ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ‘ದೌಕಿದಾರ್ ಚೋರ್ ಹೆ’ ಎಂದಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ತಮ್ಮ ವಿರುದ್ಧದ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ರಾಹುಲ್ ಗಾಂಧಿ ಅವರ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್.ಆರ್. ಬೋರ್ಕರ್ ಅವರಿದ್ದ ಏಕಸದಸ್ಯ ಪೀಠ, “ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ನಲ್ಲಿ ಯಾವುದೇ ಕಾನೂನುಬಾಹಿರತೆ ಅಥವಾ ಲೋಪ ಕಂಡುಬಂದಿಲ್ಲ” ಎಂದು ಹೇಳಿದೆ.
ಆದಾಗ್ಯೂ, ಈ ತೀರ್ಪುನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ರಾಹುಲ್ ಗಾಂಧಿ ಅವರಿಗೆ ಆರು ವಾರಗಳ ಕಾಲಾವಕಾಶ ನೀಡಿದೆ. ಈ ಅವಧಿಯಲ್ಲಿ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಿದೆ.
2018ರ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಬಿಜೆಪಿಗರು ಮತ್ತು ಮೋದಿ ಭಕ್ತರು ‘ಚೌಕಿದಾರ್’ ಎಂದು ಬಣ್ಣಿಸುತ್ತಿದ್ದರು. ಇದೇ ವೇಳೆ, ಆ ವರ್ಷದ ಸೆಪ್ಟೆಂಬರ್‌ನಲ್ಲಿ ರಾಜಸ್ಥಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, “ಚೌಕಿದಾರ್ ಚೋರ್ ಹೆ” ಎಂದು ಟೀಕಿಸಿದ್ದರು. ಅವರ ಈ ಟೀಕೆಯು ಪ್ರಧಾನಿ ಮೋದಿ ಅವರಿಗೆ ಮಾನಹಾನಿ ಮಾಡಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಮಹೇಶ್ ಶ್ರೀಶ್ರೀಮಲ್ ಎಂಬಾತ ಮುಂಬೈನ ಗಿರ್ಗಾಂವ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ 2019ರ ಆಗಸ್ಟ್‌ನಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಾಹುಲ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿತ್ತು.
ಈ ಲೇಖನ ಓದಿದ್ದೀರಾ?: ಜೆಡಿಎಸ್‌ನಿಂದ ಜಿಟಿಡಿ ದೂರ ದೂರ; ಕಾಂಗ್ರೆಸ್‌ನಲ್ಲಿ ಹೊಸ ನೆಲೆ ಹುಡುಕಾಟವೇ?
ಈ ಸಮನ್ಸ್ ರದ್ದುಗೊಳಿಸುವಂತೆ ಕೋರಿ ರಾಹುಲ್ ಗಾಂಧಿ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ದೂರು ರಾಜಕೀಯ ಪ್ರೇರಿತವಾಗಿದೆ ಮತ್ತು ಪಕ್ಷದ ನಾಯಕರೊಬ್ಬರ ವಿರುದ್ಧದ ಹೇಳಿಕೆಗೆ ಪ್ರತ್ಯೇಕವಾಗಿ ಪ್ರತಿಯೊಬ್ಬ ಕಾರ್ಯಕರ್ತನೂ ದೂರು ನೀಡಲು ಅವಕಾಶವಿಲ್ಲ ಎಂದು ವಾದಿಸಿದ್ದರು.
ಆದರೆ, ಸಂಘಟನೆಯ ಅಥವಾ ಪಕ್ಷದ ನಾಯಕರ ವಿರುದ್ಧದ ಹೇಳಿಕೆಗಳು ಆ ಪಕ್ಷದ ಪದಾಧಿಕಾರಿಗಳಿಗೂ ಅನ್ವಯಿಸುವುದರಿಂದ ದೂರುದಾರರಿಗೆ ಕಾನೂನುಬದ್ಧ ಹಕ್ಕಿದೆ ಎಂದು ಮಹಾರಾಷ್ಟ್ರದ ಅಡ್ವೊಕೇಟ್ ಜನರಲ್ ಮಿಲಿಂದ್ ಸಾಠೆ ಮತ್ತು ದೂರುದಾರರ ಪರ ವಕೀಲರು ವಾದ ಮಂಡಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ಈ ವಿಚಾರದ ಸತ್ಯಾಸತ್ಯತೆಯನ್ನು ವಿಚಾರಣೆ ಹಂತದಲ್ಲೇ ನಿರ್ಧರಿಸಬೇಕಿದ್ದು, ಈಗ ಪ್ರಕರಣ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.




