ಕಳೆದ 24 ಗಂಟೆಗಳಲ್ಲಿ ಬಿಹಾರದಲ್ಲಿ ಭಾರೀ ಮಳೆಯಾಗುತ್ತಿದ್ದು, ಬಗಾಹಾದಲ್ಲಿ ಸುಮಾರು 150 ಕಾರ್ಮಿಕರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸಿಕ್ಕಿಬಿದ್ದ 150 ಕಾರ್ಮಿಕರಲ್ಲಿ, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಇದುವರೆಗೆ ಸುಮಾರು 40 ಜನರನ್ನು ರಕ್ಷಿಸಿವೆ, ಇದರಲ್ಲಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.
ಕಾರ್ಮಿಕರು ಗದ್ದೆಗಳಲ್ಲಿ ಕೆಲಸ ಮಾಡಲು ಗಂಡಕ್ ನದಿಯನ್ನು ದಾಟುತ್ತಿದ್ದಾಗ ನದಿಯ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಏರಿದ್ದು ಕಾರ್ಮಿಕರು ಪ್ರವಾಹದಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಮಾಹಿತಿ ಪಡೆದ ಸ್ಥಳೀಯ ಆಡಳಿತವು ಎಸ್‌ಡಿಆರ್‌ಎಫ್ ತಂಡಗಳನ್ನು ಸ್ಥಳಕ್ಕೆ ರವಾನಿಸಿದ್ದು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.
ಇದನ್ನು ಓದಿದ್ದೀರಾ? ಬಿಹಾರ| ಮತ್ತೆ ಮೂರು ಸೇತುವೆ ಕುಸಿತ; 15 ದಿನಗಳಲ್ಲಿ ಒಂಬತ್ತು ಪ್ರಕರಣ!
ಈ ಬಗ್ಗೆ ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರು, “ರಾಜ್ಯ ಆಡಳಿತದಿಂದ ನಾಲ್ಕು ದೋಣಿಗಳನ್ನು ನಿಯೋಜಿಸಲಾಗಿದೆ. ಎಸ್‌ಡಿಆರ್‌ಎಫ್ ತಂಡವು ರಕ್ಷಣಾ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದೆ” ಎಂದು ಹೇಳಿದ್ದಾರೆ.
ಜನರು ತಾಳ್ಮೆಯಿಂದಿರಲು, ಸುರಕ್ಷಿತ ಸ್ಥಳದಲ್ಲಿ ನಿಲ್ಲಲು ತಿಳಿಸಲಾಗಿದೆ. ಎಸ್‌ಡಿಆರ್‌ಎಫ್ ತಂಡವು ದೋಣಿಗಳು ಮತ್ತು ಇತರ ರಕ್ಷಣಾ ಸಾಧನಗಳೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಸಿಕ್ಕಿಬಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯ ಮಾಡುತ್ತಿದೆ.
ಕಳೆದ 24 ಗಂಟೆಗಳಲ್ಲಿ ಬಿಹಾರದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರಮುಖ ನದಿಗಳಾದ ಕೋಸಿ, ಮಹಾನಂದ, ಬಾಗಮತಿ, ಗಂಡಕ್, ಕಮಲಾ ಬಾಲನ್ ಮತ್ತು ಕಮಲಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ಜಲಸಂಪನ್ಮೂಲ ಇಲಾಖೆ ಹೊರಡಿಸಿದ ಬುಲೆಟಿನ್ ತಿಳಿಸಿದೆ.