ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಈ ತಿಂಗಳ ಮೊದಲ ವಾರದಲ್ಲಿ ಟ್ರೋಂಗ್ಲಾವೋಬಿ ಪ್ರದೇಶದಲ್ಲಿ ನಡೆದ ಭೀಕರ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳು ಹತ್ಯೆಯಾಗಿದ್ದಾರೆ. ಈ ಹತ್ಯೆಯ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಮಕ್ಕಳ ಹತ್ಯೆ ಘಟನೆಗೆ ಸಂಬಂಧಿಸಿ ಮಣಿಪುರ ಬಿಜೆಪಿ ಸರ್ಕಾರ ಪ್ರತಿಭಟನೆಗಳನ್ನು ನಿಷೇಧಿಸಿದೆ. ಆದರೆ ಈ ಹತ್ಯೆಗಳನ್ನು ಖಂಡಿಸಿ ಮತ್ತೆ ರಾತ್ರಿ ವೇಳೆ ಪ್ರತಿಭಟನೆಗಳು ನಡೆದಿವೆ.
ಮಣಿಪುರದ ಕಣಿವೆ ಪ್ರದೇಶದಾದ್ಯಂತ ಉದ್ವಿಗ್ನತೆ ಹೆಚ್ಚಾಗಿದೆ. ಹಲವಾರು ಜಿಲ್ಲೆಗಳಲ್ಲಿ ಅಶಾಂತಿ ಹೆಚ್ಚಾಗಿದೆ. ಶುಕ್ರವಾರ ರಾತ್ರಿ ಇಂಫಾಲ್ ಪೂರ್ವದ ಖುರೈ ಲ್ಯಾಮ್ಲಾಂಗ್ ಬಜಾರ್ನಲ್ಲಿ ನೂರಾರು ಮಂದಿ ಕರ್ಫ್ಯೂ ಅನ್ನು ಧಿಕ್ಕರಿಸಿ ಬೀದಿಗಿಳಿದು ಘೋಷಣೆಗಳನ್ನು ಕೂಗಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ | ಮತ್ತೆ ಭುಗಿಲೆದ್ದ ಹಿಂಸಾಚಾರ; ಉಖ್ರುಲ್ ಜಿಲ್ಲೆಯಲ್ಲಿ ನಿಷೇಧಾಜ್ಞೆ
ಈ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ಉಂಟಾಗಿದೆ. ಭದ್ರತಾ ಪಡೆಗಳು ಅಶ್ರುವಾಯು ಶೆಲ್ಗಳು ಮತ್ತು ಅಣಕು ಬಾಂಬ್ ಪ್ರಯೋಗಿಸಿದ್ದಾರೆ. ಈ ಘರ್ಷಣೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳು ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆ (ಜೆಎನ್ಐಎಂಎಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಮಕ್ಕಳ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಹಸ್ತಾಂತರಿಸಲಾಗಿದೆ. ಆದರೆ ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಲೇ ಇದೆ. ವಿಶೇಷವಾಗಿ ಘಟನೆ ನಡೆದ ಬಿಷ್ಣುಪುರ ಜಿಲ್ಲೆಯಲ್ಲಿ ಪದೇ ಪದೇ ಪ್ರತಿಭಟನೆಗಳು ನಡೆಯುತ್ತಲಿವೆ.
ಅಧಿಕಾರಿಗಳು ಹಂತ ಹಂತವಾಗಿ ಕರ್ಫ್ಯೂ ಸಡಿಲಗೊಳಿಸಿದ್ದಾರೆ. ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ತೌಬಲ್ ಮತ್ತು ಕಕ್ಚಿಂಗ್ ಜಿಲ್ಲೆಗಳಲ್ಲಿ, ಬೆಳಿಗ್ಗೆ 5ರಿಂದ ಸಂಜೆ 5ರವರೆಗೆ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆದಾಗ್ಯೂ, ಬಿಷ್ಣುಪುರದಲ್ಲಿ, ಬೆಳಿಗ್ಗೆ ರಿಂದ ಬೆಳಿಗ್ಗೆ 10 ರವರೆಗೆ ಕರ್ಫ್ಯೂ ಸಡಿಲಿಕೆ ಮಾಡಲಾಗಿದೆ. ಅಂದರೆ ಜನರ ಸರಾಗ ಸಂಚಾರಕ್ಕೆ ಕೇವಲ ಐದು ಗಂಟೆಗಳಷ್ಟೇ ಅವಕಾಶ ನೀಡಲಾಗಿದೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ ಆರಂಭವಾಗಿ ಎರಡು ವರ್ಷ; ಭದ್ರತೆ ಹೆಚ್ಚಳ
ಬಿಷ್ಣುಪುರದಾದ್ಯಂತ ಪ್ರತಿಭಟನಾಕಾರರು ರಸ್ತೆ ತಡೆ ನಡೆಸುತ್ತಿದ್ದಾರೆ. ಬಿಷ್ಣುಪುರ ಬಜಾರ್ ಬಳಿಯ ಪ್ರಮುಖ ಮಾರ್ಗಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಇಂಫಾಲ್ ಪೂರ್ವದಲ್ಲಿ ಇದೇ ರೀತಿಯ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈಗಾಗಲೇ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಮೊಬೈಲ್ ಇಂಟರ್ನೆಟ್ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿದೆ.
ಮಣಿಪುರದಲ್ಲಿ ಇನ್ನೂ ಆರದ ಅಸಮಾಧಾನದ ಬೆಂಕಿ
ಮಣಿಪುರದಲ್ಲಿ 2023ರ ಮೇ ತಿಂಗಳಿಂದ ಮೈತೇಯಿ ಮತ್ತು ಕುಕಿ ಬುಡಕಟ್ಟು ಜನಾಂಗಗಳ ನಡುವೆ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. 2024ರ ನವೆಂಬರ್ನಿಂದ ಈವರೆಗೆ 250ಕ್ಕೂ ಅಧಿಕ ಮಂದಿ ಹಿಂಸಾಚಾರದಲ್ಲಿ ಮೃತಪಟ್ಟಿದ್ದಾರೆ. 60,000ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಈ ಹಿಂಸಾಚಾರವು ರಾಜಕೀಯ ಅಸ್ಥಿರತೆಗೂ ಕಾರಣವಾಗಿದೆ. ಹಿಂಸಾಚಾರವನ್ನು ನಿಯಂತ್ರಿಸಲಾಗದ ಈ ಹಿಂದಿನ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ 2025ರ ಫೆಬ್ರವರಿ 9ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದೇ ವರ್ಷದ ಫೆಬ್ರವರಿ 13ರಿಂದ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಲಾಗಿತ್ತು.
ಸುಮಾರು ಒಂದು ವರ್ಷದ ರಾಷ್ಟ್ರಪತಿ ಆಳ್ವಿಕೆಯ ನಂತರ, 2026ರ ಫೆಬ್ರವರಿಯಲ್ಲಿ ಮಣಿಪುರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಯುಮನಾಮ್ ಖೇಮ್ಚಂದ್ ಸಿಂಗ್ (Yumnam Khemchand Singh) ಅವರು ಮಣಿಪುರದ ನೂತನ ಮುಖ್ಯಮಂತ್ರಿಯಾಗಿದ್ದಾರೆ. ಹೊಸ ಸರ್ಕಾರ ರಚನೆಯಾದ ನಂತರವೂ ರಾಜ್ಯದಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಅಸಮಾಧಾನದ ಬೆಂಕಿ ಇನ್ನೂ ಸಂಪೂರ್ಣವಾಗಿ ಆರಿಲ್ಲ.





