ರಾಜ್ಯಸಭಾ ಸಂಸದರಾದ ರಾಘವ್ ಛಡ್ಡಾ ಸೇರಿ ಏಳು ಸಂಸದರು ಎಎಪಿ ತೊರೆದು ಬಿಜೆಪಿಗೆ ಸೇರಿದ ಬಳಿಕ ಪಂಜಾಬ್ ಮುಖ್ಯಮಂತ್ರಿ, ಹಿರಿಯ ಎಎಪಿ ನಾಯಕ ಭಗವಂತ್ ಮಾನ್ ಈ ನಾಯಕರುಗಳನ್ನು ಟೀಕಿಸಿದ್ದಾರೆ. ಎಕ್ಸ್ನಲ್ಲಿ ‘ಸಬ್ಜಿ’ ಅಂದರೆ ಪಲ್ಯದ ಬಗ್ಗೆ ಮಾನ್ ಮಾಡಿರುವ ಪೋಸ್ಟ್ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ.
ಪಂಜಾಬಿ ಭಾಷೆಯಲ್ಲಿ ಎಕ್ಸ್ ಪೋಸ್ಟ್ ಮಾಡಿರುವ ಮಾನ್, “ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಮೆಂತ್ಯ ಪುಡಿ, ಕೆಂಪು ಮೆಣಸಿನಕಾಯಿ, ಕರಿಮೆಣಸು ಮತ್ತು ಕೊತ್ತಂಬರಿ – ಈ 7 ವಸ್ತುಗಳು ಒಟ್ಟಾಗಿ ‘ಸಬ್ಜಿ’ಯ (ಪಲ್ಯದ) ರುಚಿಯನ್ನು ಹೆಚ್ಚಿಸುತ್ತವೆ. ಆದರೆ ಅವು ಪ್ರತ್ಯೇಕವಾಗಿ ‘ಸಬ್ಜಿ’ಯಾಗಲು ಸಾಧ್ಯವಿಲ್ಲ” ಎಂದು ಈವರೆಗೆ ಎಎಪಿ ತೊರೆದಿರುವ ಏಳು ನಾಯಕರುಗಳಿಗೆ ಟಾಂಗ್ ನೀಡಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ಮಾಜಿ ಸಚಿವ ರಾಜ್ ಕುಮಾರ್ ಆನಂದ್ ಬಿಜೆಪಿ ಸೇರ್ಪಡೆ
ರಾಘವ್ ಛಡ್ಡಾ ನೇತೃತ್ವದಲ್ಲಿ ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ಸ್ವಾತಿ ಮಲಿವಾಲ್, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ, ವಿಕ್ರಮ್ ಸಾಹ್ನಿ ಏಳು ಜನ ಸಂಸದರು ಎಎಪಿ ತೊರೆದು ಬಿಜೆಪಿ ಸೇರಿದ್ದಾರೆ. ಈ ಏಳು ಮಂದಿಯನ್ನು ಮಾನ್ ತರಕಾರಿ ಪಲ್ಯಕ್ಕೆ ಬಳಸುವ ಜೀರಿಗೆ, ಮೆಂತ್ಯಪುಡಿ ಮೊದಲಾದವುಗಳಿಗೆ ಹೋಲಿಸಿದ್ದಾರೆ.
ಬಿಜೆಪಿ ಈ ಹೇಳಿಕೆಯನ್ನು ಟೀಕಿಸಿದೆ. ಶುಂಠಿ ಮತ್ತು ಬೆಳ್ಳುಳ್ಳಿ ಬೆಳೆಯುವ ರೈತರಿಗೆ “ಅವಮಾನ” ಎಂದು ಬಿಜೆಪಿ ಹೇಳಿದೆ. “ಮಾನ್ ದಿನವಿಡೀ ಹಾಸ್ಯ ಮಾಡುವುದನ್ನು ಬಿಟ್ಟು ಬೇರೇನನ್ನೂ ಮಾಡುವುದಿಲ್ಲ. ಇದು ಸಾರ್ವಜನಿಕರಿಗೆ ಮನರಂಜನೆ ಎನಿಸಬಹುದು. ಆದರೆ ಇದರಿಂದಾಗಿ ಯಾವುದೇ ಬದಲಾವಣೆ ಉಂಟಾಗಲ್ಲ” ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸೈನಿ ಹೇಳಿದ್ದಾರೆ.
