ಖಾಸಗಿ ಶಾಲೆಯೊಂದರ ಮೇಲೆ ಜನರ ಗುಂಪೊಂದು ಕಚ್ಛಾ ಬಾಂಬ್ ಮತ್ತು ಕಲ್ಲು ತೂರಾಟ ನಡೆಸಿರುವ ಘಟನೆ ಬಿಹಾರದ ಹಾಜಿಪುರ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹತ್ಸರ್‌ಗಂಜ್ ಪ್ರದೇಶದಲ್ಲಿರುವ ‘ದೆಹಲಿ ಪಬ್ಲಿಕ್ ಸ್ಕೂಲ್’ ಮೇಲೆ ಗುಂಪೊಂದು ಕಚ್ಛಾ ಬಾಂಬ್‌ಗಳನ್ನು ಎಸೆದು, ದಾಂಧಲೆ ನಡೆಸಿದೆ. ದುಷ್ಕರ್ಮಿಗಳು ಗ್ರೆನೇಡ್ ತರಹದ ವಸ್ತುಗಳಿಂದ ಮನೆಯಲ್ಲಿ ತಯಾರಿಸಿದ ಬಾಂಬ್‌ಗಳಿಂದ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ದೃಶ್ಯಗಳು ಶಾಲೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಡಿಯೋದಲ್ಲಿ, ಶಾಲೆಯ ಗೇಟ್ ಹೊರಗೆ ದುಷ್ಕರ್ಮಿಗಳ ಗುಂಪೊಂದು ಬಾಂಬ್‌ಗಳನ್ನು ಎಸೆದು ಸ್ಪೋಟಿಸಿದೆ. ಅಲ್ಲದೆ, ಕಲ್ಲು ತೂರಾಟ ನಡೆಸಿ ಶಾಲೆಯ ಬಾಗಿಲು, ಕಿಟಕಿಗಳಿಗೆ ಹಾನಿ ಮಾಡಿದೆ.
“ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಯುತ್ತಿದೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ವಿಡಿಯೋ ಆಧರಿಸಿ, ಆರೋಪಿಗಳನ್ನು ಗುರುತಿಸಲಾಗುತ್ತಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ” ಎಂದು ಹಾಜಿಪುರ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಅಬು ಜಾಫರ್ ಇಮಾಮ್ ಹೇಳಿದ್ದಾರೆ.
ಈ ದಾಳಿಯು ಸೇಡಿನ ಕೃತ್ಯವೆಂದು ಪೊಲೀಸರು ಶಂಕಿಸಿದ್ದಾರೆ. ಇತ್ತೀಚೆಗೆ, ಶಾಲೆಯಲ್ಲಿ ಚಾಲಕನೊಬ್ಬನನ್ನು ಕೆಲಸದಿಂದ ತೆರೆದುಹಾಕಲಾಗಿತ್ತು. ಕೆಲಸ ಕಳೆದುಕೊಂಡ ಸಿಟ್ಟಿನಲ್ಲಿ ಆ ಚಾಲಕ ಮತ್ತು ಇತರರರು ಶಾಲೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಅನುಮಾನಿಸಿದ್ದಾರೆ. ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.