ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 6 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಿಸಿದ್ದು, ಮೇಘಾಲಯದ ನೂತನ ರಾಜ್ಯಪಾಲರಾಗಿ ಮೈಸೂರು ಮಾಜಿ ಸಂಸದ ಸಿ ಎಚ್ ವಿಜಯಶಂಕರ್ ಅವರನ್ನು ನೇಮಕ ಮಾಡಿದ್ದಾರೆ. ಒಟ್ಟು ಮೂರು ರಾಜ್ಯಗಳಲ್ಲಿ ರಾಜ್ಯಪಾಲರನ್ನು ಬದಲಾಯಿಸಲಾಗಿದೆ. ಜುಲೈ 27ರಂದು ತಡರಾತ್ರಿ ಈ ಪ್ರಕಟನೆ ಹೊರಬಿದ್ದಿದೆ.
ಕರ್ನಾಟಕದ ಹಿರಿಯ ರಾಜಕಾರಣಿ ವಿಜಯಶಂಕರ್ 1994ರಲ್ಲಿ ಕರ್ನಾಟಕ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ನಂತರ ಲೋಕಸಭೆಯಲ್ಲಿ ಮೈಸೂರು ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದಾರೆ.
ಮೈಸೂರಿನ ಕುರುಬ ನಾಯಕ ವಿಜಯಶಂಕರ್ ಅವರು 1998 ಮತ್ತು 2004ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿ ಪ್ರವೇಶಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಆದರೆ 2014ರ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಸ್ಪರ್ಧಿಸಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಎದುರು ಪರಾಭವಗೊಂಡರು.
ಇದನ್ನು ಓದಿದ್ದೀರಾ? ರಾಜ್ಯಪಾಲರ ‘ವರ್ತನೆ’ಗೆ ಘಟಿಕೋತ್ಸವದ ವೇದಿಕೆಯಲ್ಲೇ ಕಣ್ಣೀರಿಟ್ಟ ಮಂಗಳೂರು ವಿವಿ ಉಪಕುಲಪತಿ!
2017ರಲ್ಲಿ ಬಿಜೆಪಿ ತೊರೆದಿದ್ದ ವಿಜಯಶಂಕರ್ ಒಂದು ವರ್ಷದಲ್ಲೇ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮೈಸೂರಿನಿಂದ ಕಾಂಗ್ರೆಸ್ ಟಿಕೆಟ್‌ನಿಂದ ಕಣಕ್ಕಿಳಿದಿದ್ದರು. ಆದರೆ ಪ್ರತಾಪ್ ಸಿಂಹ ವಿರುದ್ಧ 1.38 ಲಕ್ಷ ಮತಗಳ ಅಂತರದಲ್ಲಿ ಸೋಲು ಕಂಡರು.
2019ರ ನವೆಂಬರ್‌ನಲ್ಲಿ ಬಿಜೆಪಿಗೆ ಮರಳಿದರು. ಕಾಂಗ್ರೆಸ್‌ನಲ್ಲಿ ತನ್ನನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ದೂರಿದ್ದರು. 2023ರಲ್ಲಿ ವಿಜಯಶಂಕರ್ ವಿಧಾನಸಭಾ ಚುನಾವಣೆಯಲ್ಲಿ ಪಿರಿಯಾಪಟ್ಟಣ (ಮೈಸೂರು) ಕ್ಷೇತ್ರದಿಂದ ಸ್ಪರ್ಧಿಸಿ ಸೋತರು.
ಮಾಜಿ ಸಚಿವರೂ ಆಗಿರುವ ವಿಜಯಶಂಕರ್ ಅರಣ್ಯ ಇಲಾಖೆ, ಪರಿಸರ ಇಲಾಖೆ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಸೇರಿದಂತೆ ವಿವಿಧ ಖಾತೆಗಳನ್ನು ನಿರ್ವಹಿಸಿದ್ದಾರೆ. 2010ರಿಂದ 2016ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರೂ ಆಗಿದ್ದರು.
C H Vijayashankar appointed as Governor of Meghalaya
C.P. Radhakrishnan, Governor of Jharkhand with Additional Charge of Telangana, appointed as Governor of Maharashtra@rashtrapatibhvn #president pic.twitter.com/HXuPjPgSbU
— SansadTV (@sansad_tv) July 28, 2024