ಆದಾಯ ತೆರಿಗೆ ಮರು ಮೌಲ್ಯಮಾಪನ ಪ್ರಕ್ರಿಯೆಯ ವಿರುದ್ಧವಾಗಿ ಕಾಂಗ್ರೆಸ್ ಈಗ ದೆಹಲಿ ಹೈಕೋರ್ಟ್‌ನ ಮೆಟ್ಟಿಲೇರಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ನ್ಯಾಯಾಧೀಶ ಮನ್‌ಮೋಹನ್ ಮತ್ತು ನ್ಯಾಯಮೂರ್ತಿ ಮನ್‌ಮೀತ್ ಪಿಎಸ್ ಅರೋರಾರನ್ನು ಒಳಗೊಂಡ ಪೀಠವು ಈ ಅರ್ಜಿ ವಿಚಾರಣೆಗೆ ಸಮ್ಮತಿಸಿದ್ದು, ಗುರುವಾರ ವಿಚಾರಣೆ ನಡೆಯಲಿದೆ.
ಕಾಂಗ್ರೆಸ್ ಪರ ವಕೀಲರು ಆದಾಯ ತೆರಿಗೆ ಇಲಾಖೆಯು ನಾಲ್ಕು ವರ್ಷಗಳ ಅವಧಿಯ ಆದಾಯ ತೆರಿಗೆಯ ಮರು ಮೌಲ್ಯಮಾಪನ ಪ್ರಕ್ರಿಯೆ ಮತ್ತೆ ಆರಂಭಿಸಿದೆ ಎಂದು ಹೇಳಿದ್ದಾರೆ. ಹಾಗೆಯೇ ಗುರುವಾರವೇ ಈ ಅರ್ಜಿಯ ವಿಚಾರಣೆಯನ್ನು ನಡೆಸುವಂತೆ ಮನವಿ ಮಾಡಿದ್ದು ಕೋರ್ಟ್ ಇದಕ್ಕೆ ಸಮ್ಮತಿ ಸೂಚಿಸಿದೆ.
ಇದನ್ನು ಓದಿದ್ದೀರಾ? ಆದಾಯ ತೆರಿಗೆಯಿಂದ ರದ್ದಾಗಿದ್ದ ಕಾಂಗ್ರೆಸ್ ಬ್ಯಾಂಕ್ ಖಾತೆಗಳು ಚಾಲ್ತಿಗೆ
ಮೂರು ಬೇರೆ ಬೇರೆ ವರ್ಷಗಳ ಆದಾಯ ತೆರಿಗೆಯ ಮರು ಮೌಲ್ಯಮಾಪನವನ್ನು ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದೂ ಕಾಂಗ್ರೆಸ್ ಪರ ವಕೀಲರು ತಿಳಿಸಿದ್ದಾರೆ. ಹಾಗೆಯೇ ಶೀಘ್ರ ವಿಚಾರಣೆಗೆ ಮನವಿ ಮಾಡಿದ್ದಾರೆ. ಇದಕ್ಕೆ ಸಮ್ಮತಿ ಸೂಚಿಸಿದ ನ್ಯಾಯ ಪೀಠವು, “ನಾಳೆ 12.30 ಗಂಟೆಗೆ ಈ ಪ್ರಕರಣದ ವಿಚಾರಣೆ ನಡೆಸಲಾಗುವುದು” ಎಂದಿದೆ.
ಸುಮಾರು 100 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿ ಮಾಡುವಂತೆ ಕಾಂಗ್ರೆಸ್‌ಗೆ ಇತ್ತೀಚೆಗೆ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಆದೇಶಿಸಿದೆ. ಹೈಕೋರ್ಟ್ ಈ ಆದೇಶ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ. ಆದಾಯ ತೆರಿಗೆ ಇಲಾಖೆಯು 2018-19ನೇ ಹಣಕಾಸು ವರ್ಷದ ತೆರಿಗೆ 100 ಕೋಟಿ ರೂಪಾಯಿ ಪಾವತಿಸುವಂತೆ ಕಾಂಗ್ರೆಸ್‌ಗೆ ಫೆಬ್ರವರಿ 13ರಂದು ನೋಟಿಸ್ ಕಳುಹಿಸಿತ್ತು. ತೆರಿಗೆ ಅಧಿಕಾರಿಗಳು 199 ಕೋಟಿ ರೂಪಾಯಿಗೂ ಹೆಚ್ಚಿನ ಆದಾಯವನ್ನು ಲೆಕ್ಕ ಹಾಕಿ ಈ ಆದೇಶವನ್ನು ನೀಡಿತ್ತು.