ಬುಡಕಟ್ಟು ಜನಾಂಗದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ತೆಲುಗು ನಟ ವಿಜಯ್ ದೇವರಕೊಂಡ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ, ಸ್ಪಷ್ಟನೆ ನೀಡಿರುವ ವಿಜಯ್, ಕ್ಷಮೆಯಾಚಿಸಿದ್ದಾರೆ.
ವಿಜಯ್ ದೇವರಕೊಂಡ ಅವರು ಗೌತಮ್ ತಿನ್ನನುರಿ ನಿರ್ದೇಶನದ ‘ಕಿಂಗ್ಡಮ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರು ತಮಿಳು ನಟ ಸೂರ್ಯ ಅವರ ‘ರೆಟ್ರೋ’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. “ಪಹಲ್ಗಾಮ್ ದಾಳಿಯಲ್ಲಿ ಅಮಾಯಕ ಪ್ರವಾಸಿಗರು ಮೃತಪಟ್ಟಿದ್ದಾರೆ. ಸರಿಯಾದ ಶಿಕ್ಷಣ ಕೊಟ್ಟರೆ ಇಂತಹವರು ಬ್ರೇನ್ ವಾಶ್ ಆಗೋದು ತಪ್ಪುತ್ತದೆ. ‘500 ವರ್ಷಗಳ ಹಿಂದೆ ಬುಡಕಟ್ಟು ಜನರು ಸಾಮಾನ್ಯ ಜ್ಞಾನವಿಲ್ಲದೆ ಹೊಡೆದಾಡಿಕೊಳ್ಳುತ್ತಿದ್ದರು. ಈ ಉಗ್ರರು ಕೂಡ ಹಾಗೆಯೇ ನಡೆದುಕೊಳ್ಳುತ್ತಿದ್ದಾರೆ” ಎಂದಿದ್ದರು.
ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಜಯ್ ಅವರು ಬುಡಕಟ್ಟು ಜನರನ್ನು ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ಮಾತ್ರವಲ್ಲದೆ, ವಿಜಯ್ ವಿರುದ್ಧ ದೂರನ್ನೂ ದಾಖಲಿಸಲಾಗಿದೆ.
ಈ ಬೆನ್ನಲ್ಲೇ, ವಿವಾದಕ್ಕೆ ತೆರೆ ಎಳೆಯಲು ವಿಜಯ್ ಯತ್ನಿಸಿದ್ದಾರೆ. ಕ್ಷಮೆ ಕೇಳಿ ಪತ್ರ ಬರೆದಿರುವ ಅವರು, “ರೆಟ್ರೋ ಸಿನಿಮಾದ ಕಾರ್ಯಕ್ರಮದಲ್ಲಿ ನಾನು ನೀಡಿದ ಹೇಳಿಕೆ ಕೆಲವು ಜನರ ಭಾವನೆಗಳಿಗೆ ನೋವುಂಟು ಮಾಡಿದೆ ಎಂಬುದು ಗೊತ್ತಾಯಿತು. ನನ್ನ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತೇನೆ. ನನಗೆ ಯಾವುದೇ ಸಮುದಾಯ ಅಥವಾ ಬುಡಕಟ್ಟು ಜನಾಂಗವನ್ನು ನೋಯಿಸುವ ಉದ್ದೇಶವಿಲ್ಲ. ಭಾರತದ ಎಲ್ಲ ಜನರು ಒಂದೇ ಎಂಬುದು ನನ್ನ ಭಾವನೆ” ಎಂದಿದ್ದಾರೆ.
“ನಾನು ಯಾವುದೇ ಸಮುದಾಯದ ವಿರುದ್ಧ ತಾರತಮ್ಯ ಮಾಡಿಲ್ಲ. ನಾವೆಲ್ಲರೂ ಒಂದೇ, ಒಟ್ಟಿಗೆ ಮುಂದೆ ಸಾಗಬೇಕು. ಎಲ್ಲರನ್ನೂ ನನ್ನ ಕುಟುಂಬವೆಂದೇ ನಾನು ಭಾವಿಸುತ್ತೇನೆ. ನಾನು ಬುಡಕಟ್ಟು ಎಂಬ ಪದವನ್ನು ಬೇರೆ ಅರ್ಥದಲ್ಲಿ ಬಳಸಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ಆ ಬಗ್ಗೆ ವಿಷಾದಸುತ್ತೇನೆ” ಎಂದು ಹೇಳಿದ್ದಾರೆ.