ಎಸ್‌ಯುವಿ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ ಆರು ಮಂದಿ ಸಾವನ್ನಪ್ಪಿ, ಏಳು ಮಂದಿ ಗಾಯಗೊಂಡ ಘಟನೆ ಛತ್ತೀಸ್‌ಗಢದ ಬಲೋದ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ಬೆಳಗ್ಗೆ ಮಾಹಿತಿ ನೀಡಿದ್ದಾರೆ.
ಭಾನುವಾರ ತಡರಾತ್ರಿ ದೌಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಸಂತ್ರಸ್ತರು ಜಿಲ್ಲೆಯ ಗುಂಡರ್ದೇಹಿ ಪ್ರದೇಶದಲ್ಲಿ ತಮ್ಮ ಕುಟುಂಬಸ್ಥರನ್ನು ಭೇಟಿಯಾಗಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಇದನ್ನು ಓದಿದ್ದೀರಾ? ಯುಕೆ | ಭೀಕರ ಅಪಘಾತ; ಭಾರತ ಮೂಲದ ವಿದ್ಯಾರ್ಥಿ ಸಾವು
“ಎಸ್‌ಯುವಿ ವಾಹನವು ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಎಸ್‌ಯುವಿಯಲ್ಲಿ ಒಟ್ಟು 13 ಮಂದಿ ಇದ್ದರು. ಈ ಪೈಕಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರನ್ನು ದುರ್ಪತ್ ಪ್ರಜಾಪತಿ (30), ಸುಮಿತ್ರಾ ಬಾಯಿ ಕುಂಭಕರ್ (50), ಮನಿಶಾ ಕುಂಭಕರ್ (35), ಸಗುನ್ ಬಾಯಿ ಕುಂಭಕರ್ (50), ಇಮ್ಲಾ ಬಾಯಿ (55) ಮತ್ತು ಬಾಲಕ ಜಿಗ್ನೇಶ್ ಕುಂಭಕರ್ (7) ಎಂದು ಗುರುತಿಸಲಾಗಿದೆ.
ಇನ್ನು ಐವರು ಮಹಿಳೆಯರು ಮತ್ತು ಮಗು ಸೇರಿದಂತೆ ಒಟ್ಟು 7 ಮಂದಿ ಗಾಯಾಳುಗಳು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಾಜನಂದಗಾಂವ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
