ಆರ್‌ಜೆಡಿಯೊಂದಿಗೆ ಮೈತ್ರಿ ಸಂಬಂಧ ಕಳೆದುಕೊಂಡು ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಸರ್ಕಾರ ರಚನೆಗೆ ಹಕ್ಕು ಸಾಧಿಸಲು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿದ್ದಾರೆ.
ರಾಜ್ಯಪಾಲರಿಗೆ ಬಿಜೆಪಿ ಬೆಂಬಲ ಪತ್ರವನ್ನು ಸಲ್ಲಿಸಿರುವ ನಿತೀಶ್, ಸಂಜೆ 5 ಗಂಟೆಗೆ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
ಕಳೆದ 18 ತಿಂಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡು ಮತ್ತೆ ಸೇರ್ಪಡೆಯಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಅಲ್ಲದೆ 11 ವರ್ಷಗಳಲ್ಲಿ ಇದು ನಾಲ್ಕನೇ ಬಾರಿ.
2017ರಲ್ಲಿಯೇ ಸಂಬಂಧಿಸಿದಂತೆಯೇ ಸರ್ಕಾರ ರಚನೆ ಸಂಬಂಧ ಬಿಜೆಪಿ ಶಾಸಕರು ಹಾಗೂ ಸಂಸದರು ಹಗ್ಗಜಗ್ಗಾಟ ನಡೆಸುತ್ತಿದ್ದು ಭಾನುವಾರ ಬೆಳಿಗ್ಗೆ ಮುಖ್ಯಮಂತ್ರಿ ನಿವಾಸದಲ್ಲಿ ಸಭೆ ಸೇರಿ ಮಾತುಕತೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂವರು ಮಾನಗೆಟ್ಟ ನಾಯಕರು ಮತ್ತು ರಾಮ ರಾಜಕಾರಣ
ಇಂದು ಸಂಜೆ ರಾಜ್ಯಪಾಲರು ಸರ್ಕಾರ ರಚನೆಗೆ ನಿತೀಶ್ ಅವರನ್ನು ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಬಹುದು ಎಂದು ಹತ್ತಿರದ ಮೂಲಗಳು ತಿಳಿಸಿವೆ.
ನೂತನ ಸರ್ಕಾರದಲ್ಲಿ ಬಿಜೆಪಿ ನಾಯಕರಾದ ವಿಜಯ್ ಸಿನ್ಹಾ ಹಾಗೂ ಸಾಮ್ರಾಟ್ ಚೌಧರಿ ಉಪ ಮುಖ್ಯಮಂತ್ರಿಗಳಾಗಬಹುದು ಎಂದು ಹೇಳಲಾಗುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಂಜೆ 4 ಗಂಟೆ ವೇಳೆಗೆ ಬಿಹಾರಕ್ಕೆ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ಬೆಳಿಗ್ಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್ ಕುಮಾರ್ ಸರ್ಕಾರವನ್ನು ವಿಸರ್ಜಿಸಿ ಎಂದು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದರು.