ಬಸವನಬಾಗೇವಾಡಿ ತಾಲೂಕಿನ ಬ್ಯಾಕೋಡ ಗ್ರಾಮ ಪಂಚಾಯತಿಗೆ ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಪ್ರಕಾಶ ಮೀನಾ ಭೇಟಿ ನೀಡಿ, ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ, ಎರಡು ದಿನಗಳೊಳಗಾಗಿ ಸಮಸ್ಯೆ ಪರಿಹರಿಸಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ನೀರಿನ ಸಮಸ್ಯೆ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಎರಡು ಹೊಸ ಕೊಳವೆಬಾವಿಗಳ ವ್ಯವಸ್ಥೆ ಮಾಡುವಂತೆಯೂ ನಿರ್ದೇಶನ ನೀಡಿದರು.
ಅಂಗನವಾಡಿ, ಗ್ರಂಥಾಲಯದ ಮೂಲಸೌಕರ್ಯಕ್ಕೆ ಆದ್ಯತೆಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಿಇಒ ಅವರು ಮಕ್ಕಳ ಪೌಷ್ಟಿಕತೆ, ಸ್ವಚ್ಛತೆ ಹಾಗೂ ಅಗತ್ಯ ಮೂಲಸೌಕರ್ಯಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಮಕ್ಕಳ ಆರೋಗ್ಯ ಮತ್ತು ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಲು ಅಗತ್ಯ ಸುಧಾರಣೆಗಳಿಗೆ ಆದ್ಯತೆ ನೀಡುವಂತೆ ಅಂಗನವಾಡಿ ಸಿಬ್ಬಂದಿಗೆ ಸೂಚಿಸಿದರು.
ಗ್ರಂಥಾಲಯದ ಮುಂಭಾಗದಲ್ಲಿ ಚರಂಡಿ ನಿರ್ಮಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮಗಳಲ್ಲಿ ಅಗತ್ಯ ಕಾಮಗಾರಿಗಳನ್ನು ಗುರುತಿಸಿ ಕೈಗೆತ್ತಿಕೊಳ್ಳಬೇಕು. ಆ ಮೂಲಕ ಸ್ಥಳೀಯ ಕೂಲಿಕಾರರಿಗೆ ಗ್ರಾಮದಲ್ಲಿಯೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಕ್ರಮವಹಿಸಬೇಕು ಎಂದು ಸೂಚಿಸಿದರು.
ಇದೇ ವೇಳೆ ಭಾರತ್ ಜೋಡೋ ಯುವ ಮಿಷನ್ ನೋಂದಣಿ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಹಾಗೂ ಗ್ರಾಮ ಪಂಚಾಯತಿಗೆ ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ತೆರಿಗೆ ವಸೂಲಿ ಮಾಡುವಂತೆ ಪಂಚಾಯತಿ ಆಡಳಿತಕ್ಕೆ ನಿರ್ದೇಶನ ನೀಡಿದರು.ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವುದರ ಜತೆಗೆ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು.
ಜನರಿಗೆ ಅಗತ್ಯ ಸೇವೆಗಳು ಸಕಾಲದಲ್ಲಿ ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಿಇಒ ಆನಂದ ಪ್ರಕಾಶ ಮೀನಾ ಸೂಚಿಸಿದರು.
ಈ ಸಂದರ್ಭದಲ್ಲಿ ಬ್ಯಾಕೋಡ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುರೇಶ ಲೋಣಿ, ಪಂಚಾಯತಿ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.




