ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ 11 ಅಪರಾಧಿಗಳನ್ನು ಬಂಧಮುಕ್ತಗೊಳಿಸಿದ ಗುಜರಾತ್ ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ವಿಪಕ್ಷಗಳು ಸ್ವಾಗತಿಸಿವೆ.
ತೀರ್ಪು ನ್ಯಾಯಕ್ಕೆ ಸಿಕ್ಕ ಜಯ ಎಂದಿರುವುದಲ್ಲದೆ ಅಪರಾಧಿಗಳನ್ನು ಪೋಷಿಸುವ ಬಿಜೆಪಿಯ ಮಹಿಳಾ ವಿರೋಧಿ ನಿರ್ಧಾರವನ್ನು ವಿಪಕ್ಷ ನಾಯಕರು ಖಂಡಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸುಪ್ರೀಂ ತೀರ್ಪು ಬಿಲ್ಕಿಸ್ ಬಾನೊ ಅವರ ನಿರಂತರ ಹೋರಾಟದಿಂದ ಬಿಜೆಪಿ ಸರ್ಕಾರದ ಅಹಂ ವಿರುದ್ಧ ದೊರೆತ ನ್ಯಾಯದ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.
“ಚುನಾವಣಾ ಲಾಭಕ್ಕಾಗಿ ನ್ಯಾಯವನ್ನು ಕೊಲ್ಲುವ ಪ್ರವೃತ್ತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಾಯಕಾರಿಯಾಗಿದೆ. ಇಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ದೇಶದಲ್ಲಿ ಅಪರಾಧಿಗಳ ಪೋಷಕರು ಯಾರೆಂಬುದನ್ನು ಮತ್ತೊಮ್ಮೆ ಹೇಳಿದೆ” ಎಂದು ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಂತಿಮವಾಗಿ ನ್ಯಾಯವೇ ಮೇಲುಗೈ ಸಾಧಿಸಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆ: ಮಾಲ್ಡೀವ್ಸ್‌ನ ಮೂವರು ಮಂತ್ರಿಗಳ ಅಮಾನತು
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ಈ ಆದೇಶದೊಂದಿಗೆ ಬಿಜೆಪಿಯ ಮಹಿಳಾ ವಿರೋಧಿ ನೀತಿಗಳ ಮುಸುಕನ್ನು ತೆಗೆದುಹಾಕಲಾಗಿದೆ. ಇದರಿಂದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಾರ್ವಜನಿಕರ ಆತ್ಮವಿಶ್ವಾಸವು ಮತ್ತಷ್ಟು ಬಲಗೊಳ್ಳಲಿದೆ. ಧೈರ್ಯದೊಂದಿಗೆ ನಿರಂತರ ಹೋರಾಟ ಮಾಡಿದ ಬಿಲ್ಕಿಸ್ ಬಾನೋ ಅವರಿಗೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ.
ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದು, ಯಾವುದೇ ಸರ್ಕಾರವು ಇಂತಹ ಕ್ರಿಮಿನಲ್‌ಗಳನ್ನು ಬಿಡುಗಡೆಗೊಳಿಸುವ ಅಧಿಕಾರಕ್ಕೆ ಕೈಹಾಕಬಾರದು. ಈ ಬಗ್ಗೆ ಇನ್ನೂ ಮೂಕರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೇಳ ಬಯಸುತ್ತೇನೆ. ಕೇಂದ್ರ ಗೃಹ ಸಚಿವಾಲಯವು ಅಪರಾಧಿಗಳ ಮುಂಚಿತ ಬಿಡುಗಡೆಗೆ ಅನುಮೋದನೆ ನೀಡಿತ್ತು. ಮಹಿಳಾ ಸಬಲೀಕರಣದ ಬಗ್ಗೆ ಪ್ರಧಾನಮಂತ್ರಿಗಳ ಪೊಳ್ಳು ಭರವಸೆಗಳ ಹೇಳಿಕೆ ತೀರ್ಪಿನಿಂದ ಬಹಿರಂಗಗೊಂಡಿದೆ”ಎಂದಿದ್ದಾರೆ.
ವಿಪಕ್ಷಗಳಾದ ಟಿಎಂಸಿ, ಉದ್ಧವ್ ಠಾಕ್ರೆ ಬಣದ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಹಲವು ನಾಯಕರು, ಅಪರಾಧಿಗಳನ್ನು ಬಿಡುಗಡೆ ಮಾಡಿದ ಬಿಜೆಪಿ ಸರ್ಕಾರಕ್ಕೆ ಕಪಾಳ ಮೋಕ್ಷ ಎಂದು ಟೀಕಿಸಿದ್ದಾರೆ.