ಬಿಸಿಲಿನಿಂದ ತತ್ತರಿಸಿದ್ದ ಕಲ್ಯಾಣ ಕರ್ನಾಟಕದ ಹಲವೆಡೆ ಸುರಿದ ಮಳೆ ತುಸು ತಂಪೆರೆದಿದೆ. ಕಲಬುರಗಿಯಲ್ಲಿ ಶುಕ್ರವಾರ ದಿನವಿಡೀ ಪ್ರಖರ ಬಿಸಿಲಿತ್ತು. ಸಂಜೆ ಹೊತ್ತಿಗೆ ಆಗಸದಲ್ಲಿ ಮೋಡಗಳು ದಟ್ಟೈಸಿದವು. ಬಳಿಕ ಮಿಂಚು–ಬಿರುಗಾಳಿ ಸಹಿತ ಕಲಬುರಗಿ ನಗರ, ಚಿಂಚೋಳಿ, ಕಾಳಗಿ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಚಿಂಚೋಳಿ ತಾಲೂಕಿನ ಭೂಂಯಾರ(ಕೆ) ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಕಾಳಗಿಯಲ್ಲಿ ಬಿರುಗಾಳಿಗೆ ರಟಕಲ್ ವಿರಕ್ತಮಠದ ಕಾರ್ಯಕ್ರಮಕ್ಕಾಗಿ ಹಾಕಿದ್ದ ಪೆಂಡಾಲ್ ಮಗುಚಿದೆ. ಕಲಬುರಗಿಯಲ್ಲಿ ಬಸವ ಜಯಂತಿ ಕಾರ್ಯಕ್ರಮಕ್ಕಾಗಿ ಹಾಕಿದ್ದ ವಿದ್ಯುದ್ದೀಪಗಳ ಕಂಬವೊಂದು ನೆಲಕ್ಕೆ ವಾಲಿದ್ದರಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ತೊಡಕಾಯಿತು.
ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಲಿನ ಝಳ ತೀವ್ರಗೊಂಡು ಶುಕ್ರವಾರ 41 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಸಂಜೆ ಕೆಲವೆಡೆ ಮಳೆಯಾದ ಕಾರಣ ಜನ ತುಸು ನೆಮ್ಮದಿಯ ನಿಟ್ಟಿಸಿರು ಬಿಟ್ಟರು.
ಬಳ್ಳಾರಿ–ವಿಜಯನಗರ ಜಿಲ್ಲೆಗಳ ಗಡಿಭಾಗದಲ್ಲಿರುವ ತೋರಣಗಲ್ ಪ್ರದೇಶದಲ್ಲಿ ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆ, ಮರಿಯಮ್ಮನಹಳ್ಳಿ, ಹೂವಿನಹಡಗಲಿ ಭಾಗದಲ್ಲಿ ಲಘುವಾಗಿ ಮಳೆ ಸುರಿಯಿತು. ಈ ಪೈಕಿ ತೋರಣಗಲ್, ಮರಿಯಮ್ಮನಹಳ್ಳಿಯಲ್ಲಿ ಅರ್ಧ ಗಂಟೆ ಮಳೆಯಾಯಿತು. ಹೀಗಾಗಿ ಬಿಸಿಲಿನಿಂದ ಬಸವಳಿದಿದ್ದ ಜನರು ಸ್ವಲ್ಪ ನಿರಾಳರಾದರು.
ಕಳೆದ ವರ್ಷ ಮಾರ್ಚ್ ತಿಂಗಳಿಂದಲೂ ಆಗಾಗ ಮಳೆ ಸುರಿಯುತ್ತಿತ್ತು. ಹಾಗಾಗಿ ಕಡು ಬೇಸಿಗೆಯ ಸುಡುಬಿಸಿಲಿನ ಅನುಭವ ಅಷ್ಟಾಗಿ ಆಗಿರಲಿಲ್ಲ. ಈ ವರ್ಷ ಈವರೆಗೆ ಮಳೆ ಸುರಿಯದ ಕಾರಣ ಎಲ್ಲೆಡೆ ಬಿಸಿಲಿನ ಝಳ ತೀವ್ರಗೊಂಡಿತ್ತು. ಹೊಸಪೇಟೆ ನಗರದಲ್ಲಿ ಇದೇ ಮೊದಲ ಬಾರಿಗೆ ಎರಡು ಸಿಗ್ನಲ್ಗಳಲ್ಲಿ ವಾಹನ ಸವಾರರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ತಂಪು ಪಾನೀಯ, ಕಲ್ಲಂಗಡಿ ಹಣ್ಣುಗಳ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಇಂತಹ ಸನ್ನಿವೇಶದಲ್ಲೇ ಮಳೆಯ ಸಿಂಚನವಾಗಿದೆ.
“ಹೊಸಪೇಟೆ ಸೇರಿ ಜಿಲ್ಲೆಯ ಹಲವೆಡೆ ಕೃಷಿ ಕೊಯ್ಲು ಮುಗಿದಿದೆ. ಈ ಹಂತದಲ್ಲಿ ಮಳೆ ಸುರಿದರೆ ಯಾರಿಗೂ ತೊಂದರೆ ಇಲ್ಲ. ಭತ್ತ, ಕಬ್ಬು ನಾಟಿಗೆ ಬಹಳಷ್ಟು ಪ್ರಯೋಜನವಾಗುತ್ತದೆ. ಆದರೆ, ಬಲವಾಗಿ ಗಾಳಿ ಬೀಸಿದರೆ ಕೆಲವು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ” ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮನೋಹರ್ ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನ ಜಬ್ಬಲಗುಡ್ಡ ಗ್ರಾಮದಲ್ಲಿ ಉಂಟಾದ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಯಿಂದ ಹಲವೆಡೆ ಹಾನಿ ಸಂಭವಿಸಿದೆ. ಸಿಡಿಲು ಬಡಿದು ಕುರಿಗಾಹಿ ಕರಿಯಪ್ಪ ದ್ಯಾಮಣ್ಣ ಮ್ಯಾದ್ನೇರಿ(35) ಮೃತಪಟ್ಟಿದ್ದಾರೆ. ಗಂಗಾವತಿ ತಾಲೂಕಿನಲ್ಲಿಯೂ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಯಾಗಿದ್ದು, ಸಿಡಿಲು ಬಡಿದ ರಭಸಕ್ಕೆ, ಸಿದ್ದಿಕೇರಿ ಗ್ರಾಮದ ಜಮೀನಿನಲ್ಲಿ ಕಟ್ಟಿದ್ದ 6 ಆಕಳುಗಳು ಸ್ಥಳದಲ್ಲೇ ಮೃತಪಟ್ಟಿವೆ.
ಮೃತಪಟ್ಟ ಆಕಳುಗಳು ಕನಕಗಿರಿ ತಾಲೂಕಿನ ಬಂಕಾಪೂರ ಗ್ರಾಮದ ಪಾರ್ವತಮ್ಮ, ನಾಗೇಶ ಎಂಬುವವರಿಗೆ ಸೇರಿವೆ ಎನ್ನಲಾಗಿದೆ.
ಮೂರು ದಿನಗಳ ಹಿಂದೆ ಮಾಲೀಕರು ಕನಕಗಿರಿ ತಾಲೂಕಿನಿಂದ ಸಿದ್ದಿಕೇರಿ ಗ್ರಾಮಕ್ಕೆ ಆಕಳುಗಳನ್ನು ಮೇಯಿಸಲು ಕರೆತಂದಿದ್ದರು. ಪ್ರತಿ ಜಾನುವಾರು ಅಂದಾಜು ₹60 ಸಾವಿರ ಮೌಲ್ಯದ್ದಾಗಿದ್ದು, ಅಂದಾಜು ₹3.50 ಲಕ್ಷ ಇರಬಹುದು ಎಂದು ಕಂದಾಯ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.
ತಾಲೂಕಿನ ಹೊಸಳ್ಳಿ, ಹಿರೇಜಂತಕಲ್, ಸಿದ್ದಿಕೇರಿ, ವಡ್ಡರಹಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನೂರಾರು ಎಕರೆ ಪ್ರದೇಶದ ಭತ್ತದ ಬೆಳೆ ನೆಲಕ್ಕೆ ಚಾಚಿಕೊಂಡಿವೆ. ಗಂಗಾವತಿಯ ರೈತ ಯಮನೂರಪ್ಪ ಮತ್ತು ಹೊಸಳ್ಳಿ ಗ್ರಾಮದಲ್ಲಿ ಭತ್ತದ ಬೆಳೆಗಳು ನೆಲೆಕಚ್ಚಿವೆ. ಕೆಲ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಅಲ್ಲಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿದ್ದೀರಾ? ಈ ಬಾರಿ ಮುಂಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆ: ಭಾರತೀಯ ಹವಾಮಾನ ಇಲಾಖೆ ಕಳವಳ
ಸ್ಥಳಕ್ಕೆ ಕಂದಾಯ, ಪೊಲೀಸ್, ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿ ನಷ್ಟದ ಪ್ರಮಾಣ ಆಂದಾಜು ಪಟ್ಟಿ ಮಾಡಲಾಗಿದೆ. ಈ ವೇಳೆ ಕಂದಾಯ ನಿರೀಕ್ಷಕ ಸೈಯದ್ ಬಷಿರೂದ್ದೀ ನ್, ಗ್ರಾಮಲೆಕ್ಕಿಗ ಮಂಜುನಾಥ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.





