ನಿರುದ್ಯೋಗಿಗಳಿಗೆ ಪಕೋಡ ಮಾರಿ ಎಂದು ಅವಮಾನಿಸಿದ ಮೋದಿ ಮತ್ತು ಎಲ್ಲಿದೆ ನಿರುದ್ಯೋಗ ಎಂದು ಅಣಕಿಸಿದ ಹಣಕಾಸು ಸಚಿವರು ʼನಾವು ಕೆಳಕ್ಕೆ ಬಿದ್ದಿದ್ದೇವೆ, ಮೀಸೆಯೂ ಮಣ್ಣಾಗಿದೆʼ ಎಂದು ಒಪ್ಪಿಕೊಂಡಂತಿದೆ. ಆದರೆ ಅದಕ್ಕೆ ಅವರು ಸೂಚಿಸುತ್ತಿರುವ ಪರಿಹಾರ ಮಾತ್ರ ಬಾಲಿಶವಾಗಿದೆ.
ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮೋದಿ 3.೦ ಸರ್ಕಾರದ 2024-25ರ ಸಾಲಿನ ಬಜೆಟ್ ಮಂಡಿಸಿದ್ದಾರೆ. ಆದರೆ ಕಳೆದ ಹತ್ತು ವರ್ಷಗಳ ಆರ್ಥಿಕ ಹಿಂಜರಿತದಿಂದ ಮತ್ತು ಇಲ್ಲಿನ ಸಮಾಜೋ-ಆರ್ಥಿಕತೆಯನ್ನು ಅರಿಯುವಲ್ಲಿ ಸೋಲು ಇದರಿಂದ ಯಾವುದೇ ಪಾಠ ಕಲಿತಿಲ್ಲ ಎಂದು ಈ ಬಜೆಟ್‌ನಿಂದ ಸಾಬೀತಾಗುತ್ತದೆ. ನಿರುದ್ಯೋಗ, ಹಣದುಬ್ಬರ, ಬಡತನ ಕುರಿತಂತೆ ಈ ಬಾರಿಯೂ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಉದ್ಯೋಗದ ಕುರಿತು ಈ ಬಾರಿ ಅನೇಕ ಯೋಜನೆಗಳನ್ನು ಪ್ರಕಟಿಸಿದ್ದರೂ ಸಹ ಈ ನಿರ್ಧಾರಗಳು ಯಾವುದೇ ಸಂದರ್ಭದಲ್ಲಿಯೂ ಉದ್ಯೋಗ ಸೃಷ್ಟಿ ಮಾಡುವುದಿಲ್ಲ. ಅವಕಾಶವನ್ನೂ ಸಹ ಕಲ್ಪಿಸುವುದಿಲ್ಲ. ಇದು ಗಾಯಕ್ಕೆ ಮಲಾಮು ಸಹ ಹಚ್ಚದೆ ಬ್ಯಾಂಡೇಜು ಸುತ್ತಿದಂತೆ. ಅಂದರೆ ಏನೂ ಮಾಡದಿದ್ದರೂ ಸಹ ನೋಡುಗರಿಗೆ ಏನೋ ಮಾಡುತ್ತಿದ್ದಾರೆ ಎನ್ನುವಂತೆ.. ಆದರೆ ಕಳೆದ ಹತ್ತು ವರ್ಷಗಳಿಂದ ʼಸಬ್ ಚೆಂಗಾಸ್ ಹೈʼ ಎಂದು ಜನತೆಗೆ ಮಂಕುಬೂದಿ ಎರಚುತ್ತಾ ಬಂದಿದ್ದ ಮೋದಿ ಸರ್ಕಾರಕ್ಕೆ ಈ ಬಾರಿ ಎಲ್ಲವೂ ಸರಿಯಿಲ್ಲ ಎಂದು ಜ್ಞಾನೋದಯವಾದಂತಿದೆ.
ನಿರುದ್ಯೋಗಿಗಳಿಗೆ ಪಕೋಡ ಮಾರಿ ಎಂದು ಅವಮಾನಿಸಿದ ಮೋದಿ ಮತ್ತು ಎಲ್ಲಿದೆ ನಿರುದ್ಯೋಗ ಎಂದು ಅಣಕಿಸಿದ ಹಣಕಾಸು ಸಚಿವರು ʼನಾವು ಕೆಳಕ್ಕೆ ಬಿದ್ದಿದ್ದೇವೆ, ಮೀಸೆಯೂ ಮಣ್ಣಾಗಿದೆʼ ಎಂದು ಒಪ್ಪಿಕೊಂಡಂತಿದೆ. ಆದರೆ ಅದಕ್ಕೆ ಅವರು ಸೂಚಿಸುತ್ತಿರುವ ಪರಿಹಾರ ಮಾತ್ರ ಬಾಲಿಶವಾಗಿದೆ. ಶೋಚನೀಯವಾಗಿದೆ.
ಹಣದುಬ್ಬರವನ್ನು ಪರಿಗಣಿಸದೆ ಜಿಡಿಪಿ ಬೆಳವಣಿಗೆಯನ್ನು ಶೇ.10.5 ಎಂದು ಅಂದಾಜು ಮಾಡುತ್ತಿರುವುದು, ಶೇ.9.4ರಷ್ಟಿರುವ ಆಹಾರದ ಹಣದುಬ್ಬರನ್ನು ಸಹ ಪರಿಗಣಿಸದೆ ಜಿಡಿಪಿ ಹೆಚ್ಚಳದ ಕುರಿತು ಮಾತನಾಡುವುದು ವಂಚನೆಯಾಗುತ್ತದೆ.
2024-25 ಬಜೆಟ್‌ನ ಸಾರಾಂಶ
ಒಟ್ಟು ವೆಚ್ಚ : 48.21 ಲಕ್ಷ ಕೋಟಿ (2023-24ರಲ್ಲಿ– 45 ಲಕ್ಷ ಕೋಟಿ)
ರೆವಿನ್ಯೂ ವೆಚ್ಚ: 37 ಲಕ್ಷ ಕೋಟಿ (2023-24ರಲ್ಲಿ– 35 ಲಕ್ಷ ಕೋಟಿ, ಪರಿಷ್ಕೃತ ವೆಚ್ಚ 35.40)
ಬಂಡವಾಳ ವೆಚ್ಚ – 11.11 ಲಕ್ಷಕೋಟಿ (ಜಿಡಿಪಿಯ –ಶೇ.3.4. 2023-24ರಲ್ಲಿ -10 ಲಕ್ಷ ಕೋಟಿ, ಪರಿಷ್ಕೃತ ವೆಚ್ಚ 9.50)
ತೆರಿಗೆ ವೆಚ್ಚ: 11.90 ಲಕ್ಷ ಕೋಟಿ
ಸಬ್ಸಿಡಿ ವೆಚ್ಚ: 3.81 ಲಕ್ಷ ಕೋಟಿ
ವಿತ್ತೀಯ ಕೊರತೆ: ಜಿಡಿಪಿಯ ಶೇ.4.9(16.14 ಲಕ್ಷ ಕೋಟಿ)
ಹಣದುಬ್ಬರ: ಶೇ.4
ಒಟ್ಟು ಆದಾಯ: 32.07 ಲಕ್ಷ ಕೋಟಿ
ರೆವಿನ್ಯೂ: 31.29 ಲಕ್ಷ ಕೋಟಿ (ತೆರಿಗೆ ರೆವಿನ್ಯೂ – 25.83 ಲಕ್ಷ ಕೋಟಿ, ತೆರಿಗೆಯೇತರ ರೆವಿನ್ಯೂ -5.45 ಲಕ್ಷ ಕೋಟಿ. 2023-24ರಲ್ಲಿ – 26.32 ಲಕ್ಷ ಕೋಟಿ , ಪರಿಷ್ಕೃತ 26.99)
ಸಾಲ: 16.91 ಲಕ್ಷ ಕೋಟಿ (2023-24ರಲ್ಲಿ –18.70 ಲಕ್ಷ ಕೋಟಿ, ಪರಿಷ್ಕೃತ 17.90)
ಯುವಜನತೆ ಮತ್ತು ಉದ್ಯೋಗ ಯೋಜನೆಗಳು
ಕಳೆದ ಹತ್ತು ವರ್ಷಗಳಲ್ಲಿ ನಿರುದ್ಯೋಗವೇ ಇಲ್ಲ ಎಂದು ಸುಳ್ಳು ಹೇಳಿಕೊಂಡು ಅಡ್ಡಾಡುತ್ತಿದ್ದ ಮೋದಿ ಸರ್ಕಾರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾದ ನಂತರ ಅನಿವಾರ್ಯವಾಗಿ ಇದರ ಕುರಿತು ಮಾತನಾಡಬೇಕಾಗಿದೆ. ಆದರೆ ಇವರಿಗೆ ದೇಶ ಎನ್ನುವ ಒಕ್ಕೂಟ ವ್ಯವಸ್ಥೆ, ಅಲ್ಲಿನ ಸಮಾಜೋ-ರಾಜಕೀಯ-ಆರ್ಥಿಕತೆಯ ಕುರಿತು ಕಿಂಚಿತ್ತೂ ಜ್ಞಾನ, ಕಾಳಜಿ ಇಲ್ಲವಾದ್ದರಿಂದ ಬಜೆಟ್‌ನಲ್ಲಿ ಉದ್ಯೋಗ ಕುರಿತಂತೆ ಈ ಬಾರಿ ಮರೆಮೋಸದ, ದಿಕ್ಕಿಲ್ಲದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಈ ಯೋಜನೆಯ ಮೂಲಕ ಯುವಜನತೆ ಮತ್ತು ಉದ್ಯೋಗದ ಕುರಿತು ತಾವು ಏನೋ ಸಾಧಿಸಿದ್ದೇವೆಂದು ಬಿಜೆಪಿಯವರು ಯದ್ವಾತದ್ವಾ ಎದೆ ತಟ್ಟಿಕೊಳ್ಳುತ್ತಿದ್ದಾರೆ. ಆದರೆ ಅದರ ಹೂರಣ ನೋಡಿದಾಗ ನಯಾಪೈಸದಷ್ಟು ಉಪಯೋಗವಿಲ್ಲವೆಂದು ಮನದಟ್ಟಾಗುತ್ತದೆ
ಪ್ರಸೇನ್‌ಜಿತ್ ಬೋಸ್ ಹೇಳಿದಂತೆ 2013-14 ರಿಂದ 2021-22ರ ಅವಧಿಯಲ್ಲಿ 32 ಲಕ್ಷ ಕೈಗಾರಿಕಾ ಉದ್ಯೋಗಗಳು ಸೃಷ್ಟಿಯಾಗಿವೆ. ಇದರಲ್ಲಿ ತಮಿಳುನಾಡು, ಗುಜರಾತ್, ಮಹಾರಾಷ್ಟ್ರದ ಪಾಲು ಶೇ.40ರಷ್ಟಿದೆ. ಇದೇ ಅವಧಿಯಲ್ಲಿ ಕೃಷಿಯೇತರ, ಉತ್ಪಾದನಾ ಮತ್ತು ಸೇವಾ ವಲಯದಲ್ಲಿ16.45 ಲಕ್ಷ ಉದ್ಯೋಗ ಕಡಿತವಾಗಿದೆ. 2022-23ರಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ 56.5 ಕೋಟಿ. ಇವರ ಪೈಕಿ ಶೇ.57ರಷ್ಟು ಸ್ವಯಂ ಉದ್ಯೋಗದಲ್ಲಿದ್ದಾರೆ. ಇವರ ಸರಾಸರಿ ಮಾಸಿಕ ಆದಾಯ ರೂ.13347. ಶೇ.18ರಷ್ಟು ಮನೆಗೆಲಸದ ಸಹಾಯಕರಿಗೆ ಆದಾಯವಿಲ್ಲ. 2017-18ರಲ್ಲಿ ಶೇ.44ರಷ್ಟಿದ್ದ ಕೃಷಿ ವಲಯದ ಉದ್ಯೋಗ 2022-23ರಲ್ಲಿ ಶೇ.46ರಷ್ಟಾಗಿದೆ. ಸಿಎಂಐಇ ವರದಿಯ ಪ್ರಕಾರ ಜೂನ್ 2024ರಲ್ಲಿ ನಿರುದ್ಯೋಗದ ಪ್ರಮಾಣ ಶೇ.9.2ರಷ್ಟಿದೆ. ಅನೌಪಚಾರಿಕ ವಲಯದಲ್ಲಿ ಶೇ.89.೨ರಷ್ಟು ಉದ್ಯೋಗಿಗಳಿದ್ದಾರೆ. ಅಸಂಘಟಿತ ವಲಯದಲ್ಲಿ ಶೇ.92ಎಷ್ಟು ಉದ್ಯೋಗಿಗಳಿದ್ದಾರೆ. ಇದು ಅತ್ಯಂತ ಕಳವಳಕಾರಿ ಸ್ಥಿತಿ.
ಹಣಕಾಸು ಸಚಿವರ ಪ್ರಕಟಣೆಗಳು
(ಈ ಯೋಜನೆಗಳನ್ನು ನೇರವಾಗಿ ಕಾಂಗ್ರೆಸ್ ಪ್ರಣಾಳಿಕೆಯ ಅಂಪ್ರೆಟಿಸ್‌ಶಿಪ್ ಯೋಜನೆ, employment linked scheme ಗಳಿಂದ ಕದ್ದಿದ್ದಾರೆ)
ಮುಂದಿನ ಐದು ವರ್ಷಗಳ ಅವಧಿಗೆ ʼಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಗೆ 2 ಲಕ್ಷ ಕೋಟಿ ಪ್ರಧಾನಿ ಪ್ಯಾಕೇಜ್ ಘೋಷಿಸಿದ್ದಾರೆ. ಬಹುಶಃ ಇದು 78.5-81 ಲಕ್ಷ ಕೃಷಿಯೇತರ ಉದ್ಯೋಗವನ್ನು ಉದ್ದೇಶಿಸಲಾಗಿದೆ. ಪ್ರಸೇನ್‌ಜಿತ್ ಬೋಸ್ ʼ2 ಲಕ್ಷ ಕೋಟಿಯನ್ನು ಉದ್ಯೋಗ ಅವಕಾಶ ಸೃಷ್ಟಿಸಲು ವೆಚ್ಚ ಮಾಡಬಹುದಾದರೆ ಇದೇ ಹಣದಿಂದ ನೇರವಾಗಿ ನಗರ ಪ್ರದೇಶಗಳಲ್ಲಿ ನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸಲು ಬಳಸಬಹುದಿತ್ತಲ್ಲವೇ? ಸಾರ್ವಜನಿಕ ಉದ್ಯಮಗಳಲ್ಲಿ ಬಂಡವಾಳ ಹೂಡಿಕೆಯನ್ನು ವಿಸ್ತರಿಸಿ ಖಾಯಂ ಉದ್ಯೋಗ ಸೃಷ್ಟಿಸಬಹುದಿತ್ತಲ್ಲವೇʼ ಎಂದು ಪ್ರಶ್ನಿಸುತ್ತಾರೆ. ಆದರೆ ನವ ಉದಾರೀಕರಣದ ಎಲ್ಲಾ ನೀತಿಗಳನ್ನು ಜಾರಿಗೊಳಿಸುತ್ತಿರುವ ಮೋದಿ ಸರ್ಕಾರವು ಯಾವುದೇ ಸಂದರ್ಭದಲ್ಲಿ ಸಾರ್ವಜನಿಕ ಉದ್ಯಮ, ಯೋಜನೆಗಳನ್ನು ಬಲಪಡಿಸುವುದಿಲ್ಲ. ಸಾಧ್ಯವಾದಷ್ಟು ಜನರ ಹಣವನ್ನು ಬಂಡವಾಳಶಾಹಿಗಳ ಖಜಾನೆಗೆ ಸುರಿಯುತ್ತಾರೆ. ಈ ಹೊಸ ಉದ್ಯೋಗ ಯೋಜನೆಯೂ ಸಹ ಖಾಸಗಿಯವರಿಗೆ ಸಂಬಂದಿಸಿದೆ.
ಉದ್ಯೋಗ ಕ್ಷೇತ್ರ ಯೋಜನೆ ʼಎʼ
ಪ್ರಸ್ತಾವನೆ: ಮೊದಲ ಬಾರಿಗೆ ಉದ್ಯೋಗ ಸೇರುವವರಿಗೆ (ಔಪಚಾರಿಕ ವಲಯದಲ್ಲಿ) ಒಂದು ತಿಂಗಳ ವೇತನವನ್ನು – ಮೂರು ಹಂತಗಳಲ್ಲಿ ಪಾವತಿಸಲಾಗುವುದು. ಆದರೆ ಗರಿಷ್ಠ ಮೊತ್ತ ರೂ. 15,000 ಮಾತ್ರ. (ಪ್ರತಿ ತಿಂಗಳು 1 ಲಕ್ಷದ ಒಳಗೆ ಸಂಬಳ ಇರಬೇಕು). ಇದು 21 ಕೋಟಿ ಯುವಜನತೆಗೆ ಸಹಾಯವಾಗಲಿದೆ
ವಿಶ್ಲೇಷಣೆ : ಇದು ಮೂಲಭೂತವಾಗಿ ಪೂರೈಕೆ ವಲಯವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಇದು ಮೂರು ತಿಂಗಳಿಗೆ ಮಾತ್ರ ಅನ್ವಯವಾಗುವುದಾದರೆ ಖಾಸಗಿ ಕಂಪನಿ ಮಾಲೀಕರು ಖಾಯಂ ನೇಮಕಾತಿ ಯಾಕೆ ಮಾಡಿಕೊಳ್ಳುತ್ತಾರೆ? ಈ ಯೋಜನೆಯಲ್ಲಿ ಪ್ರತಿ ತಿಂಗಳು ರೂ.5000 ಆಧಾರದಲ್ಲಿ ಮೊದಲ ಮೂರು ತಿಂಗಳು ಮಾತ್ರ ಕೊಡುತ್ತಾರೆ. ಮೂರು ತಿಂಗಳ ನಂತರ ಏನು? ಬಹುಶಃ ಗುತ್ತಿಗೆ ಪದ್ಧತಿಯಲ್ಲಿ ನೇಮಕ ಮಾಡಿಕೊಂಡು ಕೆಲ ತಿಂಗಳ ನಂತರ ಅವರನ್ನು ವಜಾಗೊಳಿಸಿ ಹೊಸಬರನ್ನು ನೇಮಕ ಮಾಡಿಕೊಳ್ಳಬಹುದು (ಹೈರ್&ಫೈರ್).
ಉದಾಹರಣೆಗೆ ಈ ಮೊದಲು ನಿರ್ದಿಷ್ಟ ಹುದ್ದೆಗೆ ರೂ.50,000 ಮಾಸಿಕ ವೇತನ ನಿಗದಿಯಾಗಿದ್ದರೆ ಈ ಯೋಜನೆಯ ನಂತರ ಅದೇ ಹುದ್ದೆಗೆ ರೂ.45,000 ನಿಗದಿಗೊಳಿಸಿ ಮಿಕ್ಕ 5,000 ಮೊತ್ತವನ್ನು ಸರ್ಕಾರದಿಂದ ಭರಿಸುತ್ತಾರೆ. ಮೂರು ತಿಂಗಳ ನಂತರ ಈ 5,000 ಸಹಾಯ ಸ್ಥಗಿತಗೊಂಡು ಉದ್ಯೋಗಿಯ ವೇತನ 45,000ಕ್ಕೆ ಕಡಿತಗೊಳ್ಳುತ್ತದೆ. ಮಾಲೀಕ ಮರಳಿ ಹಿಂದಿನ 50,000 ವೇತನ ಕೊಡುವುದಿಲ್ಲ. ವಾರ್ಷಿಕವಾಗಿ ಉದ್ಯೋಗಿಗೆ ರೂ.60000 ನಷ್ಟವಾದರೆ ಮಾಲೀಕನಿಗೆ ಅದು ಲಾಭವಾಗುತ್ತದೆ. ಇಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಗಾಗಿ ಉದ್ಯೋಗದಾತರು ರೂ.72,000 ಮೊತ್ತವನ್ನು 24 ಮಾಸಿಕ ಕಂತುಗಳಲ್ಲಿ ಪಡೆಯುತ್ತಾರೆ. ಇದು ಕಾರ್ಪೋರೇಟ್‌ಗಳಿಗೆ ಸಬ್ಸಿಡಿ ಕೊಡುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಉದ್ಯೋಗ ಸೃಷ್ಟಿ ಎಲ್ಲಿದೆ? ಇದನ್ನು ಯಾರಾದರೂ ಉದ್ಯೋಗ ಅವಕಾಶ ಯೋಜನೆ ಅಂತ ಕರೆಯುತ್ತಾರೆಯೇ?
ಉದ್ಯೋಗ ಕ್ಷೇತ್ರ ಯೋಜನೆ ʼಬಿʼ
ಪ್ರಸ್ತಾವನೆ: ಮೊದಲ ಬಾರಿಗೆ ಉದ್ಯೋಗ ಸೇರುವವರಿಗೆ – ನಿರ್ದಿಷ್ಠ ಸ್ಕೇಲ್ ಇನ್ಸೆಂಟಿವ್‌ನ್ನು ಮಾಲೀಕ, ಉದ್ಯೋಗಿ- ಇಪಿಎಫ್ ಇರುವವರಿಗೆ ಕೊಡುತ್ತಾರಂತೆ.
ವಿಶ್ಲೇಷಣೆ: ಇದರ ಆಳ ಅಗಲ ಯಾರಿಗೂ ಗೊತ್ತಿಲ್ಲ. ಮಾಲೀಕರು, ಉದ್ಯೋಗಿಗಳು ತಮಗೆ ಸಿಗುವ ಇನ್ಸೆಂಟಿವ್‌ಗಾಗಿ ಯಾವ ನಿಬಂಧನೆಗಳನ್ನು ಪಾಲಿಸಬೇಕು ಎನ್ನುವುದರ ಕುರಿತು ವಿವರಗಳಿಲ್ಲ
ಉದ್ಯೋಗ ಕ್ಷೇತ್ರ ಯೋಜನೆ ʼಸಿʼ
ಪ್ರಸ್ತಾವನೆ: ಎರಡು ವರ್ಷಗಳ ಕಾಲ ಮಾಲೀಕರಿಗೆ ಅವರ ಇಪಿಎಫ್ ಕೊಡುಗೆಯಲ್ಲಿ 3000 ಮರು ಪಾವತಿ ಮಾಡುತ್ತಾರಂತೆ (ಪ್ರತಿ ತಿಂಗಳ ಸಂಬಳ 1 ಲಕ್ಷದ ಒಳಗೆ ಇರಬೇಕು)
ವಿಶ್ಲೇಷಣೆ: ಇಪಿಎಫ್‌ಗೆ ರೂ.3000 ಮರು ಪಾವತಿಸುತ್ತಾರೆ ಎನ್ನುವ ಕಾರಣಕ್ಕೆ ಮಾಲೀಕ ಸುಖಾಸುಮ್ಮನೆ ನೇಮಕಾತಿ ಮಾಡಿಕೊಳ್ಳುತ್ತಾರಾ? ಮೇಲಿನ ಅತಿ ಸಣ್ಣ ಮೊತ್ತಕ್ಕಾಗಿ ಅಗತ್ಯವಿಲ್ಲದಿದ್ದರೂ ಹೊಸಬರಿಗೆ ವೇತನ ಕೊಡುತ್ತಾರಾ? ತಮ್ಮ ಅಗತ್ಯಕ್ಕೆ ತಕ್ಕಂತೆ ನೇಮಕಾತಿ ಮಾಡಿಕೊಳ್ಳುತ್ತಾರೆಯೇ ಹೊರತು ಮೇಲಿನ ರೀತಿ ಸಣ್ಣ ಮೊತ್ತದ ಮರುಪಾವತಿಗಾಗಿ ಅಲ್ಲ.
ಇದು ಉದ್ಯೋಗ ಸೃಷ್ಟಿ ಅಂತ ಹೇಳುವುದಾದರೆ ಇದಕ್ಕಿಂತ ವಿಡಂಬನೆ ಮತ್ತು ದುರಂತ ಮತ್ತೊಂದಿಲ್ಲ. ಈ ಮೂರೂ ಯೋಜನೆಗಳನ್ನು ತುಂಬಾ ಮೇಲ್ಪದರದಲ್ಲಿ ಚಿಂತಿಸಿ ತಾತ್ಕಾಲಿಕ ಪರಿಹಾರ ರೂಪದಲ್ಲಿ ಪ್ರಕಟಿಸಿದ್ದಾರೆ. ಆದರೆ ಮುಖ್ಯವಾಗಿ ಉತ್ಪಾದನೆ ಕುಂಠಿತವಾಗಿದ್ದರೆ ಉದ್ಯೋಗವೇ ಸೃಷ್ಟಿಯಾಗುವುದಿಲ್ಲ. ಈ ಯೋಜನೆಗಳು ನೇಮಕಾತಿಯ ನಂತರ ಅನ್ವಯವಾಗುವುದರಿಂದ ಮರಳಿ ಉದ್ಯೋಗ ಸೃಷ್ಟಿಯ ಸಮಸ್ಯೆ ಹಾಗೆಯೆ ಉಳಿದುಕೊಂಡಿದೆ. ದೀರ್ಘಕಾಲೀನ ಕಾರ್ಯಯೋಜನೆಗಳ ಕುರಿತು ಮೋದಿ ಸರ್ಕಾರಕ್ಕೆ ಆಸಕ್ತಿಯೂ ಇಲ್ಲ ಎಂದು ಇದು ಸಾಬೀತುಪಡಿಸುತ್ತದೆ
ಪ್ರಸ್ತಾಪ: 1 ಕೋಟಿ ಯುವಜನತೆಗೆ ಐದು ವರ್ಷಗಳ ಅವಧಿಯಲ್ಲಿ 500 ಟಾಪ್ ಕಂಪನಿಗಳಲ್ಲಿ 12 ತಿಂಗಳ ಇಂಟರ್ನಶಿಪ್ ಯೋಜನೆ ಘೋಷಿಸಿದ್ದಾರೆ. ಇಲ್ಲಿ ಪ್ರತಿ ತಿಂಗಳು ರೂ.5,000 ವೇತನ ಕೊಡುತ್ತಾರೆ.
ವಿಶ್ಲೇಷಣೆ: ಪ್ರತಿ ವರ್ಷ 400 ಇಂಟರ್ನ್‌ಗಳನ್ನು ಪ್ರತಿಯೊಂದು 500 ಕಂಪನಿಗಳಲ್ಲಿ ನೇಮಕ ಮಾಡಿಕೊಳ್ಳಬೇಕು. ಪ್ರತಿ ವರ್ಷ 20,000 ಇಂಟರ್ನ್‌ಗಳ ನೇಮಕಾತಿಯಾಗುತ್ತದೆ. ಐದು ವರ್ಷಗಳಲ್ಲಿ 1 ಕೋಟಿ ಇಂಟರ್ನ್‌ಗಳು ತರಬೇತಿ ಪಡೆಯುತ್ತಾರೆ. ಇವರಿಗೆ ಪ್ರತಿ ತಿಂಗಳು ರೂ.5000 ಸ್ಟೈಫಂಡ್ ಕೊಡುತ್ತಾರೆ. ಒಂದು ಬಾರಿ ಸಹಾಯ ಧನ ರೂಪದಲ್ಲಿ ರೂ.6000 ಕೊಡುತ್ತಾರೆ. ಕಂಪನಿಗಳು ತರಬೇತಿ ವೆಚ್ಚ ಮತ್ತು ಶೇ.10ರಷ್ಟು ಇಂಟರ್ನ್‌ಶಿಪ್ ವೆಚ್ಚವನ್ನು ತಮ್ಮ ಸಿಎಸ್‌ಆರ್ ನಿಧಿಯಿಂದ ಕೊಡಬೇಕು. ಇದು ಕಳೆದ ಐವತ್ತು ವರುಷಗಳಿಂದ ಜಾರಿಯಲ್ಲಿರುವ ಅಪ್ರೆಂಟಿಸ್‌ಶಿಪ್ ಯೋಜನೆಯ ನಕಲು ರೂಪವಷ್ಟೇ. ಈ ಯೋಜನೆಯನ್ನು ಉದ್ದೇಶಪೂರ್ವಕವಾಗಿ ವಿಫಲಗೊಳಿಸಿದ ಮೋದಿ ಸರ್ಕಾರ ಈಗ ಇಂಟರ್ನ್‌ಶಿಪ್ ವೇತನ ಎಂದು ನಾಟಕವಾಡುತ್ತಿದ್ದಾರೆ.
ಇದೂ ಸಹ ಉದ್ಯೋಗ ಸೃಷ್ಷಿಯಲ್ಲ. 12 ತಿಂಗಳ ನಂತರ ಇಂಟರ್ನ್‌ಗಳ ಭವಿಷ್ಯವೇನು? ಅವರನ್ನು ಅದೇ ಕಂಪನಿಯಲ್ಲಿ ಮುಂದುವರೆಸಲಾಗುವುದೇ? ಇದಕ್ಕೆ ಉತ್ತರವಿಲ್ಲ. ಇದುವರೆಗಿನ ಅನುಭವದಲ್ಲಿ ಹೇಳುವುದಾದರೆ ಈ ಮುಂಚೆ ಅಪ್ರೆಂಟಿಸ್‌ಶಿಪ್ ಎಂದು ನೇಮಕ ಮಾಡಿಕೊಳ್ಳುತ್ತಿದ್ದರು. ಅವರನ್ನು ತರಬೇತಿಯ ಹೆಸರಿನಲ್ಲಿ ನೇರವಾಗಿ ಇತರೆ ಕಾರ್ಮಿಕರ ಜೊತೆಗೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದರು. ಇದೂ ಸಹ ಅದೇ ರೀತಿಯಲ್ಲಿ ಮುಂದುವರಿಯುತ್ತದೆ.
ಮತ್ತೊಂದೆಡೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9 ಲಕ್ಷ ಹುದ್ದೆಗಳು ಖಾಲಿ ಇದೆಯೆಂದು ಹೇಳುತ್ತಾರೆ. ಇದರ ನೇಮಕಾತಿ ಕುರಿತು ಯಾವುದೇ ರೀತಿಯಲ್ಲಿ ಮಾತನಾಡದೆ ಮೇಲಿನಂತೆ ದಿಕ್ಕು ದೆಸೆಯಿಲ್ಲದ ಉದ್ಯೋಗ ಸೃಷ್ಟಿಯ ಮಾತನಾಡುತ್ತಾರೆ ಎಂದರೆ ಇದು ವಂಚನೆಯಲ್ಲವೇ?
ಪ್ರಸ್ತಾವನೆ: ಇನ್ನು ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಯುವಜನತೆಗೆ ಕೌಶಲ್ಯ ತರಬೇತಿ ಕೊಡುತ್ತಾರೆ.
ವಿಶ್ಲೇಷಣೆ: ತಮಾಷೆಯೆಂದರೆ 2015ರಲ್ಲಿ ಜಾರಿಗೆ ಬಂದ ಈ ಯೋಜನೆ ಮೂಲಕ 2023ರವರೆಗೆ 1.4 ಕೋಟಿ ಯುವಜನತೆಗೆ ಕೌಶಲ್ಯ ತರಬೇತಿ ಕೊಟ್ಟಿದ್ದೇವೆಂದು ಇಲಾಖೆಯ ಅಂತರ್ಜಾಲ ತಾಣದಲ್ಲಿ ಹೇಳುತ್ತಾರೆ. ಇವರಲ್ಲಿ ಕೇವಲ 2.68 ಲಕ್ಷ ಜನತೆಗೆ ಮಾತ್ರ ಉದ್ಯೋಗ ದೊರಕಿದೆ. ಅಂದರೆ ಕೌಶಲ್ಯ ತರಬೇತಿ ಪಡೆದ 1.14 ಕೋಟಿ ಜನಸಂಖ್ಯೆ ಯುವಜನತೆಗೆ ಉದ್ಯೋಗ ದೊರಕಿಲ್ಲ. ಕಳೆದ 9 ವರ್ಷಗಳಲ್ಲಿ 1.4 ಕೋಟಿ ಜನತೆಗೆ ಕೌಶಲ್ಯ ತರಬೇತಿ ಕೊಟ್ಟವರು ಮುಂದಿನ ಐದು ವರ್ಷಗಳಲ್ಲಿ ಕೇವಲ 20 ಲಕ್ಷ ಯುವಜನತೆಗೆ ತರಬೇತಿ ಕೊಡುತ್ತಾರಂತೆ. ಅಂದರೆ ಈ ಯೋಜನೆಯೇ ವೈಫಲ್ಯ ಎಂದು ಸ್ವತಃ ಸರ್ಕಾರವೇ ಹೇಳುತ್ತಿದೆಯಲ್ಲವೇ? ಆದರೂ ಮೂಗಿಗೆ ತುಪ್ಪ ಸವರುತ್ತಾರೆ ಎಂದರೆ ಯಾರು ನಂಬುತ್ತಾರೆ? ಇದೊಂದು ಜೋಕ್. ಇದು ಈ ಯೋಜನೆಯ ಹಣೆಬರಹ.
ಈಗಾಗಲೇ ಐಟಿಐ, ಡಿಪ್ಲೊಮಾ, ಜಿಟಿಟಿಸಿ, ಎನ್ ಟಿ ಟಿಎಫ್ ಮತ್ತು ಇತರೇ ನಿರ್ದಿಷ್ಟ ವಲಯ ತರಬೇತಿ ಕಾಲೇಜು, ಕೋರ್ಸ್‌ಗಳಿದ್ದವು. ಈ ಮೂಲಕ ಲಕ್ಷಾಂತರ ಯುವಜನತೆ ಕೌಶಲ್ಯ ತರಬೇತಿ ಪಡೆಯುತ್ತಿದ್ದರು. ಆದರೆ ಮೋದಿ ಸರ್ಕಾರ ಈ ಕೋರ್ಸುಗಳನ್ನು ಸಬಲೀಕರಣಗೊಳಿಸದೆ ತಮ್ಮದೇ ಕೌಶಲ್ಯ ತರಬೇತಿ ಎನ್ನುವ ವಿಫಲ ಯೋಜನೆ ಜಾರಿಗೊಳಿಸಲು ಮುಂದಾಗಿ ಎಡವಿದ್ದಾರೆ, ಯುವಜನತೆಗೂ ದ್ರೋಹ ಮಾಡಿದ್ದಾರೆ. ಮತ್ತು ಅನೇಕ ಕುಶಲಕರ್ಮಿಗಳು ಭಾರತ ತೊರೆದು ಯುದ್ಧಪೀಡಿತ ಇಸ್ರೇಲ್, ರಶ್ಯಾಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಇದು ಏನನ್ನು ಸೂಚಿಸುತ್ತದೆ?
ಸಾಲದ ಪ್ರಶ್ನೆ
2023-24ರ ಬಜೆಟ್ ನಲ್ಲಿ 17.90 ಲಕ್ಷ ಕೋಟಿ ಸಾಲವನ್ನು ತೆಗೆದುಕೊಂಡಿದ್ದರು. ಇದರಲ್ಲಿ 12 ಲಕ್ಷ ಕೋಟಿ ತೆರಿಗೆ ಕಟ್ಚುತ್ತಿದ್ದಾರೆ. ಅಂದರೆ ಉಳಿಯುವುದು ಕೇವಲ 5 ಲಕ್ಷ ಕೋಟಿ. ಸರ್ಕಾರವು ಈ ಹಣದಿಂದ ಮೂಲ ಸೌಕರ್ಯಕ್ಕೆ ಬಳಸಿಕೊಳ್ಳುವುದಾಗಿ ಹೇಳಿದ್ದರು. ಆದರೆ ಇವರ ಮೂಲ ಸೌಕರ್ಯದ ಉದಾಹರಣೆಯಾಗಿ ಪ್ರಗತಿ ಮೈದಾನ ಸುರಂಗ ಮಾರ್ಗವನ್ನು ತೆಗೆದುಕೊಂಡರೆ ಅದು ವಿಫಲವಾಗಿದೆ. ಅಂದರೆ ಸಾಲ ತೆಗೆದುಕೊಂಡು ಕಟ್ಟಿದ ಕಾಮಗಾರಿ ವ್ಯರ್ಥವಾಗಿದೆ, ಇದನ್ನು ಪ್ರಶ್ನಿಸಬೇಕಲ್ಲವೇ? ಹಾಗೇ ಸಾಲ ಪಡೆದ ಕೋಟಿಗಟ್ಟಲೆ ಮೊತ್ತ ಎಲ್ಲಿ ಹೋಯಿತು?
ಈ ಬಾರಿ 16.91 ಲಕ್ಷ ಕೋಟಿ ಸಾಲ ಮಾಡುವುದಾಗಿ ಹೇಳಿದ್ದಾರೆ. ಅಂದರೆ ಮತ್ತಷ್ಟು ಕಳಪೆ ಕಾಮಗಾರಿಯ ಪ್ರಗತಿ ಮೈದಾನಗಳು, ಬಿಹಾರದ ರೀತಿ ಮುರಿದು ಬೀಳುವ ಸೇತುವೆಗಳನ್ನು ಕಟ್ಟುವುದಕ್ಕೆ ಸಾಲ ಮಾಡುತ್ತಿದ್ದಾರೆಯೇ? ಯಾಕೆ ಯಾರೊಬ್ಬರೂ ಪ್ರಶ್ನಿಸುತ್ತಿಲ್ಲ? ಈ ವಿಷವರ್ತುಲದ ಕೊನೆ ಎಂದು?
ಕಾರ್ಪೋರೇಟ್ ತೆರಿಗೆ ಏರಿಕೆ ಯಾಕಿಲ್ಲ?
2019ರಲ್ಲಿ ಶೇ 8ರಷ್ಟು ಕಾರ್ಪೊರೇಟ್ತೆರಿಗೆ ಕಡಿತಗೊಳಿಸಿದ ನಂತರ ಐದುವರ್ಷಗಳಲ್ಲಿ 8 ಲಕ್ಷ ಕೋಟಿ ನಷ್ಟವಾಗಿದೆ. ಮತ್ತು ಬಂಡವಾಳಿಗರ ಜೇಬಿಗೆ ರೊಕ್ಕ ಬಂದ ನಂತರವೂ ಉತ್ಪಾದನೆ ಸಾಮರ್ಥ್ಯ ಯಾಕೆ ಹೆಚ್ಚಾಗಲಿಲ್ಲ? ಯಾಕೆ ಇಂದಿಗೂ ಉತ್ಪಾದನೆಯು ಜಿಡಿಪಿಯ ಶೇ.15ರಷ್ಟಿದೆ? ಯಾಕೆ ಉದ್ಯೋಗ ಸೃಷ್ಟಿಯಾಗಲಿಲ್ಲ? ಯಾಕೆ ಬೇಡಿಕೆ ಹೆಚ್ಚಲಿಲ್ಲ? ಯಾಕೆ ಕ್ರೂನಿ ಬಂಡವಾಳಶಾಹಿಗಳ ಸಂಪತ್ತು ಶೇ.120ರಷ್ಟು ಹೆಚ್ಚಾಗಿದೆ?
ಆದರೂ ಸಹ ಈ ಬಾರಿ ಕಾರ್ಪೋರೇಟ್ ತೆರಿಗೆ ಹೆಚ್ಚಿಸಲಿಲ್ಲವೇಕೆ? ಆದರೆ ವಿದೇಶಿ ಕಂಪನಿಗಳ ಮೇಲಿನ ಕಾರ್ಪೋರೇಟ್ ತೆರಿಗೆಯನ್ನು ಶೇ.40ರಿಂದ ಶೇ.35ಕ್ಕೆ ಕಡಿತಗೊಳಿಸಿದ್ದಾರೆ. ದೇಸಿ ಕಂಪನಿಗಳಿಗೆ ಕಡಿತಗೊಳಿಸಿದ ನಂತರವೂ ಯಾವುದೇ ಫಲವಿಲ್ಲ ಎಂದು ಗೊತ್ತಿದ್ದೂ ವಿದೇಶಿ ಕಂಪನಿಗಳಿಗೂ ಕಡಿತಗೊಳಿಸಿದ್ದಾರೆ
ಮೋದಿ ಸರ್ಕಾರದ ಆಮದು, ರಫ್ತು ನೀತಿಯೇನು? trade deficit ಹೆಚ್ಚಾಗುತ್ತಿದೆ ಯಾಕೆ?
ಪ್ರಶ್ನೆ: ಈ ಬಾರಿಯೂ ಈಗಾಗಲೇ ಮೂರು ವರ್ಷ ತಡವಾಗಿರುವ ಜನಗಣತಿ ನಡೆಸುವ ಕುರಿತು ಯಾಕೆ ಮಾತನಾಡಲಿಲ್ಲ? ಅದಕ್ಕೆ ಅಗತ್ಯವಿರುವ ಅಂದಾಜು ರೂ.25,000 ಕೋಟಿ ಅನುದಾನ ಪ್ರಕಟಿಸಲಿಲ್ಲ?
ಎಂಎಸ್‌ಎಂಇ (ಅತಿ ಸಣ್ಣ, ಸಣ್ಣ, ಮಧ್ಯಮ ಗಾತ್ರದ ಉದ್ಯಮಗಳು)
ಎಂಎಸ್‌ಎಂಇ ವಲಯಕ್ಕಾಗಿ ಯಂತ್ರೋಪಕರಣ, ಸಲಕರಣೆಗಳ ಖರೀದಿಗೆ ಅಡಮಾನ ರಹಿತವಾಗಿ ಅವಧಿ ಸಾಲ ಒದಗಿಸಲು ಸಾಲ ಖಾತರಿ ಯೋಜನೆ. 100 ಕೋಟಿ ಸಾಲದ ಮಿತಿಯಾಗಿದೆ. ತಂತ್ರಜ್ಞಾನ ಬೆಂಬಲ. ಸಾಲ ಒದಗಿಸಲು ಎಸ್‌ಐಡಿಬಿಐ 24 ಬ್ರಾಂಚ್‌ಗಳು ತೆರೆಯುವುದು. ಆದರೆ ಇದೆಲ್ಲವೂ ಕೇವಲ ಸಾಲದ ಬಾಬತ್ತು. ಎಂಎಸ್‌ಎಂಇ ವಲಯಕ್ಕೆ ಸಾಲಕ್ಕಿಂತಲೂ ಅವರ ಅಭಿವೃದ್ಧಿಗಾಗಿ ಸಮಗ್ರ ನೀತಿಯ ಅಗತ್ಯವಿದೆ. ಜಿಎಸ್‌ಟಿಯಲ್ಲಿ ಸುಧಾರಣೆಯ ಅಗತ್ಯವಿದೆ. ಆದರೆ ಜಿಡಿಪಿಗೆ ಶೇ.30 ಕೊಡುಗೆಯಿರುವ ಎಂಎಸ್‌ಎಂಇ ಪರವಾಗಿ ಹೊಸ ಆರ್ಥಿಕ ನೀತಿಯನ್ನು ಘೋಷಣೆ ಮಾಡಲಿಲ್ಲ. ಪ್ರೋತ್ಸಾಹ ಧನ ಕೊಡಲಿಲ್ಲ.
ಪ್ರಸ್ತಾವನೆ: ಉನ್ನತ ಶಿಕ್ಷಣ – 10 ಲಕ್ಷದವರೆಗೆ ಸಾಲ
ವಿಶ್ಲೇಷಣೆ: ಸರ್ಕಾರ ಸಾರ್ವಜನಿಕ ಬಂಡವಾಳ ಹೂಡಿಕೆಯಿಂದ ಹೊರ ಬರಲು ಹವಣಿಸುತ್ತಿದೆ.
ಜಿಡಿಪಿಯ ಶೇ.6ರಷ್ಟು ಶಿಕ್ಷಣಕ್ಕೆ ಹಂಚಿಕೆ ಮಾಡಲು ವಿಫಲವಾಗಿರುವ ಸರ್ಕಾರ ಈ ರೀತಿ ಸಾಲದ ಮಾಫಿಯಾ ಸೃಷ್ಟಿಸುತ್ತಿದೆ. ಜಿಡಿಪಿಯ ಶೇ.0.45ರಷ್ಟು ಮಾತ್ರ ಹಂಚಿಕೆ ಮಾಡುತ್ತಿರುವ ಸರ್ಕಾರದ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳು ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ಅವರ ಶೈಕ್ಷಣಿಕ ಭವಿಷ್ಯವೂ ಮಂಕಾಗುತ್ತದೆ. ಕೆಜಿಯಿಂದ ಪಿಜಿವರೆಗೆ ಉಚಿತ, ಕಡ್ಡಾಯ, ಗುಣಮಟ್ಟದ ಶಿಕ್ಷಣ ಎನ್ನುವ ಆಶಯಕ್ಕೆ ಹಿನ್ನಡೆಯಾಗಿದೆ.
ಪ್ರಸ್ತಾವನೆ: ಶಿಕ್ಷಣ – 1.25 ಲಕ್ಷ ಕೋಟಿ
ವಿಶ್ಲೇಷಣೆ: ಮತ್ತೊಮ್ಮೆ ಶಿಕ್ಷಣಕ್ಕೆ ಆದ್ಯತೆ ಕೊಡುವಲ್ಲಿ ಸರ್ಕಾರ ವಿಫಲಗೊಂಡಿದೆ. ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವ ಯಾವುದೇ ಇಚ್ಚಾಶಕ್ತಿಯನ್ನು ಪ್ರದರ್ಶಿಸದ ಸರ್ಕಾರವು ಹಂತಹಂತವಾಗಿ ಆರ್ಥಿಕ ಅನುದಾನವನ್ನು ಕಡಿತಗೊಳಿಸುತ್ತಾ ಬರುತ್ತಿದೆ.
ಪ್ರಸ್ತಾವನೆ: ನರೇಗಾ – 86,000 ಕೋಟಿ
ವಿಶ್ಲೇಷಣೆ: ಕಳೆದ ಬಾರಿಯ ಹಂಚಿಕೆಗೆ ಹೋಲಿಸಿದರೆ 26000 ಕೋಟಿ ಹೆಚ್ಚಾಗಿದ್ದರೂ ಸಹ 2023-24ರ ಹಣಕಾಸು ವರ್ಷದಲ್ಲಿ 1.05 ಲಕ್ಷ ಕೋಟಿ ವೆಚ್ಚವಾಗಿದೆ. ಈ ವೆಚ್ಚಕ್ಕೆ ಹೋಲಿಸಿದರೆ ಈ ಬಾರಿ 19,297 ಕೋಟಿ ಕಡಿಮೆಯಾಗಿದೆ. ಈಗಾಗಲೇ 2024-25ರ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ 41,500 ಕೋಟಿ ವೆಚ್ಚವಾಗಿದೆ. ಇನ್ನುಳಿದ ಎಂಟು ತಿಂಗಳಿಗೆ ಕೇವಲ 44,500 ಉಳಿಯುತ್ತದೆ. ಇದು ಗ್ರಾಮೀಣ ಭಾಗದ ಬಡತನ, ನಿರುದ್ಯೋಗ ನಿಭಾಯಿಸಲು ಸಾಲುವುದಿಲ್ಲ. ಇಂತಹ ನಡೆಯನ್ನು ಮೋದಿ ಸರ್ಕಾರದ ಎಡಬಿಡಂಗಿ ನೀತಿ ಎನ್ನಬೇಕಾಗುತ್ತದೆ. ಒಂದೆಡೆ ಉದ್ಯೋಗ ಸೃಷ್ಟಿಯಲ್ಲಿ ತಿಣುಕಾಡುತ್ತಿರುವ ಸರ್ಕಾರ ಮತ್ತೊಂದೆಡೆ ಇದಕ್ಕೆ ವಿಫುಲ ಅವಕಾಶವಿರುವ ನರೇಗಾ ಯೋಜನೆಗೆ ಆರ್ಥಿಕ ಅನುದಾನ ಬಿಡುಗಡೆ ಮಾಡುವುದಿಲ್ಲ. ಆರಂಭದಿಂದಲೂ ಈ ಯೋಜನೆ ಕುರಿತು ಅಸಹನೆ ಇರುವ ಮೋದಿಯವರು ಇದನ್ನು ದುರ್ಬಲಗೊಳಿಸುವುದಕ್ಕೆ ಹೆಚ್ಚು ಆಸಕ್ತಿಯಿಂದಿದ್ದಾರೆ. ನಗರಗಳಲ್ಲಿ ನರೇಗಾ ಪ್ರಾರಂಭಿಸುವುದರ ಮೂಲಕ ಉದ್ಯೋಗ ಅವಕಾಶ ಹೆಚ್ಚಿಸುವ ಅವಕಾಶವನ್ನು ಸಹ ಕಳೆದುಕೊಂಡಿದ್ದಾರೆ. ಇದು ದುರಂತ.
ಪ್ರಸ್ತಾವನೆ: ಪೋಷಣ ಯೋಜನೆ (ಮದ್ಯಾಹ್ನದ ಬಿಸಿಯೂಟ) 12,467 ಕೋಟಿ
ವಿಶ್ಲೇಷಣೆ: ಕಳೆದ ಬಾರಿಗಿಂತ (11600 ಕೋಟಿ) 867 ಕೋಟಿ ಹೆಚ್ಚಿದ್ದರೂ ಸಹ 2022-23ರ ರೂ. 12,681 ಕೋಟಿ ವೆಚ್ಚಕ್ಕಿಂತಲೂ ಕಡಿಮೆಯಿದೆ.
ಪ್ರಸ್ತಾವನೆ: 6 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಿಗೆ, ಗರ್ಭಿಣಿ ಸ್ತ್ರೀಯರಿಗಾಗಿರುವ ಸಕ್ಷಮ ಅಂಗನವಾಡಿ ಯೋಜನೆಗೆ 21,2೦೦ ಕೋಟಿ ಹಂಚಿಕೆ ಮಾಡಿದ್ದಾರೆ.
ವಿಶ್ಲೇಷಣೆ: ಕಳೆದ ಬಾರಿಗಿಂತ (20554 ಕೋಟಿ) 646 ಕೋಟಿ ಹೆಚ್ಚಿದ್ದರೂ, 2022-23ರ ವೆಚ್ಚಕ್ಕಿಂತಲೂ ಕಡಿಮೆಯಿದೆ. ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರ ವೇತನದಲ್ಲಿ ಯಾವುದೇ ಬಗೆಯ ಹೆಚ್ಚಳವನ್ನು ನಿರೀಕ್ಷಿಸುವಂತಿಲ್ಲ.
ರಸಗೊಬ್ಬರ ಸಬ್ಸಿಡಿಯನ್ನು ರೂ.24,894 ಕೋಟಿ, ಆಹಾರ ಸಬ್ಸಿಡಿಯನ್ನು ರೂ.7,082 ಕೋಟಿಯಷ್ಟು ಕಡಿತಗೊಳಿಸಿದ್ದಾರೆ.
ಒಟ್ಟಾರೆ ಯಾವುದೇ ಹೊಸತನವಿಲ್ಲದ ನಿರಾಸೆಗೊಳಿಸುವ ಬಜೆಟ್. ನಿರ್ಮಲಾ ಸೀತಾರಾಮನ್‌ರಂತಹ ಹಣಕಾಸು ಸಚಿವರು ತಮ್ಮ ಜವಾಬ್ದಾರಿ ಏನು ಎಂಬುದನ್ನು ಅರಿತಿಲ್ಲ, ಅವರ ಅರ್ಥಿಕ ನೀತಿಗೂ ಯಾವುದೇ ತಳಬುಡವಿಲ್ಲ ಎಂದು ಇದರಿಂದ ಸಾಬೀತಾಗುತ್ತದೆ. ನವ ಉದಾರೀಕರಣ ಪರವಾದ ನೀತಿಯನ್ನು ಪ್ರತಿಫಲಿಸುವ ಈ ಬಜೆಟ್‌ನಿಂದ ಕಲ್ಯಾಣ ಯೋಜನೆಗಳಿಗೆ ಹಿನ್ನಡೆಯಾಗಿದೆ. ಇದು ಕ್ರೂನಿ ಬಂಡವಾಳಶಾಹಿಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸುತ್ತದೆ.

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ