11ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನನ್ನು ತರಗತಿಯಲ್ಲೇ ಇರಿದು ಕೊಂದಿರುವ ದುರ್ಘಟನೆ ಅಸ್ಸಾಂನ ಶಿವಸಾಗರ ಜಿಲ್ಲೆಯ ಶಾಲೆಯೊಂದರಲ್ಲಿ ಶನಿವಾರ ನಡೆದಿದೆ.
ವ್ಯಾಸಂಗದಲ್ಲಿ ಉತ್ತಮವಾಗಿಲ್ಲವೆಂದು ನನ್ನನ್ನು ನಿಂದಿಸಿದ್ದಕ್ಕಾಗಿ ರಸಾಯನಶಾಸ್ತ್ರ ಶಿಕ್ಷಕ ರಾಜೇಶ್ ಬರುವಾ ಬೆಜವಾಡ (55) ಅವರನ್ನು 16 ವರ್ಷದ ಬಾಲಕ ಇರಿದು ಕೊಂದಿದ್ದಾನೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಬೆಜವಾಡ ಅವರು ಖಾಸಗಿ ಶಾಲೆಯಲ್ಲಿ ರಸಾಯನಶಾಸ್ತ್ರ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ರಸಾಯನಶಾಸ್ತ್ರ ವಿಷಯದಲ್ಲಿ ಆರೋಪಿ ವಿದ್ಯಾರ್ಥಿ ಹೆಚ್ಚಿನ ಅಂಕಗಳಿಸುವಲ್ಲಿ ವಿಫಲನಾಗಿದ್ದಾನೆ. ಹೀಗಾಗಿ, ಆತನ ಪೋಷಕರನ್ನು ಕರೆತರುವಂತೆ ಶಿಕ್ಷಕ ವಿದ್ಯಾರ್ಥಿಗೆ ಹೇಳಿದ್ದಾರೆ. ಅಲ್ಲದೆ, ಕಡಿಮೆ ಅಂಕ ಗಳಿಸಿದ್ದಕ್ಕೆ ನಿಂದಿಸಿದ್ದಾರೆ. ಇದರಿಂದ, ಉದ್ರಿಕ್ತನಾದ ವಿದ್ಯಾರ್ಥಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದಿದ್ದಾನೆ ಎಂದು ವರದಿಯಾಗಿದೆ.
ಶಿಕ್ಷಕನಿಗೆ ಚೂರಿ ಇರಿಯುತ್ತಿರುವುದನ್ನು ನೋಡಿದ ವಿದ್ಯಾರ್ಥಿಯೊಬ್ಬ, “ಆರೋಪಿ ವಿದ್ಯಾರ್ಥಿಯು ಚಾಕು ತೆಗೆದುಕೊಂಡು ಶಿಕ್ಷಕರ ತಲೆಗೆ ಹೊಡೆದನು ಮತ್ತು ಚಾಕುವಿನಿಂದ ಇರಿದನು. ಅವನ ಬಳಿ ಚಾಕು ಇದೆ ಎಂದು ನಮಗೆ ತಿಳಿದಿರಲಿಲ್ಲ. ಶಿಕ್ಷಕ ಕುಸಿದು ಬಿದ್ದರು, ಭಾರೀ ರಕ್ತಸ್ತಾವವಾಗಿತ್ತು” ಎಂದು ಹೇಳಿರುವುದಾಗಿ ಸಾಕ್ಷಿಯಲ್ಲಿ ಸೇರಿಸಲಾಗಿದೆ.