ಈ ದಿನ ಸಂಪಾದಕೀಯ | ಎಲ್ಲೆಲ್ಲೂ ಪುರುಷರದೇ ಪಾರುಪತ್ಯ; ಮಹಿಳಾ ಪ್ರಾತಿನಿಧ್ಯ ಕನ್ನಡಿಯೊಳಗಿನ ಗಂಟು

Date:

ಎಲ್ಲ ಕ್ಷೇತ್ರವನ್ನೂ ಪುರುಷರೇ ಆವರಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷ, ಸರ್ಕಾರದೊಳಗೆ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಎಲ್ಲೆಲ್ಲೂ ಮಹಿಳೆಯರಿಗೆ ಸಿಗಬೇಕಾದ ಅವಕಾಶ, ಪ್ರಾತಿನಿಧ್ಯವನ್ನು ಕಸಿಯಲಾಗುತ್ತಿದೆ.

 

ಎರಡು ದಶಕಗಳಿಂದ ಸಂಸತ್ತಿನಲ್ಲಿ ದೂಳು ತಿನ್ನುತ್ತಾ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಕಳೆದ ವರ್ಷ ವಿಶೇಷ ಅಧಿವೇಶನ ಕರೆದು ಪ್ರಧಾನಿ ಮೋದಿಯವರು ಯಾವುದೇ ಚರ್ಚೆ ಇಲ್ಲದೇ ಸಂಸತ್ತಿನಲ್ಲಿ ಮಂಡಿಸಿದರು. ತಮಗೆ ಬೇಕಾದಂತೆ ಕೆಲವು ತಿದ್ದುಪಡಿ ಮಾಡಿ, ಜನಗಣತಿ ನಡೆಸಿದ, ಕ್ಷೇತ್ರ ಪುನರ್‌ ವಿಂಗಡನೆ ಆದ ನಂತರ ಮೀಸಲಾತಿ ವಾಸ್ತವದಲ್ಲಿ ಜಾರಿಯಾಗಲಿದೆ. ಅಷ್ಟೇ ಅಲ್ಲ ಜಾರಿಗೊಳಿಸಲು 30 ಸುದೀರ್ಘ ವರ್ಷಗಳ ಅವಧಿಯನ್ನು ನಿಗದಿಗೊಳಿಸಲಾಗಿದೆ. ರಾಷ್ಟ್ರಪತಿ ಅಂಕಿತ ಬಿದ್ದು ಅದೀಗ ಕಾಯ್ದೆ ಆಗಿದೆ. ಮೋದಿ ಸರ್ಕಾರ ಮಹಿಳಾ ಸಬಲೀಕರಣಕ್ಕೆ ದೊಡ್ಡ ಹೆಜ್ಜೆ ಇಟ್ಟಿದೆ ಎಂದು ಪ್ರಚಾರ ಮಾಡಲಾಗುತ್ತಿದೆ. ವಾಸ್ತವದಲ್ಲಿ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರುವ ಉದ್ದೇಶ ಮೋದಿ ನೇತೃತ್ವದ ಬಿಜೆಪಿಗೆ ಇದ್ದಂತಿಲ್ಲ. ಅದು ಮಹಿಳೆಯರ ಮೂಗಿಗೆ ತುಪ್ಪ ಸವರಿ ಭಾರೀ ಪ್ರಚಾರ ಪಡೆಯುವ ಉದ್ದೇಶ ಮಾತ್ರ ಹೊಂದಿದೆ.

ಮಹಿಳಾ ಮೀಸಲಾತಿ ಮಸೂದೆ ಅನುಮೋದನೆಗೊಂಡ ನಂತರ ನಡೆದ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲಾತಿಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಯಾವುದೇ ಪಕ್ಷಗಳು ಮನಸ್ಸು ಮಾಡಿಲ್ಲ. ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಪ್ರಮಾಣದಲ್ಲಿ ಮಹಿಳೆಯರಿಗೆ ಟಿಕೆಟ್‌ ಹಂಚಿಕೆ ಮಾಡಲಾಗುತ್ತಿದೆ ಎಂದು ನೋಡಿದರೆ ಎಲ್ಲ ಪಕ್ಷಗಳ ಬಣ್ಣ ಬಯಲಾಗುತ್ತದೆ.

ಮಹಿಳೆಯರಿಗೆ ಜವಾಬ್ದಾರಿಯುತ ಹುದ್ದೆ, ಸಂವಿಧಾನಿಕ ಹುದ್ದೆಗಳನ್ನು ನೀಡುವುದರಲ್ಲಿ ಯಾವ ರಾಜಕೀಯ ಪಕ್ಷಗಳಿಗೂ ಆಸಕ್ತಿ ಇದ್ದಂತಿಲ್ಲ. ಇನ್ನು ಚುನಾವಣೆಯ ಟಿಕೆಟ್‌ ನೀಡುವುದರಲ್ಲಿ ಆಸಕ್ತಿ ಇರುತ್ತದೆಯೇ? ಯಾವುದೇ ರಾಜಕೀಯ ಪಕ್ಷಗಳಲ್ಲಿ ನೋಡಿದರೂ ಬೆರಳೆಣಿಕೆಯಷ್ಟು, ಅದೂ ರಾಜಕೀಯ ಕುಟುಂಬದ ಹೆಣ್ಣುಮಕ್ಕಳು ಮಾತ್ರವೇ ಟಿಕೆಟ್‌ ಪಡೆದು ಸ್ಪರ್ಧಿಸುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಲೋಕಸಭಾ ಚುನಾವಣೆಯಲ್ಲಿ ಮೂರೂ ಪಕ್ಷಗಳ ಟಿಕೆಟ್‌ ಹಂಚಿಕೆಯ ಕಸರತ್ತು ಮುಂದುವರಿದಿದೆ. ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಪೈಕಿ ಕೇವಲ 16 ಮಹಿಳೆಯರಿಗೆ ಟಿಕೆಟ್‌ ನೀಡಿದೆ. ರಾಜ್ಯದಲ್ಲಿ ಈಗಾಗಲೇ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಮತ್ತು ಸಂಸದ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಅವರಿಗೆ ಟಿಕೆಟ್‌ ಘೋಷಿಸಿದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌, ದೇವೇಗೌಡರ ಇಬ್ಬರು ಮೊಮ್ಮಕ್ಕಳಿಗೆ ಟಿಕೆಟ್‌ ಉಳಿಸಿಕೊಂಡಿದೆ. ಕೋಲಾರದ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರೂ ಅಲ್ಲಿ ಮಹಿಳೆಗೆ ಟಿಕೆಟ್‌ ಇಲ್ಲ ಎಂಬುದು ನಿಶ್ಚಿತ. ಮಂಡ್ಯದಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್‌, ಹಾಸನದಲ್ಲಿ ರೇವಣ್ಣ ಪುತ್ರ ಹಾಲಿ ಸಂಸದ ಪ್ರಜ್ವಲ್‌ ಸ್ಪರ್ಧಿಸುತ್ತಿದ್ದಾರೆ. ಆ ಪಕ್ಷದಲ್ಲಿ ಮಹಿಳೆಯರಿಗೆ ಟಿಕೆಟ್‌ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ.

ಕಾಂಗ್ರೆಸ್‌ ದೇಶದ ಮಟ್ಟದಲ್ಲಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಕೇವಲ 39 ಕ್ಷೇತ್ರಗಳ ಟಿಕೆಟ್‌ ಘೋಷಣೆ ಮಾಡಿತ್ತು. ಅದರಲ್ಲಿ ಕರ್ನಾಟಕದ ಗೀತಾ ಶಿವರಾಜ್‌ಕುಮಾರ್‌ ಸ್ಥಾನ ಪಡೆದ ಏಕೈಕ ಮಹಿಳೆ. ಎರಡನೇ ಪಟ್ಟಿಯಲ್ಲಿ ಐವರು ಮಹಿಳೆಯರಿಗೆ ಟಿಕೆಟ್‌ ನೀಡಲಾಗುತ್ತಿದೆ ಎಂಬ ಸಂಭಾವ್ಯ ಪಟ್ಟಿ ಹರಿದಾಡುತ್ತಿದೆ. ಅದು ಬಹುತೇಕ ನಿಜ ಎನ್ನಲಾಗುತ್ತಿದೆ. ಯಾಕೆಂದರೆ ಅವೆಲ್ಲ ಮಂತ್ರಿಗಳ ಕುಟುಂಬದ ಹೆಸರುಗಳು. ಮಂತ್ರಿಗಳು ಸ್ಪರ್ಧಿಸಲು ನಿರಾಸಕ್ತಿ ತೋರಿದಾಗ ಅವರ ಕುಟುಂಬದವರಿಗೆ ಟಿಕೆಟ್‌ ಕೊಟ್ಟು ಗೆಲ್ಲಿಸುವ ಹೊಣೆಗಾರಿಕೆ ಹೆಗಲ ಮೇಲೆ ಹಾಕಿದಂತಿದೆ. ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ ಪಡೆಯುವುದು ರಾಜಕೀಯ ಕುಟುಂಬಗಳಿಗೆ ಮಾತ್ರವೇ ಸುಲಭ. ಅದು ಬಿಟ್ಟರೆ ಹಣವಂತರಿಗೆ ಮಾತ್ರ ಟಿಕೆಟ್‌ ʼಕೊಳ್ಳುವʼ ಸಾಮರ್ಥ್ಯವಿರುತ್ತದೆ. ಅದರ ಜೊತೆಗೆ ಜಾತಿ ಬಲ ಇದ್ದರೆ ಕೆಲವರು ಟಿಕೆಟ್‌ ಪಡೆಯಬಹುದು. ಮೀಸಲು ಕ್ಷೇತ್ರ ಬಿಟ್ಟು ಉಳಿದ ಯಾವುದೇ ಕ್ಷೇತ್ರಗಳಲ್ಲಿ ಸಾಮಾನ್ಯ ಪುರುಷರೊಬ್ಬರು ಟಿಕೆಟ್‌ ಪಡೆಯುವುದೇ ಕಷ್ಟ. ಇನ್ನು ಮಹಿಳೆಯರ ಸ್ಥಿತಿ ಹೇಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮಹಿಳೆಯರನ್ನು ಸಮಾವೇಶಗಳಿಗೆ ಕರೆದೊಯ್ಯುವ ಹುಮ್ಮಸ್ಸು ಟಿಕೆಟ್‌ ನೀಡುವಾಗ, ಅವರಿಗೆ ಅವಕಾಶ ನೀಡಬೇಕೆಂದಾಗ ರಾಜಕೀಯ ಪಕ್ಷಗಳಿಗೆ ಇರುವುದಿಲ್ಲ.

ಕರ್ನಾಟಕದ ವಿಧಾನಭೆಯನ್ನೇ ನೋಡಿದರೆ ಇತ್ತೀಚೆಗೆ ಯಾವುದೇ ಪಕ್ಷ ಅಧಿಕಾರ ಹಿಡಿದರೂ ಅಲ್ಲಿ ಒಂದು ಸಚಿವ ಸ್ಥಾನ ಮಾತ್ರವೇ ಮಹಿಳೆಗೆ ನೀಡಲಾಗುತ್ತದೆ. ಅದೂ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ! ಅದರಿಂದಾಚೆಗೆ ಮಹಿಳೆಯರು ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶವನ್ನೇ ನೀಡುತ್ತಿಲ್ಲ. ಅಷ್ಟೇ ಅಲ್ಲ ದಶಕಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಮಹಿಳೆಯರಿಗೆ ಪಕ್ಷದೊಳಗೂ ಸೂಕ್ತ ಸ್ಥಾನಮಾನಗಳು ಸಿಗುತ್ತಿಲ್ಲ. ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಮಂತ್ರಿಗಿರಿ ಸಿಗದೇ ಅಸಮಾಧಾನಗೊಂಡಿರುವ ಶಾಸಕರಿಗೆ ನೀಡಲಾಗುತ್ತದೆ. ಚುನಾವಣೆಗೆ ಸ್ಫರ್ಧಿಲಾಗದೆ ಬಹಳಷ್ಟು ಮಹಿಳೆಯರು ನಿರಾಶರಾಗುತ್ತಿದ್ದಾರೆ. ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಡಾ ಪುಷ್ಪಾ ಅಮರನಾಥ್‌ ವಿದ್ಯಾವಂತೆ, ಮೈಸೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿದ್ದವರು. ವಿಧಾನಸಭಾ ಚುನಾವಣೆಗೆ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಪರಿಶಿಷ್ಟ ಜಾತಿಯ ಮಹಿಳೆ ಬೇರೆ. ಆಕೆಯನ್ನು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯೆಯನ್ನಾಗಿ ಮಾಡಲಾಗಿದೆ. ಯಾವುದಾದರೂ ನಿಗಮ- ಮಂಡಳಿಗೆ ನೇಮಕ ಮಾಡಬಹುದಿತ್ತು. ಅಥವಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಗೇ ಅಧ್ಯಕ್ಷೆಯನ್ನಾಗಿ ಮಾಡಬಹುದಿತ್ತು.

ಕಳೆದ ವಾರ ರಾಜ್ಯ ಸರ್ಕಾರ 17 ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಮಾಡಿದೆ. ಅದರಲ್ಲಿ ನೃತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನವನ್ನು ಮಾತ್ರ ಮಹಿಳೆಗೆ ನೀಡಲಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರ, ಯಕ್ಷಗಾನ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿಗಳಿಗೆ ಒಬ್ಬ ಮಹಿಳೆಯರನ್ನೂ ಸದಸ್ಯರನ್ನಾಗಿ ನೇಮಕ ಮಾಡಿಲ್ಲ. ಮಾಧ್ಯಮ ಅಕಾಡೆಮಿ, ರಂಗಾಯಣಗಳಿಗೆ ಇನ್ನೂ ನೇಮಕ ಮಾಡೋದು ಬಾಕಿ ಇದೆ. ಮಾಧ್ಯಮ ಅಕಾಡೆಮಿಗೆ ಅದೆಷ್ಟು ಸ್ಪರ್ಧೆ ಇರಬಹುದು ಎಂದು ಊಹಿಸಲೂ ಸಾಧ್ಯವಿಲ್ಲ.

ಹೀಗೆ ಎಲ್ಲ ಕ್ಷೇತ್ರವನ್ನೂ ಪುರುಷರೇ ಆವರಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷ, ಸರ್ಕಾರದೊಳಗೆ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಎಲ್ಲೆಲ್ಲೂ ಮಹಿಳೆಯರಿಗೆ ಸಿಗಬೇಕಾದ ಅವಕಾಶ, ಪ್ರಾತಿನಿಧ್ಯವನ್ನು ಕಸಿಯಲಾಗುತ್ತಿದೆ. ಪುರುಷನಿಗೆ ಸರಿ ಸಮವಾದ ಅವಕಾಶ, ಅಧಿಕಾರ ಪಡೆಯುವ ಎಲ್ಲ ಮೂಲಭೂತ ಹಕ್ಕುಗಳು ಹೆಣ್ಣಿಗೆ ಇದೆ. ಅದನ್ನು ಪುರುಷರು ಅರ್ಥಮಾಡಿಕೊಳ್ಳುತ್ತಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ಮಹಿಳೆಯರಿಗೆ ಅವಕಾಶ ನಿರಾಕರಣೆ ಮಾಡುವುದರ ವಿರುದ್ಧ ಮಹಿಳೆಯರು ಕಾರ್ಯತಂತ್ರ ರೂಪಿಸುವ, ಸಂಘಟಿತರಾಗಿ ಸಿಡಿದೇಳುವ ಅಗತ್ಯವಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...