ಸೂಟ್‌ಕೇಸ್ ಒಳಗೆ 9 ವರ್ಷದ ಬಾಲಕಿಯ ಶವ ಪತ್ತೆಯಾದ ಘಟನೆ ಈಶಾನ್ಯ ದೆಹಲಿಯ ನೆಹರು ವಿಹಾರ್ ಪ್ರದೇಶದಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು ಲೈಂಗಿಕ ದೌರ್ಜನ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಶನಿವಾರ ರಾತ್ರಿ ಸಂಬಂಧಿಕರನ್ನು ಭೇಟಿ ಮಾಡಲು ಹೋಗಿದ್ದಳು. ಆದರೆ ಎರಡು ಗಂಟೆ ಕಳೆದರೂ ಮನೆಗೆ ಹಿಂತಿರುಗದ ಕಾರಣ ಕುಟುಂಬಸ್ಥರು ಹುಡುಕಾಡಿದ್ದಾರೆ. ಬಾಲಕಿ ತನ್ನ ಮನೆಯಿಂದ 200 ಮೀಟರ್ ದೂರದಲ್ಲಿರುವ ಮನೆಯ ಕಡೆಗೆ ಹೋಗುತ್ತಿರುವುದನ್ನು ನೋಡಿರುವ ಸ್ಥಳೀಯರು ತಂದೆಗೆ ಈ ಬಗ್ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಬಂಟ್ವಾಳ | ಅಪ್ರಾಪ್ತ ದಲಿತ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಮಹೇಶ್ ಭಟ್ ಬಂಧಿಸಲು ಒತ್ತಾಯ
ಸ್ಥಳೀಯರು ತಿಳಿಸಿದಂತೆ ತನ್ನ ಮಗಳು ಹೋದ ಕಟ್ಟಡದ ಕಡೆಗೆ ಹೋದಾಗ ಎರಡನೇ ಮಹಡಿಯ ಫ್ಲಾಟ್‌ನ ಬಾಗಿಲು ಹೊರಗಿನಿಂದ ಲಾಕ್ ಆಗಿರುವುದನ್ನು ತಂದೆಗೆ ಕಂಡುಬಂದಿದೆ. ಬಾಗಿಲು ಒಡೆದು ಒಳಗೆ ಹೋದಾಗ ಸೂಟ್‌ಕೇಸ್‌ನಲ್ಲಿ ತನ್ನ ಮಗಳ ಶವ ಪತ್ತೆಯಾಗಿದೆ. ಬಾಲಕಿ ಶವ ಬೆತ್ತಲಾಗಿತ್ತು ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಬಾಲಕಿ ತಂದೆ, “ನಾನು ಆ ಫ್ಲಾಟ್‌ಗೆ ತಲುಪಿ ಬೀಗ ಒಡೆದೆ. ಒಳಗೆ ನನ್ನ ಮಗಳು ಸೂಟ್‌ಕೇಸ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದಳು. ಕೂಡಲೇ ಅವಳನ್ನು ಸಮೀಪದ ನರ್ಸಿಂಗ್ ಹೋಂಗೆ ಕರೆದೊಯ್ದೆ. ನನ್ನ ಮಗಳು ಹತ್ತಿರದಲ್ಲಿ ವಾಸಿಸುವ ನನ್ನ ಸಂಬಂಧಿಕರಿಗೆ ಐಸ್ ನೀಡಲು ಮನೆಯಿಂದ ಹೋಗಿದ್ದಳು” ಎಂದು ತಿಳಿಸಿದ್ದಾರೆ.
“ಸುಮಾರು ಹೊತ್ತಾದರೂ ನನ್ನ ಮಗಳು ಬಾರದ್ದನ್ನು ನೋಡಿ ನಾವು ಸಂಬಂಧಿಕರಿಗೆ ಕರೆ ಮಾಡಿದೆವು. ಆಗ ಅವರು ಬಾಲಕಿ ಮನೆಗೆ ಬಂದೇ ಇಲ್ಲ ಎಂದು ಹೇಳಿದರು. ಹಾಗಾಗಿ ನಾನು ನನ್ನ ಮಗಳನ್ನು ಹುಡುಕಲು ಪ್ರಾರಂಭಿಸಿದೆ. ಯಾರೋ ಅವಳು ಹತ್ತಿರದ ಫ್ಲಾಟ್‌ಗೆ ಹೋಗಿದ್ದಾಳೆ, ಯಾರೋ ಅವಳನ್ನು ಒಳಗೆ ಕರೆದರು ಎಂದು ಹೇಳಿದರು. ಹಾಗಾಗಿ ಅಲ್ಲಿ ಹುಡುಕಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು | ಅರಣ್ಯ ಒತ್ತುವರಿ ಕಾಯ್ದೆ, ಮಹಿಳಾ ಹಕ್ಕು ಕುರಿತ ಕಾನೂನು ಅರಿವು ಕಾರ್ಯಕ್ರಮ ರದ್ದು; ಇದರ ಹಿಂದಿನ ರಹಸ್ಯವೇನು?
“ನಾನು ಕಟ್ಟಡದ ಬಳಿ ಹೋದಾಗ ಅದರ ಮಾಲೀಕರು ಫ್ಲಾಟ್ ಲಾಕ್ ಆಗಿದೆ, ಅದರ ಕೀ ತನ್ನ ಸಹೋದರನ ಬಳಿ ಇದೆ ಎಂದರು. ಹಾಗೆಯೇ ಬಾಲಕಿ ಈಗಾಗಲೇ ಹಿಂದಿರುಗಿ ಹೋಗಿದ್ದಾಳೆ ಎಂದರು. ಆದರೂ ಫ್ಲಾಟ್ ಪರಿಶೀಲಿಸಬಹುದು ಎಂದರು. ನಾವು ಫ್ಲಾಟ್ ಪರಿಶೀಲಿಸಲು ಮುಂದಾದಾಗ ಮಾಲೀಕರು ಓಡಿಹೋದರು. ನಾನು ಬೀಗ ಒಡೆದಾಗ ನನ್ನ ಮಗು ಅಲ್ಲಿ ಸೂಟ್‌ಕೇಸ್‌ನಲ್ಲಿದ್ದಳು” ಎಂದು ತಂದೆ ಹೇಳಿದ್ದಾರೆ. ತಂದೆ ತಕ್ಷಣ ಬಾಲಕಿಯನ್ನು ಜೆಪಿಸಿ ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
“ನೆಹರು ವಿಹಾರ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತು ದಯಾಳ್‌ಪುರ ಪೊಲೀಸ್ ಠಾಣೆಗೆ ಕರೆ ಬಂತು. ನಾವು ಸ್ಥಳಕ್ಕೆ ತಲುಪಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಅವಳ ತಂದೆ ಜೆಪಿಸಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ” ಎಂದು ಪೊಲೀಸ್ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
