ಯುವಜನರ CJP ಚಳವಳಿ ಸದ್ಯ ರಾಜಕೀಯ ಪಕ್ಷವಲ್ಲ, ಬದಲಾಗಿ ಎಲ್ಲ ರಾಜಕೀಯ ಪಕ್ಷಗಳನ್ನೂ ಹೊಣೆಗಾರರನ್ನಾಗಿಸುವ ತಟಸ್ಥ ಒತ್ತಡ ಗುಂಪಾಗಿ ಮುಂದುವರಿಯಬೇಕು. ಯಾವುದೇ ಪಕ್ಷದ ಪರ ಅಥವಾ ವಿರುದ್ಧ ನಿಲ್ಲದೆ ರಾಜಕೀಯದಲ್ಲಿ ಹೊಣೆಗಾರಿಕೆ ತರುವ ವೇದಿಕೆಯಾಗಿ ಅದು ಉಳಿಯುವುದು ಉತ್ತಮ ಎಂದು ಶಿಕ್ಷಣ ತಜ್ಞ, ಆವಿಷ್ಕಾರಕ ಹಾಗೂ ಪರಿಸರವಾದಿ ಸೋನಂ ವಾಂಗ್ಚುಕ್ ಹೇಳಿದ್ದಾರೆ.
‘ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, CJPಯಿಂದ ಯಾರಾದರೂ ವೈಯಕ್ತಿಕವಾಗಿ ರಾಜಕೀಯ ಪಕ್ಷ ಸೇರುವುದು ಅಥವಾ ಹೊಸ ಪಕ್ಷ ಆರಂಭಿಸುವುದು ಅವರ ಸ್ವಾತಂತ್ರ್ಯ , ಆದರೆ ತಾವು ಮಾತ್ರ ಅದರ ನೇರ ನಾಯಕತ್ವ ವಹಿಸಿಕೊಳ್ಳಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಗತ್ಯವಿದ್ದರೆ ಯುವ ನಾಯಕರಿಗೆ ಮಾರ್ಗದರ್ಶನ ಮತ್ತು ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ನಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವುದು ಪ್ರಮುಖ ಬೇಡಿಕೆಯಾಗಿದ್ದು, ಅದಕ್ಕೂ ಮುನ್ನ ಭೂಮಿ, ಜಿಲ್ಲಾಡಳಿತ ಸೇರಿದಂತೆ ಯಾವುದೇ ಪ್ರಮುಖ ನೀತಿ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಶಿಕ್ಷಣ ತಜ್ಞ, ಆವಿಷ್ಕಾರಕ ಹಾಗೂ ಪರಿಸರವಾದಿ ಸೋನಂ ವಾಂಗ್ಚುಕ್ ಹೇಳಿದ್ದಾರೆ. ಸೆಪ್ಟೆಂಬರ್ 9ರಂದು ಲೇಹ್ ಅಪೆಕ್ಸ್ ಬಾಡಿ ಹಾಗೂ ಕೇಂದ್ರ ಗೃಹ ಸಚಿವಾಲಯದ ನಡುವೆ ನಡೆಯಲಿರುವ ಸಭೆಯ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಡಾಖ್ಗೆ ಅರ್ಥಪೂರ್ಣ ಸ್ವಾಯತ್ತತೆ ನೀಡುವ ಕುರಿತು ಮಾತನಾಡಿದ ವಾಂಗ್ಚುಕ್, ಈ ಹಿಂದೆ ಲಡಾಖ್ಗೆ ಸಂವಿಧಾನದ ಆರನೇ ಅನುಸೂಚಿ (Sixth Schedule) ಅಡಿಯಲ್ಲಿ ರಕ್ಷಣೆ ನೀಡಬೇಕೆಂಬುದು ತಮ್ಮ ಬೇಡಿಕೆಯಾಗಿತ್ತು. ಆದರೆ ಇದೀಗ ಕೇಂದ್ರದೊಂದಿಗೆ ನಡೆದ ಮಾತುಕತೆಯಲ್ಲಿ ಆರ್ಟಿಕಲ್ 371ರ ಅಡಿಯಲ್ಲಿ ವಿಶೇಷ, ಲಡಾಖ್ಗೆ ಹೊಂದುವ ಆಡಳಿತ ವ್ಯವಸ್ಥೆ ರೂಪಿಸುವ ಬಗ್ಗೆ ಒಪ್ಪಂದದ ಮಟ್ಟಿಗೆ ಚರ್ಚೆ ನಡೆದಿದೆ ಎಂದರು.
ಈ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳ ವಿಧಾನಸಭೆ ಮಾದರಿಯ ವ್ಯವಸ್ಥೆ ಇರಬೇಕು ಮತ್ತು ಅದರ ಅಧೀನದಲ್ಲಿ ಆಡಳಿತ ಯಂತ್ರ ಕಾರ್ಯನಿರ್ವಹಿಸಬೇಕು ಎಂಬುದು ತಮ್ಮ ನಿಲುವು. ಪ್ರಸ್ತುತ ಲಡಾಖ್ ಸಂಪೂರ್ಣವಾಗಿ ಅಧಿಕಾರಶಾಹಿ ವ್ಯವಸ್ಥೆಯಿಂದ ಆಡಳಿತಗೊಳ್ಳುತ್ತಿದ್ದು, ಜನಪ್ರತಿನಿಧಿತ್ವ ಇಲ್ಲದಿರುವುದು ಸಮಸ್ಯೆಯಾಗಿದೆ ಎಂದು ಹೇಳಿದರು. ಆರ್ಟಿಕಲ್ 371ರ ಅಡಿಯಲ್ಲಿ ಲಡಾಖ್ನ ಭೂಮಿ, ಪರಿಸರ ಮತ್ತು ಸಂಸ್ಕೃತಿಗೆ ರಕ್ಷಣೆ ಸಿಗಬೇಕು ಎಂದ ಅವರು, ಇತ್ತೀಚೆಗೆ ಸರ್ಕಾರ ಪ್ರಸ್ತಾಪಿಸಿರುವ ಜಿಲ್ಲಾಮಟ್ಟದ ಮಂಡಳಿಗಳ ಬದಲಿಗೆ ಮೊದಲು UT ಮಟ್ಟದಲ್ಲಿ ಚುನಾಯಿತ ಸಭೆ ರಚನೆಯಾಗಬೇಕು ಎಂದು ಹೇಳಿದರು. ಬಳಿಕ ಪಂಚಾಯಿತಿಗಳ ಮೂಲಕ ಜಿಲ್ಲೆ ಮತ್ತು ಗ್ರಾಮ ಮಟ್ಟದ ಆಡಳಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬಹುದು; ಆದರೆ ಜಿಲ್ಲಾಮಟ್ಟದ ಮಂಡಳಿ ರಚಿಸಿ ನಂತರ ವಿಧಾನಸಭೆ ರೂಪಿಸುವ ಕ್ರಮ ಸರಿಯಲ್ಲ ಎಂದರು.
ಲಡಾಖ್ ಗಡಿ ಪ್ರದೇಶವಾಗಿರುವುದರಿಂದ ಹೆಚ್ಚಿನ ಸ್ವಾಯತ್ತತೆ ನೀಡಲು ಸಾಧ್ಯವಿಲ್ಲ ಎಂಬ ವಾದವನ್ನು ವಾಂಗ್ಚುಕ್ ತಳ್ಳಿಹಾಕಿದರು. ಇದೇ ಕಾರಣ ನೀಡಿ ಅರುಣಾಚಲ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ ನೀಡಿದ ಉದಾಹರಣೆಯನ್ನು ಮುಂದಿಟ್ಟ ಅವರು, ಗಡಿ ಭದ್ರತೆಯ ದೃಷ್ಟಿಯಿಂದಲೇ ಹೆಚ್ಚಿನ ಪ್ರಜಾಪ್ರಭುತ್ವಾತ್ಮಕ ಪ್ರತಿನಿಧಿತ್ವ ಅಗತ್ಯವೆಂದು ಪರಿಗಣಿಸಿ ಅರುಣಾಚಲಕ್ಕೆ ರಾಜ್ಯ ಸ್ಥಾನಮಾನ ನೀಡಲಾಗಿತ್ತು ಎಂದು ಹೇಳಿದರು.
ಲಡಾಖ್ನ ಹಕ್ಕುಗಳನ್ನು ನಿರಾಕರಿಸಲು ಅದರ ಕಾರ್ಯತಂತ್ರದ ಸ್ಥಾನವನ್ನು ನೆಪವಾಗಿಸಲಾಗುತ್ತಿದೆ. ಭೂಮಿಯ ಮೇಲಿನ ನಿಯಂತ್ರಣವನ್ನು ಉಳಿಸಿಕೊಳ್ಳಲು ಕೆಲವು ಹಿತಾಸಕ್ತಿ ಗುಂಪುಗಳು ಇಂತಹ ವಾದವನ್ನು ಮುಂದಿಡುತ್ತಿವೆ ಎಂದು ಆರೋಪಿಸಿದರು.
ಕಳೆದ ಐದು ವರ್ಷಗಳಿಂದ ಮುಂದುವರಿದಿರುವ ಲಡಾಖ್ ಚಳವಳಿಯ ಪ್ರಮುಖ ಬೇಡಿಕೆಗಳಿಗೆ ಮೊದಲು ಪರಿಹಾರ ಸಿಗಬೇಕು. ಪ್ರಜಾಪ್ರಭುತ್ವ ಮರುಸ್ಥಾಪನೆಯಾಗುವವರೆಗೆ ಭೂಮಿ ಮಾರಾಟ, ಜಿಲ್ಲಾಡಳಿತ ಅಥವಾ ಇತರ ಪ್ರಮುಖ ನೀತಿಗಳ ಕುರಿತು ನಿರ್ಧಾರ ಕೈಗೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ವಾಂಗ್ಚುಕ್ ಹೇಳಿದರು.
ಇದನ್ನೂ ಓದಿ: ಪ್ರಧಾನ್ ರಾಜೀನಾಮೆ ಯಾಕಿಲ್ಲ? ಇದೇನಾ ಬಿಜೆಪಿಯ ರಾಜಕೀಯ ಲೆಕ್ಕಾಚಾರ?
ಸೆಪ್ಟೆಂಬರ್ 9ರ ಸಭೆಯಲ್ಲಿ ಕೇಂದ್ರ ಸರ್ಕಾರ UT ಅಥವಾ ರಾಜ್ಯಮಟ್ಟದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಆದ್ಯತೆ ನೀಡಲು ಒಪ್ಪಿಕೊಳ್ಳಲಿದೆ ಎಂಬ ನಿರೀಕ್ಷೆ ಇದೆ. ಇಲ್ಲದಿದ್ದರೆ ಮತ್ತೆ ದೊಡ್ಡ ಮಟ್ಟದ ಚಳವಳಿ ಆರಂಭಿಸುವ ಸಾಧ್ಯತೆಯನ್ನೂ ಅವರು ಸೂಚಿಸಿದರು.
ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದ ಪ್ರವಾಹದಂತಹ ವಿಪತ್ತುಗಳು ಹಿಮಾಲಯ ಪ್ರದೇಶದ ದುರ್ಬಲತೆಯನ್ನು ಮತ್ತೊಮ್ಮೆ ತೋರಿಸಿವೆ. ಜಾಗತಿಕ ಹವಾಮಾನ ಬದಲಾವಣೆಗೆ ಕಾರಣವಾಗುತ್ತಿರುವ ಮಾನವ ಚಟುವಟಿಕೆಗಳೇ ಇಂತಹ ಪರಿಸ್ಥಿತಿಗೆ ಪ್ರಮುಖ ಕಾರಣ. ಮನುಷ್ಯರ ವರ್ತನೆಯಲ್ಲಿ ಬದಲಾವಣೆ ತರದ ಹೊರತು ಪರಿಸ್ಥಿತಿ ಬದಲಾಗುವುದಿಲ್ಲ. ಮಾನವ ಚಟುವಟಿಕೆಗಳನ್ನು ಬದಲಾಯಿಸಿದರೂ ಭೂಮಿ ಚೇತರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಹಿಮಾಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇಡೀ ಜಗತ್ತಿಗೆ ಎಚ್ಚರಿಕೆಯ ಗಂಟೆಯಾಗಬೇಕು ಎಂದು ವಾಂಗ್ಚುಕ್ ಎಚ್ಚರಿಸಿದರು.





