ಹಿರಿಯ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು ಜಾತಿ ಗಣತಿಯನ್ನು ವಿರೋಧಿಸಿ ಮಾ.19ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.
“ಜಾತಿ ಭಾರತದ ಸಮಾಜದ ವಾಸ್ತವವಾದರೂ, ಕಾಂಗ್ರೆಸ್ ಇದನ್ನು ಕಾರ್ಯಗತಗೊಳಿಸುವುದಾಗಲಿ ಅಥವಾ ಅನುಮೋದಿಸುವುದಾಗಲಿ ಮಾಡಿಲ್ಲ. ಪ್ರದೇಶ, ಧರ್ಮ, ಜಾತಿ ಹಾಗೂ ಜನಾಂಗೀಯತೆ ಹೊಂದಿರುವ ಶ್ರೀಮಂತ ವೈವಿದ್ಯತೆಯ ಪ್ರಜಾಸತ್ತಾತ್ಮಕ ಸಮಾಜದಲ್ಲಿ ಇದು ಹಾನಿಕರವಾಗಿದೆ” ಎಂದು ಪತ್ರದಲ್ಲಿ ಆನಂದ್ ಶರ್ಮಾ ತಿಳಿಸಿದ್ದಾರೆ.
ನನ್ನ ಪರಿಗಣೆಯ ನೋಟದಲ್ಲಿ ಜಾತಿ ಗಣತಿಯು ನಿರುದ್ಯೋಗ ಅಥವಾ ಚಾಲ್ತಿಯಲ್ಲಿರುವ ಅಸಮಾನತೆಗಳಿಗೆ ಔಷಧ ಅಥವಾ ಪರಿಹಾರವಲ್ಲ. ಜಾತಿ ಆಧಾರಿತ ನಮ್ಮ ದೇಶದಲ್ಲಿ ಜಾತಿಯನ್ನು ಪ್ರತಿಷ್ಠಾಪಿಸಿದರೆ ಸಮಸ್ಯೆಗಳಾಗುತ್ತವೆ. ಸಂಸತ್ತು ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಜಾತಿ ಗಣತಿಯನ್ನು ಅನುಷ್ಠಾನಗೊಳಿಸಲು ಹೊರಟರೆ ನಮಗೆ ಸಮಸ್ಯೆಗಳುಂಟಾಗುತ್ತವೆ. ದೇಶ ವಿಭಜನೆಯಾಗುವುದನ್ನು ನೋಡಿಕೊಂಡು ಕಾಂಗ್ರೆಸ್ ಕುಳಿತುಕೊಳ್ಳಬಾರದು ಎಂದು ಆನಂದ್ ಶರ್ಮಾ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
1931ರ ಆಂಗ್ಲರ ಆಡಳಿತದ ಅವಧಿಯಲ್ಲಿ ಕೊನೆಯ ಬಾರಿಗೆ ಜಾತಿ ಗಣತಿಯನ್ನು ನಡೆಸಲಾಯಿತು. ಸ್ವಾತಂತ್ರ ನಂತರ ಕೇಂದ್ರ ಸರ್ಕಾರವು ರಾಜ್ಯಗಳಿಂದ ಸಂಗ್ರಹಿಸಿದ ಮಾಹಿತಿಯಿಂದ ತನ್ನ ಪ್ರಜ್ಞಾಪೂರ್ವಕ ನೀತಿಯ ನಿರ್ಧಾರದಿಂದ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳನ್ನು ಹೊರತುಪಡಿಸಿ ಜಾತಿ ಗಣತಿಯನ್ನು ಮಾಡದಿರಲು ನಿರ್ಧರಿಸಿತು. ಸ್ವಾತಂತ್ರ ನಂತರ ಎಲ್ಲ ಜಾತಿ ಗಣತಿ ಆಯುಕ್ತರು ಹೆಚ್ಚು ದಾಖಲಿಸುವಿಕೆ, ನಕಲೀಕರಣಗೊಳಿಸುವುದು, ಖಚಿತತೆ ಮತ್ತು ಪ್ರಾಮಾಣಿಕತೆ ಅಂಕಿಅಂಶಗಳ ಕೊರತೆಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಜಾತಿ ಗಣತಿಗೆ ಅಸಮ್ಮತಿ ವ್ಯಕ್ತಪಡಿಸಿದ್ದರು ಎಂದು ಆನಂದ್ ಶರ್ಮಾ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಲ್ಲೆಲ್ಲೂ ಪುರುಷರದೇ ಪಾರುಪತ್ಯ; ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು
ರಾಷ್ಟ್ರೀಯ ಸಾಮರಸ್ಯ ಹಾಗೂ ಹೊಂದಾಣಿಕೆಯ ಸಮಾಜ ನಿರ್ಮಾಣಕ್ಕಾಗಿ ಕಾಂಗ್ರೆಸ್ ಜಾತಿ ಗಣತಿ ಮಾಡುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಪಕ್ಷದ ನಿಲುವು ಸಮತೋಲಿತವಾಗಿರಬೇಕು ಹಾಗೂ ಧರ್ಮ ಹಾಗೂ ಜಾತಿ ಆಧಾರಿತ ಸಂಘಟನೆಗಳ ಒತ್ತಡದಿಂದ ದೂರವಿರಬೇಕು. ಕಾಂಗ್ರೆಸ್ ಪಾರದರ್ಶಕತೆ, ಪ್ರಜಾಸತ್ತಾತ್ಮಕ ನಿರ್ಧಾರ ಹಾಗೂ ಗೌರವಾನ್ವಿತ ಅಭಿವ್ಯಕ್ತ ಸ್ವಾತಂತ್ರವನ್ನು ದೃಢವಾಗಿ ನಂಬಿದೆ. ಇದನ್ನು ನಾನು ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಬರೆಯುತ್ತಿದ್ದೇನೆ ಎಂದು ತಮ್ಮ ಪತ್ರದಲ್ಲಿ ಆನಂದ್ ಶರ್ಮಾ ಉಲ್ಲೇಖಿಸಿದ್ದಾರೆ.
ಶರ್ಮಾ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಸಯ್ಯದ್ ನಾಸೀರ್ ಹುಸೇನ್, ಜಾತಿ ಗಣತಿಯನ್ನು ದೇಶದ ಅತ್ಯಂತ ಹಳೆಯ ಪಕ್ಷ ಸಕ್ರಿಯಗೊಳಿಸಿ ಜಾರಿಗೊಳಿಸುತ್ತಿರುವ ನಿರ್ಧಾರದಿಂದ ಭಾರತೀಯ ಸಮಾಜದ ಪ್ರತಿಯೊಂದ ವರ್ಗದವರು ಅನುಕೂಲ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
“ನಾವು ಯಾವುದೇ ರೀತಿಯ ಜಾತಿ ಆಧಾರಿತ ರಾಜಕೀಯ ಮಾಡುವುದಿಲ್ಲ. ಪಕ್ಷದಲ್ಲಿ ಎಲ್ಲ ಸಮಸ್ಯೆಗಳನ್ನು ಚರ್ಚಿಸಲು ಪ್ರಜಾಪ್ರಭುತ್ವವಿದೆ” ಎಂದು ಹುಸೇನ್ ಹೇಳಿದರು.
