ಲೋಕಸಭೆ ಚುನಾವಣೆಯ ನಂತರ ‘ಇಂಡಿಯಾ’ ಒಕ್ಕೂಟ ಕನಿಷ್ಠ 315 ಕ್ಷೇತ್ರಗಳನ್ನು ಗೆಲ್ಲಲಿದ್ದು, ಬಿಜೆಪಿ 200 ಕ್ಷೇತ್ರಗಳನ್ನು ದಾಟದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಕೋಲ್ಕತ್ತಾದಿಂದ 78 ಕಿ.ಮೀ ದೂರವಿರುವ ಉತ್ತರ 24 ಪರಗಣದ ಪಟ್ಟಣದ ರ್ಯಾಲಿಯಲ್ಲಿ ಮಾತನಾಡಿದರು. ಇಂಡಿಯಾ ಒಕ್ಕೂಟ 315 ಸೀಟುಗಳನ್ನು ಗೆದ್ದರೆ, ಬಿಜೆಪಿ ಹೆಚ್ಚಿಗೆ ಎಂದರೆ 195 ಸ್ಥಾನ ಗಳಿಸಬಹುದು. ಈ ಬಾರಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದು ನನಗೆ ಖಚಿತವಿದೆ. ಮೋದಿ ದೆಹಲಿಯಲ್ಲಿ ಇರುವುದಿಲ್ಲ.ನನಗೆ ಬಂದ ಅಂಕಿಅಂಶಗಳ ಮಾಹಿತಿಯ ಆಧಾರದ ಮೇಲೆ ಹೇಳುತ್ತಿದ್ದೇನೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.
ಮೋದಿ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ.ನಾಲ್ಕು ಹಂತದ ಮತದಾನವಾದ ನಂತರ ಬಿಜೆಪಿ ಪರವಾಗಿ ಮತದಾನ ಚೆನ್ನಾಗಿ ನಡೆದಿಲ್ಲ. ಈ ಕಾರಣದಿಂದ ಕೇಂದ್ರದಲ್ಲಿರುವ ಆಡಳಿತ ಪಕ್ಷ ಭಯಗೊಂಡಿದೆ. ಅದಕ್ಕಾಗಿಯೇ ಅವರು 400 ಸೀಟು ಎಂದು ಬೊಗಳುತ್ತಿದ್ದಾರೆ ಎಂದು ಮಮತಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?
“ಸಂದೇಶ್‌ಖಾಲಿ ಸಮಸ್ಯೆಯ ಬಗ್ಗೆ ಬಿಜೆಪಿ ಹಾಗೂ ಪ್ರಧಾನಿ ಸುಳ್ಳುಗಳನ್ನು ಹರಡುತ್ತಿದ್ದಾರೆ. ಗ್ಯಾರಂಟಿ ನಾಯಕ ಪಶ್ಚಿಮ ಬಂಗಾಳದಲ್ಲಿ ಆರೋಪ ಮಾಡುತ್ತಿದ್ದಾರೆ.ಈಗ ವಿಡಿಯೋಗಳ ಮೂಲಕ ಸತ್ಯ ಬಹಿರಂಗಗೊಂಡಿದೆ. ಅವುಗಳನ್ನು ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಅವರು ಸತ್ಯವನ್ನು ಮುಚ್ಚಿಡುತ್ತಿದ್ದಾರೆ. ರಾಜ್ಯದ ಮಹಿಳೆಯರ ಘನತೆಯನ್ನು ಹಾಳು ಮಾಡಲು ಷಡ್ಯಂತ್ರ ರೂಪಿಸುತ್ತಿದ್ದಾರೆ” ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.
ಭಾನುವಾರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಟಿಎಂಸಿ ಸಂದೇಶ್‌ಖಾಲಿಯಲ್ಲಿನ ಹಿಂದಿನ ದುಷ್ಕೃತ್ಯಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ. ಅವರ ಪಕ್ಷದ ನಾಯಕರು ಲೈಂಗಿಕ ದೌರ್ಜನ್ಯ ಹಾಗೂ ಭೂಕಬಳಿಕೆ ಆರೋಪದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು.
