LGBTQI (ಲೆಸ್ಬಿಯನ್, ಗೇಯ್, ಬೈಸೆಕ್ಸುವಲ್, ಟ್ರಾನ್ಸ್ಜೆಂಡರ್, ಕ್ವೀರ್, ಇಂಟರ್ಸೆಕ್ಸ್) ವ್ಯಕ್ತಿಗಳಿಗೆ ರಕ್ತದಾನ ಮಾಡುವ ಹಕ್ಕು ನೀಡಬೇಕು ಎಂದು ಒತ್ತಾಯಿಸಿ ಹಾಗೂ ‘2017ರ ರಕ್ತದಾನಿಗಳ ನಿಯಮ’ಗಳನ್ನು ಪ್ರಶ್ನಿಸಿ ದೆಹಲಿ ಮೂಲದ ಸಲಿಂಗಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸಲಿದೆ.
‘ರೈನ್ಬೋ ಲಿಟರೇಚರ್ ಫೆಸ್ಟಿವಲ್’ನ ನಿರ್ದೇಶಕ ಷರೀಫ್ ಡಿ ರಂಗನೇಕರ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ. ರಕ್ತದಾನಿಗಳ ನಿಯಮಗಳನ್ನು ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿ (NBTC) ಮತ್ತು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ಹಾಗೂ ಇತರರು ರೂಪಿಸಿದ್ದಾರೆ. ಆದರೆ, ಈ ನಿಯಮಗಳು ಟ್ರಾನ್ಸ್ಜೆಂಡರ್ಗಳು, ಮಹಿಳಾ ಲೈಂಗಿಕ ಕಾರ್ಯಕರ್ತರು ಮತ್ತು LGBTQI ವ್ಯಕ್ತಿಗಳು ರಕ್ತದಾನ ಮಾಡದಂತೆ ನಿರ್ಬಂಧಗಳನ್ನು ಹೇರಿವೆ ಎಂದು ಅರ್ಜಿಯಲ್ಲಿ ಗಮನ ಸೆಳೆದಿದ್ದಾರೆ.
“1980ರ ದಶಕದಲ್ಲಿ ಅಮೆರಿಕದಲ್ಲಿ ತೆಗೆದುಕೊಂಡ ಅತ್ಯಂತ ಪೂರ್ವಾಗ್ರಹ ಪೀಡಿತ ಮತ್ತು ಊಹಾತ್ಮಕ ದೃಷ್ಟಿಕೋನವು ಜಗತ್ತನ್ನು ಆವರಿಸಿಕೊಂಡಿದೆ. ಅದೇ ಪೂರ್ವಾಗ್ರಹ ಪೀಡಿತ ದೃಷ್ಟಿಕೋನದ ಆಧಾರದ ಮೇಲೆಯೇ ಭಾರತದಲ್ಲಿಯೂ ನಿಮಯಗಳನ್ನು ರೂಪಿಸಲಾಗಿದೆ” ಎಂದು ಷರೀಫ್ ಅರ್ಜಿಯಲ್ಲಿ ವಿವರಿಸಿದ್ದಾರೆ.
“ಅದಗ್ಯೂ – ಇಂಗ್ಲೆಂಡ್, ಕೆನಡಾ, ಇಸ್ರೇಲ್ ಮತ್ತು ಇತರ ಹಲವು ದೇಶಗಳು ತಮ್ಮ ನಿಮಯಗಳನ್ನು ಮರುಪರಿಶೀಲನೆ ಮಾಡಿವೆ. ಎಲ್ಜಿಬಿಟಿಕ್ಯೂಐ ವ್ಯಕ್ತಿಗಳು ರಕ್ತದಾನ ಮಾಡಬಹುದು. ರಕ್ತದಾನಕ್ಕೆ ಯಾವುದೇ ನಿರ್ಬಂಧವಿಲ್ಲ ಎಂಬ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿವೆ” ಎಂದು ಅವರು ಗಮನ ಸೆಳೆದಿದ್ದಾರೆ.
“ಒಂದು ನಿರ್ದಿಷ್ಟ ಗುಂಪಿನ ವ್ಯಕ್ತಿಗಳು ಲೈಂಗಿಕವಾಗಿ ಹರಡುವ ರೋಗಗಳಿಂದ ಬಳಲುತ್ತಿದ್ದಾರೆ ಎಂದು ಪೂರ್ವಾಗ್ರಹವಿದೆ. ವೈದ್ಯಕೀಯ ತಂತ್ರಜ್ಞಾನ, ಶಿಕ್ಷಣ, ವಿಶೇಷವಾಗಿ ಹೆಮಟಾಲಜಿ ಕ್ಷೇತ್ರದಲ್ಲಿ ಮಹತ್ತರವಾಗಿ ಪ್ರಗತಿ ಸಾಧಿಸಲಾಗಿದ್ದು, ರಕ್ತ ವರ್ಗಾವಣೆಯ ಮೊದಲು ಪ್ರತಿ ದಾನಿಗಳ ರಸ್ತವನ್ನು ‘ಸ್ಕ್ರೀನಿಂಗ್’ ನಡೆಸಲಾಗುತ್ತದೆ. ಹೀಗಾಗಿ, ಒಂದು ಗುಂಪನ್ನು ರಕ್ತದಾನದಿಂದ ಹೊರಗಿಡುವುದು ಸರಿಯಲ್ಲ” ಎಂದು ಅವರು ಪಿಐಎಲ್ನಲ್ಲಿ ವಾದಿಸಿದ್ದಾರೆ.
ಈ ವರದಿ ಓದಿದ್ದೀರಾ?: ಸಲಿಂಗ ವಿವಾಹ | ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಸಂಜೀವ್ ಖನ್ನಾ
“ರಕ್ತದಾನಿಗಳ ನಿಮಯಗಳ 12 ಮತ್ತು 51ನೇ ಷರತ್ತುಗಳು ತಾರತಮ್ಯದಿಂದ ಕೂಡಿದ್ದು, ಅಸಾಂವಿಧಾನಿಕವಾಗಿವೆ. ಎಲ್ಜಿಬಿಟಿಕ್ಯೂಐ ಸಮುದಾಯವನ್ನು ರಕ್ತದಾನದಿಂದ ಹೊರಗಿಡುವುದು ಸಂವಿಧಾನದ 14, 15, 17 ಹಾಗೂ 21ನೇ ವಿಧಿಗಳ ಅಡಿಯಲ್ಲಿ ಒದಗಿಸಲಾಗಿರುವ ಸಮಾನತೆ, ಘನತೆ ಮತ್ತು ಜೀವನದ ಹಕ್ಕಿನ ಉಲ್ಲಂಘನೆಯಾಗಿದೆ. ರಕ್ತದಾನ ನಿಷೇಧವು ಎಲ್ಜಿಬಿಟಿಕ್ಯೂಐ ಸಮುದಾಯವನ್ನು 2ನೇ ದರ್ಜೆ ಪ್ರಜೆಯಾಗಿ ಷೋಷಿಸುತ್ತದೆ” ಎಂದು ಅವರು ವಾದಿಸಿದ್ದಾರೆ.
“ಎಲ್ಜಿಬಿಟಿಕ್ಯೂಐ ಸಮುದಾಯದ ವ್ಯಕ್ತಿಗಳು ರಕ್ತದಾನ ಮಾಡಲು ಅನುಮತಿಸುವ ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು” ಎಂದು ಷರೀಪ್ ನ್ಯಾಯಾಲಯವನ್ನು ಕೋರಿದ್ದಾರೆ.