ವಿಶ್ವಶಾಂತಿಗಾಗಿ ಹಾಗೂ ಯುದ್ಧ ವಿರೋಧಿಸಿ ಮಕ್ಕಳ ಹಕ್ಕುಗಳ ಹೋರಾಟಗಾರ ಹಾಗೂ ಸಾಮಾಜಿಕ ಕಾರ್ಯಕರ್ತ ರಾಮಾಂಜಿ ನಮ್ಮಭೂಮಿ ಶನಿವಾರ ಕುಂದಾಪುರದ ಶಾಸ್ತ್ರೀ ಸರ್ಕಲ್‌ನಲ್ಲಿ ಎರಡನೇ ಹಂತದ ಮೌನ ಪ್ರತಿಭಟನೆಯನ್ನು ನಡೆಸಿದರು.
ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ಈ ಪ್ರತಿಭಟನೆಯ ಆರಂಭದಲ್ಲಿ ಅವರು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಯುದ್ಧದಲ್ಲಿ ಮೃತಪಟ್ಟವರಿಗಾಗಿ ಮೌನ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಸ್ಥಳಕ್ಕೆ ಭೇಟಿ ನೀಡಿ ರಾಮಾಂಜಿಯವರ ನಿಲುವಿಗೆ ಬೆಂಬಲ ಸೂಚಿಸಿದರು.

ಪ್ರತಿಭಟನೆಯ ವೇಳೆ ರಾಮಾಂಜಿ ತಮ್ಮೊಂದಿಗೆ ಮಗುವಿನ ಕಲಾಕೃತಿ ಹಾಗೂ ಗಾಂಧೀಜಿ ಕುರಿತ ಪುಸ್ತಕವನ್ನು ಇಟ್ಟುಕೊಂಡು “ವಿಶ್ವಶಾಂತಿಗಾಗಿ ಪ್ರಾರ್ಥಿಸೋಣ”, “ದಯೆಯೇ ಧರ್ಮದ ಮೂಲವಯ್ಯ”, “ಬಂದೂಕಿನ ನಳಿಗೆಗಳಲ್ಲಿ ಗುಬ್ಬಚ್ಚಿ ಗೂಡು ಕಟ್ಟಲಿ” ಎಂಬ ಸಂದೇಶಗಳನ್ನು ಒಳಗೊಂಡ ಫಲಕಗಳನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಅಧಿಕಾರಶಾಹಿ ಮನಸ್ಥಿತಿಯಿಂದ ವಿಶ್ವದಲ್ಲಿ ಯುದ್ಧ ಭೀತಿ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಮಕ್ಕಳು, ಯುವಕರು ಸೇರಿದಂತೆ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪರಿಸರದ ಮೇಲೂ ಭಾರೀ ಹಾನಿಯಾಗುತ್ತಿದೆ. ಈ ಕಾರಣದಿಂದ ವಿಶ್ವಶಾಂತಿಗಾಗಿ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸುತ್ತಿದ್ದೇನೆ” ಎಂದು ತಿಳಿಸಿದರು.
ಯುದ್ಧದ ಪರಿಣಾಮ ಮಕ್ಕಳ ಮೇಲೆ ಅತ್ಯಂತ ಗಂಭೀರವಾಗಿ ಬೀಳುತ್ತಿದ್ದು, ಅದನ್ನು ತಡೆಯಲು ಸಮಾಜದ ಎಲ್ಲರೂ ಒಂದಾಗಿ ಶಾಂತಿಗಾಗಿ ಹೋರಾಡಬೇಕು ಎಂದು ರಾಮಾಂಜಿ ಕರೆ ನೀಡಿದರು.






