ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಜನರ ನಡುವೆ ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ದೇಶಾದ್ಯಂತ ಆರ್ಥಿಕ ಹಾಗೂ ಸಾಂಸ್ಥಿಕ ಸಮೀಕ್ಷೆಯನ್ನು ಹಮ್ಮಿಕೊಳ್ಳುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಹೈದರಾಬಾದ್‌ನ ಸರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪಕ್ಷ ಭರವಸೆ ನೀಡಿದಂತೆ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
“ಮೊದಲು ನಾವು ದೇಶಾದ್ಯಂತ ಜಾತಿ ಗಣತಿ ಹಮ್ಮಿಕೊಂಡು ಎಷ್ಟು ಮಂದಿ ಎಸ್‌ಸಿ,ಎಸ್‌ಟಿ ಹಾಗೂ ಒಬಿಸಿ ಪಂಗಡಕ್ಕೆ ಸೇರಿದ್ದಾರೆ ಎಂದು ನಿರ್ಣಯಿಸುತ್ತೇವೆ. ಅದಾದ ನಂತರ ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಐತಿಹಾಸಿಕ ಹಜ್ಜೆಯೊಂದಿಗೆ ಆರ್ಥಿಕ ಹಾಗೂ ಸಾಂಸ್ಥಿಕ ಸಮೀಕ್ಷೆಯನ್ನು ಹಮ್ಮಿಕೊಳ್ಳುತ್ತೇವೆ” ಎಂದು ರಾಹುಲ್ ಗಾಂಧಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್
ಎಲ್ಲ ವಲಯದ ಎಲ್ಲ ಸಮುದಾಯಗಳನ್ನು ನಮ್ಮ ಪಕ್ಷವು ಪ್ರತಿನಿಧಿಸುತ್ತದೆ. ಜನರಿಗೆ ಸರಿಯಾದ ಪಾಲು ನೀಡಲು ಇದರಿಂದ ಅನುಕೂಲವಾಗುತ್ತದೆ ಎಂಬುದನ್ನು ಕಾಂಗ್ರೆಸ್ ಖಚಿತಪಡಿಸುತ್ತದೆ ಎಂದು ರಾಹುಲ್ ಗಾಂಧಿ ಪುನರ್ರಚ್ಚಿಸಿದರು.
ದೇಶದ ಒಟ್ಟು ಜನಸಂಖ್ಯೆಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತರು ದೇಶದ ಜನಸಂಖ್ಯೆಯಲ್ಲಿ ಶೇ.90 ರಷ್ಟಿದ್ದಾರೆ. ಆದರೆ ಉದ್ಯೋಗಗಲ್ಲಿ ನೀವು ಅವರನ್ನು ನೋಡುವುದಿಲ್ಲ. ವಾಸ್ತವ ಏನೆಂದರೆ ದೇಶದ ಶೇ.90 ರಷ್ಟು ಜನರು ಸರಿಯಾದ ಪಾಲು ಹೊಂದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
90 ಐಎಎಸ್ ಅಧಿಕಾರಿಗಳು ದೇಶದ ಆಡಳಿತವನ್ನು ನಿಯಂತ್ರಿಸುತ್ತಿದ್ದು, ಆದರೆ ಇವರಲ್ಲಿ ಕೇವಲ ಮೂವರು ಒಬಿಸಿ, ಒಬ್ಬರು ಆದಿವಾಸಿ ಹಾಗೂ ಒಬ್ಬರು ದಲಿತರು ಮಾತ್ರ ಇದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಏ.05 ರಂದು ನ್ಯಾಯದ ಐದು ಆಧಾರಸ್ತಂಭಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಜಾತಿ ಗಣತಿ ಪ್ರಮುಖ ಕಾರ್ಯಸೂಚಿಯಾಗಿದೆ.
