್ಷಿಕ ಹಣದುಬ್ಬರ 3.8%ಕ್ಕೆ ಏರಿದೆ. ಆಗಸ್ಟ್‌ನಲ್ಲಿ ಇದು 3.2%ರಷ್ಟಿತ್ತು.

ಇಂಧನ ಬೆಲೆ ಏರಿಕೆ ಈ ಸಮಸ್ಯೆಯ ಪ್ರಮುಖ ಕಾರಣಗಳಲ್ಲೊಂದು. ಯೂರೋಸ್ಟಾಟ್‌ನ ಸೆಪ್ಟೆಂಬರ್ ಪ್ರಾಥಮಿಕ ಅಂದಾಜಿನ ಪ್ರಕಾರ, ಇಂಧನದ ವಾರ್ಷಿಕ ಬೆಲೆ ಏರಿಕೆ 18.8%ರಷ್ಟಿತ್ತು. ಇಂಧನ ದುಬಾರಿಯಾದಾಗ ಅದರ ಪರಿಣಾಮ ಕೇವಲ ವಾಹನ ಸವಾರರ ಮೇಲಷ್ಟೇ ಬೀರುವುದಿಲ್ಲ. ಸರಕು ಸಾಗಣೆ, ಆಹಾರ ಉತ್ಪಾದನೆ, ಕೈಗಾರಿಕೆ ಹಾಗೂ ಮನೆಗಳ ನಿರ್ವಹಣಾ ವೆಚ್ಚಗಳ ಮೇಲೂ ಪರಿಣಾಮ ಬೀರುತ್ತದೆ. ಇದು ಸಾಮಾನ್ಯ ಜನರನ್ನು ತೊಂದರೆಗೆ ಸಿಲುಕಿಸಿದೆ.

2. ಜಾಗತಿಕ ಯುದ್ಧಗಳು ಮತ್ತು ಇಂಧನ ಮಾರುಕಟ್ಟೆಯ ಅಸ್ಥಿರತೆ: ಯೂರೋಪಿನ ಆರ್ಥಿಕ ಸಂಕಷ್ಟಕ್ಕೆ ಅಂತರರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳೂ ಕಾರಣವಾಗಿವೆ. ರಷ್ಯಾ–ಉಕ್ರೇನ್ ಯುದ್ಧದ ನಂತರ ಯೂರೋಪಿನ ಇಂಧನ ಪೂರೈಕೆಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳಾಗಿದ್ದವು. ಇದರ ಬೆನ್ನಲ್ಲೇ, ಈಗ ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತು ಇಂಧನ ಸಾಗಣೆಯಲ್ಲಿನ ಅಡಚಣೆಗಳು ಯುರೋಪಿಯನ್ ರಾಷ್ಟ್ರಗಳ ಮೇಲೆ ಗಂಭೀರ ಪರಿಣಾಮ ಬೀರಿವೆ. ಬೆಲೆ ಏರಿಕೆಯ ಒತ್ತಡವನ್ನು ಹೆಚ್ಚಿಸಿವೆ.

3. ವೇತನ ಏರಿಕೆ ಮತ್ತು ಜೀವನವೆಚ್ಚದ ನಡುವಿನ ಅಂತರ: ಒಂದು ಕುಟುಂಬದ ಆದಾಯ ಏರಿದರೂ, ಅದರ ಅಗತ್ಯ ಖರ್ಚುಗಳು ಅದಕ್ಕಿಂತ ವೇಗವಾಗಿ ಹೆಚ್ಚಾದರೆ ನೈಜ ಖರೀದಿ ಸಾಮರ್ಥ್ಯ ಕುಸಿಯುತ್ತದೆ. ಉದಾಹರಣೆಗೆ, ತಿಂಗಳಿಗೆ 2,000 ಯೂರೋ ಸಂಪಾದಿಸುವ ಕುಟುಂಬದ ಆದಾಯ 3%ರಷ್ಟು ಏರಿದರೆ 60 ಯೂರೋ ಹೆಚ್ಚಾಗುತ್ತದೆ. ಆದರೆ ಮನೆಬಾಡಿಗೆ, ಇಂಧನ, ವಿದ್ಯುತ್ ಹಾಗೂ ಆಹಾರದ ಖರ್ಚು ಒಟ್ಟಾಗಿ 150 ಯೂರೋ ಹೆಚ್ಚಾದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಇದೇ ಆರ್ಥಿಕ ಒತ್ತಡವನ್ನು ಯೂರೋಪಿನ ವಿವಿಧ ದೇಶಗಳ ಜನರು ಎದುರಿಸುತ್ತಿದ್ದಾರೆ.

4. ಸಾಮಾಜಿಕ ಕಲ್ಯಾಣ ವ್ಯವಸ್ಥೆಯ ಮೇಲೆ ಒತ್ತಡ: ಯೂರೋಪಿನ ದೇಶಗಳ ಪ್ರಮುಖ ವೈಶಿಷ್ಟ್ಯವೆಂದರೆ ಶಿಕ್ಷಣ, ಆರೋಗ್ಯ, ಪಿಂಚಣಿ, ನಿರುದ್ಯೋಗ ಭತ್ಯೆ ಹಾಗೂ ಸಾಮಾಜಿಕ ಭದ್ರತಾ ವ್ಯವಸ್ಥೆಗಳಿಗೆ ನೀಡಲಾಗುವ ಸಾರ್ವಜನಿಕ ಬೆಂಬಲ. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ಕಾರಗಳ ಈ ಸಾರ್ವಜನಿಕ ವೆಚ್ಚವು ಗಣನೀಯವಾಗಿ ಕುಸಿಯುತ್ತಿದೆ. ಈ ಕಡಿತವನ್ನು ಸರ್ಕಾರಗಳು ಸಮರ್ಥಿಸಿಕೊಳ್ಳುತ್ತಿವೆ. “ಸಾರ್ವಜನಿಕ ಸಾಲವನ್ನು ನಿಯಂತ್ರಿಸದಿದ್ದರೆ ಭವಿಷ್ಯದ ಆರ್ಥಿಕ ಸ್ಥಿರತೆಗೆ ಅಪಾಯವಿದೆ” ಎಂದು ಹೇಳುತ್ತಿವೆ. ಆದರೆ, ಹಣಕಾಸಿನ ಶಿಸ್ತು ಜಾರಿಗೊಳಿಸುವ ಹೆಸರಿನಲ್ಲಿ ಸಾಮಾನ್ಯ ಜನರ ಮೇಲೆ ಹೆಚ್ಚಿನ ಹೊರೆ ಹಾಕುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ.

ಯೂರೋಪಿನ ಪ್ರಸ್ತುತ ಬೆಳವಣಿಗೆಗಳು ‘ದೇಶದ ಒಟ್ಟು ಸಂಪತ್ತು ಹೆಚ್ಚಾದರೆ ಮಾತ್ರ ಅಲ್ಲಿನ ಪ್ರತಿಯೊಬ್ಬ ನಾಗರಿಕನ ಜೀವನಮಟ್ಟವೂ ಉತ್ತಮವಾಗುತ್ತದೆಯೇ’ ಎಂಬ ಗಂಭೀರ ಪ್ರಶ್ನೆಯನ್ನು ಎತ್ತಿವೆ.

ಈ ಲೇಖನ ಓದಿದ್ದೀರಾ?: ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ ನಡುವೆ ಟ್ರಂಪ್‌ಗೆ ಅಗ್ನಿಪರೀಕ್ಷೆ!

ಸರ್ಕಾರಗಳ ಆರ್ಥಿಕ ಬೆಳವಣಿಗೆಯ ಅಂಕಿಅಂಶಗಳು, ಷೇರು ಮಾರುಕಟ್ಟೆಯ ಸಾಧನೆ ಮತ್ತು ತಲಾ ಆದಾಯದ ಲೆಕ್ಕಾಚಾರಗಳನ್ನು ಸೂಚಿಸುತ್ತವೆ. ಆದರೆ, ಇವು ಜನರ ನಿತ್ಯಜೀವನದ ಎಲ್ಲ ಸಮಸ್ಯೆಗಳನ್ನು ಪ್ರತಿಬಿಂಬಿಸುವುದಿಲ್ಲ.  ಸಾಮಾನ್ಯ ಕುಟುಂಬವೊಂದು ತನ್ನ ಆದಾಯದಿಂದ ಆಹಾರ, ವಸತಿ, ಶಿಕ್ಷಣ, ಆರೋಗ್ಯ ಹಾಗೂ ಸಾರಿಗೆಯ ಖರ್ಚು ಭರಿಸಲು ಸಾಧ್ಯವಾಗದಿದ್ದರೆ ಆ ದೇಶದ ಆರ್ಥಿಕ ಪ್ರಗತಿಯ ಲಾಭ ಜನಸಾಮಾನ್ಯರಿಗೆ ತಲುಪುತ್ತಿಲ್ಲ ಎಂಬುದು ಸ್ಪಷ್ಟ.

ಅಭಿವೃದ್ಧಿ ಹೊಂದಿದ ದೇಶಗಳೆಂದು ಹೆಸರಾಗಿರುವ ರಾಷ್ಟ್ರಗಳಲ್ಲೇ ದುಡಿಯುವ ಜನರಿಗೆ ಮನೆ, ಆಹಾರ, ಇಂಧನ ಹಾಗೂ ಅಗತ್ಯ ಸೇವೆಗಳನ್ನು ಪಡೆಯುವುದು ಕಷ್ಟವಾಗುತ್ತಿದ್ದರೆ, ಸರ್ಕಾರಗಳು ಯಾವ ರೀತಿಯ ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂಬುದನ್ನು ಪರಾಮರ್ಶಿಸುವ ಅಗತ್ಯವಿದೆ. ಜಾಗತಿಕ ಯುದ್ಧಗಳು, ಇಂಧನ ಬಿಕ್ಕಟ್ಟು ಮತ್ತು ಹಣದುಬ್ಬರದ ಹೊರೆ ಬಡವರು ಹಾಗೂ ಮಧ್ಯಮವರ್ಗದವರ ಮೇಲೆಯೇ ಹೆಚ್ಚಿನ ಪ್ರಮಾಣದಲ್ಲಿ ಬೀಳದಂತೆ ತಡೆಯುವುದು ಹೇಗೆ ಎಂದು ಅವಲೋಕಿಸಬೇಕಿದೆ.

ಜೊತೆಗೆ, ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವ, ವಸತಿ ವ್ಯವಸ್ಥೆಯನ್ನು ಸುಧಾರಿಸುವ, ಸಾರ್ವಜನಿಕ ಸೇವೆಗಳಿಗೆ ಅಗತ್ಯ ಸಂಪನ್ಮೂಲ ಒದಗಿಸುವ ಹಾಗೂ ಸರ್ಕಾರಗಳ ಸಾಲದ ಹೊರೆಯನ್ನು ನಿಯಂತ್ರಿಸುವ ಸಮತೋಲಿತ ನೀತಿಗಳನ್ನು ರೂಪಿಸುವುದು ಈಗ ಯೂರೋಪಿಯನ್ ರಾಷ್ಟ್ರಗಳಿಗೆ ಅತ್ಯಂತ ಅಗತ್ಯವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ ಹೊಸ ಸಂಚಲನ!

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು...

ಇಂಟರ್ನೆಟ್‌ನಿಂದ AIವರೆಗೆ.. ದಶಕಗಳ ಹಿಂದೆಯೇ ಜಗತ್ತಿನ ಭವಿಷ್ಯ ಕಂಡಿದ್ದ ಗೀತೆಗಳಿವು!

ತಂತ್ರಜ್ಞಾನ ನಮ್ಮ ಕೈಸೇರುವ, ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗುವ ದಶಕಗಳ ಹಿಂದೆಯೇ,...

ಸಿಎಂಆರ್‌ಎಲ್ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ವಿರುದ್ಧದ ತನಿಖೆಗೆ 7 ದಿನ ಸುಪ್ರೀಂ ತಡೆ

ಕೊಚ್ಚಿನ್ ಮಿನರಲ್ಸ್ ಅಂಡ್ ರುಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಮತ್ತು ಎಕ್ಸಾಲಾಜಿಕ್ ಕಂಪನಿ...

ದೆಹಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಹಿಂಪಡೆದ ಸಿಜೆಪಿ ನಾಯಕರು

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ...