ವಕ್ಫ್ ತಿದ್ದುಪಡಿ ಮಸೂದೆ, ಹಣಕಾಸು ಮಸೂದೆ, ಭಾರತೀಯ ರೈಲ್ವೆ ಮತ್ತು ಭಾರತೀಯ ರೈಲ್ವೆ ಬೋರ್ಡ್ ಆಕ್ಟ್ ವಿಲೀನಗೊಳಿಸುವ ಮಸೂದೆ ಸೇರಿದಂತೆ ಒಟ್ಟು 16 ಮಸೂದೆಗಳನ್ನು 2025-26ನೇ ಸಾಲಿನ ಕೇಂದ್ರ ಬಜೆಟ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ. ಬಜೆಟ್ ಅಧಿವೇಶನವು ಶುಕ್ರವಾರ (ಜನವರಿ 31) ಆರ್ಥಿಕ ಸಮೀಕ್ಷೆ ಮಂಡನೆ ಮಾಡುವ ಮೂಲಕ ಆರಂಭವಾಗಲಿದೆ. ಫೆಬ್ರವರಿ ಒಂದರಂದು ವಿತ್ತ ಸಚಿವೆ ಬಜೆಟ್ ಮಂಡಿಸಲಿದ್ದಾರೆ.
ವಿಪತ್ತು ನಿರ್ವಹಣಾ ಕಾನೂನಿನಲ್ಲೂ ತಿದ್ದುಪಡಿ ತರುವ ನಿರೀಕ್ಷೆಯಿದೆ. ವಾಯುಯಾನ ವಲಯಕ್ಕೆ ಸಂಬಂಧಿಸಿದಂತೆ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡುವ, ವಲಸೆ ಮತ್ತು ವಿದೇಶಿಯರ ಪ್ರವೇಶಕ್ಕೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸುವ ಮಸೂದೆಯನ್ನು ಈ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆಯಿದೆ.
ಗೋವಾ ವಿಧಾನಸಭೆ ಕ್ಷೇತ್ರಗಳಲ್ಲಿ ಪರಿಶಿಷ್ಠ ಪಂಗಡಗಳ ಪ್ರಾತಿನಿಧ್ಯಕ್ಕೆ ಮರು ಹೊಂದಾಣಿಕೆ ಮಾಡುವ ಮತ್ತೊಂದು ಮಸೂದೆ ಮಂಡಿಸುವ ಸಾಧ್ಯತೆಯಿದೆ. ಹೆಸರೇ ಸೂಚಿಸುವಂತೆ ಪರಿಶಿಷ್ಠ ಪಂಗಡಕ್ಕೆ ವಿಧಾನಸಭೆ ಸ್ಥಾನಗಳನ್ನು ಮರುಹಂಚಿಕೆ ಮಾಡುವ ಮಸೂದೆ ಇದಾಗಿದೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ ಅಧಿವೇಶನ | ಸಂಸತ್ತನ್ನೇ ಚುನಾವಣಾ ಭಾಷಣದ ವೇದಿಕೆ ಮಾಡಿಕೊಂಡ ಪ್ರಧಾನಿ ಮೋದಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ ಎಂಟನೇ ಬಾರಿಗೆ ಮಂಡಿಸುತ್ತಿರುವ ಬಜೆಟ್ ಇದಾಗಿದೆ. ಮೊರಾರ್ಜಿ ದೇಸಾಯಿಯವರು ಒಟ್ಟು ಹತ್ತು ಬಾರಿ ಬಜೆಟ್ ಮಂಡಿಸಿದ್ದು, ಅದಕ್ಕಿಂತ ಎರಡು ಹೆಜ್ಜೆ ಹಿಂದೆ ನಿರ್ಮಲಾ ಇದ್ದಾರೆ.
ವಕ್ಫ್‌ನಲ್ಲಿ ಸುಮಾರು 44 ಬದಲಾವಣೆಗಳನ್ನು ಪ್ರಸ್ತಾಯಿಸುವ ವಿವಾದಾತ್ಮಕ ವಕ್ಫ್ ಮಸೂದೆಯನ್ನು ಕೇಂದ್ರ ವಿತ್ತ ಸಚಿವೆ ಮಂಡಿಸಲಿದ್ದಾರೆ. ಈ ವಿವಾದಾತ್ಮಕ ಮಸೂದೆ ವಿರುದ್ಧ ಈಗಾಗಲೇ ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದೆ. ಆದರೂ ಬಿಜೆಪಿ ಸಂಸದೆ ಜಗದಾಂಬಿಕಾ ಪಾಲ್ ನೇತೃತ್ವದ ಜಂಟಿ ಸಮಿತಿ ಶಿಫಾರಸಿನಂತೆ ಕಾನೂನಿನಲ್ಲಿ ತಿದ್ದುಪಡಿ ಮಾಡಲು ಕೇಂದ್ರ ಮುಂದಾಗಿದೆ.
ಇನ್ನು ಹೊಸ ನೇರ ತೆರಿಗೆ ಸಂಹಿತೆ ಸೇರಿದಂತೆ ಪ್ರಸ್ತುತ ಜಾರಿಯಲ್ಲಿರುವ ಆದಾಯ ತೆರಿಗೆ ನಿಯಮ 1961ರಲ್ಲಿ ಬದಲಾವಣೆ ತರುವಂತಹ ಹಣಕಾಸು ಮಸೂದೆಯನ್ನೂ ಕೂಡಾ ಕೇಂದ್ರ ವಿತ್ತ ಸಚಿವೆ ಈ ಬಜೆಟ್‌ನಲ್ಲಿ ಮಂಡಿಸುವ ಸಾಧ್ಯತೆಯಿದೆ.
