ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ದಾಖಲಿಸಿರುವ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಮತ್ತೆ ದೊಡ್ಡ ಹಿನ್ನಡೆಯಾಗಿದೆ. ಖೇರಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುವಾಹಟಿ ಹೈಕೋರ್ಟ್ ತಿರಸ್ಕರಿಸಿದೆ.
ರಿನಿಕಿ ಭುಯಾನ್ ಅವರು ಅನೇಕ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಮತ್ತು ವಿದೇಶದಲ್ಲಿ ಆಸ್ತಿ ಹೊಂದಿದ್ದಾರೆ ಎಂದು ಪವನ್ ಖೇರಾ ಗಂಭೀರ ಆರೋಪ ಮಾಡಿದ್ದರು. ಈ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದ ರಿನಿಕಿ ಭುಯಾನ್, ಕಳೆದ ಏಪ್ರಿಲ್ 6 ರಂದು ಗುವಾಹಟಿ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಖೇರಾ ಮತ್ತು ಅವರ ಸಹಚರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಈ ಹಿಂದೆ ತೆಲಂಗಾಣ ಹೈಕೋರ್ಟ್ ಖೇರಾ ಅವರಿಗೆ 7 ದಿನಗಳ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ನೀಡಿತ್ತು. ಇದನ್ನು ವಿರೋಧಿಸಿ ಅಸ್ಸಾಂ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ಜಾಮೀನಿಗೆ ತಡೆಯಾಜ್ಞೆ ನೀಡಿ, ಸೂಕ್ತ ಪರಿಹಾರಕ್ಕಾಗಿ ಗುವಾಹಟಿ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಖೇರಾಗೆ ಸೂಚಿಸಿತ್ತು.
ನ್ಯಾಯಮೂರ್ತಿ ಪಾರ್ಥಿವ್ ಜ್ಯೋತಿ ಸೈಕಿಯಾ ಅವರಿದ್ದ ಏಕಸದಸ್ಯ ಪೀಠವು ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು. ಇಂದು (ಶುಕ್ರವಾರ) ಅಂತಿಮ ಆದೇಶ ಪ್ರಕಟಿಸಿದ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ | ಮೊದಲ ಹಂತದ ಚುನಾವಣೆಯಲ್ಲಿ ಹಿಂಸಾಚಾರ, ಬಿಜೆಪಿ ಅಭ್ಯರ್ಥಿ ಮೇಲೆ ದಾಳಿ
ಮುಖ್ಯಮಂತ್ರಿಗಳ ಪತ್ನಿ ವಿರುದ್ಧ ಆಧಾರರಹಿತ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡುವ ಮೂಲಕ ಪವನ್ ಖೇರಾ ಅವರು ಕಾನೂನು ಉಲ್ಲಂಘಿಸಿದ್ದಾರೆ ಎಂಬುದು ದೂರುದಾರರ ಪ್ರಮುಖ ಆರೋಪ.
ಈಗ ಹೈಕೋರ್ಟ್ ಜಾಮೀನು ನಿರಾಕರಿಸಿರುವುದರಿಂದ ಪವನ್ ಖೇರಾ ಅವರಿಗೆ ಬಂಧನದ ಭೀತಿ ಎದುರಾಗಿದ್ದು, ಮುಂದಿನ ಕಾನೂನು ಹೋರಾಟಕ್ಕಾಗಿ ಅವರು ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ.





