ಎಸ್ಐಆರ್ (SIR) ಪ್ರಕ್ರಿಯೆಯು ಸಂವಿಧಾನ ವಿರೋಧಿಯಾಗಿದ್ದು, ಪ್ರತಿಯೊಬ್ಬ ಪ್ರಜೆಯನ್ನೂ ಅಪರಾಧಿಯಂತೆ ಪರಿಗಣಿಸುವ ದುರುದ್ದೇಶಪೂರಿತ ಕ್ರಮವಾಗಿದೆ. ಆದ್ದರಿಂದ ಈ ಪ್ರಕ್ರಿಯೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿ ಎಸ್ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ರಾಯಚೂರು ನಗರದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು, ಬಸ್ ನಿಲ್ದಾಣ ಹಾಗೂ ನಗರಸಭೆ ಕಚೇರಿ ಮಾರ್ಗವಾಗಿ ಟಿಪ್ಪು ಸುಲ್ತಾನ್ ಉದ್ಯಾನವನದವರೆಗೆ ಸಾಗಿತು. ಈ ವೇಳೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಎಸ್ಐಆರ್ ಪ್ರಕ್ರಿಯೆಯು ಬಿಜೆಪಿ ವಿರುದ್ಧ ಮತ ಚಲಾಯಿಸಿದವರನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಮೂಲಕ ಅಧಿಕಾರವನ್ನು ಕೇಂದ್ರೀಕರಿಸಿ ಸರ್ವಾಧಿಕಾರಿ ಆಡಳಿತ ಸ್ಥಾಪಿಸುವ ದುರುದ್ದೇಶ ಹೊಂದಿದೆ ಎಂದು ಆರೋಪಿಸಿದರು.

ಎಸ್ಐಆರ್ ಪ್ರಕ್ರಿಯೆ, ಮಹಿಳೆಯರು, ವಲಸೆ ಕಾರ್ಮಿಕರು, ಅಲೆಮಾರಿ ಸಮುದಾಯಗಳು, ಆದಿವಾಸಿಗಳು, ದಮನಿತ ವರ್ಗಗಳು ಹಾಗೂ ಅಲ್ಪಸಂಖ್ಯಾತರನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಜಾತಾಂತ್ರಿಕ ಪ್ರಕ್ರಿಯೆಯಿಂದ ಹೊರದಬ್ಬುವ ಅಪಾಯವನ್ನು ಹೊಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಎಸ್ಐಆರ್ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯಿಂದ ಹೊರಗುಳಿದವರಿಗೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಎಸ್ಐಆರ್ ಪ್ರಕ್ರಿಯೆಯ ಪರಿಣಾಮವು ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತವಾಗುವುದಿಲ್ಲ; ಇತರೆ ಜಾತಿ ಹಾಗೂ ಸಮುದಾಯಗಳ ಮೇಲೆಯೂ ಪರಿಣಾಮ ಬೀರಬಹುದು ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು. ಇದರ ವಿರುದ್ಧ ಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿಗಳು, ದಲಿತರು ಹಾಗೂ ಹಿಂದುಳಿದ ವರ್ಗಗಳವರು ಒಗ್ಗೂಡಿ ಹೋರಾಟ ನಡೆಸಿದರೆ ಮಾತ್ರ ಈ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಅವರು ಕರೆ ನೀಡಿದರು.
ಪ್ರಗತಿಪರ ಚಿಂತಕರು ರಾಘವೇಂದ್ರ ಕುಷ್ಟಗಿ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ರಾಜಕೀಯ ದುರುದ್ದೇಶದಿಂದ ಎಸ್ಐಆರ್ ಜಾರಿಗೊಳಿಸಿ ಅಧಿಕಾರ ಹಿಡಿಯುವ ಹುನ್ನಾರ ಮಾಡುತ್ತಿದೆ. ಅರ್ಹರನು ಮತದಾರರ ಪಟ್ಟಿಯಿಂದ ತೆಗೆದು ಹಾಕುವುದನ್ನು ತಡೆಯಲು ಹೋರಾಟಕ್ಕೆ ಅಣಿಯಾಗಬೇಕೆಂದರು. ಬಿಜೆಪಿ ಸರ್ಕಾರವನ್ನು ವಿರೋಧಿಸಬೇಕಿದ್ದ ಕಾಂಗ್ರೆಸ್ ಬೆಂಬಲಿಸದೇ ಇರುವದು ವಿಪರ್ಯಾಸ ಎಂದು ಟೀಕಿಸಿದರು.
ಎಸ್ಐಆರ್ ಪ್ರಕ್ರಿಯೆಯು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವಕ್ಕೆ ಮಾರಕ ಹಾಗೂ ಪ್ರತಿಯೊಬ್ಬ ಪ್ರಜೆಯನ್ನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸುವ ದುರುದ್ದೇಶಪೂರಿತ ಕ್ರಮವಾಗಿದೆ ಎಂದು ಆರೋಪಿಸಿದರು. ಈ ಪ್ರಕ್ರಿಯೆಯು ದೇಶದಲ್ಲಿ ಮತದಾನದ ಹಕ್ಕಿಲ್ಲದ ಎರಡನೇ ದರ್ಜೆಯ ಪ್ರಜೆಗಳನ್ನು ಸೃಷ್ಟಿಸುವ ಪ್ರಯತ್ನವಾಗಿದ್ದು, ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ರಾಜಕೀಯ ಷಡ್ಯಂತ್ರದ ಭಾಗವಾಗಿದೆ ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ರೋಹಿಣಿ ಮಳೆಗೆ ರೈತರ ಹರ್ಷ: ಡೀಸೆಲ್ ಕೊರತೆ, ಹೊಲ ಹಸನಾಗದೆ ಹೈರಾಣು
ಪ್ರತಿಭಟನೆಯಲ್ಲಿ ಮಾರೆಪ್ಪ ಹರವಿ, ಅಂಬಣ್ಣ ಅರೋಲಿ, ಡಿ.ಹೆಚ್.ಪೂಜಾರಿ, ಎಂ.ಆರ್ ಭೇರಿ, ಆಂಜನೇಯ ಕುರುಬದೊಡ್ಡಿ, ಜನಾರ್ಧನ ಹಳ್ಳಿಬೆಂಚಿ, ಅಬ್ದುಲ್ ಗನಿ, ಎ.ಶರಣ ಕುಮಾರ, ಸಾಧಿಕ್ ಪಾಷಾ, ಮಹಮದ್ ಅಸೀಮುದ್ದಿನ್ ಅಕ್ತರ್, ಸೈಯದ್ ಪಾಷಾ, ಗಂಗಪ್ಪ ತೋರಣದಿನ್ನೀ, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.




