ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆದ ಬಳಿಕ, ಆಯೋಗವು ಬಿಡುಗಡೆ ಮಾಡಿದ ಕರಡು ಚುನಾವಣಾ ಪಟ್ಟಿಗಳ ಕುರಿತು ಹಲವಾರು ತನಿಖೆಗಳು ನಡೆಯುತ್ತಿವೆ. ಇವುಗಳು ಆಯೋಗದ ಪರಿಷ್ಕರಣಾ ವಿಧಾನಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ.
ಭಾರತದ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯು ಚುನಾವಣಾ ಪಟ್ಟಿಗಳ ವಿಶ್ವಾಸಾರ್ಹತೆ ಮೇಲೆ ಅವಲಂಬಿತವಾಗಿದೆ. ಭಾರತದ ಚುನಾವಣಾ ಆಯೋಗವು (ECI) ಬಿಹಾರದಲ್ಲಿ ನಡೆಸಿದ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (SIR) 7.9 ಕೋಟಿ ಮತದಾರರ ಅರ್ಹತೆಯನ್ನು ಪರಿಷ್ಕರಿಸಿದೆ. ಈ ಪ್ರಕ್ರಿಯೆಯು ವಸ್ತುನಿಷ್ಠತೆ ಮತ್ತು ನಿಖರತೆಯನ್ನು ಖಾತರಿಪಡಿಸಬೇಕಿತ್ತು. ಆದರೆ, ಅದಾಗಲಿಲ್ಲ. ಚುನಾವಣಾ ಆಯೋಗವು 69 ಲಕ್ಷ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟಿತು. ಅವರಲ್ಲಿ, ಬದುಕಿರುವ ಹಲವರನ್ನು ಮೃತರೆಂದು ಹೆಸರಿಸಿತು. ಮಾತ್ರವಲ್ಲದೆ, ಕೈಬಿಡಲಾದವರ ಪಟ್ಟಿಯನ್ನು ಪ್ರಕಟಿಸದೆ, ಗೌಪ್ಯವಾಗಿರಿಸಿತು. ಹಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರುವಂತೆ ಮಾಡಿತು.
ಬಿಹಾರದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆದ ಬಳಿಕ, ಆಯೋಗವು ಬಿಡುಗಡೆ ಮಾಡಿದ ಕರಡು ಚುನಾವಣಾ ಪಟ್ಟಿಗಳ ಕುರಿತು ಹಲವಾರು ತನಿಖೆಗಳು ನಡೆಯುತ್ತಿವೆ. ಇವುಗಳು ಆಯೋಗದ ಪರಿಷ್ಕರಣಾ ವಿಧಾನಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ.
ಕರಡು ಮತದಾರರ ಪಟ್ಟಿಯಲ್ಲಿ, ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ 1,200-1,300 ಮನೆಗಳಲ್ಲಿಯೇ 1,50,000 ಮತದಾರರು ಇರುವುದಾಗಿ ನೋಂದಣಿ ಮಾಡಲಾಗಿದೆ ಎಂಬುದು ವಿಶ್ಲೇಷಣೆಯಿಂದ ತಿಳಿದುಬಂದಿದೆ. ಅಂದರೆ, ಒಂದೇ ವಿಳಾಸದಲ್ಲಿ ಹತ್ತರಿಂದ ನೂರಕ್ಕೂ ಹೆಚ್ಚು ಮಂದಿಯ ಹೆಸರುಗಳು ನೋಂದಣಿಯಾಗಿವೆ.
ಅಸಾಮಾನ್ಯ ಸಂಗತಿ ಎಂದರೆ, ಹಲವರು ಮತದಾರರನ್ನು ಯಾವ ಕ್ಷೇತ್ರದಲ್ಲಿ, ಯಾವ ವಿಳಾಸದಲ್ಲಿ ನೋಂದಣಿ ಮಾಡಲಾಗಿದೆಯೋ, ಆ ವಿಳಾಸ ಮತ್ತು ಮತದಾರರಿಗೆ ಅಸಲಿಗೆ ಸಂಬಂಧವೇ ಇಲ್ಲ. ಒಂದು ನಿರ್ದಿಷ್ಟ ವಿಳಾಸದೊಂದಿಗೆ ಪಟ್ಟಿಯಲ್ಲಿ ಸೇರಿಸಲಾಗಿರುವ ಬಹುತೇಕ ಮತದಾರರು ವಾಸ್ತವವಾಗಿ ಬೇರೆಡೆ ವಾಸಿಸುತ್ತಿದ್ದಾರೆ ಎಂಬುದು ‘ದಿ ವೈರ್’ ಮತ್ತು ಇತರ ಸುದ್ದಿ ಸಂಸ್ಥೆಗಳು ನಡೆಸಿದ ಪರಿಶೀಲನೆಯಲ್ಲಿ ಸ್ಪಷ್ಟವಾಗಿ ಗೊತ್ತಾಗಿದೆ.
ಅನೇಕ ನಿವಾಸಿಗಳು ತಮ್ಮ ವಿಳಾಸದಲ್ಲಿ ದಾಖಲಾದ ಮತದಾರರನ್ನು ಒಂದೇ ಗ್ರಾಮ ಅಥವಾ ಪ್ರದೇಶದ ಸ್ಥಳೀಯರೆಂದು ಗುರುತಿಸಿದರೂ, ಕೆಲವು ಪ್ರಕರಣಗಳಲ್ಲಿ ಹಲವು ಹೆಸರುಗಳು ಸ್ಥಳೀಯರಲ್ಲದವರ ಹೆಸರುಗಳು ಎಂಬುದಾಗಿ ನಿವಾಸಿಗಳು ಹೇಳಿಕೊಂಡಿದ್ದಾರೆ. ಒಂದು ಪ್ರಕರಣದಲ್ಲಿ, ಇಬ್ಬರು ಮತದಾರರು ತಮ್ಮ ಮತದಾರ ಗುರುತಿನ ಚೀಟಿಗಳಲ್ಲಿ ಸರಿಯಾದ ವಿಳಾಸವನ್ನು ಹೊಂದಿದ್ದರೂ, ಕರಡು ಮತದಾರರ ಪಟ್ಟಿಯಲ್ಲಿ ತಪ್ಪಾದ ವಿಳಾಸದಲ್ಲಿ ದಾಖಲಾಗಿದ್ದಾರೆ.
ಇದು, ಚುನಾವಣಾ ಆಯೋಗವು ಕರಡು ಚುನಾವಣಾ ಪಟ್ಟಿಗಳನ್ನು ಸಿದ್ದಪಡಿಸಲು ರಾಜ್ಯದಲ್ಲಿ ಸಂಪೂರ್ಣ ಮನೆ-ಮನೆ ಪರಿಷ್ಕರಣೆ ನಡೆಸುವಲ್ಲಿ ವಿಫಲವಾಗಿದೆ ಎಂದು ಸೂಚಿಸುತ್ತದೆ. ಕೆಲವು ಬೂತ್ ಲೆವೆಲ್ ಆಫೀಸರ್‌ಗಳು (BLOs) ನೀಡಿರುವ ವಿವರಗಳ ಪ್ರಕಾರ, ಚುನಾವಣಾ ಆಯೋಗದ ಸ್ಪಷ್ಟತೆಯ ಕೊರತೆಯಿಂದಾಗಿ ಸ್ಥಳೀಯವಾಗಿ ತಿದ್ದುಪಡಿಗಳನ್ನು ಸರಿಯಾಗಿ ನಡೆಸಲಾಗಿಲ್ಲ. ಈ ವ್ಯತ್ಯಾಸಗಳು ಆಯೋಗವು ಮತದಾರರ ಪಟ್ಟಿ ಮತ್ತು ಚುನಾವಣಾ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ನಡೆಸುತ್ತಿದೆಯೇ ಎಂಬ ಬಗ್ಗೆ ಗಂಭೀರ ಸಂದೇಹವನ್ನು ಹುಟ್ಟುಹಾಕಿವೆ. ಅಲ್ಲದೆ, ಬಿಹಾರದಲ್ಲಿ ಮುಂಬರುವ ಚುನಾವಣೆಯ ಸಮಗ್ರತೆಯು ಅಪಾಯದಲ್ಲಿದೆ ಎಂಬ ಆತಂಕವನ್ನು ಸೃಷ್ಟಿಸಿದೆ.
‘ದಿ ವೈರ್’ ಮತ್ತು ಇತರರು ಕಂಡುಹಿಡಿದ ವ್ಯತ್ಯಾಸಗಳ ಬಗ್ಗೆ ಚುನಾವಣಾ ಆಯೋಗದ ವಕ್ತಾರರಿಗೆ ಪ್ರಶ್ನೆಗಳನ್ನು ಕಳಿಸಿದ್ದಾರೆ. ಆದರೆ, ಈವರೆಗೆ ಆಯೋಗದಿಂದ ಉತ್ತರ ಬಂದಿಲ್ಲ.
ಕರಡು ಪಟ್ಟಿಯಲ್ಲಿನ ಮತದಾರ ಗುಂಪುಗಳು v/s ಸಾಮಾಜಿಕ ವಾಸ್ತವತೆ
ಬಿಹಾರದ ಐದು ವಿಧಾನಸಭಾ ಕ್ಷೇತ್ರಗಳಾದ ಕಟಿಹಾರ್, ಪೂರ್ಣಿಯಾ, ಮಧುಬನ್ ಹಾಗೂ ಹರ್ಸಿಧಿಯಲ್ಲಿ ಒಂದೇ ವಿಳಾಸದಲ್ಲಿ ಹಲವಾರು ಮತದಾರರ ಹೆಸರುಗಳು ನೋಂದಣಿಯಾಗಿರುವ 14 ಪ್ರಕರಣಗಳು ಕಂಡುಬಂದಿವೆ. ಈ ಕ್ಷೇತ್ರಗಳಲ್ಲಿ ಪ್ರತಿ ಬೂತ್‌ನಲ್ಲಿಯೂ ಪತ್ರಕರ್ತರ ತಂಡವು ಎಚ್ಚರಿಕೆಯಿಂದ ಪರಿಶೀಲನೆ ನಡೆಸಿದೆ. ನೂರಾರು ಮತದಾರರ ಹೆಸರನ್ನು ಒಳಗೊಂಡಿರುವ ನಿರ್ದಿಷ್ಟ ವಿಳಾಸಗಳಿಗೆ ಭೇಟಿ ನೀಡಿ, ಆ ಮನೆಗಳ ನಿಜವಾದ ನಿವಾಸಿಗಳನ್ನು ಗುರುತಿಸಿದೆ.
ಇವುಗಳಲ್ಲಿ, ಹಲವಾರು ಮತದಾರರಿಗೆ ವಿಳಾಸವಾಗಿ ಕೇವಲ ವಾರ್ಡ್ ಸಂಖ್ಯೆಯನ್ನು ಮಾತ್ರವೇ ಬಳಸಲಾಗಿದೆ. ಇಂತಹ ಅಸಂಗತತೆಯು ಮತದಾರರು ಮತ್ತು ವಿಳಾಸಗಳ ಸ್ಪಷ್ಟತೆಯಲ್ಲಿ ಗೊಂದಲ ಸೃಷ್ಟಿಸಿವೆ.
ಅನೇಕ ಪ್ರಕರಣಗಳಲ್ಲಿ, ಕೆಲವೇ ಕೆಲವು ಜನರು ವಾಸವಿರುವ ಮನೆಗಳನ್ನು ನೂರಾರು ಮತದಾರರ ವಿಳಾಸವಾಗಿ ಪಟ್ಟಿ ಮಾಡಲಾಗಿದೆ. ಆ ಮನೆಗಳಲ್ಲಿ ನಿಜವಾಗಿಯೂ ವಾಸವಾಗಿರುವ ನಿವಾಸಿಗಳಿಗೆ ತಮ್ಮ ವಿಳಾಸದೊಂದಿಗೆ ಹೆಸರಿಸಲಾಗಿರುವ ಹಲವಾರು ಮತದಾರರ ಬಗ್ಗೆ ತಿಳಿದೇ ಇಲ್ಲ.
ಕಟಿಹಾರ್ ಕ್ಷೇತ್ರದ ಕರಡು ಚುನಾವಣಾ ಪಟ್ಟಿಯಲ್ಲಿ ಒಂದೇ ಮನೆಯಲ್ಲಿ 100ಕ್ಕೂ ಹೆಚ್ಚು ಮತದಾರರು ಇದ್ದಾರೆಂದು ನೋಂದಣಿ ಮಾಡಲಾಗಿದೆ. ಇವರಲ್ಲಿ ಮುಸ್ಲಿಮರು, ಹಿಂದುಗಳು, ಶ್ರೀಮಂತರು ಹಾಗೂ ತಳ ಸಮುದಾಯದವರು ಸೇರಿದ್ದಾರೆ. ಆದರೆ, ಆ ಮನೆಯಲ್ಲಿ ವಾಸಿಸುತ್ತಿರುವ ನಿಜವಾದ ನಿವಾಸಿಗಳು, ತಮ್ಮ ಮನೆಯ ವಿಳಾಸದೊಂದಿಗೆ ಪಟ್ಟಿ ಮಾಡಲಾದ ಬಹುತೇಕ ಮತದಾರರು ತಮ್ಮ ವಾರ್ಡ್‌ನಲ್ಲಿಯೂ ವಾಸಿಸುತ್ತಿಲ್ಲ ಎಂಬುದಾಗಿ ದೃಢಪಡಿಸಿದ್ದಾರೆ.
ನಿರ್ದಿಷ್ಟ ನಿವಾಸದಲ್ಲಿ ಹೆಚ್ಚು ಮತದಾರರನ್ನು ಹೊಂದಿರುವ ವಿಳಾಸಗಳ ಪಟ್ಟಿ:

ತಪ್ಪಾದ ವಿಳಾಸಗಳು ಮತ್ತು ರಹಸ್ಯ ಗುರುತುಗಳು
ಕರಡು ಚುನಾವಣಾ ಪಟ್ಟಿಯ ಪ್ರಕಾರ, ಈಶಾನ್ಯ ಬಿಹಾರದ ಪೂರ್ಣಿಯಾ ಜಿಲ್ಲೆಯ ಎರಡು ವಿಳಾಸಗಳನ್ನು ಬೂತ್ ಸಂಖ್ಯೆ 12 ಮತ್ತು ಮನೆ ಸಂಖ್ಯೆ 2 ಎಂದೇ ಗುರುತಿಸಲಾಗಿದೆ. ಈ ವಿಳಾಸದಲ್ಲಿ ಕ್ರಮವಾಗಿ 22 ಮತ್ತು 153 ಮತದಾರರಿದ್ದಾರೆ ಎಂದು ಪಟ್ಟಿ ಮಾಡಲಾಗಿದೆ.
153 ಮತದಾರರಿರುವ ವಿಳಾಸವು ವಾಸ್ತವವಾಗಿ ಖಾಸಗಿ ಜಮೀನಿನಲ್ಲಿ ನಿರ್ಮಿತವಾಗಿರುವ ದೇವಾಲಯವಾಗಿದೆ. ಚಂದನ್ ಯಾದವ್, ಈ ಜಮೀನಿನ ಮಾಲೀಕರ ಕುಟುಂಬಕ್ಕೆ ಸೇರಿದವರು. ಅವರಿಗೆ ಈ ವಿಳಾಸದೊಂದಿಗೆ ದಾಖಲಾಗಿರುವ ಯಾವುದೇ ಮತದಾರರ ಬಗ್ಗೆ ಗೊತ್ತೇ ಇಲ್ಲ.
ಈ 153 ಮತದಾರರಲ್ಲಿ ನಿವೃತ್ತ ಆದಾಯ ಅಧಿಕಾರಿ ಕೃಷ್ಣ ಮೋಹನ್ ರಾಯ್ ಒಬ್ಬರು. ಆದರೆ, ಅವರ ನಿಜವಾದ ನಿವಾಸವು ಮನೆ ಸಂಖ್ಯೆ 269 ಆಗಿದೆ.
ಅದೇ ವಿಳಾಸದೊಂದಿಗೆ ಗುರುತಿಸಲಾದ 2ನೇ ಮನೆಯಲ್ಲಿ 22 ಮತದಾರರನ್ನು ನೋಂದಣಿ ಮಾಡಲಾಗಿದೆ. ಅವರಲ್ಲಿ, 60 ವರ್ಷದ ವ್ಯಾಪಾರಿ ಸಂಜಯ್ ಕುಮಾರ್ ಚೌರಾಸಿಯಾ ಒಬ್ಬರು. ಅವರ ಕುಟುಂಬವು ಏಳು ದಶಕಗಳಿಂದ ಆ ಮನೆಯಲ್ಲಿ ವಾಸಿಸುತ್ತಿದೆ. ಅವರ ಮನೆಯಲ್ಲಿ ಒಂಬತ್ತು ಮಂದಿ ನೆಲೆಸಿದ್ದಾರೆ. ಆದರೆ, ಹೆಚ್ಚುವರಿಯಾಗಿ 13 ಮಂದಿಯನ್ನು ಸೇರಿಸಲಾಗಿದೆ. ಆ 13 ಮಂದಿ ಯಾರು ಎಂಬುದು ಚೌರಾಸಿಯಾ ಅವರಿಗೂ ತಿಳಿದಿಲ್ಲ.
ಬೂತ್ ಸಂಖ್ಯೆಯ 12ರ ಬಿಎಲ್‌ಒ ಚಂದನ್ ಕುಮಾರ್ ಅವರು ಒಂದೇ ವಿಳಾಸದೊಂದಿಗೆ ಅಧಿಕ ಮತದಾರರನ್ನು ದಾಖಲಿಸಿಲ್ಲ ಎಂಬುದಾಗಿ ವಾದಿಸಿದ್ದಾರೆ. ಆದರೆ, ಅವರು ಮತದಾರರ ಪಟ್ಟಿ ಪರಿಷ್ಕರಣೆ ವೇಳೆ, ಮನೆ ಸಂಖ್ಯೆ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಅನುಸರಿಸಿಲ್ಲ ಎಂಬುದು ಗೊತ್ತಾಗಿದೆ. ”ನನಗೆ ಮನೆ ಸಂಖ್ಯೆಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ನಾವು ಮನೆ ಸಂಖ್ಯೆಗಳನ್ನು ಆಧರಿಸಿ, ಪಟ್ಟಿಯನ್ನು ಪರಿಷ್ಕರಿಸಿಲ್ಲ. ಹೆಸರುಗಳನ್ನು ಆಧರಿಸಿ ಪರಿಷ್ಕರಿಸಿದ್ದೇವೆ” ಎಂದು ಚಂದನ್ ಹೇಳಿಕೊಂಡಿದ್ದಾರೆ.
ಹೆಸರು ಪ್ರಕಟಿಸಲು ಇಚ್ಛಿಸದ ಇತರ ಇಬ್ಬರು BLOಗಳು, ತಾವು ಮತದಾರರ ಡೇಟಾವನ್ನು ದಾಖಲಿಸಲು ಮನೆ ಸಂಖ್ಯೆಗಳನ್ನು ಬಳಸುವುದಿಲ್ಲ ಎಂದು ಹೇಳಿದ್ದಾರೆ. ಚಂದನ್ ಕುಮಾರ್ ಒಂದು ವರ್ಷದ ಹಿಂದೆ BLO ಆಗಿದ್ದರು. ಅವರಿಗೆ ಹೆಚ್ಚಿನ ಅನುಭವವಿಲ್ಲ ಎಂದು ಆ ಇಬ್ಬರು ತಿಳಿಸಿದ್ದಾರೆ.
ಒಂದೇ ವಿಳಾಸದಲ್ಲಿ ಹಲವಾರು ಮತದಾರರ ಹೆಸರುಗಳು ನೋಂದಣಿಯಾಗಿರುವುದು ನಮ್ಮ ಕಡೆಯಿಂದ ಆಗಿರುವ ದೋಷವಲ್ಲ. ನಾವು ಮತದಾರರನ್ನು ಸರಿಯಗಿ ದಾಖಲಿಸಿದ್ದೇವೆ ಎಂದು ಚಂದನ್ ಹೇಳಿದ್ದಾರೆ.
ಪೂರ್ಣಿಮಾದಿಂದ 200 ಕಿ.ಮೀ ದೂರದಲ್ಲಿರುವ ಮಧುಬನ್ ಕ್ಷೇತ್ರದ ಕೌಲ್ ಮದ್ಪಾ ಮಾಲ್ ಗ್ರಾಮದಲ್ಲಿ (ಬೂತ್ ನಂ. 160) 274 ಮತದಾರರು ಒಂದೇ ವಿಳಾಸದಲ್ಲಿ ದಾಖಲಾಗಿದ್ದಾರೆ. ಈ ಎಲ್ಲರನ್ನೂ ಮನೆ ಸಂಖ್ಯೆ 50ರೊಂದಿಗೆ ನೋಂದಣಿ ಮಾಡಲಾಗಿದೆ.
ಈ ಮನೆಯು ದಿವಂಗತ ಗಜೇಂದ್ರ ಮಂಡಲ್ ಅವರಿಗೆ ಸೇರಿದ್ದಾಗಿದೆ. ಅವರ ಮಗ ರಾಜೇಶ್ ಮಂಡಲ್ ಅವರು ತಾನು ಹುಟ್ಟಿದಾಗಿನಿಂದಲೂ ಅದೇ ಮನೆಯಲ್ಲಿ ವಾಸಿಸುತ್ತಿದ್ದೇನೆ. ಸದ್ಯ, ತಾನು, ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳು ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ತನ್ನ ಮನೆಯ ವಿಳಾಸದೊಂದಿಗೆ ಇಷ್ಟೊಂದು ಜನರು ದಾಖಲಾಗಿರುವುದು ತಮಗೇ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಈ ವಿಳಾಸ ಇರುವ ಬೂತ್‌ನ ಬಿಎಲ್‌ಒ ಪತಿತ್ ಪವನ್ ಕುಮಾರ್, ಈ ಸಮಸ್ಯೆ ತನ್ನ ಏಳು ವರ್ಷಗಳ ಕಾರ್ಯನಿರ್ವಹಣಾ ಅವಧಿಯಿಂದಲೂ ಇದೆ ಎಂದು ಹೇಳಿಕೊಂಡಿದ್ದಾರೆ. ರಾಜೇಶ್ ಅವರ ಮನೆಯೊಂದಿಗೆ ದಾಖಲಾದ 274 ಜನರು ನಿಜವಾದ ಮತದಾರರಾಗಿದ್ದಾರೆ. ಆದರೆ, ತಪ್ಪಾದ ವಿಳಾಸದೊಂದಿಗೆ ನೋಂದಾಯಿಸಲಾಗಿದೆ. ಮತದಾರರಿಂದ ಸಲ್ಲಿಸಲಾದ ನಿವಾಸ ಪುರಾವೆಯು ಸಾಮಾನ್ಯವಾಗಿ ಸ್ಥಳೀಯ ಪಂಚಾಯತ್‌ನಿಂದ ನೀಡಲಾದ ಪ್ರಮಾಣಪತ್ರವಾಗಿದೆ. ಅದರಲ್ಲಿ, ಯಾವುದೇ ನಿರ್ದಿಷ್ಟ ಮನೆ ಸಂಖ್ಯೆಯ ಉಲ್ಲೇಖವಿರುವುದಿಲ್ಲ ಎಂದು ಪತಿತ್ ಹೇಳಿಕೊಂಡಿದ್ದಾರೆ.
ಆದಾಗ್ಯೂ, ತಪ್ಪಾದ ವಿಳಾಸಗಳ ತಿದ್ದುಪಡಿ ನಡೆಸಲು ಪತಿತ್ ಅವರು ಆಯೋಗದ ಅಧಿಕೃತ ನಿರ್ದೇಶನಕ್ಕಾಗಿ ಕಾಯುತ್ತಿದ್ದಾರೆ. ಅವರ ಮೇಲ್ವಿಚಾರಕ ಧೀರಜ್ ಕುಮಾರ್ (ಮಧುಬನ್‌ನಲ್ಲಿ 13 BLOಗಳನ್ನು ಮೇಲ್ವಿಚಾರಣೆ ಮಾಡುವವರು) ಹೇಳುವಂತೆ; ಹಲವು ಬಿಎಲ್‌ಒಗಳು 2010-11ರಿಂದ ಇಂತಹ ಸಮಸ್ಯೆಗಳ ಕುರಿತು ಜಿಲ್ಲಾ ಮಟ್ಟದ ಚುನಾವಣಾ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಆದರೆ, ಆಯೋಗವು ಇನ್ನೂ ಆ ಬಗ್ಗೆ ಕ್ರಮ ಕೈಗೊಂಡಿಲ್ಲ.
ನೆಲದಲ್ಲಿಲ್ಲದ ಹಲವಾರು ಮನೆಗಳು ಕಾಗದದ ಮೇಲಿವೆ
ಕೆಲವು ಪ್ರಕರಣಗಳಲ್ಲಿ ವಿಳಾಸ ಮತ್ತು ಮನೆಗಳ ಅಸ್ತಿತ್ವದ ಬಗ್ಗೆಯೇ ಗೊಂದಲಗಳಿದ್ದವು. ಅಂತಹ ಕೆಲವು ವಿಳಾಸಗಳಲ್ಲಿ ಯಾವುದೇ ಮನೆಗಳೇ ಇಲ್ಲ ಎಂಬುದು ಕಂಡುಬಂದಿದೆ.
ಕಟಿಹಾರ್ ಜಿಲ್ಲೆಯಲ್ಲಿನ ಬೂತ್ ಸಂಖ್ಯೆ 222ರಲ್ಲಿ ಮನೆ ಸಂಖ್ಯೆ 82ರಲ್ಲಿ 197 ಮತದಾರರು ದಾಖಲಾಗಿರುವುದು ಕರಡು ಚುನಾವಣಾ ಪಟ್ಟಿಯಲ್ಲಿ ಕಂಡುಬಂದಿದೆ. ಈ ವಿಳಾಸವು ಕಟಿಹಾರ್‌ನ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ ಎಂದು ಪಟ್ಟಿ ಮಾಡಲಾಗಿದೆ.
ಈ ವಿಳಾಸ ಹೊಂದಿರುವ ಮನೆಯನ್ನು ಪತ್ರಕರ್ತರ ತಂಡ ಹುಡುಕಿಕೊಂಡು ಹೋದಾಗ, ಕಿರಿದಾದ ಗಲ್ಲಿಯಲ್ಲಿ ಹಳೆಯದಾದ, ಶಿಥಿಲಗೊಂಡಿದ್ದ ಪುಟ್ಟ ಮನೆ ಕಂಡುಬಂದಿದೆ. ಆ ಮನೆಗೆ ಬೀಗ ಹಾಕಿದ್ದು, ಯಾರೊಬ್ಬರೂ ವಾಸವಾಗಿಲ್ಲ.
ಆ ಮನೆಯ ಸಮೀಪದ ನಿವಾಸಿಯಾದ ಶಂಭುನಾಥ್ ಝಾ ಅವರು ”ಈ ಮನೆ, ಇಳಿಜಾರಿನಲ್ಲಿರುವ ಕಾರಣ, ಮಳೆಗಾಲದಲ್ಲಿ ಆಗಾಗ ಪ್ರವಾಹಕ್ಕೆ ಒಳಗಾಗುತ್ತಿತ್ತು. 20 ವರ್ಷಗಳಿಂದ ಈ ಮನೆಯಲ್ಲಿ ಯಾರೂ ವಾಸವಾಗಿಲ್ಲ. ಮನೆ ವಿಚಾರವಾಗಿ ಕುಟುಂಬದ ಇಬ್ಬರ ನಡುವಿನ ಕಾನೂನು ವ್ಯಾಜ್ಯಗಳಿಂದಾಗಿ ಮನೆಗೆ ಬೀಗ ಹಾಕಲಾಗಿದೆ” ಎಂದು ತಿಳಿಸಿದ್ದಾರೆ.
ಝಾ ಅವರ ಪ್ರಕಾರ, ಆ ಮನೆಯಲ್ಲಿ ಡಾ. ಎ.ಕೆ ಮಿಶ್ರಾ ಎಂಬ ವ್ಯಕ್ತಿ ವಾಸಿಸುತ್ತಿದ್ದರು. ಈಗ ಅವರು 180 ಕಿ.ಮೀ. ದೂರದ ಬೆಗುಸರಾಯಿಯಲ್ಲಿದ್ದಾರೆ. ಈಗ, ಆ ಮನೆ ಪಾಳುಬಿದ್ದಿದೆ.
ಆದರೆ, ಅದೇ ಮನೆಯ ವಿಳಾಸದಲ್ಲಿ ಈಗಿನ ಕರಡು ಮತದಾರರ ಪಟ್ಟಿಯಲ್ಲಿ 197 ಮಂದಿ ಮತದಾರರನ್ನು ಪಟ್ಟಿ ಮಾಡಲಾಗಿದೆ. ಅವರಲ್ಲಿ ಪ್ರಮೋದ್ ಕುಮಾರ್ ಅಗರ್‌ವಾಲ್ ಎಂಬ ವ್ಯಕ್ತಿಯೂ ಒಬ್ಬರು. ಆದರೆ, ಅವರು ವಾಸಿಸುತ್ತಿರುವ ಮನೆ ಸಂಖ್ಯೆ 183 ಆಗಿದೆ ಎಂಬುದನ್ನು ಪತ್ರಕರ್ತರು ಕಂಡುಹಿಡಿದಿದ್ದಾರೆ. ಅಲ್ಲದೆ, ಆ ಮನೆಯ ವಿಳಾಸದಲ್ಲಿ ಪಟ್ಟಿಮಾಡದ ಬಹುತೇಕರ ಬಗ್ಗೆ ಅಗರ್‌ವಾಲ್ ಅವರಿಗೂ ತಿಳಿದಿಲ್ಲ.
ಆ ಮನೆ ಇರುವ ಬೂತ್ ಸಂಖ್ಯೆ 222ರ ಬಿಎಲ್‌ಒ ಸೀತಾ ಕುಮಾರಿ, ಈ ಮನೆಯ ವಿಳಾಸದಲ್ಲಿ ಸುಮಾರು 200 ಜನರು ದಾಖಲಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ. ”ನೀವು ಹೇಳಿದ್ದು ಸರಿ. ಈ ಹಿಂದೆಯೇ ಈ ರೀತಿಯಲ್ಲಿ ಮತದಾರರನ್ನು ದಾಖಲಿಸಲಾಗಿದೆ. ನಾವು ಅದನ್ನು ಸರಿಪಡಿಸಬೇಕು. ಸರಿಪಡಿಸುವ ಕೆಲಸ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ
ಕಟಿಹಾರ್ ಜಿಲ್ಲೆಯ ಬೂತ್ ಸಂಖ್ಯೆ 175ರ ಮನೆ ಸಂಖ್ಯೆ 4ರಲ್ಲಿ 136 ಮಂದಿ ಮತದಾರರನ್ನು ದಾಖಲಿಸಲಾಗಿದೆ. ಆದರೆ, ಈ ವಿಳಾಸದ ಮನೆಯು ನೆಲದ ಮೇಲೆ ಕಾಣಿಸುವುದೂ ಇಲ್ಲ, ಅಧಿಕೃತ ದಾಖಲೆಗಳಲ್ಲಿಯೂ ಇಲ್ಲ. ಬದಲಾಗಿ, ಮನೆ ಸಂಖ್ಯೆ 4 ಎಂದು ಗುತಿಸಲಾಗಿರುವ ಸ್ಥಳದಲ್ಲಿ ಒಂದು ಜಿಮ್ ಇದೆ. ಅದೂ ಕೂಡ ಮುಚ್ಚಿದೆ.
ಅಂತೆಯೇ, ಉತ್ತರ ಬಿಹಾರದ ಪೂರ್ವ ಚಂಪಾರನ್ ಜಿಲ್ಲೆಯ ಹರ್ಸಿಧಿ ಕ್ಷೇತ್ರದ ತುರ್ಕೌಲಿಯಾ ಗ್ರಾಮದಲ್ಲಿ ಮನೆಗಳಿಗೆ ಯಾವುದೇ ಸಂಖ್ಯೆಯನ್ನು ನೀಡಲಾಗಿಲ್ಲ. ಆದಾಗ್ಯೂ, ಗ್ರಾಮವು ಬೂತ್ ಸಂಖ್ಯೆ 288ರ ವ್ಯಾಪ್ತಿಯಲ್ಲಿದೆ. ಇಲ್ಲಿ, 82 ಮತದಾರರು ಒಂದೇ ವಿಳಾಸದಡಿ, ಮನೆ ಸಂಖ್ಯೆ 2ರಲ್ಲಿ ದಾಖಲಾಗಿದ್ದಾರೆ.
ಈ ಬೂತ್‌ನ ವಾರ್ಡ್ ಕೌನ್ಸಿಲರ್ ಸಂತ್ ಕುಮಾರ್ ರಾಮ್ ಮತ್ತು ಕೃಷ್ಣ ಪಾಸ್ವಾನ್ ಎಂಬವರು ಕೂಡ ಇದೇ ಮನೆಯ ನಿವಾಸಿಗಳು ಎಂದು ದಾಖಲಿಸಲಾಗಿದೆ. ಈ ಇಬ್ಬರನ್ನು ಪತ್ರಕರ್ತರ ತಂಡವು ಭೇಟಿ ಮಾಡಿದಾಗ, ತಮ್ಮ ವಿಳಾಸದೊಂದಿಗೆ ಇತರ 80 ಮಂದಿ ನೋಂದಣಿಯಾಗಿದ್ದಾರೆ ಎಂಬುದನ್ನು ತಿಳಿದು ಕಕ್ಕಾಬಿಕ್ಕಿಯಾಗಿದ್ದಾರೆ. ಆದಾಗ್ಯೂ, ತಮ್ಮ ನಿವಾಸದ ವಿಳಾಸದ ಜೊತಗೆ ನೋಂದಣಿಯಾಗಿರುವ ಕೆಲವು ಮತದಾರರು ವಿಭಿನ್ನ ಮನೆಗಳು ಮತ್ತು ವಿಭಿನ್ನ ಬೂತ್‌ಗಳ ನಿವಾಸಿಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆ ಮನೆಯ ನಿವಾಸಿಯೆಂದು ಪಟ್ಟಿ ಮಾಡಲಾಗಿರುವ ಬೇರೊಬ್ಬ ಮತದಾರ, ತಾನು ಆ ಮನೆಯಲ್ಲಿ ವಾಸಿಸುತ್ತಿಲ್ಲ. ಆ ಮನೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮನೆ ಇರುವ ಬೂತ್ ಸಂಖ್ಯೆ 288ರ ಬಿಎಲ್‌ಒ ನೀತಿ ಪ್ರಕಾಶ್, ಈ ಸಮಸ್ಯೆಗೂ ತಮಗೂ ಯಾವುದೇ ಸಂಬಂಧವಿಲ್ಲ. ನಾನು ಹೊಸರಾಗಿ ನೇಮಕಗೊಂಡಿದ್ದೇನೆ. ನನ್ನ ನೇಮಕಾತಿಗೂ ಮುನ್ನವೇ ಈ ಸಮಸ್ಯೆ ಸಂಭವಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಚದ್ರಹಿಯಾ ಗ್ರಾಮದ (ಬೂತ್ ಸಂಖ್ಯೆ 114) ಮನೆ ಸಂಖ್ಯೆ 5ರಲ್ಲಿ 48 ಜನರು ದಾಖಲಾಗಿದ್ದಾರೆ. ವಾಸ್ತವವಾಗಿ ಲಾಲ್‌ಬಾಬು ಬಿನ್ ಮತ್ತು ಅವರ ಪತ್ನಿ ಮಾತ್ರವೇ ಈ ವಿಳಾಸದಲ್ಲಿ ವಾಸವಾಗಿದ್ದಾರೆ. ಉಳಿದ, 46 ಮಂದಿಯಲ್ಲಿ ಕೆಲವರು ಲಾಲ್‌ಬಾಬು ಅವರು ನೆರೆಹೊರೆಯವರಾಗಿದ್ದಾರೆ.
”ಈ ದೋಷವು ಚುನಾವಣಾ ನೋಂದಣಿ ವ್ಯವಸ್ಥೆ ಮತ್ತು ಜಿಲ್ಲಾಡಳಿತದಿಂದ ಸಂಭವಿಸಿದೆ” ಎಂದು ಬೂತ್ ಸಂಖ್ಯೆ 114ರ ಬಿಎಲ್‌ಒ ಅಸ್ಗರ್ ಅಲಿ ತಿಳಿಸಿದ್ದಾರೆ. ”SIR ಪ್ರಕ್ರಿಯೆ ಪ್ರಾರಂಭವಾದಾಗ, ಸತ್ತವರು, ಸ್ಥಳಾಂತರಗೊಂಡವರು ಹಾಗೂ ಬೂತ್ ವ್ಯಾಪ್ತಿಯಲ್ಲಿ ವಾಸಿಸದವರ ಹೆಸರುಗಳನ್ನು ಕಿತ್ತುಹಾಕುವುದನ್ನು ಬಿಟ್ಟು, ಮತದಾರರ ಪಟ್ಟಿಯಲ್ಲಿ ಬೇರಾವುದೇ ಬದಲಾವಣೆಗಳನ್ನು ಮಾಡಬಾರದು ಎಂಬುದಾಗಿ ತಮ್ಮ ತಮ್ಮ ಮೇಲ್ವಿಚಾರಕರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಮೌಖಿಕವಾಗಿ ಸೂಚನೆ ನೀಡಿದ್ದರು” ಎಂದು ಅಲಿ ವಿವರಿಸಿದ್ದಾರೆ. ಮೇಲ್ವಿಚಾರಕರ ಸೂಚನೆಯ ಕಾರಣದಿಂದಾಗಿ, ತಮಗೆ ಮತದಾರರ ವಿಳಾಸಗಳು ತಪ್ಪಾಗಿವೆ ಎಂಬುದಾಗಿ ಗೊತ್ತಿದ್ದರೂ, ಅವುಗಳನ್ನು ನಾವು ಸರಿಪಡಿಸಲಿಲ್ಲ ಎಂದು ಅವರು ಹೇಳಿದ್ದಾರೆ.
ಪೂರ್ವ ಚಂಪಾರನ್ ಜಿಲ್ಲೆಯ ಮಧುಬನ್ ಕ್ಷೇತ್ರದ ಬಿಶುನ್‌ಪುರ ಮೋಹನ್ ಉರ್ಫ್ ಮಾರ್ಪಾ ಗ್ರಾಮದ ಬೂತ್ ಸಂಖ್ಯೆ 120ರ ಮನೆ ಸಂಖ್ಯೆ 129ರ ವಿಳಾಸದಡಿ 389 ಜನರು ದಾಖಲಾಗಿದ್ದಾರೆ. ಆದರೆ, ಈ ಗ್ರಾಮದ ಯಾವುದೇ ನಿವಾಸಿಯೂ ಈ ಮನೆಯನ್ನು ಗುರುತಿಸಲಿಲ್ಲ.
ವಿಚಿತ್ರವೆಂದರೆ, ಈ ಬೂತ್‌ನ ಬಿಎಲ್‌ಒ ಕೂಡ ಇದೇ ಮನೆಯ ನಿವಾಸಿಯೆಂದು ಮತದಾರರ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಅಲ್ಲಿನ BLO ನಿರಾಕರಿಸಿದ್ದಾರೆ.
ಇನ್ನು, ಇದೇ ಮನೆ ಸಂಖ್ಯೆ 129ರ ನಿವಾಸಿಗಳೆಂದು ಪಟ್ಟಿ ಮಾಡಲಾದ ಜಗನ್ನಾಥ್ ಪಾಸ್ವಾನ್ ಮತ್ತು ದೇವನಾಥ್ ಪಾಸ್ವಾನ್ ಎಂಬ ಇಬ್ಬರು ಸಹೋದರರು ಕೃಷಿ ಕಾರ್ಮಿಕರಾಗಿದ್ದು, ಅವರು ತಮ್ಮ ಕುಟುಂಬಗಳೊಂದಿಗೆ ಮಣ್ಣಿನ ಮತ್ತು ಹುಲ್ಲಿನ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ತಮಗೂ ತಮ್ಮನ್ನು ನಿವಾಸಿಗಳೆಂದು ಗುರುತಿಸಲಾದ ವಿಳಾಸಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಆ ವಿಳಾಸದಲ್ಲಿ ಹೆಸರಿಸಲಾಗಿರುವ 386 ಮಂದಿಯ ಪರಿಚಯವೂ ತಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಹಿತಿ ಮೂಲ: ದಿ ವೈರ್