ಇಸ್ರೋ ಸಂಸ್ಥೆಯನ್ನು ಭಾರತದ ಸಾರ್ವಜನಿಕ ಹಣದಿಂದ ಕಟ್ಟಲಾಗಿದೆ. ಇಂತಹ ಸದೃಢ ಇಸ್ರೋ ಸಂಸ್ಥೆಗೆ ಅಭಿವೃದ್ಧಿಯ ನೆಪದಲ್ಲಿ ಖಾಸಗಿ ಉದ್ಯಮಿಗಳನ್ನು ಆಹ್ವಾನಿಸುವುದು- ಭಾರತದ 60 ವರ್ಷಗಳ ಅಂತರಿಕ್ಷ ಸಾಮರ್ಥ್ಯದ ಲಾಭ ಅನಾಯಾಸವಾಗಿ ಅದಾನಿಗಳಂತಹ ಉದ್ಯಮಿಗಳ ಪಾಲಾದಂತೆ. ಇದನ್ನು ದೇಶದ ಜನ ಅರ್ಥ ಮಾಡಿಕೊಳ್ಳಬೇಕಿದೆ.
‘ಇಸ್ರೋ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಪ್ರಶ್ನೆಯೇ ಇಲ್ಲ, ನೌಕರರು ಆತಂಕ ಪಡುವ ಅಗತ್ಯವೂ ಇಲ್ಲ, ಅದರ ಮಹತ್ವವೂ ಕಡಿಮೆಯಾಗುವುದಿಲ್ಲ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ವಿ. ನಾರಾಯಣನ್ ಸ್ಪಷ್ಟಪಡಿಸಿದ್ದಾರೆ.
ಇಸ್ರೋ ಅಧ್ಯಕ್ಷರು ಹೀಗೆ ಸಾರ್ವಜನಿಕವಾಗಿ ಸ್ಪಷ್ಟಪಡಿಸಲು ಕಾರಣ, ಇತ್ತೀಚೆಗೆ ಇಸ್ರೋದ ನೂರಾರು ಎಂಜಿನಿಯರ್ಗಳು ರಾಜೀನಾಮೆ ಕೊಟ್ಟು ಹೊರನಡೆದದ್ದು ಹಾಗೂ ಅದನ್ನು ಕಂಡು ಆತಂಕಗೊಂಡ ಇಸ್ರೋದ ಒಂಬತ್ತು ಪ್ರಮುಖ ನೌಕರರ ಸಂಘಗಳು ಸರ್ಕಾರದ ನಿರ್ಧಾರದ ಕುರಿತು ಅಧಿಕೃತ ಹಾಗೂ ಲಿಖಿತ ಸ್ಪಷ್ಟನೆ ನೀಡುವಂತೆ ಪತ್ರ ಬರೆದದ್ದು.
ನೂರಾರು ಎಂಜಿನಿಯರ್ ಗಳು ರಾಜೀನಾಮೆ ಕೊಡುವುದು ಸಣ್ಣ ಸಂಗತಿಯಲ್ಲ. ಹಾಗೆಯೇ ಇಸ್ರೋ ಒಳಗೆ ಎಂತಹ ಬೆಳವಣಿಗೆಗಳು ನಡೆಯುತ್ತಿವೆ ಎನ್ನುವುದು ಸಾಮಾನ್ಯರಿಗೆ ತಿಳಿಯುವುದಿಲ್ಲ. ತಿಳಿದಿರುವ ನೌಕರರ ಆತಂಕ ಮತ್ತು ಅನುಮಾನಗಳು ಅಧ್ಯಕ್ಷರ ಸ್ಪಷ್ಟೀಕರಣದ ನಂತರವೂ ತಿಳಿಗೊಂಡಂತೆ ಕಾಣುತ್ತಿಲ್ಲ.
ಏಕೆಂದರೆ, ಅದೇ ಅಧ್ಯಕ್ಷರು, ‘ಭಾರತೀಯ ಬಾಹ್ಯಾಕಾಶ ಚಟುವಟಿಕೆಗಳ ವಿಸ್ತರಣೆಯ ಭಾಗವಾಗಿ ಖಾಸಗಿ ಕಂಪನಿಗಳು ಹಾಗೂ ನವೋದ್ಯಮಗಳ ಜೊತೆ ಸೇರಿ ಇಸ್ರೋ ಕಾರ್ಯ ನಿರ್ವಹಿಸುತ್ತಿದೆ. ಇದರ ಅರ್ಥ ಖಾಸಗೀಕರಣ ಅಲ್ಲ’ ಎಂದಿರುವುದು- ಅಳಿಯ ಅಲ್ಲ ಮಗಳ ಗಂಡ ಎನ್ನುವಂತಿದೆ. ಜೊತೆಗೆ, ರಾಕೆಟ್, ಉಪಗ್ರಹ ಮತ್ತು ವಾಣಿಜ್ಯ ಚಟುವಟಿಕೆಗಳ ಕೆಲವು ಜವಾಬ್ದಾರಿಗಳನ್ನು ಖಾಸಗಿ ಉದ್ಯಮಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆಯೂ ವೇಗ ಪಡೆದಿದೆ.
ಇದನ್ನು ಓದಿದ್ದೀರಾ?: ಮೈಮನಗಳನ್ನು ಪೊರಕೆಗಳನ್ನಾಗಿಸಿ ದುಡಿಯುವವರ ಕುರಿತು ಕೃಷ್ಣಭೈರೇಗೌಡರ ಮಾತುಗಳು ಸಂವೇದನಾಹೀನ!
ಇದಕ್ಕೆ ಪೂರಕವಾಗಿ ಇನ್-ಸ್ಪೇಸ್(IN-SPACe) ಸಂಸ್ಥೆಯ ಅಧ್ಯಕ್ಷ ಪವನ್ ಗೋಯೆಂಕಾ, ‘ಮುಂದಿನ ದಿನಗಳಲ್ಲಿ ಇಸ್ರೋ ಯಾವುದೇ ಉಡಾವಣಾ ವಾಹನ(ರಾಕೆಟ್)ಗಳನ್ನು ತಯಾರಿಸುವುದಿಲ್ಲ; ಆ ಕಾರ್ಯವನ್ನು ಖಾಸಗಿ ವಲಯದ ಉದ್ಯಮಗಳು ನಿರ್ವಹಿಸಲಿವೆ’ ಎಂದಿರುವುದು, ಇಸ್ರೋ ಯಾವ ದಿಕ್ಕಿನತ್ತ ಹೆಜ್ಜೆ ಇಟ್ಟಿದೆ, ಮುಂದೆ ಏನಾಗಲಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತಿದೆ.
ಇಸ್ರೋ ಸಾಮಾನ್ಯ ಸಂಸ್ಥೆಯಲ್ಲ. ದೇಶದ ಬಾಹ್ಯಾಕಾಶ ಕ್ಷೇತ್ರವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುವ ಪ್ರತಿಷ್ಠಿತ ಸಂಸ್ಥೆ. ಈ ಸಂಸ್ಥೆಯನ್ನು ಸ್ಥಾಪಿಸಿದವರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ. 1962ರಲ್ಲಿ ಡಾ. ವಿಕ್ರಮ್ ಸಾರಾಭಾಯಿ ಅವರ ನೇತೃತ್ವದಲ್ಲಿ ಇಂಡಿಯನ್ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್ ರೀಸರ್ಚ್(INCOSPAR) ಎಂಬ ಸಮಿತಿಯನ್ನು ಸ್ಥಾಪಿಸಲಾಯಿತು. ಇದೇ ಸಂಸ್ಥೆ 1969ರಲ್ಲಿ ಇಸ್ರೋ ಆಗಿ ಮರುನಾಮಕರಣವಾಯಿತು.
ಭಾರತದ ಬಾಹ್ಯಾಕಾಶ ಸಂಸ್ಥೆಯ ಉದ್ದೇಶ ದೇಶದ ಆರ್ಥಿಕಾಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪುಗೊಂಡಿತ್ತು. ಉಪಗ್ರಹಗಳ ಮೂಲಕ ದೂರಸಂಪರ್ಕ, ಹವಾಮಾನ ಮುನ್ಸೂಚನೆ, ಕೃಷಿ ನಿರ್ವಹಣೆ ಮತ್ತು ನೈಸರ್ಗಿಕ ವಿಕೋಪಗಳ ನಿಯಂತ್ರಣಕ್ಕೆ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸುವುದಾಗಿತ್ತು. ಉಪಗ್ರಹ ಚಿತ್ರಣಗಳ ಮೂಲಕ ದೇಶದ ನೀರು, ಖನಿಜ, ಅರಣ್ಯ ಮತ್ತು ಭೂಬಳಕೆಯ ಸಮೀಕ್ಷೆ ನಡೆಸುವುದಾಗಿತ್ತು. ಭಾರತದಲ್ಲೇ ಉಡಾವಣಾ ವಾಹನ(PSLV, GSLV)ಗಳನ್ನು ಮತ್ತು ಉಪಗ್ರಹಗಳನ್ನು ನಿರ್ಮಿಸುವ ಸಾಮರ್ಥ್ಯ ಗಳಿಸುವುದಾಗಿತ್ತು. ಗ್ರಹಗಳ ಅಧ್ಯಯನ, ಖಗೋಳಶಾಸ್ತ್ರ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಉನ್ನತ ಮಟ್ಟದ ಪ್ರಗತಿ ಸಾಧಿಸುವುದು ಹಾಗೂ ಅದನ್ನು ರಾಷ್ಟ್ರದ ಅಭಿವೃದ್ಧಿಗಾಗಿ, ಭದ್ರತೆಗಾಗಿ ಬಳಸುವುದು ಇಸ್ರೋದ ಉದ್ದೇಶವಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ, ಏರಿಳಿತಗಳ ನಡುವೆಯೂ ಇಸ್ರೋ ಸಂಸ್ಥೆ ಉತ್ತಮವಾಗಿಯೇ ಕಾರ್ಯನಿರ್ವಹಿಸಿದೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಆದರೆ, 2019ರಲ್ಲಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಪ್ರಧಾನಿಯಾಗುತ್ತಿದ್ದಂತೆ, ಅವರ ಆಪ್ತ ಉದ್ಯಮಿ ಗೌತಮ್ ಅದಾನಿ, ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್(NSIL) ಎಂಬ ಕಂಪನಿ ಆರಂಭಿಸಿದರು. 2020ರಲ್ಲಿ ಮೋದಿಯವರ ಸರ್ಕಾರ ಅಂತರಿಕ್ಷ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ತೆರೆಯುವ ನಿಟ್ಟಿನಲ್ಲಿ, IN-SPACe ಅನ್ನು ಖಾಸಗಿ ಕಂಪನಿಗಳಿಗೆ ಅನುಮತಿ, ಮಾರ್ಗದರ್ಶನ ಮತ್ತು ನಿಯಂತ್ರಣ ನೀಡುವ ಸಂಸ್ಥೆಯಾಗಿ ರೂಪಿಸಲಾಯಿತು. ಅದಕ್ಕೆ ಪೂರಕವಾಗಿ 2021ರ ಕೇಂದ್ರ ಬಜೆಟ್ನಲ್ಲಿ ಹೊಸ ಸಾರ್ವಜನಿಕ ವಲಯದ ಉದ್ಯಮ ನೀತಿ(NPEP) ಘೋಷಿಸಿತು. ಆ ನೀತಿಯ ಪ್ರಕಾರ, ಪರಮಾಣು ಶಕ್ತಿ, ಬಾಹ್ಯಾಕಾಶ, ರಕ್ಷಣಾ, ಸಾರಿಗೆ, ದೂರಸಂಪರ್ಕ, ವಿದ್ಯುತ್, ಪೆಟ್ರೋಲಿಯಂ, ಕಲ್ಲಿದ್ದಲು, ಖನಿಜ, ಬ್ಯಾಂಕಿಂಗ್, ವಿಮೆ ಮತ್ತು ಹಣಕಾಸು ಸೇವಾ ಕ್ಷೇತ್ರಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಬಾಗಿಲು ತೆರೆಯಿತು.
ಈ ನೀತಿಯ ಮುಂದುವರೆದ ಭಾಗವಾಗಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ರಾಕೆಟ್, ಉಪಗ್ರಹ, ಉಡಾವಣಾ ಸೇವೆ, ಡೇಟಾ ಮತ್ತು ವಿವಿಧ ಅಂತರಿಕ್ಷ ಸೇವೆಗಳವರೆಗೆ ಖಾಸಗಿ ಕಂಪನಿಗಳಿಗೆ ಮುಕ್ತ ಅವಕಾಶ ನೀಡಲಾಯಿತು. ಆ ಮೂಲಕ ಮೋದಿಯವರ ಆಪ್ತ ಗೌತಮ್ ಅದಾನಿಯ ಎನ್ಎಸ್ಐಎಲ್ ಕಂಪನಿಗೆ ವಾಣಿಜ್ಯೀಕರಣ, ಉಡಾವಣಾ ಸೇವೆಗಳು ಮತ್ತು ಕೈಗಾರಿಕೆಯ ಮೂಲಕ PSLV/SSLV ಉತ್ಪಾದನೆಯಂತಹ ಮಹತ್ವದ ಜವಾಬ್ದಾರಿಗಳನ್ನು ನೀಡಲಾಯಿತು. ಈಗಾಗಲೇ ಸಣ್ಣ ಉಪಗ್ರಹ ಉಡಾವಣಾ ವಾಹನ(SSLV) ತಂತ್ರಜ್ಞಾನವನ್ನು ಹಸ್ತಾಂತರಿಸಲಾಗಿದ್ದು, ಪಿಎಸ್ಎಲ್ವಿ ಮತ್ತು ಎಲ್ವಿಎಂ3 ಯೋಜನೆಗಳಿಗೂ ಇದು ವಿಸ್ತರಿಸುವ ಸೂಚನೆಗಳಿವೆ.
ಇಸ್ರೋ- ನೆಹರೂ ಮತ್ತು ವಿಕ್ರಮ್ ಸಾರಾಭಾಯಿಯವರ ಕನಸಿನ ಸಂಸ್ಥೆ. ಸುಮಾರು 60 ವರ್ಷಗಳ ಕಾಲ, ಭಾರತದ ಸಾವಿರಾರು ವಿಜ್ಞಾನಿಗಳ ಬುದ್ಧಿ, ಬೆವರು ಬಸಿದು ಬೆಳೆದ ಸಂಸ್ಥೆ. ಅತ್ಯಲ್ಪ ಸಂಪನ್ಮೂಲಗಳಿಂದ ಆರಂಭಿಸಿ ಚಂದ್ರಯಾನ, ಮಂಗಳಯಾನದಿಂದ ಹಿಡಿದು ಅತ್ಯಾಧುನಿಕ ಉಡಾವಣಾ ಸಾಮರ್ಥ್ಯದವರೆಗೆ ಸಾಗಿ ದೇಶದ ಕೀರ್ತಿಗೆ ಕಾರಣವಾದ ಸಂಸ್ಥೆ.
ರಾಕೆಟ್ಗಳ ವಿನ್ಯಾಸ, ನಿರ್ಮಾಣ, ಪರೀಕ್ಷೆ ಹಾಗೂ ಉಡಾವಣೆಗಳು ಕೇವಲ ತಯಾರಿಕಾ ಒಪ್ಪಂದಗಳಲ್ಲ; ಅವು ಸಂಸ್ಥೆಯ ಹಲವು ದಶಕಗಳ ಸಾವಿರಾರು ಸಾಧಕರ ಸಾಮರ್ಥ್ಯ ಹಾಗೂ ತಾಂತ್ರಿಕ ಜ್ಞಾನದ ಫಲ. ಆ ಜ್ಞಾನಸಂಪತ್ತು- ದೇಶದ ಜನಸಂಪತ್ತು- ಈಗ ಖಾಸಗಿ ಕಂಪನಿಗಳ ಕೈಗೆ ಸಿಗುವುದು ಎಷ್ಟು ಸರಿ? ಅದು ಇಸ್ರೋಗಷ್ಟೇ ಅಲ್ಲ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವುದಿಲ್ಲವೇ? ಇದು ದೇಶದ್ರೋಹದ ಕೆಲಸವಲ್ಲವೇ?
ದೇಶವನ್ನಾಳಿದ ಈ ಹಿಂದಿನ ಸರ್ಕಾರಗಳು ಸಂಕಷ್ಟದಲ್ಲಿಯೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು, ಉದ್ದಿಮೆಗಳನ್ನು ಕಟ್ಟಿ ಬೆಳೆಸಿದ್ದವು. ಆದರೆ ಪ್ರಧಾನಿ ಮೋದಿಯವರು ಅವುಗಳನ್ನು ಮಾರುವುದಿಲ್ಲ ಎಂದು ಹೇಳುತ್ತಲೇ ಮಾರುತ್ತ ಬಂದರು. ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸಿದ್ದನ್ನು ನೋಡಬಹುದು. ಹಾಗೆಯೇ ದೆಹಲಿ ಸೇರಿ ಎಂಟು ವಿಮಾನ ನಿಲ್ದಾಣಗಳ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಅದಾನಿ ಮತ್ತು ಜಿಎಂಆರ್ ಕಂಪನಿಗಳಿಗೆ ವಹಿಸಿದ್ದನ್ನು ಗಮನಿಸಬಹುದು. ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ಗಳನ್ನು ಅಂಬಾನಿ ಕಂಪನಿ ನಿಯಂತ್ರಣಕ್ಕೆ ವಹಿಸಿದ್ದನ್ನು; ರೈಲು ನಿಲ್ದಾಣಗಳ ಆಧುನೀಕರಣದ ನೆಪದಲ್ಲಿ ರೈಲುಗಳ ನಿರ್ವಹಣೆ ಹಾಗೂ ಕಂಟೇನರ್ ಸಾರಿಗೆಯನ್ನು ಖಾಸಗಿಯವರಿಗೆ ಕೊಟ್ಟಿದ್ದನ್ನು ಕಾಣಬಹುದು.
ಇದನ್ನು ಓದಿದ್ದೀರಾ?: GDP ಶೇ.7.8; ಅಸಲಿ ಅಭಿವೃದ್ಧಿ ಯಾರ ಪಾಲಿಗೆ?
ಈಗ ಅದೇ ರೀತಿ ಇಸ್ರೋ ಖಾಸಗೀಕರಣ ಮಾಡುವುದಿಲ್ಲ ಎಂದು ಹೇಳುತ್ತಲೇ, ಖಾಸಗಿ ಸಹಭಾಗಿತ್ವ ಮತ್ತು ನವೋದ್ಯಮಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಅವಕಾಶ ಇಸ್ರೋ ಸಂಸ್ಥೆಯ ಅಭಿವೃದ್ಧಿಗಾಗಿ ಎಂದು ಸಮರ್ಥಿಸಿಕೊಳ್ಳಬಹುದು. ಆದರೆ, ಯಾವುದನ್ನು ಖಾಸಗಿಗೆ ಕೊಡಲಾಗುತ್ತಿದೆ, ಏಕೆ ಕೊಡಲಾಗುತ್ತಿದೆ, ಯಾವ ಬೆಲೆಗೆ ಕೊಡಲಾಗುತ್ತಿದೆ ಮತ್ತು ಭವಿಷ್ಯದಲ್ಲಿ ಇಸ್ರೋದ ಪಾತ್ರ ಏನಾಗಲಿದೆ ಎಂಬುದನ್ನು ಸರ್ಕಾರ ದೇಶದ ಜನತೆಯ ಮುಂದೆ ತೆರೆದಿಡಬೇಕು, ಸ್ಪಷ್ಟಪಡಿಸಬೇಕು.
ಏಕೆಂದರೆ, ಇಸ್ರೋ ಸಂಸ್ಥೆಯನ್ನು ಭಾರತದ ಸಾರ್ವಜನಿಕ ಹಣದಿಂದ ಕಟ್ಟಲಾಗಿದೆ. ಅದಕ್ಕೆ ಸಾವಿರಾರು ವಿಜ್ಞಾನಗಳ, ಅಧಿಕಾರಿಗಳ, ನೌಕರರ, ಸಿಬ್ಬಂದಿಗಳ ಹಲವು ದಶಕಗಳ ಶ್ರಮ ವಿನಿಯೋಗವಾಗಿದೆ. ಇಂದು ಪ್ರತಿಷ್ಠಿತ ಸಂಸ್ಥೆಯಾಗಿ ಹೊರಹೊಮ್ಮಿದೆ. ಇಂತಹ ಸದೃಢ ಇಸ್ರೋ ಸಂಸ್ಥೆಗೆ ಅಭಿವೃದ್ಧಿಯ ನೆಪದಲ್ಲಿ ಖಾಸಗಿ ಉದ್ಯಮಿಗಳನ್ನು ಆಹ್ವಾನಿಸುವುದು- ಭಾರತದ 60 ವರ್ಷಗಳ ಅಂತರಿಕ್ಷ ಸಾಮರ್ಥ್ಯದ ಲಾಭ ಅನಾಯಾಸವಾಗಿ ಅದಾನಿಗಳಂತಹ ಉದ್ಯಮಿಗಳ ಪಾಲಾದಂತೆ ಎನ್ನುವುದನ್ನು ದೇಶದ ಜನ ಅರ್ಥ ಮಾಡಿಕೊಳ್ಳಬೇಕಿದೆ. ಮೋದಿಯವರ ಮಾರಾಟ ಮಾಡುವ ಕೆಟ್ಟ ಚಾಳಿಗೆ ಕಡಿವಾಣ ಹಾಕಬೇಕಿದೆ.





