ಸುಪ್ರೀಂ ಕೋರ್ಟ್ ಪತಂಜಲಿ ಆಯುರ್ವೇದ ಸಹ ಸಂಸ್ಥಾಪಕ ರಾಮ್‌ದೇವ್ ಮತ್ತು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಾಲಕೃಷ್ಣ ಅವರ ದಾರಿತಪ್ಪಿಸುವ ಜಾಹೀರಾತುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪತಂಜಲಿ ಸಂಸ್ಥೆ ಪ್ರಚಾರ ಮಾಡಿದ ಜಾಹೀರಾತುಗಳು ಕೂಡ ಈ ನೆಲದ ಕಾನೂನಿಗಿಂತ ಅತೀತವಲ್ಲ. ನ್ಯಾಯಾಲಯದ ಆದೇಶ ಉಲ್ಲಂಘಿಸಿರುವ ನೀವು ಶಿಕ್ಷೆಗೆ ಸಿದ್ಧರಾಗಿ ಎಂದು ರಾಮದೇವ್‌ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತು.
“ಇದು ಸುಪ್ರೀಂ ಕೋರ್ಟ್‌ಗೆ ನೀಡಿದ ಭರವಸೆಯ ಸಂಪೂರ್ಣ ಉಲ್ಲಂಘನೆ. ನಿಮ್ಮ ಕ್ಷಮೆಯಾಚನೆಯಿಂದ ನಾವು ಸಮಾಧಾನಗೊಂಡಿಲ್ಲ” ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಸಾದುದ್ದೀನ್ ಅಮಾನುಲ್ಲಾ ನೇತೃತ್ವದ ಪೀಠ ರಾಮ್‌ದೇವ್ ಅವರನ್ನು ತರಾಟೆಗೆ ತೆಗೆದುಕೊಂಡಿತು.
”ಕೈಗೊಂಡ ಕಾರ್ಯವು ಬರವಣಿಗೆ ರೂಪದಲ್ಲಿ ಹಾಗೂ ಆತ್ಮದಲ್ಲಿ ಇರಬೇಕು ಎಂಬುದನ್ನು ನೀವು ತಿಳಿದುಕೊಳ್ಳಬೇಕು. ನಾವು ನಿಮ್ಮ ಕ್ಷಮೆಯಾಚನೆಯನ್ನು ಏಕಾದರೂ ಒಪ್ಪಬೇಕು? ನಾವು ಪುನಃ ಹೇಳುತ್ತೇವೆ, ನಾವು ನಿಮ್ಮ ಕ್ಷಮೆಯಾಚನೆಯನ್ನು ಸ್ವೀಕರಿಸುವುದಿಲ್ಲ. ನಿಮ್ಮ ಕ್ಷಮೆಯಾಚನೆ ನ್ಯಾಯಾಲಯವನ್ನು ಮನವೊಲಿಸಲು ಸಾಧ್ಯವಿಲ್ಲ. ಮಾತುಗಳಿಗಿಂತ ಕೃತಿಗೆ ಮಹತ್ವವಿದೆ” ಎಂದು ಸುಪ್ರೀಂ ಕೋರ್ಟ್ ರಾಮ್‌ದೇವ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೈತ್ರಿ ಕಷ್ಟ; ಅದೇ ಇಷ್ಟ ಎಂದದ್ದೇಕೆ ಕುಮಾರಸ್ವಾಮಿ?
ರಾಮ್‌ದೇವ್ ಹಾಗೂ ಬಾಲಕೃಷ್ಣ ವೈಯಕ್ತಿಕವಾಗಿ ಕೋರ್ಟ್‌ಗೆ ಕ್ಷಮೆಯಾಚಿಸಲು ಸಿದ್ಧರಿದ್ದಾರೆ ಎಂದು ರಾಮ್‌ದೇವ್ ಪರ ವಕೀಲರು ಮನವಿ ಮಾಡಿಕೊಂಡರು.
ವಕೀಲರ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಸರ್ಕಾರ ಸಹ ತಮ್ಮ ಕಣ್ಣುಗಳನ್ನು ಏಕೆ ಮುಚ್ಚಿಕೊಂಡಿದೆ ಎಂಬುದೇ ನಮಗೆ ಆಶ್ಚರ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಏಪ್ರಿಲ್ 10ರಂದು ನಡೆಯುವ ಮುಂದಿನ ವಿಚಾರಣೆಯಲ್ಲಿ ರಾಮ್‌ದೇವ್ ಹಾಗೂ ಬಾಲಕೃಷ್ಣ ಇಬ್ಬರೂ ಹಾಜರಿರಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.
ಕಳೆದ ಫೆ.27ರಂದು, ಪತಂಜಲಿ ಕಂಪನಿಗೆ ದಾರಿತಪ್ಪಿಸುವ ಔಷಧಗಳನ್ನು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ಮಾಡಬಾರದೆಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಕಳೆದ ವರ್ಷದ ನವೆಂಬರ್‌ನಲ್ಲಿ ಸುಳ್ಳು ಹಾಗೂ ದಾರಿತಪ್ಪಿಸುವ ಪತಂಜಲಿ ಔಷಧ ಕಂಪನಿಗಳ ಜಾಹೀರಾತುಗಳ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ) ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
