ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರ ಜನರ ಸಂಪತ್ತನ್ನು “ನುಸುಳುಕೋರರಿಗೆ” ಹಂಚಲಿದೆ ಎಂದು ತಮ್ಮ ಪ್ರಚಾರ ಭಾಷಣದಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಒಂದು ಲಕ್ಷಕ್ಕೂ ಅಧಿಕ ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
“ಪ್ರಧಾನಿಯವರು ಬಿಜೆಪಿಯ ಸ್ಟಾರ್ ಚುನಾವಣಾ ಪ್ರಚಾರಕರಾಗಿ ಎಪ್ರಿಲ್ 21ರಂದು ರಾಜಸ್ಥಾನದಲ್ಲಿ ಸಂವಿಧಾನವನ್ನು ಗೌರವಿಸುವ ದೇಶದ ಲಕ್ಷಾಂತರ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಈ ಭಾಷಣ ಅಪಾಯಕಾರಿ ಮತ್ತು ದೇಶದ ಮುಸ್ಲಿಮರ ಮೇಲೆ ನೇರ ದಾಳಿಯಾಗಿದೆ” ಎಂದು ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೇ, ಈ ಬಗ್ಗೆ ಸಹಿ ಸಂಗ್ರಹ ಅಭಿಯಾನ ಕೂಡ ನಡೆಸಿದ್ದಾರೆ. ಈ ಪತ್ರಕ್ಕೆ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಸಾಮಾಜಿಕ ಹೋರಾಟಗಾರರು ಸಹಿ ಹಾಕಿದ್ದಾರೆ.
ಇದನ್ನು ಓದಿದ್ದೀರಾ? ದ್ವೇಷ ಭಾಷಣ ವಿವಾದದ ಬೆನ್ನಲ್ಲೇ ‘ಡ್ಯಾಮೇಜ್ ಕಂಟ್ರೋಲ್’ಗೆ ಮುಂದಾದ ಪ್ರಧಾನಿ ಮೋದಿ!
“ಮುಸ್ಲಿಮರ ವಿರುದ್ಧ ನಿಂದನಾತ್ಮಕ ಭಾಷೆಯನ್ನು ಮತಗಳನ್ನು ಯಾಚಿಸುವ ಉದ್ದೇಶದಿಂದ ಪ್ರಧಾನಿ ಬಳಸಿರುವುದು, ಜಗತ್ತಿನ “ಮದರ್ ಆಫ್ ಡೆಮಾಕ್ರೆಸಿ” ಎಂಬ ಹೆಗ್ಗಳಿಕೆ ಪಡೆದಿರುವ ಭಾರತದ ಘನತೆಯನ್ನು ಕುಂದುಂಟು ಮಾಡುತ್ತದೆ, ಇಂತಹ ದ್ವೇಷದ ಭಾಷಣದ ವಿರುದ್ಧ ಚುನಾವಣಾ ಆಯೋಗ ಕ್ರಮಕೈಗೊಳ್ಳಲು ವಿಫಲವಾದರೆ ನಿಮಗಿಂತ ಮುಂಚೆ ಈ ಹುದ್ದೆಯಲ್ಲಿದ್ದ ಹಲವು ನಿಷ್ಠಾವಂತ ಅಧಿಕಾರಿಗಳು ಎತ್ತಿ ಹಿಡಿದಿದ್ದ ಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ಸ್ವಾಯತ್ತತೆಗೆ ಧಕ್ಕೆ ತಂದಂತಾಗುತ್ತದೆ’ ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ಬರೆಯಲಾದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಚುನಾವಣೆ ಮುಗಿದ ಮೇಲೂ ಇದರ ಗಾಯಗಳು ದಶಕಗಳ ಕಾಲ ಉಳಿಯುತ್ತವೆ: ಜಾಗೃತ ನಾಗರಿಕರು ಕರ್ನಾಟಕ
‘ಮೋದಿಯವರು ದ್ವೇಷ ಭಾಷಣ ಮಾಡುವ ಮೂಲಕ ಅಲ್ಪ ಸಂಖ್ಯಾತರನ್ನು ಹೀಯಾಳಿಸುವ ಜತೆಗೆ, ಬಹು ಸಂಖ್ಯಾತ ಸಮುದಾಯವನ್ನು ಹೆದರಿಸಿದ್ದಾರೆ. ಮುಸ್ಲಿಮರು ಅತಿ ಹೆಚ್ಚು ಮಕ್ಕಳನ್ನು ಪಡೆಯುವಂಥವರು ಎಂದು ಚುಚ್ಚಿದ್ದಾರೆ. ಇವೆಲ್ಲವೂ ಸತ್ಯಕ್ಕೆ ದೂರವಾದ ಮಾತುಗಳು. ಇಂತಹ ಭಾಷಣಗಳು ಉಂಟು ಮಾಡುವ ಪರಿಣಾಮಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಚುನಾವಣೆ ಮುಗಿದ ಮೇಲೂ ಇದರ ಗಾಯಗಳು ದಶಕಗಳ ಕಾಲ ಉಳಿಯುತ್ತವೆ’ ಎಂದು ಜಾಗೃತ ನಾಗರಿಕರು ಕರ್ನಾಟಕ ಸಂಘಟನೆ ಹೇಳಿದೆ.
ಸಂಘಟನೆಯ ಮುಖಂಡರಾದ ಕೆ.ಮರುಳಸಿದ್ದಪ್ಪ, ಜಿ.ರಾಮಕೃಷ್ಣ, ವಿಜಯಾ, ಎಸ್.ಜಿ.ಸಿದ್ದರಾಮಯ್ಯ, ರಾಜೇಂದ್ರ ಚೆನ್ನಿ, ವಿಮಲಾ.ಕೆ.ಎಸ್, ಮಾವಳ್ಳಿ ಶಂಕರ್, ಜಾಣಗೆರೆ ವೆಂಕಟರಾಮಯ್ಯ, ಬಂಜಗೆರೆ ಜಯಪ್ರಕಾಶ್, ಬಿ.ಶ್ರೀಪಾದ ಭಟ್ ಮತ್ತಿತರರು ಆತಂಕ ವ್ಯಕ್ತಪಡಿಸಿದ್ದಾರೆ.
‘ಮೋದಿಯವರು ಅನೇಕ ದ್ವೇಷ ಭಾಷಣಗಳನ್ನು ಹಿಂದೆಯೂ ಮಾಡಿದ್ದಾರೆ. ಆದರೆ, ಈ ಬಾರಿ ತಮ್ಮ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ದ್ವೇಷ ಭಾಷಣದ ಪಾತಾಳಕ್ಕೆ ಇಳಿದಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಕೂಡಾ. ಚುನಾವಣಾ ಆಯೋಗ ಮತ್ತು ನ್ಯಾಯಾಂಗ ಈಗಲಾದರೂ ಅವರಿಗೆ ಲಗಾಮು ಹಾಕಬೇಕು ಹಾಗೂ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಭಾರತದಲ್ಲಿ ಧರ್ಮ ನಿರಪೇಕ್ಷ ಜನತಂತ್ರ ಮರಣಶಯ್ಯೆಯಲ್ಲಿದೆ ಎಂದೇ ಅರ್ಥ. ಕೂಡಲೇ ಆಯೋಗವು ದೂರನ್ನು ದಾಖಲಿಸಿಕೊಂಡು ಕಾರ್ಯ ಪ್ರವೃತ್ತವಾಗಬೇಕು’ ಎಂದು ಒತ್ತಾಯಿಸಿದ್ದಾರೆ.
