ಕಳೆದ ಜನವರಿಯಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ನಡೆದ ಮೌನಿ ಅಮಾವಾಸ್ಯ ಮಹಾಕುಂಭ ಮೇಳ ಕಾಲ್ತುಳಿತದಲ್ಲಿ ಗತಿಸಿದವರ ಸಂಖ್ಯೆ ಕನಿಷ್ಠ 82 ಎಂದು ಬಿಬಿಸಿ ತನಿಖಾ ವರದಿ ಹೇಳಿದೆ. ಈ ಸಂಖ್ಯೆ 37 ಎಂದಿತ್ತು ಯೋಗಿ ಸರ್ಕಾರ.
ತಮ್ಮ ಸದಸ್ಯರೊಬ್ಬರನ್ನು ಕಾಲ್ತುಳಿತದಲ್ಲಿ ಕಳೆದುಕೊಂಡ ಕನಿಷ್ಠ ಇನ್ನೂ 50 ಕುಟುಂಬಗಳಿವೆ. ಈ ಸಾವುಗಳನ್ನು ಉತ್ತರ ಪ್ರದೇಶ ಸರ್ಕಾರ ಮಾನ್ಯ ಮಾಡಬೇಕೆಂಬ ನಿರೀಕ್ಷೆಯನ್ನು ಹೊಂದಿವೆ.
ಕಾಲ್ತುಳಿತದಲ್ಲಿ ಭಕ್ತಾದಿಗಳ ಸಾವಿನ ಸಂಖ್ಯೆ ಕುರಿತ ಮಾಹಿತಿಯನ್ನು ಉತ್ತರ ಪ್ರದೇಶ ಸರ್ಕಾರ ಮೊದಲ ದಿನ ಮುಚ್ಚಿಟ್ಟಿತ್ತು. ಮರು ದಿನ ಈ ಸಂಖ್ಯೆ 37 ಸಾವುಗಳು ಸಂಭವಿಸಿವೆ ಎಂದು ಹೇಳಿತ್ತು. ಈ ಸಂಖ್ಯೆಯನ್ನು ಮತ್ತೆ ಪರಿಷ್ಕರಿಸಲೇ ಇಲ್ಲ. ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿಯ ಪರಿಹಾರವನ್ನು ಪ್ರಕಟಿಸಿತ್ತು. 36 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಇತ್ತೀಚಿನ ಮಹಾಕುಂಭಮೇಳದಲ್ಲಿ ಗತಿಸಿದವರ ಒಟ್ಟು ಸಂಖ್ಯೆಯನ್ನು ಬಹಿರಂಗಪಡಿಸುವಂತೆ ಅಲಹಾಬಾದ್ ಹೈಕೋರ್ಟು ಇತ್ತೀಚೆಗೆ ಸರ್ಕಾರಕ್ಕೆ ಸೂಚಿಸಿತ್ತು.
ಐದು ಲಕ್ಷ ರೂಪಾಯಿ ನಗದು ಪರಿಹಾರ ಪಡೆದಿರುವ 26 ಕುಟುಂಬಗಳನ್ನು ಭೇಟಿಯಾಗಿರುವುದಾಗಿ ಬಿಬಿಸಿ ತನಿಖಾ ವರದಿ ಹೇಳಿದೆ. ಈ 26 ಮಂದಿಯ ಸಾವುಗಳನ್ನು ಕುಂಭಮೇಳದ ಕಾಲ್ತುಳಿತದಲ್ಲಿ ಘಟಿಸಿದ ಸಾವುಗಳೆಂದು ಉತ್ತರ ಪ್ರದೇಶ ಸರ್ಕಾರ ಮಾನ್ಯ ಮಾಡಿಲ್ಲ. ಈ 26 ಸಾವುಗಳನ್ನು ಹಠಾತ್ತನೆ ಆರೋಗ್ಯ ಹದಗೆಟ್ಟು ಮೃತಪಟ್ಟವರೆಂದು ಮಾನ್ಯ ಮಾಡಿದೆ. ಕರ್ನಾಟಕವೂ ಸೇರಿದಂತೆ 11 ರಾಜ್ಯಗಳ 50 ಜಿಲ್ಲೆಗಳ 100 ಕುಟುಂಬಗಳನ್ನು ಭೇಟಿಯಾಗಿ ಸಿದ್ಧಪಡಿಸಿರುವ ಈ ತನಿಖಾ ವರದಿಯು ಕನಿಷ್ಠ ಪಕ್ಷ 82 ಮಂದಿ ಮೃತಪಟ್ಟಿರುವುದು ಖಚಿತಪಟ್ಟಿರುವುದಾಗಿ ತಿಳಿಸಿದೆ.
45 ದಿನಗಳ ಕಾಲ ನಡೆದ ಮಹಾಕುಂಭ ಮೇಳ ಭಾರೀ ಯಶಸ್ವಿಯಾಗಿದ್ದು, 66 ಕೋಟಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಮೇಳದಲ್ಲಿ ಒಟ್ಟು 7,000 ಕೋಟಿ ರೂಪಾಯಿಯಷ್ಟು ಸಾರ್ವಜನಿಕರ ಹಣ ವ್ಯಯವಾಗಿದೆ ಎಂದು ಕೇಂದ್ರ ಸರ್ಕಾರ ಮತ್ತು ಉತ್ತರಪ್ರದೇಶ ಸರ್ಕಾರ ಹೇಳಿಕೆ ನೀಡಿದ್ದವು.
ಮೇಳದ ನೂಕುನುಗ್ಗಲು ಕಾಲ್ತುಳಿತದಲ್ಲಿ 30 ಮಂದಿ ಮೃತಪಟ್ಟಿದ್ದು, 29 ದೇಹಗಳನ್ನು ಗುರುತಿಸಲಾಗಿದೆ ಎಂದು ಕಳೆದ ಫೆಬ್ರವರಿ 19ರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ಹೇಳಿಕೆ ನೀಡಿದ್ದರು. ಜನಸಂದಣಿಯ ಕೆಲವು ‘ಒತ್ತಡ ಬಿಂದು’ಗಳಲ್ಲಿ ಸ್ವಲ್ಪಮಟ್ಟಿಗಿನ ತ್ರಾಸು ಕಂಡುಬಂದಿತು ಎಂದಿದ್ದರು. ಸಾವುಗಳು ಜರುಗಿದ್ದು ಇಂತಹ ನಾಲ್ಕು ‘ಒತ್ತಡಬಿಂದು’ಗಳಲ್ಲಿ ಎಂದು ತನಿಖಾ ವರದಿ ತಿಳಿಸಿದೆ.
ಈ ಲೇಖನ ಓದಿದ್ದೀರಾ?: ಬೆಂಗಳೂರು ದುರಂತ | ಭೀಕರ ಘಟನೆಗೆ ಏನೆಲ್ಲ ಕಾರಣಗಳು– ಸಂಪೂರ್ಣ ವರದಿ
ತನಿಖಾ ವರದಿಯು ಕುಂಭಮೇಳದ ಮೃತರನ್ನು ಮೂರು ಭಾಗಗಳಾಗಿ ವರ್ಗೀಕರಿಸಿದೆ. ತಲಾ 25 ಲಕ್ಷ ರುಪಾಯಿಗಳ ಪರಿಹಾರ ಪಡೆದ 35 ಮೃತರ ಕುಟುಂಬಗಳವರು. ಈ ಸಾವುಗಳು ಕುಂಭಮೇಳದ ನೂಕುನುಗ್ಗಲಿನಲ್ಲಿ ಜರುಗಿವೆ ಎಂದು ಉತ್ತರ ಪ್ರದೇಶ ಸರ್ಕಾರ ಅಧಿಕೃತವಾಗಿ ಗುರುತಿಸಿದ ವರ್ಗವಿದು. ತಲಾ ಐದು ಲಕ್ಷ ರುಪಾಯಿ ನಗದು ಪರಿಹಾರ ಪಡೆದ ವರ್ಗ. ಈ ವರ್ಗದ ಸಾವುಗಳನ್ನು ಉತ್ತರ ಪ್ರದೇಶ ಸರ್ಕಾರ ಮಾನ್ಯ ಮಾಡಿಲ್ಲ. ಯಾವುದೇ ಪರಿಹಾರ ದೊರೆಯದಿರುವುದು ಮೂರನೆಯ ವರ್ಗ.
ಕುಂಭ ಕಾಲ್ತುಳಿತದಲ್ಲಿ ಮೃತಪಟ್ಟವರ ಕನಿಷ್ಠ 19 ಕುಟುಂಬಗಳಿಗೆ ಯಾವುದೇ ಪರಿಹಾರ ಸಿಕ್ಕಿಲ್ಲವೆಂದು ತನಿಖೆಯು ತಿಳಿಸಿದೆ.
ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಇನ್ನೂ ದೊಡ್ಡದು. ಆದರೆ, ಈ ಸಂಖ್ಯೆಯನ್ನು ತಾನು 82ಕ್ಕೆ ನಿಲ್ಲಿಸುತ್ತಿರುವುದಾಗಿ ಬಿಬಿಸಿ ತಿಳಿಸಿದೆ. 82 ಮಂದಿ ಮೃತಪಟ್ಟಿರುವ ಕುರಿತು ತನ್ನ ಬಳಿ ಪ್ರತ್ಯಕ್ಷ ಸಾಕ್ಷಿಗಳು ಮತ್ತು ಅಲ್ಲಗಳೆಯಲಾಗದಷ್ಟು ಗಟ್ಟಿ ಪುರಾವೆಗಳು ಇರುವುದಾಗಿ ಹೇಳಿದೆ.
ಮೃತರ ಕುಟುಂಬಗಳ ಜೊತೆಗಿನ ಸಂಭಾಷಣೆ, ಛಾಯಾಚಿತ್ರಗಳು ಹಾಗೂ ಪ್ರತ್ಯಕ್ಷ ಸಾಕ್ಷಿಗಳನ್ನು ತನಿಖೆಯು ದಾಖಲಿಸಿಕೊಂಡಿದೆ.