ಹಿಂದುತ್ವವಾದಿ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಅವರ ತಾಯಿಯ ವಂಶಾವಳಿಯ ಬಗ್ಗೆ ಮಾಹಿತಿ ಕೋರಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುಣೆ ನ್ಯಾಯಾಲಯ ವಜಾಗೊಳಿಸಿದೆ.
ಸಾವರ್ಕರ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾವರ್ಕರ್ ಮೊಮ್ಮಗನ ತಾಯಿಯ ವಂಶಾವಳಿಯ ಬಗ್ಗೆ ಮಾಹಿತಿ ಕೋರಿ ರಾಹುಲ್ ಗಾಂಧಿ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿದ್ದೀರಾ? ರಾಹುಲ್ ಗಾಂಧಿ ಸಂಸತ್ತಿನಿಂದ ಅನರ್ಹ | ಹತ್ತು ಗಂಭೀರ ಪ್ರಶ್ನೆಗಳು
2023ರಲ್ಲಿ ಲಂಡನ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಸಾವರ್ಕರ್ ಅವರ ಬರಹಗಳಲ್ಲಿ ಉಲ್ಲೇಖಿಸಲಾಗಿದ್ದ ಘಟನೆಗಳನ್ನು ಪ್ರಸ್ತಾಪಿಸಿದ್ದರು. ಸಾವರ್ಕರ್ ತಮ್ಮ ಪತ್ರವೊಂದರಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸುವುದು ತಮಗೆ ಆನಂದವನ್ನುಂಟು ಮಾಡುತ್ತದೆ ಎಂದು ಬರೆದಿದ್ದರು ಎಂದು ರಾಹುಲ್ ಹೇಳಿದ್ದರು.
ಆದರೆ ಲಂಡನ್‌ನಲ್ಲಿ ರಾಹುಲ್ ಗಾಂಧಿ, ಸಾವರ್ಕರ್ ವಿರುದ್ಧ ಮಾನಹಾನಿಕಾರಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ. ಅಂತಹ ಯಾವುದೇ ವಾಕ್ಯ ವೃಂದವೂ ಸಾವರ್ಕರ್ ಅವರ ಬರಹಗಳಲ್ಲಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಜೊತೆಗೆ ಮಾನಹಾನಿ ಪರಿಹಾರ ಕೋರಿದ್ದಾರೆ.
ಈ ಬಳಿಕ ರಾಹುಲ್ ಗಾಂಧಿ ದೂರು ಸಲ್ಲಿಸಿದ್ದು ಸಾವರ್ಕರ್ ಮೊಮ್ಮಗನ ತಾಯಿಯ ವಂಶಾವಳಿಯ ಬಗ್ಗೆ ಮಾಹಿತಿ ಕೋರಿದ್ದಾರೆ. ತಮ್ಮ ವಕೀಲ ಮಿಲಿಂದ್ ಪವಾರ್ ಮೂಲಕ ದೂರು ಸಲ್ಲಿಸಿರುವ ರಾಹುಲ್ ಗಾಂಧಿ, “ದೂರುದಾರರು(ಸತ್ಯಕಿ ಸಾವರ್ಕರ್) ತಮ್ಮ ತಂದೆಯ ವಂಶಾವಳಿಯ ವಿವರಗಳನ್ನು ನೀಡಿದ್ದರೂ, ಅವರ ತಾಯಿಯ ವಂಶಾವಳಿಯನ್ನು ಬಹಿರಂಗಪಡಿಸಿಲ್ಲ” ಎಂದು ಹೇಳಿದ್ದರು. ವಿಚಾರಣೆಗೆ ಈ ಮಾಹಿತಿ ನಿರ್ಣಾಯಕವಾಗಿದೆ ಎಂದು ವಾದಿಸಿದ್ದರು.
ಆದರೆ ಈ ಪ್ರಕರಣ ಸತ್ಯಕಿ ಸಾವರ್ಕರ್ ಅವರ ತಾಯಿ ದಿವಂಗತ ಹಿಮಾನಿ ಅಶೋಕ್ ಸಾವರ್ಕರ್ ಅವರ ವಂಶಾವಳಿಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ ಮ್ಯಾಜಿಸ್ಟ್ರೇಟ್(ಪ್ರಥಮ ದರ್ಜೆ) ಅಮೋಲ್ ಶಿಂಧೆ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಹಿಮಾನಿ ಸಾವರ್ಕರ್ ಅವರು ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆ ಅವರ ಕಿರಿಯ ಸಹೋದರ ಗೋಪಾಲ್ ವಿನಾಯಕ ಗೋಡ್ಸೆ ಅವರ ಪುತ್ರಿ.
ಇದನ್ನು ಓದಿದ್ದೀರಾ? ಸಾವರ್ಕರ್ ಹೆಸರಿನ ದುರ್ಬಳಕೆ: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
“ಈ ಪ್ರಕರಣವು ದಿವಂಗತ ಹಿಮಾನಿ ಅಶೋಕ್ ಸಾವರ್ಕರ್ ಅವರ ವಂಶವೃಕ್ಷಕ್ಕೆ ಸಂಬಂಧಿಸಿಲ್ಲ ಅಥವಾ ವಿವಾದಾತ್ಮಕವಾಗಿಲ್ಲ. ಆದ್ದರಿಂದ, ಆರೋಪಿಗಳ ಅರ್ಜಿಯು ಅರ್ಹವಾಗಿಲ್ಲ. ಈ ಬಗ್ಗೆ ಅಧಿಕ ತನಿಖೆಯ ಅಗತ್ಯವಿಲ್ಲ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.
ಜಾಮೀನು ರದ್ದು ಕೋರಿದ್ದ ಸತ್ಯಕಿ ಅರ್ಜಿಯೂ ವಜಾ
ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಜಾಮೀನು ರದ್ದುಗೊಳಿಸುವಂತೆ ಕೋರಿ ಸತ್ಯಕಿ ಸಾವರ್ಕರ್ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ. ಒಂದಲ್ಲ ಒಂದು ನೆಪದಲ್ಲಿ ಈ ಪ್ರಕರಣ ವಿಳಂಬವಾಗುವಂತೆ ರಾಹುಲ್ ಮಾಡುತ್ತಿದ್ದಾರೆ ಎಂದು ಸತ್ಯಕಿ ಆರೋಪಿಸಿದ್ದಾರೆ.
ರಾಹುಲ್ ಅವರು ನೀಡಿದ ಅರ್ಜಿ ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಆದರೆ ಒಂದಲ್ಲ ಒಂದು ನೆಪ ಹೇಳಿ ತಮ್ಮ ಅರ್ಜಿಯನ್ನು ದಾಖಲಿಸುತ್ತಿಲ್ಲ ಮತ್ತು ವಿಳಂಬ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎಂದು ಸತ್ಯಕಿ ಸಾವರ್ಕರ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ವೈಯಕ್ತಿಕ ಹಾಜರಾತಿಯಿಂದ ಶಾಶ್ವತ ವಿನಾಯಿತಿ ನೀಡಿ ರಾಹುಲ್ ಗಾಂಧಿಯವರಿಗೆ ಜಾಮೀನು ನೀಡಲಾಗಿದೆ. ಅವರು ಉದ್ದೇಶಪೂರ್ವಕವಾಗಿ ವಿಚಾರಣೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿರುವ ನ್ಯಾಯಾಧೀಶರು ಜಾಮೀನು ರದ್ದು ಕೋರಿದ ಅರ್ಜಿಯನ್ನೂ ವಜಾಗೊಳಿಸಿದ್ದಾರೆ.
