ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಿಯೋಜನೆಗೊಂಡಿದ್ದ ಬಿಎಸ್ಎಫ್ ಯೋಧರೊಬ್ಬರು ಜುಲೈ 31ರ ಗುರುವಾರ ತಡರಾತ್ರಿ ಬೆಟಾಲಿಯನ್ ಪ್ರಧಾನ ಕಚೇರಿಯಿಂದ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. 60ನೇ ಬೆಟಾಲಿಯನ್ನ ಸದಸ್ಯ ಸುಗಮ್ ಚೌಧರಿ ಅವರನ್ನು ಪತ್ತೆಹಚ್ಚಲು ಸದ್ಯ ಶೋಧ ಕಾರ್ಯಾಚರಣೆ ಆರಂಭವಾಗಿದೆ.
ಸದ್ಯ ನಾಪತ್ತೆ ಪ್ರಕರಣ ದಾಖಲಿಸಲಾಗಿದ್ದು, ಅಧಿಕ ತನಿಖೆ ನಡೆಯುತ್ತಿದೆ. ಜಮ್ಮು ಕಾಶ್ಮೀರದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭದ್ರತಾ ಪಡೆಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿದೆ. ಈ ನಡುವೆ ಬಿಎಸ್ಎಫ್ ಯೋಧರೊಬ್ಬರು ನಾಪತ್ತೆಯಾಗಿರುವುದು ಹೆಚ್ಚು ಮಹತ್ವವನ್ನು ಪಡೆದಿದೆ.
ಇದನ್ನು ಓದಿದ್ದೀರಾ? ಬಂಧಿತ ಬಿಎಸ್ಎಫ್ ಯೋಧನನ್ನು ಭಾರತಕ್ಕೆ ಹಸ್ತಾಂತರಿಸಿದ ಪಾಕಿಸ್ತಾನ
ಕಳೆದ 100 ದಿನಗಳಲ್ಲಿ, ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೇರಿದಂತೆ 12 ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಹತರಾದವರಲ್ಲಿ ಆರು ಮಂದಿ ಪಾಕಿಸ್ತಾನಿ ಭಯೋತ್ಪಾದಕರು ಉಳಿದ ಆರು ಮಂದಿ ಇತ್ತೀಚಿನ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ ಸ್ಥಳೀಯ ಉಗ್ರರು ಎಂದು ಈಗಾಗಲೇ ಭದ್ರತಾ ಪಡೆಗಳು ತಿಳಿಸಿವೆ.
ಆಪರೇಷನ್ ಮಹಾದೇವ್ ಎಂಬ ಹೆಸರಲ್ಲಿ ಶ್ರೀನಗರದ ಡಚಿಗಮ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಜುಲೈ 28ರಂದು ಪಹಲ್ಗಾಮ್ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಮತ್ತು ಇತರ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಇದಾ ಒಂದು ದಿನದ ನಂತರ ಪೂಂಚ್ ವಲಯದಲ್ಲಿ ಆಪರೇಷನ್ ಶಿವಶಕ್ತಿಯನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಇನ್ನಿಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ತಿಂಗಳುಗಟ್ಟಲೆ ನಡೆದ ಕಾರ್ಯಾಚರಣೆಯಲ್ಲಿ ಹಲವು ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದೂ ವರದಿಯಾಗಿದೆ.
