ರದ್ದಾಗಿರುವ ದೆಹಲಿಯ ಮದ್ಯ ನೀತಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಿಂದಲೇ ಬಂಧಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆಗೆ ಬುಧವಾರ ವಿಚಾರಣೆ ನಡೆಸುವುದಕ್ಕೆ ಕೆಲವೇ ಗಂಟೆಗಳಿಗೆ ಮೊದಲು ಈ ಬೆಳವಣಿಗೆ ನಡೆದಿದೆ.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಕೇಂದ್ರ ತನಿಖಾ ಸಂಸ್ಥೆಯು ತಿಹಾರ್ ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯನ್ನು ದಾಖಲಿಸಿತ್ತು. ಮಂಗಳವಾರ ತಡರಾತ್ರಿ ಜೈಲಿನಿಂದಲೇ ಬಂಧಿಸಿದ್ದು, ಬುಧವಾರ ಅವರನ್ನು ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಲಿರುವುದಾಗಿ ವರದಿಯಾಗಿದೆ.
BIG BREAKING: On the eve of the Supreme Court hearing on Delhi CM Arvind Kejriwal’s bail in the Delhi Excise Policy money laundering case, CBI arrests Kejriwal in the corruption case from Tihar Jail. pic.twitter.com/HUNNCAdygO
— Law Today (@LawTodayLive) June 25, 2024
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಡೆದಿತ್ತು. ತಡೆ ಆದೇಶ ನೀಡುವ ವೇಳೆ, “ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದ ವಿಚಾರಣಾ ನ್ಯಾಯಾಲಯ ಸರಿಯಾಗಿ ಗಮನಕೊಟ್ಟಿಲ್ಲ” ಎಂದು ಹೈಕೋರ್ಟ್ ಹೇಳಿತ್ತು.
ಇದನ್ನು ಓದಿದ್ದೀರಾ? ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್
ದೆಹಲಿ ಅಕ್ರಮ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಕಳೆದ ಮಾರ್ಚ್ 21ರಂದು ಇಡಿ (ಜಾರಿ ನಿರ್ದೇಶನಾಲಯ) ಬಂಧಿಸಿತ್ತು. ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿತ್ತು. ಜೂನ್ 2ರಂದು ಅವರು ಮತ್ತೆ ನ್ಯಾಯಾಲಯದ ಮುಂದೆ ಶರಣಾಗಿ, ಜೈಲಿಗೆ ತೆರಳಿದ್ದರು.
