ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ನೈತಿಕ ಹೊಣೆ ಹೊತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಕೆ. ಅಣ್ಣಾಮಲೈ ಅವರಿಗೆ ಬಿಜೆಪಿ ಹೈಕಮಾಂಡ್ ಮಹತ್ವದ ಸೂಚನೆ ನೀಡಿದೆ. ಈಗಲೇ ಆತುರಪಟ್ಟು ರಾಜೀನಾಮೆ ನೀಡುವ ಅಗತ್ಯವಿಲ್ಲ, ಹುದ್ದೆಯಲ್ಲಿ ಮುಂದುವರಿಯಿರಿ ಎಂದು ಪಕ್ಷದ ಹಿರಿಯ ನಾಯಕರಾದ ಅಮಿತ್ ಶಾ, ಬಿ.ಎಲ್. ಸಂತೋಷ್ ಹಾಗೂ ನಿತಿನ್ ನಬಿನ್ ಅವರು ಅಣ್ಣಾಮಲೈ ಅವರಿಗೆ ಕಿವಿಮಾತು ಹೇಳಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದ ಸ್ಥಾನಗಳನ್ನು ಗೆಲ್ಲುವಲ್ಲಿ ಬಿಜೆಪಿ ವಿಫಲವಾಗಿತ್ತು. ಪಕ್ಷದ ಈ ಕಳಪೆ ಸಾಧನೆಯಿಂದ ತೀವ್ರ ನಿರಾಸೆಗೊಂಡಿದ್ದ ಅಣ್ಣಾಮಲೈ, ಸೋಲಿನ ಸಂಪೂರ್ಣ ಹೊಣೆಯನ್ನು ತಾವೇ ವೈಯಕ್ತಿಕವಾಗಿ ಹೊತ್ತುಕೊಳ್ಳುವುದಾಗಿ ಆಪ್ತರ ಬಳಿ ತೋಡಿಕೊಂಡಿದ್ದರು. ಅಲ್ಲದೆ, ತಕ್ಷಣವೇ ನವದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲು ನಿರ್ಧರಿಸಿದ್ದರು. ಈ ದಿಢೀರ್ ಬೆಳವಣಿಗೆಯು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನು ಓದಿದ್ದೀರಾ? ಒಡಿಶಾ | ‘ವೇದಾಂತ’ ಗಣಿಗಾರಿಕೆಯಡಿ ಸಮಾಧಿಯಾಗಲಿದೆ ಸಿಜಿಮಲಿ ಗುಡ್ಡದ ಆದಿವಾಸಿಗಳ ಆಸ್ಥೆ-ಅಸ್ಮಿತೆ
ಅಣ್ಣಾಮಲೈ ನಿರ್ಧಾರದ ಬಗ್ಗೆ ಮುನ್ಸೂಚನೆ ಪಡೆದ ತಕ್ಷಣವೇ ಕಾರ್ಯಪ್ರವೃತ್ತರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್, ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿದ್ದಾರೆ. ‘ತಮಿಳುನಾಡಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ನೀವು ಪಟ್ಟಿರುವ ಶ್ರಮ ಅಪಾರವಾಗಿದೆ. ಕೇವಲ ಒಂದು ಚುನಾವಣೆಯ ಸೋಲಿನಿಂದ ವಿಚಲಿತರಾಗಿ ಹುದ್ದೆ ತ್ಯಜಿಸುವುದು ಸರಿಯಾದ ನಡೆಯಲ್ಲ. ಸದ್ಯಕ್ಕೆ ರಾಜೀನಾಮೆ ನೀಡುವ ಯೋಚನೆಯನ್ನು ಕೈಬಿಡಿ’ ಎಂದು ಇಬ್ಬರೂ ನಾಯಕರು ಸ್ಪಷ್ಟವಾಗಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಪಕ್ಷದ ಪ್ರಮುಖ ನಾಯಕರಾದ ನಿತಿನ್ ನಬಿನ್ ಅವರು ಕೂಡ ಅಣ್ಣಾಮಲೈ ಜೊತೆ ಸುದೀರ್ಘ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ‘ಚುನಾವಣಾ ಸೋಲಿಗೆ ಕೇವಲ ಅಧ್ಯಕ್ಷರೊಬ್ಬರೇ ಕಾರಣರಾಗುವುದಿಲ್ಲ. ಸೋಲಿನ ಹಿಂದಿನ ನೈಜ ಕಾರಣಗಳ ಬಗ್ಗೆ ಪಕ್ಷದ ವೇದಿಕೆಯಲ್ಲಿ ವಿಸ್ತೃತವಾಗಿ ಪರಾಮರ್ಶೆ ನಡೆಸೋಣ. ನಿರಾಸೆಗೊಂಡಿರುವ ಕಾರ್ಯಕರ್ತರಲ್ಲಿ ಮತ್ತೆ ಆತ್ಮಸ್ಥೈರ್ಯ ತುಂಬುವ ಕೆಲಸ ಈಗ ತುರ್ತಾಗಿ ಆಗಬೇಕಿದೆ. ಆದ್ದರಿಂದ ನಾಯಕತ್ವದಿಂದ ಹಿಂದೆ ಸರಿಯುವ ನಿರ್ಧಾರ ಬೇಡ’ ಎಂದು ಹೇಳಿದ್ದಾರೆ ಎನ್ನಲಾಗಿದೆ. ವರಿಷ್ಠರ ಈ ಸ್ಪಷ್ಟ ಸೂಚನೆ ಹಾಗೂ ಭರವಸೆಯ ಬೆಂಬಲದ ಬಳಿಕ ಅಣ್ಣಾಮಲೈ ತಮ್ಮ ರಾಜೀನಾಮೆ ನಿರ್ಧಾರದಿಂದ ಸದ್ಯಕ್ಕೆ ಹಿಂದೆ ಸರಿದಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.





