SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

Date:

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ? ಇಲ್ಲಿದೆ ನೋಡಿ...

‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ಪತ್ರಿಕೆಯಲ್ಲಿ ಯೋಗೇಂದ್ರ ಯಾದವ್ ಮತ್ತು ನಾನು ಬರೆದಿದ್ದ ಲೇಖನವೊಂದರಲ್ಲಿ ಚುನಾವಣಾ ಆಯೋಗದ SIR (ಸ್ಪೆಷಲ್ ಇಂಟೆನ್ಸಿವ್ ರಿವಿಷನ್) ಪ್ರಕ್ರಿಯೆಯಿಂದ ಜನ ದೊಡ್ಡ ಪ್ರಮಾಣದಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂಬ ವಾದವನ್ನು ಸಮರ್ಥಿಸಿದ್ದೆವು. ಅಂತಿಮ ಎಸ್‌ಐಆರ್‌ ಪಟ್ಟಿಯಿಂದ ಕನಿಷ್ಠ 12 ಕೋಟಿ ಅರ್ಹ ಮತದಾರರು (ಭಾರತದ ಅಂದಾಜು ವಯಸ್ಕ ಜನಸಂಖ್ಯೆಯ ಸುಮಾರು ಶೇ. 12ರಷ್ಟು ಜನರು) ಮತದಾನದ ಪ್ರಕ್ರಿಯೆಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಆದರೆ ಇದು ಹೇಗೆ ಆಯಿತು ಅನ್ನುವುದರ ಬಗ್ಗೆ ಜನರಲ್ಲಿ ಇನ್ನೂ ಗೊಂದಲ ಹಾಗೆ ಉಳಿದುಕೊಂಡಿದೆ.

- Advertisement -

ಎಸ್‌ಐಆರ್‌ ಪ್ರಕ್ರಿಯೆಯನ್ನು ಟೀಕಿಸುವ ಕೆಲವರ ಪ್ರಕಾರ, ಎಸ್‌ಐಆರ್‌ ಆರಂಭವಾಗುವುದಕ್ಕಿಂತ ಹಿಂದಿನ ಮತದಾರರ ಪಟ್ಟಿಯಲ್ಲಿ ಎಲ್ಲಾ ಮತದಾರರ ಹೆಸರುಗಳು ಇತ್ತು. ಎಸ್‌ಐಆರ್‌ ನಂತರ ಸುಮಾರು 13 ಕೋಟಿ ಜನರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಟೀಕಿಸಲಾಗಿದೆ. ರಾಜ್ಯವಾರು ಅಂಕಿ ಅಂಶಗಳನ್ನು ನೋಡಿದರೆ ಸುಮಾರಾಗಿ ದೇಶದ ಅಂದಾಜು ವಯಸ್ಕರ ಸಂಖ್ಯೆಯಷ್ಟೇ ಹಳೆಯ ಪಟ್ಟಿಯಲ್ಲಿದ್ದ ಹೆಸರುಗಳ ಒಟ್ಟು ಸಂಖ್ಯೆಯೂ ಇತ್ತು. ಎರಡೂ ಸುಮಾರಾಗಿ ತಾಳೆಯಾಗುತ್ತಿತ್ತು. ಹಾಗಾಗಿ ಎಸ್‌ಐಆರ್‌ ಮೊದಲಿನ ಪಟ್ಟಿಯಲ್ಲಿ ಎಲ್ಲರ ಹೆಸರು ಸೇರಿತ್ತು ಅನ್ನುವ ವಾದಕ್ಕೆ ಪುಷ್ಟಿ ನೀಡುತ್ತಿತ್ತು. ಪ್ರಮುಖ ರಾಜ್ಯಗಳನ್ನು ಒಟ್ಟಾಗಿ ತೆಗೆದುಕೊಂಡರೆ, ಹಳೆಯ ಪಟ್ಟಿಯಲ್ಲಿದ್ದ ಮತದಾರರ ಸಂಖ್ಯೆಯು ಆಯಾ ರಾಜ್ಯಗಳ ವಯಸ್ಕ ಜನಸಂಖ್ಯೆಯ ಶೇ. 99ರಷ್ಟಿತ್ತು. ಹಾಗಾದರೆ ಈ ಹೆಸರುಗಳನ್ನು ತೆಗೆದು ಹಾಕುವ ಪ್ರಕ್ರಿಯೆ ಹೇಗೆ ನಡೆಯಿತು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

OBC ಮೀಸಲಾತಿಗೆ ಮತಾಂತರದ ಬೇಲಿ: ಸುಪ್ರೀಂ ಹೊಸ ಆದೇಶದಲ್ಲಿ...

ಧರ್ಮ ಬದಲಾದರೆ ಸಾಮಾಜಿಕ ಹಿಂದುಳಿದಿರುವಿಕೆಯೂ ಅಳಿಸಿಹೋಗುತ್ತದೆಯೇ? ಮಂಡಲ್ ಆಯೋಗದ 11 ಮಾನದಂಡಗಳಲ್ಲಿ ಧರ್ಮಕ್ಕೆ ಸ್ಥಾನವಿಲ್ಲದಿದ್ದರೂ, ಮತಾಂತರವನ್ನು ಮೀಸಲಾತಿಯ ಅರ್ಹತೆಗೆ ಜೋಡಿಸಿರುವುದೇಕೆ? ಇಂದಿರಾ ಸಾಹ್ನಿ ತೀರ್ಪಿಗೆ ವಿರೋಧಾಭಾಸವಾಗಿದೆ ಸುಪ್ರೀಂ ಕೋರ್ಟ್‌ನ ಹೊಸ ತೀಪು! 1992ರಲ್ಲಿ ಸುಪ್ರೀಂ...

ಕೈಲೊಂದು ಕ್ಯಾಮೆರಾ, ಜೀವಂತ ಬದುಕಿಗೆ ಮುಖಾಮುಖಿ

ಸಿನೆಮಾದ ಶಕ್ತಿ ಅದರ ಹಿಂದೆ ನಿಂತಿರುವ ತಂತ್ರಜ್ಞರ ಸಂಖ್ಯೆಯಲ್ಲಾಗಲಿ, ದುಬಾರಿ ಉಪಕರಣಗಳಲ್ಲಾಗಲಿ ಇಲ್ಲ. ಕನಿಷ್ಠ ಉಪಕರಣಗಳು ಮತ್ತು ಸಣ್ಣ ತಂಡದೊಂದಿಗೆ ಕೆಲಸ ಮಾಡುವುದು ಕೇವಲ ಆರ್ಥಿಕ ಅನಿವಾರ್ಯತೆಯಲ್ಲ; ಸಾಂಪ್ರದಾಯಿಕ ಸಿನೆಮಾ ವ್ಯವಸ್ಥೆಯ ಮಿತಿಗಳನ್ನು...

ಚುನಾವಣಾ ಆಯೋಗದ ಭಾಷೆಯಲ್ಲಿ ‘ASDD ಪಟ್ಟಿ’ಯಲ್ಲಿರುವ ಹೆಸರುಗಳ ಅಧಿಕೃತ ಸಂಖ್ಯೆಯೇ ಈ 13 ಕೋಟಿ. ಎಎಸ್‌ಡಿಡಿ ಅಂದರೆ: ಗೈರುಹಾಜರಾದವರು (Absentee), ಸ್ಥಳಾಂತರಗೊಂಡವರು (Shifted), ನಕಲಿ ಹೆಸರುಗಳು (Duplicate) ಅಥವಾ ಮೃತಪಟ್ಟವರು (Deceased). ಮುಖ್ಯವಾಗಿ ಸ್ಥಳೀಯ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಸೇರಿಸಿಕೊಂಡು ಮಟ್ಟದ ಅಧಿಕಾರಿಗಳು (BLO) ಈ ಪಟ್ಟಿಗಳನ್ನು ತಯಾರಿಸುತ್ತಾರೆ. ಹಳೆಯ ಮತದಾರರ ಪಟ್ಟಿಯಿಂದ ಈ ASDD ಪಟ್ಟಿಯಲ್ಲಿರುವ ಹೆಸರುಗಳನ್ನು ತೆಗೆದುಹಾಕಿ SIR ಕರಡು ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಸರಳವಾಗಿ ಹೇಳುವುದಾದರೆ, SIRನ ಈ ಮೊದಲ ಹಂತವೇ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಪ್ರಕ್ರಿಯೆ ನಡೆಯುವ ಹಂತ.

ಎರಡನೇ ಹಂತದಲ್ಲಿ (ಕರಡು ಪಟ್ಟಿಯನ್ನು ಪರಿಷ್ಕರಿಸುವಾಗ), ಫಾರ್ಮ್ 6 ಮೂಲಕ ಕೆಲವು ಹೊಸ ಹೆಸರುಗಳನ್ನು ಸೇರಿಸಲಾಗುತ್ತದೆ; ಅದೇ ಸಮಯದಲ್ಲಿ ಫಾರ್ಮ್ 7ರ ಮೂಲಕ, ‘ತಾರ್ಕಿಕ ವ್ಯತ್ಯಾಸಗಳ’ (logical discrepancies) ತಪಾಸಣೆ ನಡೆಸಿ ಮತ್ತಷ್ಟು ಹೆಸರುಗಳನ್ನು ತೆಗೆದುಹಾಕಲಾಗುತ್ತದೆ.

ಇದನ್ನು ಓದಿದ್ದೀರಾ?: ಯುಪಿ | ಮತದಾರರ ಪಟ್ಟಿಯಲ್ಲಿ ಭಾರೀ ಅಕ್ರಮ ಆರೋಪ; 16 ಸಾವಿರಕ್ಕೂ ಹೆಚ್ಚು ಹೆಸರುಗಳ ಪರಿಶೀಲನೆಗೆ EC ಆದೇಶ

ಮಾಧ್ಯಮಗಳು ಈ ’13 ಕೋಟಿ’ ಎಂಬ ಅಂಕಿ-ಅಂಶಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಕೆಲವೊಂದು ಗೊಂದಲಗಳಿಗೆ ಕಾರಣವಾಗಿದೆ. ಮತದಾರರು ಪಟ್ಟಿಯಿಂದ ಹೊರಬೀಳಲು ASDD ಪಟ್ಟಿಯೇ ಅಸಲಿ ಕಾರಣವೇನೋ ಎಂಬ ಭಾವನೆ ಇದರಿಂದ ಮೂಡುತ್ತಿದೆ. ವಾಸ್ತವದಲ್ಲಿ, ಹಲವು ರಾಜ್ಯಗಳ ವಾಸ್ತವ ವರದಿಗಳು (ರಾಜಸ್ಥಾನದಲ್ಲಿ ನಡೆಸಲಾದ ಸಮಗ್ರ ಸಮೀಕ್ಷೆ ಸೇರಿದಂತೆ) ತೋರಿಸುವಂತೆ, ASDD ಮೂಲಕ ತೆಗೆದುಹಾಕಲಾದ ಬಹುಪಾಲು ಹೆಸರುಗಳು ನ್ಯಾಯಸಮ್ಮತವಾದವೇ ಆಗಿವೆ. ನಿಸ್ಸಂದೇಹವಾಗಿ, ಅನೇಕ ಅರ್ಹ ಮತದಾರರ ಹೆಸರುಗಳು ತಪ್ಪಾಗಿ ಅಥವಾ ದುರುದ್ದೇಶದಿಂದ ASDD ಪಟ್ಟಿಗೆ ಸೇರಿವೆ; ಆದರೆ ಹಾಗೆ ಸೇರ್ಪಡೆಯಾಗಿರುವ ಸಂಖ್ಯೆ ಖಂಡಿತ 13 ಕೋಟಿಯಷ್ಟಿಲ್ಲ.

ಹಾಗಿದ್ದಲ್ಲಿ, SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಇಡೀ ಭಾರತವನ್ನು ಗಣನೆಗೆ ತೆಗೆದುಕೊಂಡರೆ, ಒಟ್ಟಾರೆ ವಯಸ್ಕರ ಸಂಖ್ಯೆಯನ್ನು ಗಮನಿಸಿದರೆ ಅದಕ್ಕಿಂತ ಶೇಕಡಾ 15ಕ್ಕೂ ಹೆಚ್ಚಿನ ಜನ ಕರಡು ಪ್ರತಿಯಲ್ಲಿಲ್ಲ. ಅಂತಿಮ ಪಟ್ಟಿ ಸಿದ್ಧವಾಗುವ ಹೊತ್ತಿಗೆ ಇನ್ನೊಂದಿಷ್ಟು ಹೆಸರು ಸೇರಿಕೊಂಡು ಈ ಅಂತರ ಸ್ವಲ್ಪ ಕಡಿಮೆಯಾಗತ್ತದೆ. ಆದರೆ ಅಂತಹ ದೊಡ್ಡ ಬದಲಾವಣೆಯೇನೂ ಆಗುವುದಿಲ್ಲ. ಹಾಗಾದರೆ ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?

ಇದಕ್ಕೊಂದು ಸಮಂಜಸವಾದ ವಿವರಣೆ ಇಲ್ಲಿದೆ: ವಾಸ್ತವದಲ್ಲಿ, SIRಗಿಂತ ಹಿಂದಿನ ಪಟ್ಟಿಗಳಲ್ಲೂ ಎಲ್ಲರ ಹೆಸರೂ ಸೇರಿರಲಿಲ್ಲ. ಲಭ್ಯವಿರುವ ಪರಿಪೂರ್ಣವಲ್ಲದ ಸಾಕ್ಷ್ಯಾಧಾರಗಳನ್ನು ಗಮನಿಸಿದರೆ, ದೇಶದ ವಯಸ್ಕ ಜನಸಂಖ್ಯೆಯ ಒಂದು ಗಮನಾರ್ಹ ಭಾಗ- ಬಹುಶಃ ಶೇ. 10ರಷ್ಟು ಜನರು- ಮೊದಲೇ ಪಟ್ಟಿಯಿಂದ ಹೊರಗುಳಿದಿದ್ದರು. ಆದರೆ, ಆ ಪಟ್ಟಿಯಲ್ಲಿದ್ದ ನಕಲಿ ಹೆಸರುಗಳು, ಮೃತಪಟ್ಟವರ ಹೆಸರುಗಳು ಮತ್ತು ಊರು ಬಿಟ್ಟು ವಲಸೆ ಹೋದವರಂತಹ ‘ಹೆಚ್ಚುವರಿ’ ಹೆಸರುಗಳು ಸೇರಿಕೊಂಡು ಒಟ್ಟು ಮತದಾರರ ಸಂಖ್ಯೆ ದೇಶದ ವಯಸ್ಕರ ಸಂಖ್ಯೆಗೆ ಸುಮಾರಾಗಿ ತಾಳೆಯಾಗುತ್ತಿತ್ತು. ಅಂತಹ ಅಂತರ ಕಾಣುತ್ತಿರಲಿಲ್ಲ. ಪರಿಣಾಮವಾಗಿ, ಹಳೆಯ ಪಟ್ಟಿಯಲ್ಲಿದ್ದ ಒಟ್ಟು ಮತದಾರರ ಸಂಖ್ಯೆಯು ವಯಸ್ಕ ಜನಸಂಖ್ಯೆಯ ಎಣಿಕೆಗೆ ಸುಮಾರಾಗಿ ತಾಳೆಯಾಗುತ್ತಿತ್ತು. ಆದರೆ ಈ ಹೊಂದಾಣಿಕೆ ಕೇವಲ ಭ್ರಮೆಯಾಗಿತ್ತು. ಅದು ಲಕ್ಷಾಂತರ ಜನ ಪಟ್ಟಿಯಿಂದ ಹೊರಗುಳಿದಿದ್ದ ಗಂಭೀರ ಸಮಸ್ಯೆಯನ್ನು ಮರೆಮಾಚಿತ್ತು.

ನಂತರ ASDD ಪ್ರಕ್ರಿಯೆ ನಡೆಯಿತು. ಬಹುತೇಕ ಹೆಚ್ಚುವರಿ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಯಿತು. ಹೆಚ್ಚುವರಿ ಹೆಸರುಗಳ ಜೊತೆಗೆ, ಲೆಕ್ಕಕ್ಕೆ ಸಿಗದಷ್ಟು ದೊಡ್ಡ ಸಂಖ್ಯೆಯ ನಿಜವಾದ ಮತದಾರರ ಹೆಸರುಗಳನ್ನೂ ಪಟ್ಟಿಯಿಂದ ತೆಗೆದುಹಾಕಲಾಯಿತು. ಆ ಕಾರಣಕ್ಕಾಗಿಯೇ SIR ಕರಡು ಪಟ್ಟಿಯ ಗಾತ್ರವು ಜನಸಂಖ್ಯಾ ಅಂದಾಜಿಗಿಂತ ತುಂಬಾ ಕಡಿಮೆಯಾಗಿದೆ. ನೆನಪಿಡಿ, ಕರಡು ಪಟ್ಟಿಗಳ ತಯಾರಿ ನಡೆದಿರುವದೇ ಜನರನ್ನು ಹೊರಗಿಡುವ ಪ್ರಕ್ರಿಯೆಯ ಆಧರಿಸಿ.

ಮೊದಲ ಹಂತದಲ್ಲಿಯೇ ಪಟ್ಟಿಯಿಂದ ಬಿಟ್ಟುಹೋಗಿದ್ದ ಅರ್ಹ ಮತದಾರರನ್ನು (ವಿಶೇಷವಾಗಿ ಯುವ ವಯಸ್ಕರನ್ನು), ಎರಡನೇ ಹಂತದಲ್ಲಿ ಹೆಚ್ಚು ಪ್ರಮಾಣದಲ್ಲಿ ಫಾರ್ಮ್ 6 ಅನ್ನು ಬಳಸುವ ಮೂಲಕ ಸರಿಪಡಿಸಬಹುದಾಗಿತ್ತು. ಆದರೆ ಅದಕ್ಕೆ ಬದಲಾಗಿ, ಚುನಾವಣಾ ಆಯೋಗವು ಜನರನ್ನು ಹೊರಗಿಡುವುದರ ಕಡೆಯೇ ಸಂಪೂರ್ಣ ಗಮನ ನೀಡಿತು. ಕರಡು ಪಟ್ಟಿಯಲ್ಲಿದ್ದ ಎರಡು ವರ್ಗಗಳ ಜನರಿಂದ ಪೌರತ್ವ ಸಂಬಂಧಿತ ದಾಖಲೆಗಳನ್ನು ಕೇಳಲಾಯಿತು:

* ಮ್ಯಾಪ್ ಆಗದವರು (unmapped)

* 2002-03ರ ಮತದಾರರ ಪಟ್ಟಿಯೊಂದಿಗೆ ಮ್ಯಾಪ್ ಮಾಡುವಾಗ ‘ತಾರ್ಕಿಕ ವ್ಯತ್ಯಾಸಗಳು’ ಕಂಡುಬಂದವರು.

ಚುನಾವಣಾ ಆಯೋಗದ ಈ ಗೋಜಲು-ಗೊಂದಲದ ಕೆಲಸದಲ್ಲೇ BLOಗಳು ಹೈರಾಣಾಗಿಬಿಟ್ಟರು. ಹೀಗಾಗಿ ಅವರಿಗೆ ಮನೆ ಮನೆಗೆ ತೆರಳಿ, ಪಟ್ಟಿಯಿಂದ ಬಿಟ್ಟುಹೋದ ಅರ್ಹ ಮತದಾರರನ್ನು ಹುಡುಕಿ ಸೇರಿಸುವ ವ್ಯವಧಾನವಾಗಲಿ, ಸಮಯವಾಗಲಿ ಉಳಿಯಲಿಲ್ಲ. ಇತ್ತ ಸಾರ್ವಜನಿಕರೂ ಅಷ್ಟೇ- ಫಾರ್ಮ್ 6 ಮೂಲಕ ತಮ್ಮ ಹೆಸರನ್ನು ಹೊಸದಾಗಿ ಸೇರಿಸಿಕೊಳ್ಳಬೇಕೆಂದರೆ, ಹೊಂದಿಸಲು ಕಷ್ಟವಾಗುವಂತಹ ಹಲವು ದಾಖಲೆಗಳನ್ನು ಹೊಂದಿಸಬೇಕಾಯಿತು.

ಇಲ್ಲಿ ವಲಸೆ ಕಾರ್ಮಿಕರು ಸಾಮೂಹಿಕವಾಗಿ ಹೊರಗುಳಿದಿರುವ ಸಾಧ್ಯತೆಯನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕು. ASDD ಪಟ್ಟಿಯಲ್ಲಿ ಅತಿ ದೊಡ್ಡ ಗುಂಪು ಎಂದರೆ ‘ಸ್ಥಳಾಂತರಗೊಂಡವರದ್ದು’ (Shifted). ಒಬ್ಬ ವಲಸೆ ಕಾರ್ಮಿಕನನ್ನು ಆತನ ಹುಟ್ಟೂರಿನಲ್ಲಿ ‘ಸ್ಥಳಾಂತರಗೊಂಡಿದ್ದಾನೆ’ ಎಂದು ಗುರುತಿಸಿದಾಗ, ಆತ ಕೆಲಸಕ್ಕೆ ತೆರಳಿದ ಹೊಸ ಸ್ಥಳದಲ್ಲಿ ಮತದಾರನಾಗಿ ನೋಂದಾಯಿಸಲ್ಪಟ್ಟಿದ್ದಾನೆ ಅಥವಾ ಮುಂದೆ ನೋಂದಾಯಿಸಲ್ಪಡುತ್ತಾನೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ವಲಸೆ ಕಾರ್ಮಿಕನ ಬಳಿ ಸ್ಥಳೀಯ ವಿಳಾಸದ ಪುರಾವೆಯಂತಹ ದಾಖಲೆಗಳು ಇರುವುದಕ್ಕೆ ಸಾಧ್ಯವೇ ಇಲ್ಲ. ಅಂತಹ ದಾಖಲೆಗಳನ್ನು ಒದಗಿಸುವುದು ಅನಿವಾರ್ಯವಾದಾಗ, ಆತ ಹೊಸ ಊರಿನಲ್ಲಿ ಮತದಾರನಾಗಿ ನೋಂದಣಿಯಾಗಲು ಹೇಗೆ ಸಾಧ್ಯ?

ಸಂಕ್ಷಿಪ್ತವಾಗಿ ಹೇಳುವುದಾದರೆ, ಅರ್ಹ ಮತದಾರರು ಬೇರೆ ಬೇರೆ ಕಾರಣಗಳಿಗಾಗಿ ಅಂತಿಮ SIR ಪಟ್ಟಿಯಿಂದ ಹೊರಗುಳಿದಿದ್ದಾರೆ:

* ಕೆಲವರು ಮೊದಲಿನಿಂದಲೂ ಯಾವುದೇ ಪಟ್ಟಿಯಲ್ಲೀ ಇರಲೇ ಇಲ್ಲ.
* ಕೆಲವರನ್ನು ASDD ಹಂತದಲ್ಲಿ ತಪ್ಪಾಗಿ ಅಥವಾ ದುರುದ್ದೇಶದಿಂದ ತೆಗೆದುಹಾಕಲಾಗಿದೆ.
* ಕೆಲವರು ಫಾರ್ಮ್ 7ರ ದುರ್ಬಳಕೆಗೆ ಗುರಿಯಾದರು.
* ಕೆಲವರು ಬಗೆಹರಿಯದ ‘ತಾರ್ಕಿಕ ವ್ಯತ್ಯಾಸಗಳು’ ಅಥವಾ ಮ್ಯಾಪಿಂಗ್ ಸಮಸ್ಯೆಗಳ ಬಲಿಯಾದರು.
* ಇನ್ನು ಕೆಲವರು ಹೊಸ ಜಾಗದಲ್ಲಿ ನೋಂದಣಿಯಾಗದೆಯೇ ಹಳೆಯ ಊರಿನಲ್ಲಿ ‘ಸ್ಥಳಾಂತರಗೊಂಡವರು’ ಎಂದು ಗುರುತಿಸಲ್ಪಟ್ಟು ಪಟ್ಟಿಯಿಂದ ಕಳಚಿಕೊಂಡರು.

ಹೀಗೆ ಒಂದಲ್ಲ ಒಂದು ರೀತಿಯಲ್ಲಿ, ಬೃಹತ್ ಸಂಖ್ಯೆಯ ಜನರು ಮತದಾರರ ಪಟ್ಟಿಯಿಂದ ಹೊರಗುಳಿದರು.

ಈ ಪರಿಸ್ಥಿತಿಯನ್ನು ಹೀಗೂ ನೋಡಬಹುದು: 2025ರ ಜೂನ್‌ನಲ್ಲಿ SIR ಪ್ರಕ್ರಿಯೆ ಆರಂಭವಾದಾಗ, ಪಟ್ಟಿಯಲ್ಲಿದ್ದ ಹೆಚ್ಚುವರಿ ಹೆಸರುಗಳನ್ನು ತೆಗೆದುಹಾಕುವುದಕ್ಕಿಂತ ಹೆಚ್ಚಾಗಿ, ಹಳೆಯ ಪಟ್ಟಿಯಿಂದ ಹೊರಗುಳಿದಿದ್ದ ನೈಜ ಜನರನ್ನು ಒಳಸೇರಿಸಿಕೊಳ್ಳುವುದು ಚುನಾವಣಾ ಆಯೋಗದ ಅತ್ಯಂತ ಪ್ರಮುಖ ಕರ್ತವ್ಯವಾಗಿರಬೇಕಿತ್ತು. ಆದರೆ ಅದಕ್ಕೆ ಬದಲಾಗಿ, ಆಯೋಗವು ಮೊದಲ ಹಂತದಲ್ಲಿ ಹೆಸರುಗಳನ್ನು ತೆಗೆದುಹಾಕುವುದಕ್ಕಷ್ಟೇ ವಿಶೇಷ ಗಮನ ಕೊಟ್ಟಿತು. ಆಯೋಗವು ಪೌರತ್ವ ಸಾಬೀತುಪಡಿಸುವಂತೆ ಜನರಿಗೆ ಕಿರುಕುಳ ಕೊಡುವ, ಸಂಪೂರ್ಣ ಅನಗತ್ಯವಾದ ಕೆಲಸಕ್ಕೆ ಮುಂದಾಯಿತು. ಪರಿಣಾಮವಾಗಿ, ಮತದಾನದ ಹಕ್ಕಿನಿಂದ ವಂಚಿತರಾದವರ ಸಂಖ್ಯೆ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಿತು ಮತ್ತು ಜನಸಾಮಾನ್ಯರು ಹತ್ತು ಹಲವು ತೊಂದರೆಗೆ ಗುರಿಯಾದರು.

ಕಳೆದ 10 ವರ್ಷಗಳಲ್ಲಿ ಸಾಮಾನ್ಯ ಜನರು ಇಂತಹ ಆಘಾತಕಾರಿ ಕ್ರಮಗಳಿಗೆ (shock treatment) ಗುರಿಯಾಗುತ್ತಿರುವುದು ಇದೇ ಮೊದಲಲ್ಲ.

• 2016ರಲ್ಲಿ ಅಪನಗದೀಕರಣ (Demonetisation) ನಡೆದಾಗ,
• 2020-21ರಲ್ಲಿ ಕೋವಿಡ್ ಲಾಕ್‌ಡೌನ್‌ಗಳ ಸಂದರ್ಭದಲ್ಲಿ,
• 2024ರಲ್ಲಿ e-KYC ಬಿಕ್ಕಟ್ಟು ಎದುರಾದಾಗಲೂ ಇದೇ ರೀತಿ ಸಂಭವಿಸಿತ್ತು.

ಪ್ರತಿ ಬಾರಿಯೂ ಸಾರ್ವಜನಿಕರೇ ಭಾರಿ ಬೆಲೆ ತೆರಬೇಕಾಗುತ್ತಿದೆ. ಆದರೆ ಈ ಬಾರಿ, ಆ ಹಾನಿಯು ನಮ್ಮ ಚುನಾವಣಾ ಪ್ರಜಾಪ್ರಭುತ್ವದ ಅಡಿಪಾಯವಾದ “ಮತದಾನದ ಹಕ್ಕಿಗೇ” ತಟ್ಟಿದೆ.

ಕೃಪೆ: ದಿ ಎಕನಾಮಿಕ್ ಟೈಮ್ಸ್, ಮೂಲ: ಜಾನ್‌ ಡ್ರೀಜ್‌ (ರಾಂಚಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಗೌರವ ಪ್ರಾಧ್ಯಾಪಕರು), ಕನ್ನಡಕ್ಕೆ: ಟಿ.ಎಸ್. ವೇಣುಗೋಪಾಲ್

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ಯಾರಾ ಏಷ್ಯನ್ ಗೇಮ್ಸ್ 2026: ಒಂದೇ ದಿನ ಎರಡು ಚಿನ್ನದ ಪದಕ ಗೆದ್ದು ಬೀಗಿದ ಶೀತಲ್ ದೇವಿ

ಏಷ್ಯನ್ ಪ್ಯಾರಾ ಗೇಮ್ಸ್ 2026 ರಲ್ಲಿ ಭಾರತದ ಹೆಮ್ಮೆಯ ಪ್ಯಾರಾ ಆರ್ಚರಿ...

‘ಟಿಪ್ಪು ನಿಜ ಕನಸು’ಗಳಿಂದ ‘ಗಾಂಧೀ ಹತ್ಯೆಯ ಸತ್ಯ’ದವರೆಗೆ: ಇತಿಹಾಸ ತಿರುಚುವಿಕೆಯ ಸುತ್ತ ಮತ್ತೆ ವಿವಾದ

ನಾಟಕಕಾರ, ಬರಹಗಾರ ಅಡ್ಡಂಡ ಕಾರ್ಯಪ್ಪ ಹಿಂದಿನಿಂದಲೂ ಒಂದಲ್ಲೊಂದು ಕಾರಣಕ್ಕೆ ಸಾರ್ವಜನಿಕ ಚರ್ಚೆಯ...

ಮೈಸೂರು ದಸರಾ: ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕನಿಗೆ ಗಂಭೀರ ಗಾಯ, ಐಸಿಯುನಲ್ಲಿ ಚಿಕಿತ್ಸೆ

ಮೈಸೂರಿನ ದಸರಾ ಜಂಬೂಸವಾರಿ ಮೆರವಣಿಗೆಯ ವೇಳೆ ಪೊಲೀಸರು ನಡೆಸಿದ ಲಘು ಲಾಠಿ...

ಪಕ್ಷಾಂತರ ಪರ್ವ: ಮೋದಿ ಸರ್ಕಾರದ ಅಧಿಕಾರದ ಆಸೆಗೆ ಪ್ರಜಾಸತ್ತಾತ್ಮಕ ಮೌಲ್ಯಗಳ ಬಲಿ

ಭಾರತದಲ್ಲಿ 2022 ಮತ್ತು 2026ರ ನಡುವಿನ ಅವಧಿಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಬಹುದೊಡ್ಡ...