ಸೈಬರ್ ವಂಚಕರು ಕೇರಳ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರಿಗೆ ಬರೋಬ್ಬರಿ 90 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. 850% ಲಾಭ ಕೊಡುತ್ತೇವೆಂದು ಆಮಿಷವೊಡ್ಡಿ ವಂಚಿಸಿದ್ದಾರೆ ಎಂದು ವರದಿಯಾಗಿದೆ.
ಕೇರಳ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಶಿಧರನ್ ನಂಬಿಯಾರ್ ಅವರು ಸೈಬಲ್ ವಂಚಕರ ಆಮಿಷಕ್ಕೆ ಬಲಿಯಾಗಿ, ವಂಚನೆಗೆ ಒಳಗಾಗಿದ್ದಾರೆ.
ಆದಿತ್ಯ ಬಿರ್ಲಾ ಇಕ್ವಿಟಿ ಲರ್ನಿಂಗ್ ಹೆಸರಿನ ವಾಟ್ಸ್ ಆ್ಯಪ್ ಗುಂಪಿಗೆ ನಂಬಿಯಾರ್ ಅವರನ್ನು ವಂಚಕರು ಸೇರಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಎಂದು ಆಮಿಷವೊಡ್ಡಿದ್ದಾರೆ. ಹೂಡಿಕೆ ಮಾಡುವಂತೆ ಪ್ರಚೋದನೆ ನೀಡಿದ್ದಾರೆ. ಅವರ ಆಮಿಷಕ್ಕೆ ಒಳಗಾದ ನಂಬಿಯಾರ್, ಲಿಂಕ್‌ವೊಂದರ ಮೂಲಕ ಹಣ ವರ್ಗಾಯಿಸಿದ್ದಾರೆ.
ವಂಚಕರು 20 ದಿನಗಳ ಅವಧಿಯಲ್ಲಿ ನಂಬಿಯಾರ್ ಅವರಿಂದ ಬರೋಬ್ಬರಿ 90 ಲಕ್ಷ ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಆದರೆ, ಹಲವು ದಿನಗಳಾದರೂ ಯಾವುದೇ ಲಾಭ ಅಥವಾ ಹೂಡಿಕೆ ಹಣ ಬಾರದೆ ಇದ್ದಾಗ, ಅನುಮಾನಗೊಂಡ ನಂಬಿಯಾರ್ ಅವರು ತ್ರಿಪುಣಿತುರಾ ಹಿಲ್ ಪ್ಯಾಲೇಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.