ಫೈಜಾಬಾದ್ ಮೀಸಲು ಕ್ಷೇತ್ರವೇನೂ ಅಲ್ಲ. ಈ ಸಾಮಾನ್ಯ ಕ್ಷೇತ್ರದಿಂದ ದಲಿತ ಅಭ್ಯರ್ಥಿಯನ್ನು ಇಳಿಸಿ ಗೆಲ್ಲಿಸಿಕೊಂಡಿರುವ ಹೆಗ್ಗಳಿಕೆ ಸಮಾಜವಾದಿ ಪಾರ್ಟಿಯದು.
ಹಾಲಿ ಲೋಕಸಭಾ ಚುನಾವಣೆಗಳಲ್ಲಿ ಉತ್ತರಪ್ರದೇಶ ಬಿಜೆಪಿಗೆ ಹಲವು ಅನಿರೀಕ್ಷಿತ ಆಘಾತಗಳನ್ನು ನೀಡಿದೆ. ಅವುಗಳ ಪೈಕಿ ಅಯೋಧ್ಯೆ ಅಥವಾ ಫೈಜಾಬಾದ್ ಕ್ಷೇತ್ರದ ಸೋಲು ಭರಿಸಲಾಗದ ಭಾರೀ ಮುಖಭಂಗ. ಫೈಜಾಬಾದ್ ಮೀಸಲು ಕ್ಷೇತ್ರವೇನೂ ಅಲ್ಲ. ಈ ಸಾಮಾನ್ಯ ಕ್ಷೇತ್ರದಿಂದ ದಲಿತ ಅಭ್ಯರ್ಥಿಯನ್ನು ಇಳಿಸಿ ಗೆಲ್ಲಿಸಿಕೊಂಡಿರುವ ಹೆಗ್ಗಳಿಕೆ ಸಮಾಜವಾದಿ ಪಾರ್ಟಿಯದು.
ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಿ ಅದೇ ಜಾಗದಲ್ಲಿ ಭವ್ಯ ರಾಮಮಂದಿರ ನಿರ್ಮಿಸುವ ಭರವಸೆಯನ್ನು ಬಿಜೆಪಿ ಇತ್ತೀಚೆಗಷ್ಟೇ ಈಡೇರಿಸಿತ್ತು. ಬಾಬರಿ ಮಸೀದಿ-ರಾಮಮಂದಿರ ರಾಜಕಾರಣ ಬಿಜೆಪಿಯನ್ನು ದೇಶದ ನಾನಾ ಭಾಗಗಳಲ್ಲಿ ಗೆಲುವು ಕಂಡಿತ್ತು.
ನಾಲ್ಕು ತಿಂಗಳ ಹಿಂದೆಯಷ್ಟೇ ಭವ್ಯ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯನ್ನು ಬಿಜೆಪಿ ನೆರವೇರಿಸಿ ಭಾರೀ ಪ್ರಚಾರ ಪಡೆದಿತ್ತು. ಈ ವಿಷಯವನ್ನು ಬಿಜೆಪಿಯು ಲೋಕಸಭಾ ಚುನಾವಣೆಗಳ ಚರ್ಚೆಯ ಪ್ರಮುಖ ವಿಚಾರವನ್ನಾಗಿ ಬಳಸಿತ್ತು.
ಸಮಾಜವಾದಿ ಪಾರ್ಟಿಯ ಅವಧೇಶ್ ಪ್ರಸಾದ್ 54 ಸಾವಿರಕ್ಕೂ ಹೆಚ್ಚು ಮತಗಳಿಂದ ಬಿಜೆಪಿ ಅಭ್ಯರ್ಥಿ ಲಲ್ಲೂಸಿಂಗ್ ಅವರನ್ನು ಸೋಲಿಸಿದ್ದಾರೆ. ರಾಮಮಂದಿರ ರಾಜಕಾರಣದ ಕೇಂದ್ರಬಿಂದುವಾದ ಅಯೋಧ್ಯೆ- ಫೈಜಾಬಾದ್ ಕ್ಷೇತ್ರದ ಸೋಲು ಬಿಜೆಪಿಗೆ ಆಗಿರುವ ಬಹುದೊಡ್ಡ ಮುಖಭಂಗ.
ರಾಮ ಮನೋಹರ್ ಲೋಹಿಯಾ ಮತ್ತು ಕವಿ ಕುಂವರ್ ನಾರಾಯಣ್ ಜನಿಸಿದ ನೆಲವಿದು. ದಲಿತರು ಗಣನೀಯ ಸಂಖ್ಯೆಯಲ್ಲಿರುವ ಕ್ಷೇತ್ರ. ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿರುವ ಅವಧೇಶ್ ಪ್ರಸಾದ್ ಅವರು ಸಮಾಜವಾದಿ ಪಾರ್ಟಿಯ ಹಿರಿಯ ದಲಿತ ನಾಯಕ.
ಸಮಾಜವಾದಿ ಪಾರ್ಟಿ ಹುಟ್ಟಿದಾಗಿನಿಂದ ಆ ಪಕ್ಷದ ಜೊತೆ ಇರುವವರು. ಮುಲಾಯಂ ಸಿಂಗ್ ಯಾದವ್ ಅವರ ಸಮಕಾಲೀನರು. ಈಗಲೂ ಫೈಜಾಬಾದ್ ಎಂದೂ ಕರೆಯಲಾಗುವ ಈ ಲೋಕಸಭಾ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದವರು. ಈ ಕ್ಷೇತ್ರದ ಮಿಲ್ಕೀಪುರ ಮೀಸಲು ವಿಧಾನಸಭಾ ಕ್ಷೇತ್ರದಿಂದ ಒಂಬತ್ತು ಸಲ ಶಾಸಕರಾಗಿ ಆರಿಸಿ ಬಂದಿರುವವರು. ಐದು ಸಲ ಕ್ಯಾಬಿನೆಟ್ ಮಂತ್ರಿ ಆಗಿದ್ದವರು. ಕಳೆದ ಎರಡೂ ಸಲ ಬಿಜೆಪಿಯ ಲಲ್ಲೂಸಿಂಗ್ ಅವರನ್ನು ಈ ಕ್ಷೇತ್ರ ಗೆಲ್ಲಿಸಿತ್ತು. ಈ ಸಲವೂ ಅವರನ್ನೇ ಹೂಡಿತ್ತು ಬಿಜೆಪಿ. ಅಂದ ಹಾಗೆ ಈ ಲೋಕಸಭಾ ಕ್ಷೇತ್ರದ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳು ಬಿಜೆಪಿ ಶಾಸಕರನ್ನು ಹೊಂದಿವೆ.
ರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ಆಹ್ವಾನವನ್ನು ತಿರಸ್ಕರಿಸಿತೆಂದು, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಾಂಗ್ರೆಸ್ ಪಕ್ಷವೂ ಸೇರಿದಂತೆ ಪ್ರತಿಪಕ್ಷಗಳ ಮೇಲೆ ತೀವ್ರ ದಾಳಿ ನಡೆಸಿದ್ದರು. ಪ್ರತಿಪಕ್ಷಗಳು ಗೆದ್ದರೆ ರಾಮಮಂದಿರದ ಮೇಲೆ ಬುಲ್ಡೋಜರ್ ಹತ್ತಿಸುತ್ತಾರೆ, ರಾಮಮಂದಿರಕ್ಕೆ ಬಾಬ್ರಿ ಬೀಗವನ್ನು ಜಡಿದುಬಿಡುತ್ತಾರೆಂದೂ ಮೋದಿಯವರು ಚುನಾವಣಾ ಭಾಷಣ ಮಾಡಿದ್ದರು.
ರಾಮಮಂದಿರದ ವಿಷಯ ಅಯೋಧ್ಯೆಯ ಹೊರಗೆ ಬಿಜೆಪಿಗೆ ಒಂದಷ್ಟು ಪ್ರಮಾಣದಲ್ಲಿ ಬೆಂಬಲವನ್ನು ಗಟ್ಟಿಗೊಳಿಸಿರಬಹುದು. ಆದರೆ ಅಯೋಧ್ಯೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಆಗಲಿಲ್ಲ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಮಿತ್ರಪಕ್ಷಗಳಿಗೆ ಮಣಿಯುವರೇ ಅಥವಾ ‘ಆಪರೇಷನ್ ಕಮಲ’ಕ್ಕೆ ಶರಣಾಗುವರೇ?
ಬಹುಜನ ಸಮಾಜ ಪಾರ್ಟಿಯ ಸಚ್ಚಿದಾನಂದ ಪಾಂಡೆ 46,407 ಮತಗಳನ್ನು ಗಳಿಸಿ ಮೂರನೆಯ ಸ್ಥಾನದಲ್ಲಿದ್ದಾರೆ. ಸಿಪಿಐನ ಅರವಿಂದ್ ಸೇನ್ 15 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿ ನಾಲ್ಕನೆಯ ಸ್ಥಾನ ತಲುಪಿದರೆ, ಏಳು ಸಾವಿರ ಮತಗಳನ್ನು ಗಳಿಸಿದ ನೋಟಾ ನಾಲ್ಕನೆಯ ಸ್ಥಾನದಲ್ಲಿದೆ.
ಲಲ್ಲೂಸಿಂಗ್ ಅವರು ಸಂವಿಧಾನ ಬದಲಿಸುವ ಕುರಿತು ಕಳೆದ ಏಪ್ರಿಲ್ 13ರಂದು ಮಿಲ್ಕೀಪುರದಲ್ಲಿ ಮಾಡಿದ ಭಾಷಣದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಗೆ 272 ಸ್ಥಾನಗಳು ಸಾಕು. ಆದರೆ ಸಂವಿಧಾನ ಬದಲಿಸಲು ಅಥವಾ ಹೊಸ ಸಂವಿಧಾನ ಜಾರಿಗೆ ತರಲು 400ಕ್ಕೂ ಹೆಚ್ಚು ಸ್ಥಾನಗಳು ಬೇಕು ಎಂದಿದ್ದರು. ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂಬ ಬಿಜೆಪಿ ಘೋಷಣೆಯನ್ನು ಪುನರುಚ್ಚರಿಸಿದ್ದರು.
ಅಯೋಧ್ಯೆಯ ಈ ಕ್ಷೇತ್ರದ ಶೇ.26ರಷ್ಟು ಮತದಾರರು ದಲಿತರು. ಚಮಾರ್, ರಾವತ್ ಹಾಗೂ ಕೋರಿ ಸಮುದಾಯಗಳು ಸಂವಿಧಾನ ಬದಲಿಸಿದರೆ ಮೀಸಲಾತಿ ಕೈ ತಪ್ಪಲಿದೆಯೆಂಬ ಶಂಕೆ ದಲಿತರಲ್ಲಿ ಮೂಡಿತ್ತು. ಮಾಯಾವತಿಯವರು ಬಿ.ಎಸ್.ಪಿ.ಯಿಂದ ಸಚ್ಚಿದಾನಂದ ಪಾಂಡೆ ಎಂಬ ಬ್ರಾಹ್ಮಣ ಅಭ್ಯರ್ಥಿಯನ್ನು ಇಲ್ಲಿ ಕಣಕ್ಕೆ ಇಳಿಸಿದ್ದರು. ಅವರಿಗೆ ಬಿದ್ದ ಮತಗಳು 46,407 ಮಾತ್ರ. ಅಯೋಧ್ಯೆಯ ರಾಮಮಂದಿರ ಸಂಭ್ರಮೋತ್ಸವಗಳಲ್ಲಿ ಬಲಿಷ್ಠ ಜಾತಿಗಳದೇ ಪಾರುಪತ್ಯ ಕಾರುಬಾರು ನಡೆಯಿತು, ತಮ್ಮನ್ನು ನಿರ್ಲಕ್ಷಿಸಲಾಯಿತು ಎಂಬ ಪರಕೀಯ ಭಾವನೆ ದಲಿತರು, ಹಿಂದುಳಿದವರು ಹಾಗೂ ಬಡ ಶ್ರಮಿಕರಲ್ಲಿ ನೆಲೆಸಿತ್ತು.
ಜೊತೆಗೆ ಈ ಕ್ಷೇತ್ರದ ಮುಸ್ಲಿಮ್ ಮತದಾರರ ಸಂಖ್ಯೆ ಐದು ಲಕ್ಷ. ಈ ಮತದಾರರ ಮೇಲೆ ಮಾಯಾವತಿ ಮತ್ತು ಅಖಿಲೇಶ್ ಇಬ್ಬರೂ ಕಣ್ಣಿಟ್ಟಿದ್ದರು. ದಲಿತರು ಮತ್ತು ಮುಸ್ಲಿಮರು ಅಖಿಲೇಶ್ ಅವರ ಸಮಾಜವಾದಿ ಪಾರ್ಟಿಗೆ ಒಲಿದಿದ್ದಾರೆ.
ಅಯೋಧ್ಯೆಯ ರಾಮಮಂದಿರ ನಿರ್ಮಾಣ ಮತ್ತು ಅಯೋಧ್ಯಾ ಟೌನ್ ನ ಅಭಿವೃದ್ಧಿಗೇ ಎಲ್ಲ ಗಮನವನ್ನು ನೀಡಿದ ಬಿಜೆಪಿ ಸರ್ಕಾರಗಳು, ಗ್ರಾಮೀಣ ಅಯೋಧ್ಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದವು. ಹೀಗಾಗಿಯೇ, ಬಿಜೆಪಿ ಈ ಲೋಕಸಭಾ ಚುನಾವಣೆಯಲ್ಲಿ ಗ್ರಾಮೀಣ ಅಯೋಧ್ಯೆಯ ಮುನಿಸನ್ನು ಭರಿಸಬೇಕಾಯಿತು.
ರಾಮಮಂದಿರವನ್ನು ಸುಂದರಗೊಳಿಸುವ ಮತ್ತು ಅಯೋಧ್ಯೆಯ ರಾಮಪಥ ಮತ್ತು ಭಕ್ತಿಪಥಗಳನ್ನು ಅಗಲ ಮಾಡುವ ಯೋಜನೆಯಲ್ಲಿ ಮನೆಮಠ, ಅಂಗಡಿ-ಮುಂಗಟ್ಟುಗಳನ್ನು ಕಳೆದುಕೊಂಡವರಿಗೆ ಸಾಕಷ್ಟು ಪರಿಹಾರ ದೊರೆತಿಲ್ಲ. ಅಂಗಡಿ ಮುಂಗಟ್ಟುಗಳ ಕಳೆದುಕೊಂಡವರಿಗೆ ‘ಅಯೋಧ್ಯಾ ಹಾಟ್’ನಲ್ಲಿ ಬದಲಿ ಸ್ಥಳವೇನೋ ದೊರೆಯಿತು. ಆದರೆ ಅದು ಜನಸಂದಣಿಯಿಲ್ಲದ ಜಾಗ. ವ್ಯಾಪಾರ ಭಣಭಣ. ಜೊತೆಗೆ ಲಲ್ಲೂಸಿಂಗ್ ಅವರು ಈಗಾಗಲೆ ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಬಿಜೆಪಿ ಮೂರನೆಯ ಸಲವೂ ಅವರನ್ನೇ ಅಭ್ಯರ್ಥಿಯಾಗಿ ಹೂಡಿತ್ತು.
1991ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿನಯ್ ಕಟಿಯಾರ್ ಇಲ್ಲಿಂದ ಗೆದ್ದಿದ್ದರು. ಆನಂತರ ಲಲ್ಲೂಸಿಂಗ್ 2014 ಮತ್ತು 2019ರ ಚುನಾವಣೆಗಳಲ್ಲಿ ಗೆದ್ದದ್ದು ಬಿಟ್ಟರೆ ಈ ಕ್ಷೇತ್ರವನ್ನು ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಸಿಪಿಐ ಹಾಗೂ ಬಹುಜನ ಸಮಾಜ ಪಾರ್ಟಿಗಳೇ ಪ್ರತಿನಿಧಿಸಿದ್ದವು.
