ರಾಜ್ಯಪಾಲರ ‘ವರ್ತನೆ’ಗೆ ಘಟಿಕೋತ್ಸವದ ವೇದಿಕೆಯಲ್ಲೇ ಕಣ್ಣೀರಿಟ್ಟ ಮಂಗಳೂರು ವಿವಿ ಉಪಕುಲಪತಿ!

Date:

ಶನಿವಾರ (ಜೂನ್ 15) ಮಧ್ಯಾಹ್ನ ಮಂಗಳೂರು ನಗರದ ಹೊರವಲಯದ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಹಾಗೂ ಕುಲಾಧಿಪತಿ ಥಾವರ್‌ಚಂದ್ ಗೆಹ್ಲೋಟ್ ಕಾರ್ಯಕ್ರಮದಲ್ಲಿ ವರ್ತಿಸಿದ ರೀತಿ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯಪಾಲರ ‘ವರ್ತನೆ’ಗೆ ಘಟಿಕೋತ್ಸವದ ವೇದಿಕೆಯಲ್ಲೇ ಮಂಗಳೂರು ವಿವಿ ಉಪಕುಲಪತಿ ಡಾ. ಪಿ ಎಲ್ ಧರ್ಮ ಅವರೇ ಗದ್ಗದಿತರಾದ ಪ್ರಸಂಗ ನಡೆಯಿತು. ಇದರಿಂದಾಗಿ ರಾಜ್ಯಪಾಲರ ನಡೆಯ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಶಿಷ್ಟಾಚಾರದಂತೆ ನಡೆಯುವ ಘಟಿಕೋತ್ಸವ ಕಾರ್ಯಕ್ರಮವನ್ನು ರಾಜ್ಯಪಾಲರು ಈ‌ ಬಾರಿ ತಮ್ಮದೇ ಹೊಸ ನಿಯಮಗಳೊಂದಿಗೆ ನಡೆಸಿಕೊಟ್ಟಿದ್ದಾರೆ. ಇದರಿಂದ ಅಕ್ಷರಶಃ ವಿವಿಯ ಉಪಕುಲಪತಿಗಳೇ‌ ಗದ್ಗದಿತರಾದರೆ, ಇತರ ಸಿಬ್ಬಂದಿಗಳು ಗೊಂದಲಕ್ಕೆ ಒಳಗಾಗಿದ್ದರು. ರಾಜ್ಯಪಾಲರು, ರಾಜ್ಯಪಾಲರ ಭದ್ರತಾ ಸಿಬ್ಬಂದಿಯ ಎಡವಟ್ಟಿನಿಂದ ಇಡೀ ಕಾರ್ಯಕ್ರಮವೇ ಗೊಂದಲದ ಗೂಡಾಗಿದ್ದಂತೂ ಸತ್ಯ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಾಮಾನ್ಯವಾಗಿ ಘಟಿಕೋತ್ಸವವು ನಾಡಗೀತೆ ಮತ್ತು ವಿವಿಯ ಗೀತೆಯೊಂದಿಗೆ ಆರಂಭವಾಗಿ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಗುವುದು ಸಂಪ್ರದಾಯ. ಇದೇ ರೀತಿ ಸಿದ್ಧತೆಯೂ ಆಗಿತ್ತು. ಆದರೆ ವೇದಿಕೆಗೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಾಡಗೀತೆ ಮತ್ತು ವಿಶ್ವವಿದ್ಯಾನಿಲಯದ ಗೀತೆಗೆ ಮೊದಲೇ ರಾಷ್ಟ್ರಗೀತೆ ನುಡಿಸುವಂತೆ ಸೂಚಿಸಿದರು. ಇದು ಏಕಾಏಕಿ ಗೊಂದಲಕ್ಕೆ ಕಾರಣವಾಯಿತು. ಈ ಗೀತೆ ಹಾಡಲು ತಯಾರಾಗಿ ಬಂದಿದ್ದ ವಿದ್ಯಾರ್ಥಿಗಳು ಕೂಡ ಕೆಲಕಾಲ ವಿಚಲಿತರಾದರು.

ಶಿಷ್ಟಾಚಾರದೊಂದಿಗೆ ಕಾರ್ಯಕ್ರಮ ನಡೆಸುವುದಕ್ಕೆ ಮೊದಲೇ ರೂಪುರೇಷೆ ಸಿದ್ದಪಡಿಸಲಾಗಿತ್ತು. ಆದರೆ ವೇದಿಕೆಯಲ್ಲಿ ರಾಜ್ಯಪಾಲರು, ಅವರ ಭದ್ರತಾ ಸಿಬ್ಬಂದಿ ಅವುಗಳನ್ನು ಬದಲಾಯಿಸಲು ಸೂಚನೆ ನೀಡಿದ ಪರಿಣಾಮ ಅಲ್ಲಿ ಬಹಳಷ್ಟು ಗೊಂದಲ ಉಂಟಾಗಿತ್ತು.

ಗೌರವ ಡಾಕ್ಟರೇಟ್ ಪ್ರದಾನ, ಪದವಿ ಪ್ರಮಾಣ ಮಾಡುವ ಸಂದರ್ಭದಲ್ಲೂ ಮಂಗಳೂರು ವಿಶ್ವವಿದ್ಯಾನಿಲಯ ಈ ಮೊದಲಿದ್ದ ವ್ಯವಸ್ಥೆಯನ್ನೇ ಮಾಡಿಕೊಂಡಿತ್ತಾದರೂ, ಅದನ್ನೂ ಕೂಡ ವೇದಿಕೆಯಲ್ಲಿ ಬದಲಾಯಿಸಲಾಯಿತು.

ಘಟಿಕೋತ್ಸವದ ಶಿಷ್ಟಾಚಾರದಂತೆ ನಡೆಸಲು ಮಂಗಳೂರು ವಿವಿ ಎಲ್ಲ ಅಧಿಕಾರಿಗಳು ಪೂರ್ವಸಿದ್ಧತೆ ನಡೆಸಿದ್ದರು. ಆದರೆ ರಾಜ್ಯಪಾಲರು ವೇದಿಕೆಯಲ್ಲೇ ಕೂತು ಏರುಧ್ವನಿಯಲ್ಲೇ ತಮಗೆ ಬೇಕಾದ ರೀತಿಯಲ್ಲಿ ಕಾರ್ಯಕ್ರಮದ ಶಿಷ್ಟಾಚಾರವನ್ನು ಬದಲು ಮಾಡಲು ನಿರ್ದೇಶಿಸುತ್ತಿದ್ದರು.

ಒಂದೂವರೆ ಗಂಟೆಯ ಇಡೀ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ವಿವಿಯ ಉಪ ಕುಲಪತಿ, ಪರೀಕ್ಷಾಂಗ ಕುಲಸಚಿವರಿಗೆ ಬಾಯಿಗೆ ಬಂದಂತೆ ಮೌಖಿಕ ನಿರ್ದೇಶನ ನೀಡುತ್ತಿದ್ದರು.

ಪಿ.ಎಚ್.ಡಿ. ಡಾಕ್ಟರೇಟ್ ಪದವಿಯನ್ನು ರಾಜ್ಯಪಾಲರ ಕೈಯಿಂದಲೇ ನೀಡುವುದು ಶಿಷ್ಟಾಚಾರ. ಆದರೆ ಈ ಬಾರಿ ಸಂಶೋಧನಾರ್ಥಿಗಳಿಗೆ ಪಿ.ಎಚ್‌.ಡಿ. ಡಾಕ್ಟರೇಟ್ ಸರ್ಟಿಫಿಕೇಟ್‌ ಅನ್ನು ಕಾರ್ಯಕ್ರಮದ ಮೊದಲೇ ಹಂಚಿ, ನಂತರ ಎಲ್ಲರನ್ನೂ ಒಟ್ಟಿಗೆ ವೇದಿಕೆಗೆ ಕರೆದು ರಾಜ್ಯಪಾಲರು ಗ್ರೂಪ್ ಫೋಟೋಗೆ ಫೋಸ್ ನೀಡಿದ್ದಾರೆ. ಈ ಮಧ್ಯೆ ರಾಜ್ಯಪಾಲರ ಅಂಗರಕ್ಷಕರಾಗಿದ್ದ ಬೆಂಗಳೂರಿನ ಹೆಡ್‌ಕಾಸ್ಟೇಬಲ್‌ ಓರ್ವರು, ವೇದಿಕೆಯಲ್ಲಿ ನಿಂತು ಏರುದನಿಯಲ್ಲೇ ವಿವಿ ಸಿಬ್ಬಂದಿಗಳತ್ತ ಮಾತನ್ನಾಡುತ್ತಿದ್ದರೆ, ಮಾಧ್ಯಮದ ಕ್ಯಾಮರಾಮೆನ್‌ ಒಬ್ಬರನ್ನು ದೂಡಿದ ಘಟನೆಯೂ ನಡೆಯಿತು.

ಕಣ್ಣೀರಿಟ್ಟ ಉಪ ಕುಲಪತಿ ಡಾ.ಪಿ.ಎಲ್ ಧರ್ಮ!

ಇಡೀ ಘಟನೆ ಬಗ್ಗೆ ವಿವಿ ಅಧಿಕಾರಿಗಳು ಮೌನವಾಗಿ ಪ್ರತಿಕ್ರಿಯಿಸುತ್ತಿದ್ದರೆ, ಉಪಕುಲಪತಿ ಡಾ.ಪಿ.ಎಲ್ ಧರ್ಮ ವೇದಿಕೆಯಲ್ಲೇ ದುಃಖದಿಂದ ಕಣ್ಣೀರು ಹಾಕುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಕಾರ್ಯಕ್ರಮದ ನಡುವೆ ರಾಜ್ಯಪಾಲರು ಮಂಗಳೂರು ವಿವಿಯ ಉಪ ಕುಲಪತಿ ಡಾ. ಪಿ ಎಲ್ ಧರ್ಮ ಅವರನ್ನು ತರಾಟೆಗೆ ತೆಗೆದುಕೊಂಡರು‌. ಇದರಿಂದ ಕಸಿವಿಸಿಗೊಂಡ ಕುಲಪತಿಗಳು ವೇದಿಕೆಯಲ್ಲಿಯೇ ಭಾವುಕರಾದರು.

ಇಡೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲರು ಸಭೆಯುದ್ದಕ್ಕೂ ಒಂದು ನಿಮಿಷವೂ ಮಾತನಾಡದೆ ಸುಮ್ಮನೆ ಕುಳಿತಿರದ ಬಗ್ಗೆ ಸಭಾಂಗಣದಲ್ಲಿದ್ದ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಭಾಗವಹಿಸಿದ್ದ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಸಹಿತ ಕಾಂಗ್ರೆಸ್, ಬಿಜೆಪಿ ಮುಖಂಡರೆಲ್ಲ ಇದ್ದರೂ ಕೂಡ ಮೂಕ ಪ್ರೇಕ್ಷಕರಾಗಿದ್ದರು.

ವಿವಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು. ಈ ಘಟನೆ ಬಗ್ಗೆ ವಿವಿಯ ಯಾವುದೇ ಅಧಿಕಾರಿಗಳು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಇದನ್ನು ಓದಿದ್ದೀರಾ? ಪೆಟ್ರೋಲ್, ಡೀಸೆಲ್ ದರ : ದಕ್ಷಿಣದ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲೇ ಕಡಿಮೆ: ಸಿಎಂ ಸಿದ್ದರಾಮಯ್ಯ

ಒಟ್ಟಿನಲ್ಲಿ ತನ್ನದೇ ನೀತಿ ನಿಯಮಗಳನ್ನು ರೂಪಿಸಿ ಅದನ್ನು ಅನುಷ್ಠಾನಕ್ಕೆ ತಂದು ಇಡೀ ಕಾರ್ಯಕ್ರಮವನ್ನೇ ಗೊಂದಲದ ಗೂಡಾಗಿಸಿದ ರಾಜ್ಯಪಾಲರ ವರ್ತನೆ ಮಾತ್ರ ಎಲ್ಲರ ಟೀಕೆಗೆ ಗುರಿಯಾಗಿದೆ. ಮಂಗಳೂರು ವಿವಿಯ ಘಟಿಕೋತ್ಸವದ ಇತಿಹಾಸದಲ್ಲಿ ಈ ರೀತಿ ನಡೆದಿರುವುದು ಮೊದಲು ಎಂಬ ಮಾತು ಕೇಳಿಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ‌ | ಭಾವೈಕ್ಯತೆಯ ಮೊಹರಂ; ಸಾರ್ವಜನಿಕರಿಗೆ ತಿನಿಸು, ಪಾನೀಯ ವಿತರಣೆ

ಹಿಂದೂ-ಮುಸಲ್ಮಾನರು ಕೂಡಿಕೊಂಡು ಭಾವೈಕ್ಯತೆಯ ಸಂಕೇತವಾಗಿ ಆಚರಿಸುವ ಮೊಹರಂ ಮೆರವಣಿಗೆ ಚಿತ್ರದುರ್ಗ ನಗರದಲ್ಲಿ...

‌ಬೆಳಗಾವಿ | ನಮ್ಮ ಧರ್ಮ ನಮ್ಮೊಂದಿಗೆ, ನಮ್ಮ ಪ್ರೀತಿ ಎಲ್ಲರೊಂದಿಗೆ: ಮುಹಮ್ಮದ್ ಕುಂಞಿ

ನಮ್ಮ ಧರ್ಮ ನಮ್ಮೊಂದಿಗೆ ನಮ್ಮ ಪ್ರೀತಿ ಎಲ್ಲರೊಂದಿಗೆ ಇರಲಿ. ನಾವು ನಮ್ಮ...

ಕಲಬುರಗಿ | ಪತ್ನಿ ಕೊಲೆಗೆ ಯತ್ನಿಸಿದ ಪತಿಗೆ 2 ವರ್ಷ ಜೈಲು, ದಂಡ

ಪತ್ನಿಗೆ ಕೌಟುಂಬಿಕ ಹಿಂಸೆ ನೀಡಿ, ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಪತಿಗೆ...

ಉಡುಪಿ | ಅಪಘಾತ ಪ್ರಕರಣಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ: ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ

ಅಪಘಾತ ಪ್ರಕರಣಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಪ್ರತಿ ಮೂರು ನಿಮಿಷಕ್ಕೆ ಒಬ್ಬರು...