ದೇಶದ ರಾಜಧಾನಿ ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯು ರಾಜ್ಯ ಸರ್ಕಾರಕ್ಕಲ್ಲ, ಬದಲಾಗಿ ನೇರವಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಒಳಪಡುತ್ತದೆ. ಹೀಗಿರುವಾಗ, ದೆಹಲಿ ಪೋಲಿಸರು ಯಾರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ರಹಸ್ಯವಾಗಿಯೇನೂ ಉಳಿದಿಲ್ಲ. ಸಿಎಎ/ಎನ್‌ಆರ್‌ಸಿ ಹೋರಾಟದಲ್ಲಿ ನಡೆದ ಭೀಕರ ಹಲ್ಲೆಯ 'ಬ್ಲೂಪ್ರಿಂಟ್' ಆದ ಸಿಜೆಪಿ ಪ್ರತಿಭಟನೆ ಹಲ್ಲೆಯ ವೇಳೆ ಪೊಲೀಸ್ ಮಾರುವೇಷದಲ್ಲಿ ಗೂಂಡಾಗಳನ್ನು ಕಳಿಸಿದವರು ಯಾರು?
ದೇಶದ ಸಂವಿಧಾನವು ಪ್ರಜೆಗಳಿಗೆ ನೀಡಿದ ಅತ್ಯಂತ ಮಹತ್ವದ ಹಕ್ಕುಗಳಲ್ಲಿ ಶಾಂತಿಯುತ ಪ್ರತಿಭಟನೆಯ ಹಕ್ಕೂ ಒಂದು. ಸರ್ಕಾರ ತಪ್ಪುದಾರಿ ಹಿಡಿದಾಗ ಅಥವಾ ಜನವಿರೋಧಿ ನೀತಿಗಳ ಜಾರಿಗೆ ಮುಂದಾದಾಗ ಅದರ ವಿರುದ್ಧವಾಗಿ ನಾಗರಿಕರು, ವಿದ್ಯಾರ್ಥಿಗಳು ಮತ್ತು ಶೋಷಿತ ಸಮುದಾಯಗಳು ಧ್ವನಿ ಎತ್ತುವುದು ಪ್ರಜಾಪ್ರಭುತ್ವದ ಮೂಲಧಾತು. ಆದರೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಚಳವಳಿಗಳನ್ನು ಹತ್ತಿಕ್ಕಲು ನಿರಂತರ ಯತ್ನ ನಡೆಸುತ್ತಲೇ ಇದೆ. ಚಳವಳಿ ತಡೆಯಲು ಬಿಜೆಪಿ ಸರ್ಕಾರ ಬಳಸುತ್ತಿರುವ ತಂತ್ರವು ಮಿತಿಮೀರಿದೆ.
ಈ ತಂತ್ರಗಳು ಅಪಾಯಕಾರಿಯಷ್ಟೇ ಅಲ್ಲ, ಅತ್ಯಂತ ಕಂಟಕಪ್ರಾಯವೂ ಆಗಿದೆ ಎಂಬುದನ್ನು ಇತ್ತೀಚಿನ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಮತ್ತು ಪೊಲೀಸ್ ಮಾರುವೇಷದಲ್ಲಿ ಗೂಂಡಾಗಳು ನಡೆಸಿದ ಅಮಾನುಷ ಹಲ್ಲೆ ಸಾಬೀತುಪಡಿಸುತ್ತದೆ.
ಇದನ್ನೂ ಓದಿ: ಒಬ್ಬನ ತಲೆಬುರುಡೆ ಒಡೆದರೂ ಜೈಲಿಗೆ ಹೋಗಿಲ್ಲ, ಬಿಜೆಪಿ ‘ಆಶೀರ್ವಾದ’ದ ಬಲ ಎಂದ ಹಿಂದುತ್ವ ಕಾರ್ಯಕರ್ತ; ವಿಡಿಯೋ ವೈರಲ್
ಮೋದಿ ಸರ್ಕಾರ ವಿರುದ್ಧವಾಗಿ ಯಾವುದೇ ಒಂದು ನ್ಯಾಯಯುತ ಮತ್ತು ಜನಪರ ಚಳವಳಿ ಜನ್ಮತಳೆದರೆ, ಅದನ್ನು ಸೈದ್ಧಾಂತಿಕವಾಗಿ ಎದುರಿಸುವ ಧೈರ್ಯ ಬಿಜೆಪಿ ಸರ್ಕಾರಕ್ಕೆ ಇದ್ದಂತಿಲ್ಲ. ಅದಕ್ಕಾಗಿ ಗೂಂಡಾಗಳನ್ನು ಸಾದಾ ಉಡುಪಿನಲ್ಲಿ ನುಗ್ಗಿಸಿ ಹಿಂಸಾಚಾರವನ್ನು ಪ್ರಚೋದಿಸುವುದು, ಹೋರಾಟಗಾರರನ್ನೇ ‘ಅಪರಾಧಿಗಳು’ ಅಥವಾ ‘ದೇಶದ್ರೋಹಿಗಳು’ ಎಂದು ಬಿಂಬಿಸುವುದು ಇಂದಿನ ಬಿಜೆಪಿಯ ಕೀಳುಮಟ್ಟದ ತಂತ್ರಗಾರಿಕೆ.
ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿ ಕಂಡುಬಂದ ಘಟನೆಗಳು ಮತ್ತು ಈ ಹಿಂದೆ ಇಡೀ ದೇಶವನ್ನೇ ಉದ್ವಿಗ್ನಗೊಳಿಸಿದ್ದ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಹೋರಾಟಗಳ ದಿನಗಳನ್ನು ಒಟ್ಟಾಗಿ ವಿಶ್ಲೇಷಿಸಿದರೆ, ಈ ಎಲ್ಲ ರಕ್ತಸಿಕ್ತ ಸಂಚುಗಳ ಹಿಂದೆ ‘ಒಂದೇ ಮಾಸ್ಟರ್ ಪ್ಲ್ಯಾನ್’ ಕೆಲಸ ಮಾಡುತ್ತಿರುವುದು ಸ್ಪಷ್ಟ. ಈ ಬೃಹತ್ ಜಾಲದ ಹಿಂದೆ ಕೇಂದ್ರ ಗೃಹ ಸಚಿವಾಲಯ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪ್ರತ್ಯಕ್ಷ ಹಾಗೂ ಪರೋಕ್ಷ ಪಾತ್ರವಿದೆಯೇ ಎಂಬ ಪ್ರಶ್ನೆ ಹಲವರದ್ದು. ಇದಕ್ಕೆ ಉತ್ತರ ನೀಡಬಲ್ಲರೇ ಅಮಿತ್ ಶಾ? ಈ ಪ್ರಶ್ನೆಗಳಿಗೆ ಉತ್ತರಿಸಲು ಹೆದರಿ ಲೋಕಸಭೆಯ ಒಂದೇ ಒಂದು ಕಲಾಪಕ್ಕೂ ಹಾಜರಾಗದ ಕೇಂದ್ರ ಗೃಹ ಸಚಿವರು ಈ ನಮ್ಮ ಪ್ರಶ್ನೆಗೆ ಉತ್ತರಿಸುವರೇ?
ಸಿಜೆಪಿ ಪ್ರತಿಭಟನೆಯ ಕರಾಳ ಮುಖ
ಸಿಜೆಪಿ ನೇತೃತ್ವದ ವಿದ್ಯಾರ್ಥಿ ಮತ್ತು ಯುವಜನರ ಹೋರಾಟದಲ್ಲಿ ನಡೆದ ಘಟನೆಗಳು ಆತಂಕಕಾರಿ. ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡು ಸರ್ಕಾರದ ಮೇಲೆ ಒತ್ತಡ ಹೆಚ್ಚಾಗುತ್ತಿದ್ದಂತೆ, ಯಾವುದೇ ಖಾಕಿ ಸಮವಸ್ತ್ರವಿಲ್ಲದ, ಮುಖಕ್ಕೆ ಮುಸುಕು ಧರಿಸಿದ ಹಾಗೂ ಸಾದಾ ಉಡುಪಿನಲ್ಲಿದ್ದ ಕೆಲವು ಶಂಕಿತ ವ್ಯಕ್ತಿಗಳು ದಿಢೀರನೇ ಪ್ರತಿಭಟನಾನಿರತರ ಸಾಲಿಗೆ ಪ್ರವೇಶಿಸಿದ್ದರು. ಈ ಅನಾಮಿಕರು ನೇರವಾಗಿ ಪೋಲಿಸ್ ಪಡೆಗಳ ಮೇಲೆ ಕಲ್ಲು ತೂರುವುದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಮತ್ತು ವಿನಾಕಾರಣ ಉದ್ವಿಗ್ನತೆ ಸೃಷ್ಟಿಸುವುದರಲ್ಲಿ ತೊಡಗಿದರು.
ಅಚ್ಚರಿಯ ವಿಷಯವೆಂದರೆ, ಅಲ್ಲಿ ಸಾವಿರಾರು ಪೊಲೀಸರಿದ್ದರೂ ಈ ಸಾದಾ ಉಡುಪಿನ ವ್ಯಕ್ತಿಗಳನ್ನು ತಡೆಯುವ ಅಥವಾ ಬಂಧಿಸುವ ಕನಿಷ್ಠ ಪ್ರಯತ್ನವನ್ನೂ ಮಾಡಲಿಲ್ಲ. ಬದಲಾಗಿ, ಈ ಅಪರಿಚಿತ ಗೂಂಡಾಗಳು ಹಿಂಸಾಚಾರಕ್ಕೆ ಚಾಲನೆ ನೀಡಿದ ಕೆಲವೇ ನಿಮಿಷಗಳಲ್ಲಿ ಪೊಲೀಸರು, ಅಸಹಾಯಕರಾಗಿ ಶಾಂತಿಯುತವಾಗಿ ಕುಳಿತಿದ್ದ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಹಿರಿಯ ನಾಗರಿಕರ ಮೇಲೆ ಕ್ರೂರವಾಗಿ ಲಾಠಿಚಾರ್ಜ್ ಮಾಡಿದರು, ಅಶ್ರುವಾಯು, ಪೆಲೆಟ್ ಗನ್ ಪ್ರಯೋಗಿಸಿದರು. ಅಂದರೆ, ಬಲಪ್ರಯೋಗವನ್ನು ಸಮರ್ಥಿಸಿಕೊಳ್ಳಲು ಈ ಮಾರುವೇಷದ ಗೂಂಡಾಗಳನ್ನು ‘ಉಪಕರಣ’ಗಳನ್ನಾಗಿ ಬಳಸಿಕೊಳ್ಳಲಾಯಿತು. ಪೊಲೀಸರೇ ಸ್ವತಃ ಕಲ್ಲುಗಳನ್ನು ಹೊತ್ತು ತರಲಾದ ವಾಹನಗಳನ್ನು ನಿಲ್ಲಿಸಿ ಪ್ರತಿಭಟನಾಕಾರರ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿದ ಆರೋಪಗಳೂ ಕೇಳಿಬಂದವು.
ಈ ಎಲ್ಲಾ ಆರೋಪಗಳನ್ನು ಹಿಂದುತ್ವವಾದಿ ಕಾರ್ಯಕರ್ತ ಸ್ವತಂತ್ರ ಭಾರದ್ವಾಜ್ ‘ಹೆಮ್ಮೆಯಿಂದ’ ಬಹಿರಂಗಪಡಿಸಿದ್ದಾನೆ. ‘ಕಟ್ಟರ್ ಹಿಂದೂ’ ಎಂದು ಕರೆಯಿಸಿಕೊಳ್ಳುವ ಈ ಭಾರದ್ವಾಜ್ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿ ಕಾರ್ಯಕರ್ತೆ ನಿಶು ಆಜಾದ್ ಅವರ ತಂದೆ ಸಂಜಯ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾಗಿ ಪಾಡ್‌ಕಾಸ್ಟ್ ಒಂದರಲ್ಲಿ ಹೇಳಿಕೊಂಡಿದ್ದಾನೆ. ತನ್ನ ಈ ಹಲ್ಲೆಯ ತೀವ್ರತೆಯನ್ನೂ ರಂಜಿತವಾಗಿ ವರ್ಣಿಸಿದ್ದಾನೆ! “ನಾನು ನಿಶು ತಂದೆಯ ತಲೆಬುರುಡೆಯನ್ನೇ ಒಡೆದು ಹಾಕಿದೆ. ಅವರಿಗೆ 60 ಹೊಲಿಗೆಗಳನ್ನು ಹಾಕಬೇಕಾಯಿತು. ಅದು ಹಾಫ್ ಮರ್ಡರ್ ಕೇಸ್. ಅವರು ಸಾಯುವ ಸ್ಥಿತಿಯಲ್ಲಿದ್ದರು. ಆದರೂ ನಾನು ಜೈಲಿಗೆ ಹೋಗಿಲ್ಲ. ಬಿಜೆಪಿ ನಾಯಕರ ಆಶೀರ್ವಾದ ನನ್ನ ಮೇಲಿದೆ” ಎಂದಿದ್ದಾನೆ.
ಅಷ್ಟು ಮಾತ್ರಲ್ಲದೆ “ನನಗೆ ಹನುಮಂತ ದೇವರ ಆಶೀರ್ವಾದವಿದೆ. ಅಲ್ಲದೆ, ಕಪಿಲ್ ಮಿಶ್ರಾ ನನ್ನ ಅಣ್ಣನಂತೆ. ಕಪಿಲ್ ಮಿಶ್ರಾ ಅವರಿಂದ ಕರೆ ಬಂದ ಕೂಡಲೇ ನನ್ನನ್ನು ಬಿಡುಗಡೆ ಮಾಡಲಾಯಿತು. ಕಪಿಲ್ ಮಿಶ್ರಾ ನನ್ನ ಅಣ್ಣ, ಚಿರಾಗ್ ಪಾಸ್ವಾನ್ ನನ್ನ ಅಣ್ಣ. ನಿಮಗೆ ಯಾವ ನಾಯಕ ಗೊತ್ತು ಹೇಳಿ? ನಿಮಗೆ ಮೋದಿ ಜಿ ಗೊತ್ತಾ? ಮೋದಿ ಜಿ ಕೂಡಾ ನನ್ನ ಅಣ್ಣ. ನನಗೆ ಎಲ್ಲರ ಬೆಂಬಲವಿದೆ,” ಎಂದು ಭಾರದ್ವಾಜ್ ಹೇಳಿಕೊಂಡಿದ್ದಾನೆ. ಇದೀಗ ಸಿಜೆಪಿ ಕಾರ್ಯಕರ್ತರ ಒತ್ತಡ ಹೆಚ್ಚಾದಂತೆ ಆತನ ಬಂಧನ ನಡೆದಿದೆ.
ಸಿಎಎ/ಎನ್‌ಆರ್‌ಸಿ ಹೋರಾಟದ ‘ಬ್ಲೂಪ್ರಿಂಟ್’ ಇದಲ್ಲವೇ?
ಅಷ್ಟಕ್ಕೂ ಈ ತಂತ್ರ ಹೊಸದೇನಲ್ಲ. 2019-2020ರಲ್ಲಿ ನಡೆದ ಐತಿಹಾಸಿಕ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಚಳವಳಿಯ ಸಂದರ್ಭದಲ್ಲೂ ಇದೇ ಮಾದರಿಯಲ್ಲಿ ಅತ್ಯಂತ ಕ್ರೂರವಾಗಿ ಹೋರಾಟಗಾರರ ಮೇಲೆ ಹಲ್ಲೆ ನಡೆದಿತ್ತು. ದೆಹಲಿಯ ಶಾಹಿನ್ ಬಾಗ್, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಮತ್ತು ಅಲಿಗಢ್ ಮುಸ್ಲಿಂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಮತ್ತು ನಾಗರಿಕರು ರಸ್ತೆಗಿಳಿದಾಗ, ಬಲಪಂಥೀಯ ಸಂಘಟನೆಗಳಿಗೆ ಸೇರಿದ ಗೂಂಡಾಗಳು ಹಾಗೂ ಸಾದಾ ಉಡುಪಿನ ಏಜೆಂಟರು ಹೋರಾಟದ ಸ್ಥಳಗಳಿಗೆ ಪ್ರವೇಶಿಸಿದ್ದರು.
ಅಂದು ಜಾಮಿಯಾ ಗ್ರಂಥಾಲಯದೊಳಗೆ ನುಗ್ಗಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿ, ‘ಗೋಲಿ ಮಾರೋ’ (ಗುಂಡು ಹಾರಿಸಿ) ಎಂದು ಸಾರ್ವಜನಿಕವಾಗಿ ಪ್ರಚೋದನಾಕಾರಿ ಘೋಷಣೆ ಕೂಗಿದ್ದರು. ಆದರೂ ಇಂತಹ ದುಷ್ಕರ್ಮಿಗಳಿಗೆ ಬಿಜೆಪಿ ಸರ್ಕಾರ ನೀಡಿದ ರಕ್ಷಣೆ ನಮಗೆಲ್ಲರಿಗೂ ತಿಳಿದಿರುವ ವಿಷಯ.
ಸ್ವತಂತ್ರ ತನಿಖಾ ಸಂಸ್ಥೆಗಳು ಮತ್ತು ‘ಆಮ್ನೆಸ್ಟಿ ಇಂಟರ್ನ್ಯಾಷನಲ್’ನಂತಹ ಮಾನವ ಹಕ್ಕುಗಳ ಸಂಘಟನೆಗಳು ನೀಡಿದ ವರದಿಗಳ ಪ್ರಕಾರ, ಕಲ್ಲು ತೂರಾಟ ನಡೆಸಿದ ಮತ್ತು ಹಿಂಸಾಚಾರಕ್ಕೆ ಕಾರಣರಾದವರಲ್ಲಿ ಬಹುತೇಕರು ಚಳವಳಿಯ ಭಾಗವಾಗಿರಲಿಲ್ಲ. ಅವರು ಪ್ರತ್ಯೇಕವಾಗಿ ಕಳುಹಿಸಲ್ಪಟ್ಟ ‘ಹಿಂಸಾಚಾರ ಪ್ರಚೋದಕರು’ ಎಂಬುದು ಸ್ಪಷ್ಟ. ಹೋರಾಟದ ನೈತಿಕತೆಯನ್ನು ಸಾರ್ವಜನಿಕರ ಕಣ್ಣಿನಲ್ಲಿ ಕೆಡಿಸುವುದು, ನಂತರ ಇಡೀ ಚಳವಳಿಗೆ ‘ಕೋಮು ಗಲಭೆ’ ಅಥವಾ ‘ದೇಶದ್ರೋಹ’ದ ಬಣ್ಣ ಬಳಿಯುವುದು ಈ ತಂತ್ರದ ಮುಖ್ಯ ಉದ್ದೇಶ.
ಅಮಿತ್ ಶಾ ಸೂತ್ರದಾರರಲ್ಲವೇ?
ದೇಶದ ರಾಜಧಾನಿ ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯು ರಾಜ್ಯ ಸರ್ಕಾರಕ್ಕಲ್ಲ, ಬದಲಾಗಿ ನೇರವಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಒಳಪಡುತ್ತದೆ. ಹೀಗಿರುವಾಗ, ದೆಹಲಿ ಪೋಲಿಸರು ಯಾರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ರಹಸ್ಯವಾಗಿಯೇನೂ ಉಳಿದಿಲ್ಲ. ಪ್ರತಿಭಟನಾ ಸ್ಥಳಗಳಲ್ಲಿ ಪ್ರಚೋದಕ ಗೂಂಡಾಗಳು ಮುಕ್ತವಾಗಿ ಓಡಾಡುತ್ತಿರುವಾಗ, ಮಾರಕ ಆಯುಧಗಳನ್ನು ಹಿಡಿದು ಸಾರ್ವಜನಿಕವಾಗಿ ಬೆದರಿಕೆ ಹಾಕುತ್ತಿರುವಾಗ ದೆಹಲಿ ಪೊಲೀಸರು ಮೂಕಪ್ರೇಕ್ಷಕರಂತೆ ನಿಲ್ಲುವುದು ಯಾವುದರ ಸಂಕೇತ?

ಗೃಹ ಸಚಿವಾಲಯದ ಉನ್ನತ ಮಟ್ಟದ ಸೂಚನೆ ಅಥವಾ ಕನಿಷ್ಠ ‘ಮೌನ ಸಮ್ಮತಿ’ ಇಲ್ಲದೆ ದೆಹಲಿ ಪೊಲೀಸ್ ಇಲಾಖೆ ಇಷ್ಟೊಂದು ನಿರ್ದಯವಾಗಿ ಮತ್ತು ಏಕಪಕ್ಷೀಯವಾಗಿ ನಡೆದುಕೊಳ್ಳಲು ಸಾಧ್ಯವೇ ಇಲ್ಲ. ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯ ಮೇಲೆಯೇ ಈ ಇಡೀ ‘ಕಾರ್ಯಾಚರಣೆ’ ನಡೆದಿದೆ ಮತ್ತು ಪ್ರತಿಭಟನಾಕಾರರನ್ನು ಹೊಸಕಿಹಾಕಲು ದೆಹಲಿ ಪೊಲೀಸರನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗಿದೆ ಎಂಬ ಕಠಿಣ ಸತ್ಯವನ್ನು ನಾವು ಬಹಿರಂಗವಾಗಿಯೇ ಪ್ರಶ್ನಿಸಬೇಕಾಗಿದೆ.
ಪೊಲೀಸ್ ಅಧಿಕಾರಿಗಳು ನಿಜವಾದ ಅಪರಾಧಿಗಳನ್ನು ಬಿಟ್ಟು, ಸಂತ್ರಸ್ತ ವಿದ್ಯಾರ್ಥಿ ನಾಯಕರ ಮೇಲೆ ಯುಎಪಿಎಯಂತಹ ಭಯೋತ್ಪಾದನಾ ವಿರೋಧಿ ಕಠಿಣ ಕಾನೂನುಗಳನ್ನು ಹೇರಿ ಜೈಲಿಗಟ್ಟುತ್ತಿರುವುದು ಅವರ ರಾಜಕೀಯ ಯಜಮಾನರನ್ನು ಮೆಚ್ಚಿಸಲು ಹೊರತು ಕಾನೂನು ಪಾಲನೆಗಾಗಿ ಅಲ್ಲ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಜನಪೀಡಕ ಕೇಸರಿ ಕೇಡಿಗಳಿಗೆ ಕಡೆಗಾಲ ಬಂದಿದೆ, ಎಚ್ಚರಗೊಳ್ಳುತ್ತಿದೆ ಜನಶಕ್ತಿ!
ಅಷ್ಟಕ್ಕೂ ಪ್ರಜಾಪ್ರಭುತ್ವದಲ್ಲಿ ಯಾವುದೇ ಸರ್ಕಾರ ಶಾಶ್ವತವಲ್ಲ. ಆದರೆ, ಅಧಿಕಾರ ಉಳಿಸಿಕೊಳ್ಳಲು ಮತ್ತು ಪ್ರತಿಭಟನೆಗಳನ್ನು ಹತ್ತಿಕ್ಕಲು ಮಾರುವೇಷದ ಗೂಂಡಾಗಳನ್ನು ಬಳಸುವುದು, ಶಾಂತಿಯುತ ಚಳವಳಿಗಳನ್ನು ರಕ್ತಸಿಕ್ತಗೊಳಿಸುವುದು ಬಿಜೆಪಿ ಸರ್ಕಾರದ ಕರಾಳ ಇತಿಹಾಸವಾಗಲಿದೆ. ಸಿಜೆಪಿ ಮತ್ತು ಸಿಎಎ/ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳಲ್ಲಿ ನಡೆದ ಹಿಂಸಾಚಾರದ ಹೊಣೆಯನ್ನು ಕೇಂದ್ರ ಗೃಹ ಸಚಿವಾಲಯ ಹೊತ್ತುಕೊಳ್ಳಲೇಬೇಕಿದೆ. ಜತೆಗೆ ದೇಶದ ಪ್ರಜಾಪ್ರಭುತ್ವವು ಅತಿಶೀಘ್ರದಲ್ಲೇ ಸರ್ವಾಧಿಕಾರದ ಕತ್ತಲಿಗೆ ತಳ್ಳಲ್ಪಡುತ್ತಿದೆ ಎಂಬುದನ್ನು ನಾವು ಅಲ್ಲಗಳೆಯಲಾಗದು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




