ರಾಜಕೀಯ ಪಕ್ಷಗಳ ಹಣಕಾಸು ಮಾಹಿತಿಯುಳ್ಳ ಚುನಾವಣಾ ಬಾಂಡ್ ವಿವರಗಳನ್ನು ಬಹಿರಂಗಗೊಳಿಸಲು ಜೂನ್ 30ರವರೆಗೂ ಹೆಚ್ಚುವರಿ ಕಾಲಾವಕಾಶ ಕೇಳಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ವಿರುದ್ಧ ಸರ್ಕಾರೇತರ ಸಂಸ್ಥೆಯೊಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಪರವಾಗಿ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಧೀಶ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಗಮನಿಸಿದೆ.
ಎಸ್‌ಬಿಐ ಅರ್ಜಿಯ ವಿಚಾರಣೆಯನ್ನು ಮಾರ್ಚ್ 11ರಂದು ಕೈಗೆತ್ತಿಕೊಳ್ಳುವ ಸಂಭವವಿದ್ದು, ನ್ಯಾಯಾಂಗ ನಿಂದನೆ ಅರ್ಜಿಯನ್ನು ಅಂದೇ ಒಟ್ಟಿಗೆ ವಿಚಾರಣೆ ನಡೆಸಲಾಗುವುದು ಎಂದು ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿದೇಶಿ ಪ್ರವಾಸಿ ಮೇಲೆ ಅತ್ಯಾಚಾರ; ʼಅತಿಥಿ ದೇವೋಭವʼ ಎಂದ ದೇಶದಲ್ಲಿ ಇದೆಂಥಾ ಕ್ರೌರ್ಯ!
ಅರ್ಜಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಾಧೀಶರು,” ದಯವಿಟ್ಟು ಇಮೇಲ್‌ನಲ್ಲಿ ಕಳಿಸಿ, ನಾವು ಅರ್ಜಿಯನ್ನು ಕೈಗೆತ್ತಿಕೊಳ್ಳುತ್ತೇವೆ” ಎಂದು ಹೇಳಿದರು.
ಚುನಾವಣಾ ಬಾಂಡ್ ವಿವರಗಳನ್ನು ಬಹಿರಂಗಗೊಳಿಸಲು ಜೂನ್ 30ರವರೆಗೆ ಸಮಯ ವಿಸ್ತರಿಸುವಂತೆ ಎಸ್‌ಬಿಐ ಮಾರ್ಚ್ 4 ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಕಳೆದ ತಿಂಗಳು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ವಿವರ ನೀಡುವಂತೆ ಆದೇಶಿಸಿತ್ತು.
