ಕಳೆದ ಕೆಲವು ತಿಂಗಳುಗಳಿಂದ ಛತ್ತೀಸ್‌ಘಡದಲ್ಲಿ ನಕ್ಸಲರು ಹಾಗೂ ಶಸ್ತಾಸ್ರ ಪಡೆಗಳ ನಡುವೆ ಗುಂಡಿನ ಕಾಳಗ ನಡೆಯುತ್ತಿದೆ. ಈ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಿಳೆಯರು ಸೇರಿದಂತೆ 33 ಮಂದಿ ನಕ್ಸಲರು ಪೊಲೀಸರಿಗೆ ಶರಣಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
“ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ 33 ನಕ್ಸಲರು, ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಹಿರಿಯ ಅಧಿಕಾರಿಗಳ ಮುಂದೆ ಶನಿವಾರ ಶರಣಾಗತರಾಗಿದ್ದಾರೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ತಿಳಿಸಿದರು.
“ಮಾವೋವಾದಿಗಳ ಗಂಗಲೂರು ಪ್ರದೇಶ ಸಮಿತಿಯಡಿ ಸಕ್ರಿಯರಾಗಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಶರಣಾದ 33 ಮಂದಿಯು, ಪೊಲೀಸರ ಪುನರ್ವಸತಿ ನೀತಿಯಿಂದ ಪ್ರಭಾವಿತರಾಗಿದ್ದಾರೆ” ಎಂದು ಹೇಳಿದರು.
ಮಾವೋವಾದಿ ಸಿದ್ಧಾಂತದಿಂದ ಭ್ರಮನಿರಸನಗೊಂಡಿದ್ದಾರೆ ಮತ್ತು ಆದಿವಾಸಿಗಳ ವಿರುದ್ಧ ತಮ್ಮದೇ ಗುಂಪು ನಡೆಸಿದ ದೌರ್ಜನ್ಯವನ್ನು ಖಂಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
#Chhattisgarh | 33 Maoists surrender before the DIG of CRPF and Superintendent of Police in the #Bijapur district of Bastar division
On surrendering, they were given an amount of Rs 25,000 each as an incentive under the surrender and rehabilitation policy of the state government… pic.twitter.com/lcKyg4kuyw
— DD News (@DDNewslive) May 25, 2024
ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ (ಪಿಎಲ್‌ಜಿಎ) ಸದಸ್ಯ ರಾಜು ಹೇಮ್ಲ ಅಲಿಯಾಸ್ ಠಾಕೂರ್ (35), ಮಾವೋವಾದಿಗಳ ಪ್ಲಟೂನ್ ನಂಬರ್ ಒಂದರ ಸದಸ್ಯ ಸಮೋ ಕರ್ಮ ಪತ್ತೆಗೆ ತಲಾ 2 ಲಕ್ಷ ಹಾಗೂ ಮಾವೋವಾದಿಗಳ ರೆವಲ್ಯೂನಪರಿ ಪಾರ್ಟಿ ಕಮಿಟಿಯ (ಆರ್‌ಪಿಸಿ) ಜನತಾ ಸರ್ಕಾರ್‌ನ ಮುಖ್ಯಸ್ಥ ಸುದ್ರು ಪುನೆಮ್ ಪತ್ತೆಗಾಗಿ 1 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಈ ಮೂವರು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶರಣಾದ ನಕ್ಸಲರಿಗೆ ತಲಾ 25 ಸಾವಿರ ನೀಡಲಾಗಿದ್ದು, ಸರ್ಕಾರದ ನೀತಿಯಂತೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಗುಜರಾತ್ | ರಾಜ್‌ಕೋಟ್‌ನ ಗೇಮಿಂಗ್ ಝೋನ್‌ನಲ್ಲಿ ಭಾರೀ ಬೆಂಕಿ ಅವಘಡ; 20 ಮಂದಿ ಮೃತ್ಯು
ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ 109 ನಕ್ಸಲರು ಮುಖ್ಯವಾಹಿನಿಗೆ ಮರಳಿದ್ದು, 189 ಮಂದಿಯನ್ನು ಬಂಧಿಸಲಾಗಿದೆ ಎಂದಿದ್ದಾರೆ.
