ಭೋಜ್‌ಪುರಿ ನಟಿ ಅಮೃತಾ ಪಾಂಡೆ ಕಳೆದ ವಾರ ಏಪ್ರಿಲ್ 27 ರಂದು ಬಿಹಾರದ ಭಾಗಲ್ಪುರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಹಾಗೆಯೇ 27 ವರ್ಷದ ಈ ನಟಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಈ ಬಗ್ಗೆ ಕೂಲಂಕುಷ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ನಟಿ ಅಮೃತಾ ಪಾಂಡೆ ವಿವಾಹಿತೆಯಾಗಿದ್ದು ಸಾಯುವ ಮುನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ “ಅವನ/ಆಕೆಯ ಜೀವನ ಎರಡು ದೋಣಿಗಳಲ್ಲಿ ಸಾಗುತ್ತಿತ್ತು, ನಾವು ನಮ್ಮ ದೋಣಿಯನ್ನು ಮುಳುಗಿಸುವ ಮೂಲಕ ಅವನ/ಆಕೆಯ ಪ್ರಯಾಣ ಸುಲಭಗೊಳಿಸಿದೆವು” ಎಂದು ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಛತ್ತೀಸ್‌ಗಢ| ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ
ಪೊಲೀಸರಿಗೆ ಬೇರೆ ಯಾವುದೇ ಆತ್ಮಹತ್ಯೆ ಪತ್ರ ಲಭ್ಯವಾಗಿಲ್ಲ. ಆದರೆ ಸರಿಯಾಗಿ ಕೆಲಸ ಸಿಗದ ಕಾರಣ ಅಮೃತಾ ಖಿನ್ನತೆಯಿಂದ ಬಳಲುತ್ತಿದ್ದರು. ವೃತ್ತಿ ಜೀವನದ ಬಗ್ಗೆ ಚಿಂತಿತರಾಗಿದ್ದರು. ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅಮೃತಾ ಕುಟುಂಬದವರು ತಿಳಿಸಿದ್ದಾರೆ.
ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ತಂಡ ರಚಿಸಲಾಗಿದ್ದು, ಕುಟುಂಬ ಸದಸ್ಯರ ವಿಚಾರಣೆ ನಡೆಸಲಾಗುತ್ತಿದೆಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಹೇಳಿದ್ದಾರೆ.
ನಟಿ ಅನಿಮೇಷನ್ ಇಂಜಿನಿಯರ್ ಆಗಿರುವ ತನ್ನ ಪತಿ ಚಂದ್ರಮಣಿ ಜಂಗದ್ ಜೊತೆ ಮುಂಬೈನಲ್ಲಿ ವಾಸಿಸುತ್ತಿದ್ದರು. ಏಪ್ರಿಲ್ 18 ರಂದು ತನ್ನ ಸಹೋದರಿಯ ಮದುವೆಯಲ್ಲಿ ಪಾಲ್ಗೊಳ್ಳಲು ಅವರು ಭಾಗಲ್ಪುರಕ್ಕೆ ಹೋಗಿದ್ದರು. ಮದುವೆಯ ನಂತರ ಪತಿ ಮನೆಗೆ ಹಿಂದಿರುಗಿದ್ದು, ಅಮೃತಾ ಅಲ್ಲೇ ಉಳಿದಿದ್ದರು.
ಇದನ್ನು ಓದಿದ್ದೀರಾ? ಹಾಸನ ಪೆನ್‌ಡ್ರೈವ್ ಪ್ರಕರಣ: ನಾಲ್ವರು ಸಂತ್ರಸ್ತೆಯರು ಆತ್ಮಹತ್ಯೆಗೆ ಯತ್ನ
ನಟಿ ಭೋಜ್‌ಪುರಿ ಸ್ಟಾರ್ ಖೇಸರಿ ಲಾಲ್ ಯಾದವ್ ಜೊತೆಗೆ ‘ದೀವಾನಪನ್’ ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಕೆಲವು ಹಿಂದಿ ಚಲನಚಿತ್ರಗಳು, ಟಿವಿ ಶೋಗಳು ಮತ್ತು ವೆಬ್ ಸೀರಿಸ್‌ಗಳಲ್ಲಿಯೂ ನಟಿಸಿದ್ದಾರೆ. ಪರಿಶೋಧ್ ವೆಬ್ ಸೀರಿಸ್ ಮೂಲಕ ಹೆಸರುವಾಸಿಯಾಗಿದ್ದಾರೆ.
(ನಿಮಗೆ ಆತ್ಮಹತ್ಯೆಯ ಆಲೋಚನೆಗಳು ಬಂದರೆ, ಭಾವನಾತ್ಮಕ ಬೆಂಬಲ ಬೇಕೆನಿಸಿದರೆ ಸಹಾಯ ಕೇಳಲು ಹಿಂಜರಿಯಬೇಡಿ. ಸ್ನೇಹ ಫೌಂಡೇಶನ್ – 04424640050, ಟೆಲಿ ಮನಸ್ – 14416 (ಲಭ್ಯವಿದೆ 24×7) ಅಥವಾ ಐಕಾಲ್, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್’ ಸಹಾಯವಾಣಿ – 02225521111 ಗೆ ನೇರವಾಗಿ ಕರೆ ಮಾಡಿ)