ಮಧ್ಯಪ್ರದೇಶದ ಇಂಧೋರ್‌ನಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ತನ್ನ ಮೇಲೆ ಇಂಧೋರ್ ಪಾಲಿಕೆಯ ಬಿಜೆಪಿ ಕಾರ್ಪೊರೇಟರ್ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ದ್ವಾರಕಾಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2023ರ ಮೇ 10ರಿಂದ 2024ರ ಏಪ್ರಿಲ್ 16ವರೆಗೆ ತನ್ನ ಮೇಲೆ ಬಿಜೆಪಿ ಕಾರ್ಪೊರೇಟರ್ ಶಾನು ಶರ್ಮಾ ಎಂಬಾತ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
“ತಾನು ಬ್ಯಾಂಕ್‌ನಲ್ಲಿ 1 ಲಕ್ಷ ರೂ. ಸಾಲ ಮಾಡಿದ್ದೆ. ಆ ಸಾಲ ತೀರಿಸಲು ಶಾನು ಶರ್ಮಾ ಹಣ ನೀಡಿದ್ದರು. ಅಲ್ಲದೆ, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ, ತನ್ನೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದರು. ಅವರ ಕಚೇರಿಯಲ್ಲಿ ಕೆಲಸ ಕೊಟ್ಟಿದ್ದರು. ನನ್ನ ಮೇಲೆ ಆಗ್ಗಾಗ್ಗೆ ಅತ್ಯಾಚಾರ ಎಸಗುತ್ತಿದ್ದರು. ನನ್ನ ಗೆಳೆಯನಿಂದ ದೂರ ಇರುವಂತೆ ಒತ್ತಾಯಿಸಿದ್ದರು. ನಾನು ಒಪ್ಪದಿದ್ದಾಗ, ಹಣ ವಾಪಸ್ ಕೊಡುವಂತೆ ಕೇಳಿ, ಕಿರುಕುಳ ನೀಡಲಾರಂಭಿಸಿದ್ದರು” ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
ಆಕೆಯ ದೂರಿನ ಆಧಾರ ಮೇಲೆ ಬಿಜೆಪಿ ಕಾರ್ಪೊರೇಟ್ ಶಾನು ಶರ್ಮಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 376, 376(2)(ಎನ್) ಹಾಗೂ 506ರ ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ಬಿಜೆಪಿ ಮುಖಂಡರು ಒತ್ತಡ ಹಾಕಿದ್ದರು ಎಂದೂ ಆರೋಪಿಸಲಾಗಿದೆ.
“ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಯುತ್ತಿದ್ದು, ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಡಿಸಿಪಿ ರಾಜೇಶ್ ದಾಂದೋತಿಯಾ ಮಾಹಿತಿ ನೀಡಿದ್ದಾರೆ.