ನಿತ್ಯ 24,000 ಕ್ಯೂಸೆಕ್ ಕಾವೇರಿ ನೀರು ಬಿಡುವಂತೆ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಶುಕ್ರವಾರಕ್ಕೆ(ಸೆ.1) ಮುಂದೂಡಿದೆ.
ಅಷ್ಟರೊಳಗೆ ಎರಡು ರಾಜ್ಯಗಳ ಜಲಾಶಯಗಳ ವಾಸ್ತವ ಸ್ಥಿತಿ ಕುರಿತು ವರದಿ ಸಲ್ಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಪ್ರಾಧಿಕಾರದಲ್ಲಿ ತಜ್ಞರಿದ್ದಾರೆ, ನಾವು ತಜ್ಞರಲ್ಲ ಹಾಗಾಗಿ ಯಾವುದನ್ನೂ ತನಿಖೆ ಮಾಡದೆ ತಕ್ಷಣ ಆದೇಶ ಹೊರಡಿಸುವುದು ಕಷ್ಟ ಎಂದು ನ್ಯಾಯಾದೀಶರಾದ ಬಿ ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ತಿಳಿಸಿದೆ.
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಮುಂದಿನ ಹದಿನೈದು ದಿನಗಳ ಕಾಲ ನೀರು ಬಿಡುವ ಕುರಿತು ತೀರ್ಮಾನಿಸುವಂತೆ ಆಗಸ್ಟ್ 28 ರಂದು ಸಭೆ ಸೇರುವ ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ನ್ಯಾಯಾಲಯ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಚಂದ್ರಯಾನ–3ರ ವಿಜ್ಞಾನಿಗಳಿಗೆ 17 ತಿಂಗಳಿನಿಂದ ವೇತನ ಪಾವತಿಸಿಲ್ಲ: ಕೆ ಸಿ ವೇಣುಗೋಪಾಲ್ ಆರೋಪ
ಕರ್ನಾಟಕದ ಪರ ವಾದ ಮಂಡಿಸಿದ ಶ್ಯಾಮ್ ದಿವಾನ್, ಕಾವೇರಿ ನಿರ್ವಹಣಾ ಪ್ರಾಧಿಕಾರದಲ್ಲಿ ನಾವು ನಮ್ಮ ಸಮಸ್ಯೆಗಳನ್ನು ಹೇಳಲು ಪ್ರಯತ್ನಿಸಿದಾಗ ತಮಿಳುನಾಡು ಸರ್ಕಾರದ ಅಧಿಕಾರಿಗಳು ಕೇಳದೆ ಸಭೆಯಿಂದ ಹೊರನಡೆದಿದ್ದಾರೆ. ರಾಜ್ಯದಲ್ಲಿ ಕಡಿಮೆ ಮಳೆಯಾಗಿದೆ. ಹೀಗಾಗಿ ನೀರಿನ ಪ್ರಮಾಣ ತುಂಬಾ ಕಡಿಮೆ ಇದೆ ಎಂದರು.
ನೀರು ಬಿಡಲು ಕಾವೇರಿ ನಿರ್ವಹಣಾ ಪ್ರಾಧಿಕಾರ ನೀಡಿದ್ದ ಗಡುವು ಇಂದಿಗೆ ಮುಕ್ತಾಯವಾಗುತ್ತಿದೆ. ಈ ನಡುವೆ ಆದೇಶ ಸರಿಯಾಗಿ ಪಾಲನೆಯಾಗಿಲ್ಲ. ಪ್ರಸ್ತುತ ನಾವು ಅತ್ಯಂತ ಭೀಕರ ಬರವನ್ನು ಅನುಭವಿಸುತ್ತಿದ್ದೇವೆ. ನೀರು ಬಿಡದಿದ್ದರೆ ಭಾರಿ ಅನಾಹುತವಾಗಲಿದೆ ಎಂದು ತಮಿಳುನಾಡು ಪರ ವಾದ ಮಂಡಿಸಿದ ಮುಕುಲ್ ರೋಹಟಗಿ ನ್ಯಾಯಾಲಯಕ್ಕೆ ತಿಳಿಸಿದರು.
ದಿನಕ್ಕೆ 24,000 ಕ್ಯೂಸೆಕ್ ಬಿಡುಗಡೆ ಮಾಡುವಂತೆ ತಮಿಳುನಾಡು ಮಾಡಿದ ಮನವಿಯನ್ನು ಕರ್ನಾಟಕವು ನ್ಯಾಯಾಲಯದ ಮುಂದೆ ವಿರೋಧಿಸಿದೆ.
ಆಗಸ್ಟ್ 12 ರಿಂದ ಮುಂದಿನ 15 ದಿನಗಳವರೆಗೆ ದಿನಕ್ಕೆ 10,000 ಕ್ಯೂಸೆಕ್ ನೀರನ್ನು ಬಿಡಲು ರಾಜ್ಯದ ಸದಸ್ಯರು ತೆಗೆದುಕೊಂಡ ನಿರ್ಧಾರವನ್ನು ಪರಿಶೀಲಿಸಲು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.